ಪಾಲಿಕೆಯ ಮೇಯರ್ ಶಾಸಕರಿಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಲಿ!!
ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ರಾಜ್ಯ ಸರಕಾರದ ನಿಯಮಾವಳಿಗಳಿಗೆ ಬದ್ಧವಾಗಿ ಏರಿಕೆ ಮಾಡಲಾಗಿದೆ. ಆದರೆ ಅದನ್ನು ಈ ಕೊರೊನಾ ಸಮಯದಲ್ಲಿ ಏರಿಸಿರುವುದು ಅಷ್ಟರಮಟ್ಟಿಗೆ ಸರಿಯಲ್ಲ ಎನ್ನುವುದು ಜನಸಾಮಾನ್ಯರ ಹೇಳಿಕೆ. ಸರಕಾರಕ್ಕೆ ಆದಾಯ ಬೇಕು ನಿಜ. ಆದರೆ ಅದನ್ನು ಹೇಗೆ ಸಂಗ್ರಹಿಸಬೇಕು ಎನ್ನುವುದು ಕೂಡ ಒಂದು ಕಲೆ. ತೆರಿಗೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಮನಸ್ಸು ಬಂದ ಹಾಗೆ ಹೆಚ್ಚು ಮಾಡುವುದು ಕೂಡ ಸರಕಾರಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. \
ಈಗ ನೂರು ಚದರ ಅಡಿಗೆ 15 ರೂಪಾಯಿ ಇದ್ದದ್ದು ಇನ್ನು 50 ರೂಪಾಯಿ ಆಗಲಿದೆ. ಆಗ ನೋಡಿದರೆ 500 ಚದರ ಅಡಿಗೆ 250 ರೂಪಾಯಿ ಆಗುತ್ತದೆ. ಅದೇ ರೀತಿಯಲ್ಲಿ ಟ್ರೇಡ್ ಲೈಸೆನ್ಸ್ ಗೆ ಸಂಬಂಧಪಟ್ಟ ತೆರಿಗೆಗಳು ಕೂಡ ಸಾಕಷ್ಟು ಪರಿಷ್ಕರಣೆ ಆಗಿದೆ. ಇದರ ಬದಲಿಗೆ ಎಪಿಎಲ್, ಬಿಪಿಎಲ್ ಕಾರ್ಡ್ ಇದ್ದ ಹಾಗೆ ಇಲ್ಲಿಯೂ ಕೂಡ ವಿಭಿನ್ನ ಪ್ರಯತ್ನವನ್ನು ಮಾಡಬಹುದು. ಅದೇಗೆ ಎಂದರೆ 500 ಚದರ ಅಡಿಯ ತನಕದ ಮನೆಯವರಿಗೆ ಯಾವುದೇ ಹೊಸ ತೆರಿಗೆ ಇಲ್ಲದೆ ಅದರ ಮೇಲಿನವರಿಗೆ ಮಾತ್ರ ತೆರಿಗೆ ಪರಿಷ್ಕರಣೆ ಮಾಡಬಹುದಿತ್ತು. ಇದೆಲ್ಲ ಬಿಡಿ, ನಿಮಗೆ ಆಶ್ಚರ್ಯವಾಗಬಹುದು. ಬಿಲ್ಡರ್ ಲೈಸೆನ್ಸ್ ಇನ್ನು ಕೂಡ 20 ಪೈಸೆ ಲೆಕ್ಕದಲ್ಲಿ ನಡೆಯುತ್ತಿದೆ. ಅದನ್ನು ಜಾಸ್ತಿ ಮಾಡಬಹುದಲ್ಲ. ಅದು ಯಾಕೆ ಪಾಲಿಕೆ ಮಾಡುವುದಿಲ್ಲ. ಇವತ್ತಿಗೆ 20 ಪೈಸೆ ಚಲಾವಣೆಯಲ್ಲಿಯೇ ಇಲ್ಲದಿರುವಾಗ ಅದನ್ನು ನೇರವಾಗಿ ರೂಪಾಯಿ ಲೆವೆಲ್ಲಿಗೆ ತರುವುದು ಬಿಟ್ಟು ಅದಕ್ಕೆ ಕೈ ಹಾಕುವಂತಹ ಕೆಲಸ ಯಾವ ಸರಕಾರ ಕೂಡ ಪಾಲಿಕೆಯಲ್ಲಿ ಮಾಡುತ್ತಿಲ್ಲ. ಸರಿ ನೋಡಿದರೆ ಬಿಲ್ಡರ್ ಗಳು ಕಟ್ಟಡ ಕಟ್ಟುವುದು ವಾಣಿಜ್ಯ ಉದ್ದೇಶಗಳಿಗಾಗಿ. ಅವರ ಬಳಿ ತೆರಿಗೆ ಸೂಕ್ತ ಪ್ರಮಾಣದಲ್ಲಿ ತೆಗೆದುಕೊಂಡರೆ ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಅದಲ್ಲದೆ ಮನೆತೆರಿಗೆ ಹೆಚ್ಚು ಮಾಡುವುದರ ಬದಲಿಗೆ ಬಿಲ್ಡರ್ ಗಳಿಗೆ ಹೊರೆ ಹೆಚ್ಚು ಮಾಡಿದರೆ ಆಗ ಯಾರೂ ತೊಂದರೆಗೆ ಒಳಪಡುವುದಿಲ್ಲ. ಏಕೆಂದರೆ ಬಿಲ್ಡರ್ ಲೈಸೆನ್ಸ್ ಜಾಸ್ತಿ ಆದರೆ ಅದನ್ನು ಅವರು ಖರೀದಿದಾರರ ಮೇಲೆ ಹಾಕುತ್ತಾರೆ. ಖರೀದಿದಾರರು ಸಹಜವಾಗಿ ಕೋಟಿ ಸುರಿಯುವಾಗ ಇನ್ನೊಂದಿಷ್ಟು ಸಾವಿರ ಜಾಸ್ತಿ ಕೊಟ್ಟರೆ ಏನೂ ಆಗುವುದಿಲ್ಲ.
ಇನ್ನು ಹಲವು ವಿಧಾನಗಳ ಮೂಲಕ ಪಾಲಿಕೆಗೆ ಆದಾಯ ಹೆಚ್ಚು ಮಾಡಬಹುದು. ಈ ಬಗ್ಗೆ ಹಿಂದೆ ಒಮ್ಮೆ ಹೇಳಿದ್ದೆ. ನಿರುದ್ಯೋಗಿ ವಿಕಲಚೇತನರು ಹೊಟ್ಟೆಪಾಡಿಗೆ ಒಂದು ಗೂಡಂಗಡಿಯನ್ನು ಇಟ್ಟರೆ ಅವರಿಂದ ಪ್ರತಿ ತಿಂಗಳಿಗೆ ಐನೂರು, ಏಳು ನೂರು ರೂಪಾಯಿಗಳನ್ನು ಬಾಡಿಗೆಯಾಗಿ ವಸೂಲಿ ಮಾಡುವ ಪಾಲಿಕೆ ಅದೇ ನಗರದಲ್ಲಿ ಭೂಮಿ ಕೊರೆದು ಅದರ ಕೆಳಗೆ ತಮ್ಮ ಟೆಲಿಫೋನ್ ಕೇಬಲಗಳನ್ನು ಇಟ್ಟು ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿರುವವರಿಂದ ಒಂದು ರೂಪಾಯಿ ಕೇಳುತ್ತಿಲ್ಲ. ಅವರಿಂದ ಜುಜುಬಿ ಹಣ ತೆಗೆದುಕೊಳ್ಳುವುದು ಕೇವಲ ಆ ಸಂಸ್ಥೆಗಳು ಭೂಮಿ ಅಗೆದು ಕೇಬಲ್ ಅಳವಡಿಸುವಾಗ ಆ ದುರಸ್ತಿಯ ಹಣವನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಅದು ಬಿಟ್ಟು ಜೀವನಪರ್ಯಂತ ಆ ಸಂಸ್ಥೆ ಕೋಟ್ಯಾಂತರ ರೂಪಾಯಿ ಲಾಭ ಮಾಡುತ್ತಿದ್ದರೂ ನಮ್ಮ ಪಾಲಿಕೆ ಬಾಡಿಗೆ ಕೇಳಲ್ಲ. ಏಕೆಂದರೆ ಗೂಡಂಗಡಿಯವನ ಬಳಿ ಬಾಡಿಗೆ ಕೇಳುವುದು ಸುಲಭ.
