ವರುಣ ಅಪರೂಪದ ಅತಿಥಿಯಾಗಿಬಿಟ್ಟದ್ದಕ್ಕೆ ಕಾರಣ?
ಮಂಗಳೂರಿನಲ್ಲಿ ಹೊರಗೆ ಕಾಲಿಟ್ಟರೆ ಇದು ಮಳೆಗಾಲ ಹೌದಾ ಎನ್ನುವ ಸಂಶಯ ಮೂಡುತ್ತದೆ. ಒಂದು ಸಲ ಹೊರಗೆ ಬಂದರೆ ಬನಿಯನ್ನು ಒದ್ದೆಯಾಗುತ್ತಿದೆ, ಮಳೆಯ ನೀರಿನಿಂದ ಅಲ್ಲ, ಬಿಸಿಲಿನ ಝಳದಿಂದ. ಕೊಡೆ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ, ಮಳೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಅಲ್ಲ, ತಡೆಯಲಾರದ ಬಿಸಿಲಿನ ಝಳಕ್ಕೆ. ಜೂನ್ ತಿಂಗಳ ಕೊನೆಯ ದಿನ ಬಿಸಿಲಿನ ನರ್ತನ ಹೇಗಿದೆ ಎಂದರೆ ಬಟ್ಟೆ ಒಗೆದು ಒಣಗಿಸಲು ಹೊರಗೆ ಸರಿಗೆಯಲ್ಲಿ ಹಾಕುವ ಹೆಂಗಸರು ಒಂದಿಷ್ಟು ಮೋಡದ ಲಕ್ಷಣ ಕಂಡು ಬಂದರೆ ಹೆದರುತ್ತಿಲ್ಲ, ಯಾಕೆಂದರೆ ಒಂದು ನಿಮಿಷ ಮಳೆ ಬಂದರೆ ಒಂದು ಗಂಟೆ ಬಿಸಿಲು ಇರುತ್ತದೆ. ಹಾಗಾದರೆ ಇದಕ್ಕೆ ಏನು ಕಾರಣ.
ಮನ್ ಕಿ ಬಾತ್ ನಲ್ಲಿ ಜಲ್ ಕೀ ಭಾತ್…
ಇವತ್ತಿನ ಮನ್ ಕಿ ಬಾತ್ ನಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಕೂಡ ನೀರಿನ ವಿಷಯವನ್ನು ಮಾತನಾಡಿದ್ದಾರೆ. ನೀರು ಸಂರಕ್ಷಿಸುವ ಕಾರ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇಷ್ಟೊತ್ತಿಗೆ ಮಂಗಳೂರಿನಲ್ಲಿ ಒಟ್ಟು ಮಳೆಗಾಲದ 25% ಮಳೆ ಸುರಿದು ಮಳೆರಾಯ ಒಂದಿಷ್ಟು ರೆಸ್ಟ್ ತೆಗೆದುಕೊಳ್ಳಬೇಕಾಗಿತ್ತು. ಆದರೆ ಪರಿಸ್ಥಿತಿ ಹೇಗಿದೆ ಎಂದರೆ ವರುಣನಿಗೆ ಈ ಬಾರಿ ಫುಲ್ ರಜೆ ಇದ್ದಂಗೆ ಕಾಣುತ್ತಿದೆ. ಮೇ ಉತ್ತರಾರ್ಧದಲ್ಲಿ 5% ಆದರೂ ಮಳೆ ಬರಬೇಕಿತ್ತು. ಬಂದಿಲ್ಲ. ಜೂನ್ 7 ರಿಂದ ಕರಾವಳಿ ಕರ್ನಾಟಕಕ್ಕೆ ವರುಣನ ಪ್ರವೇಶ ಆಗಬೇಕಿತ್ತು. ಆಗಿಲ್ಲ. ಅರ್ಧ ಗಂಟೆಯ ಸಿರಿಯಲ್ ನಲ್ಲಿ ಮಧ್ಯ ಎರಡು ಸಲ ಚಿಕ್ಕ ಬ್ರೇಕ್ ಇರುತ್ತದೆಯಲ್ಲ, ಹಾಗೇ ಇಡೀ ತಿಂಗಳು ಅಪರೂಪಕ್ಕೆ ಮಳೆರಾಯ ಮಧ್ಯದಲ್ಲಿ ಒಂದಿಷ್ಟು ಮುಖ ತೋರಿಸಿ ಹೋಗಿದ್ದಾನೆ. ಆರ್ದಾ ನಕ್ಷತ್ರದ ಸಮಯದಲ್ಲಿ ಮನೆಯಿಂದ ಹೊರಗೆ ಕಾಲಿಡುವುದೇ ಇಷ್ಟು ವರ್ಷ ಕಷ್ಟವಿತ್ತು. ಈಗ ಮನೆಯೊಳಗೆ ತಣ್ಣಗಿನ ಗಾಳಿ ಬೀಸಿ ತಂಪು ಮಾಡು ದೇವರೇ ಎಂದು ಮೊರೆ ಇಡುವ ಪರಿಸ್ಥಿತಿ ಇದೆ. ಇದಕ್ಕೆಲ್ಲ ಏನು ಕಾರಣ. ಸಂಶಯವೇ ಇಲ್ಲ, ನಾವು ಭೂಮಿಯನ್ನು ನಮಗೆ ಬೇಕಾದ ಹಾಗೆ ಉಪಯೋಗಿಸಿಕೊಂಡಿದ್ದೇವೆ. ಮಳೆ ಅದಕ್ಕೆ ತನ್ನ ಮನಸ್ಸಿಗೆ ಬಂದಾಗ ಬರುತ್ತಿದೆ. ಮರಗಳು ಬೆಳೆದಿದ್ದ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ವಸತಿ ಮತ್ತು ವ್ಯವಹಾರಿಕ ಕಟ್ಟಡಗಳು ಎದ್ದು ನಿಂತಿವೆ. ನೀರು ಅಂತರ್ಜಲವಾಗಿ ಸಂಗ್ರಹವಾಗದಂತೆ ಎಲ್ಲ ಕಡೆ ಕಾಂಕ್ರೀಟ್ ಮತ್ತು ಇಂಟರ್ ಲಾಕ್ ಹಾಕಿ ಇಟ್ಟಿದ್ದೇವೆ. ಪಶ್ಚಿಮ ಘಟ್ಟಗಳನ್ನು ಹೇಗೆ ಮುಗಿಸಿಬಿಟ್ಟಿದ್ದೇವೆ ಎಂದರೆ ನೇತ್ರಾವತಿ ತಿರುವು ಹೆಸರಿನಲ್ಲಿ ಭೂಮಿಯ ಒಪನ್ ಹಾರ್ಟ್ ಸರ್ಜರಿ ಮಾಡಿಬಿಟ್ಟಿದ್ದೇವೆ. ಬಿದ್ದ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಬೇಕಾದ ಸೋಲಾ ಅರಣ್ಯಗಳು ನಾಶವಾಗುತ್ತಿರುವುದರಿಂದ ಬರುವ ದಿನಗಳಲ್ಲಿ ಬಿದ್ದ ಮಳೆಯ ನೀರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ರಸ್ತೆ ಅಗಲಿಕರಣದ ಹೆಸರಿನಲ್ಲಿ ಮರಗಳ ಮಾರಣಹೋಮದಿಂದ ಹಿಡಿದು ಬಸ್ ಸ್ಟಾಪ್ ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಮಾಡಲು ಕೂಡ ಮರಗಳ ಹತ್ಯೆ ನಡೆಯುತ್ತಿದೆ. ಆದ್ದರಿಂದ ಈ ಬಾರಿ ಮಳೆಗಾಲಕ್ಕೆ ರೈನ್ ಕೋಟ್, ಕೊಡೆ ವ್ಯಾಪಾರಿಗಳಿಗೆ ಅಂತಹ ಕೆಲಸವೇನಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಜನವರಿಯೊಳಗೆ ತುಂಬೆ ನೂತನ ಡ್ಯಾಂ ಬರಿದಾಗಿ ನಾವು ಕುಡಿಯಲು ಉಪ್ಪು ನೀರು ಬಳಸಬೇಕಾದಿತು.
ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ?
ಮರ, ಗಿಡಗಳ ಸಂರಕ್ಷಣೆ. ಗಿಡಗಳೇ ಇಲ್ಲದ ಮೇಲೆ ಸಂರಕ್ಷಣೆ ಎಲ್ಲಿಂದ ಬಂತು ಎನ್ನುವ ಪರಿಸ್ಥಿತಿ ಇದೆ. ಅದಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಬೃಹತ್ ಆಂದೋಲನವನ್ನು ನಡೆಸುವುದಕ್ಕೆ ಮುಂದಾಗಿದ್ದಾರೆ. ಕನಿಷ್ಟ ಹತ್ತು ಸಾವಿರ ಸಸಿಗಳನ್ನು ನೆಡುವ ಮೂಲಕ ಮಂಗಳೂರನ್ನು ಹಸಿರುಮಯ ಮಾಡಲು ಸಂಕಲ್ಪಿಸಿದ್ದಾರೆ. ಹೀಗಾಗಲೇ ಮಂಗಳೂರು ಮಹಾನಗರದಲ್ಲಿ ಸಸಿಗಳನ್ನು ವಿತರಿಸಿ ನೆಡುವ ಕಾರ್ಯ ನಡೆಯುತ್ತಿದೆ. ಅದನ್ನು ಇನ್ನು ಹಾಗೇ ಬಿಟ್ಟರೆ ಮಾತ್ರ ಆಗುವುದಿಲ್ಲ. ಮಳೆಗಾಲದ ಸಮಯದಲ್ಲಿ ಸಸಿಗಳಿಗೆ ನೀರು ಸಿಗಬಹುದು. ಆದರೆ ನಂತರ ಅದಕ್ಕೆ ನೀರು ಹಾಕುವ ಕೆಲಸ ನಡೆಯಬೇಕು. ಇಲ್ಲದಿದ್ದರೆ ಉದ್ದೇಶ ಈಡೇರುವುದಿಲ್ಲ. ಅದರೊಂದಿಗೆ ಮಳೆಕೊಯ್ಲು ಯೋಜನೆ, ನೀರಿನ ಗುಂಡಿ ಸಹಿತ ಅನೇಕ ಯೋಜನೆಗಳನ್ನು ಮಾಡಿದರೆ ನೀರಿನ ಕೊರತೆಯಾಗುವುದನ್ನು ತಪ್ಪಿಸಬಹುದು. ಈ ಬಾರಿ ಮಳೆ ತುಂಬಾ ಕಡಿಮೆಯಾಗಿರುವುದರಿಂದ ಬಚಾವಾಗಿರುವವರು ಪಾಲಿಕೆಯ ಅಧಿಕಾರಿಗಳು. ಯಾಕೆಂದರೆ ಅವರು ಹೂಳೆತ್ತದೆ ಹಣ ತಿಂದಿದ್ದರೂ ಅದು ಈ ಬಾರಿ ಪತ್ತೆಯಾಗಿಲ್ಲ. ಕಾರಣ ಕೃತಕ ನೆರೆ ಉದ್ಭವವಾಗಿಲ್ಲ. ಕೃತಕ ನೆರೆ ಬಂದ ಒಂದೆರಡು ಕಡೆ ತುಂಬಾ ಸುದ್ದಿಯಾಗಿಲ್ಲ, ಸೋ ಪಾಲಿಕೆ ಬಚಾವ್!
Leave A Reply