ಇನ್ನು ಆದಾಯ ಜಾಸ್ತಿಯಾಗಲೇಬೇಕಾದರೆ ಹೋರ್ಡಿಂಗ್ಸ್ ಏಜೆನ್ಸಿಯವರಿಂದ ಇವರು ವಸೂಲಿ ಮಾಡಬಹುದಲ್ಲ. ಅವರಿಗೆ ಫೀಸ್ ಜಾಸ್ತಿ ಮಾಡದೇ ಅನೇಕ ವರ್ಷಗಳಾಗಿವೆ. ಇವತ್ತಿಗೂ 15-20 ಸಾವಿರದಷ್ಟು ಫೀಸ್ ಇರುವ ಹೋರ್ಡಿಂಗ್ಸ್ ನವರು ಅಷ್ಟು ಕಟ್ಟಿ ಒಂದರಿಂದ ಒಂದೂವರೆ ಲಕ್ಷದಷ್ಟು ದುಡಿಯುತ್ತಾರೆ. ಅವರಿಗೆ ಹೆಚ್ಚಳವಾಗುವುದೇ ಇಲ್ಲ. ಆದ್ದರಿಂದ ನಾನು ಹೇಳುವುದೇನೆಂದರೆ ಈ ಕೊರೊನಾ ಸಮಯದಲ್ಲಿ ಮೂರು ವರ್ಷಗಳಿಗೆ ಒಮ್ಮೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡುವುದನ್ನು ರಾಜ್ಯ ಸರಕಾರ ಒಂದು ವರ್ಷ ಮುಂದಕ್ಕೆ ಹಾಕಬಹುದಿತ್ತು. ಇದು ನಮ್ಮ ಪಾಲಿಕೆಯ ಕೈಯಲ್ಲಿಲ್ಲ. ಯಾಕೆಂದರೆ ಸರಕಾರದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿ ಹೆಚ್ಚಳ ಮಾಡದೇ ಇದ್ದರೆ ಆಗ ಸರಕಾರ ಮುಂದಿನ ದಿನಗಳಲ್ಲಿ ಪಾಲಿಕೆಗೆ ನೀಡುವ ಅನುದಾನವನ್ನೇ ಕಡಿತಗೊಳಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾಜ್ಯ ಸರಕಾರವೇ ದೊಡ್ಡ ಮನಸ್ಸು ಮಾಡಿ ಹೆಚ್ಚಳ ಮಾಡುವುದನ್ನು ಒಂದು ವರ್ಷ ಮುಂದಕ್ಕೆ ಹಾಕಿದ್ದರೆ ಆಗ ಸರಕಾರಕ್ಕೂ ಜನರ ಮೇಲೆ ಪ್ರೀತಿ ಇದೆ ಎಂದು ಸಾಬೀತಾಗುತ್ತಿತ್ತು. ಇನ್ನು ಸರಕಾರಕ್ಕೆ ಎಲ್ಲೆಲ್ಲಿಂದ ಆದಾಯ ತರಬಹುದು ಎನ್ನುವುದನ್ನು ಈಗಾಗಲೇ ಮೇಲೆ ವಿವರಿಸಿದ್ದೇನೆ. ಮೇಯರ್ ಈ ಬಗ್ಗೆ ಯೋಚಿಸಬಹುದು. ಶಾಸಕರಿಬ್ಬರು ಸೇರಿ ಈ ಕೆಲಸ ಮಾಡಿದರೆ ಜನರ ಪ್ರೀತಿ ಸಿಕ್ಕೆ ಸಿಗುತ್ತದೆ!
Leave A Reply