ಯಾರದ್ದೋ ಹೆಸರಿನಲ್ಲಿ ಒಪ್ಪಂದ ನಡೆಯುತ್ತೆ… ಒಪ್ಪಂದವೇ ಆಗದೆ ಶುಲ್ಕ ಕಟ್ಟುತ್ತಾರೆ… ಸಬ್ ಗೋಲ್ ಮಾಲ್ ಹೇ!
ನಾನು ಹೋರ್ಡಿಂಗ್ ಬಗ್ಗೆ ಸರದಿ ಜಾಗೃತ ಲೇಖನ ಬರೆಯುವಾಗ ಕೂಡ ನನ್ನ ಉದ್ದೇಶ ಇಷ್ಟೇ. ಮಂಗಳೂರಿನಲ್ಲಿ ಹೋರ್ಡಿಂಗ್ ಗಳೇ ಬೇಡಾ ಎಂದು ಹೇಳಿಲ್ಲ. ಹೋರ್ಡಿಂಗ್ ಗಳು ಬೇಕು. ಆದರೆ ಅದನ್ನು ಹಾಕುವವರು ಮಂಗಳೂರು ಮಹಾನಗರ ಪಾಲಿಕೆಗೆ ಮೂರು ನಾಮ ಎಳೆದು ತಮ್ಮ ತಿಜೋರಿ ಮಾತ್ರ ತುಂಬುವುದಕ್ಕೆ ಹೊರಡುತ್ತಾರಲ್ಲ, ಅದಕ್ಕೆ ನನ್ನ ಆಕ್ಷೇಪ. ಅದರಲ್ಲೂ ಒಂದೇ ಎಲೆಯಲ್ಲಿ ಜಾಹೀರಾತು ಏಜೆನ್ಸಿ, ಮೆಸ್ಕಾಂ, ಪಾಲಿಕೆಯ ಅಧಿಕಾರಿಗಳು ಒಟ್ಟಿಗೆ ಕುಳಿತು ಮೃಷ್ಟಾನ್ನ ಭೋಜನ ಉಂಡು, ಪಾಲಿಕೆಗೆ ದ್ರೋಹ ಬಗೆಯುತ್ತಾರಲ್ಲ, ಅದನ್ನು ಕಂಡು ಇವರ ಬಗ್ಗೆ ಅಸಹ್ಯ ಉಂಟಾಗುತ್ತದೆ. ನಾನು ಇವರ ಒಂದೊಂದು ಗೋಲ್ ಮಾಲ್ ಹೇಳುತ್ತಾ ಹೋದರೆ ಅದೇ ಒಂದು ವರ್ಷ ತಗುಲಬಹುದು. ಒಂದೊಂದು ಸ್ಯಾಂಪಲ್ ಹೇಳುತ್ತಾ ಹೇಳುತ್ತಿದೆನೆ. ಇವರು ಹೇಗೆಲ್ಲ ಮೋಸ ಮಾಡಲು ಕಲಿತ್ತಿದ್ದಾರೆ ಎನ್ನುವ ಐಡಿಯಾ ನಿಮಗೆ ಗೊತ್ತಾಗಲಿ.
ಮಂಗಳೂರಿನ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡಿನ ಆವರಣದಲ್ಲಿ . CILA ADVT ಜಾಹೀರಾತು ಏಜೆನ್ಸಿಯವರು ನಾಲ್ಕು ಹೋರ್ಡಿಂಗ್ ಅಳವಡಿಸಲು ಆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಅದಕ್ಕೆ ವಿದ್ಯುತ್ ಸಂಪರ್ಕ ಅಳವಡಿಸುವ ಅನುಮತಿ ಇಲ್ಲ. ಒಪ್ಪಂದ ಆದದ್ದು 9.6.15 ಕ್ಕೆ. ನಾನು ನಿನ್ನೆಯೇ ಹೇಳಿದಂತೆ ಜಾಹೀರಾತು ಏಜೆನ್ಸಿಯವರು ಒಪ್ಪಂದದ ಮರುದಿನವೇ ಹೋರ್ಡಿಂಗ್ ತಂದು ನಿಲ್ಲಿಸಿಬಿಡುತ್ತಾರೆ. ನಂತರ ಮನಸ್ಸು ಬಂದಾಗ ಮನಪಾಗೆ ಅನುಮತಿ ಪಡೆದುಕೊಳ್ಳಲು application ಹಾಕುವ ಕ್ರಮ ಇವರಲ್ಲಿದೆ. CILA ADVT ನವರಿಗೆ ಮನಪಾದಿಂದ ಹೋರ್ಡಿಂಗ್ ಅಳವಡಿಸಲು ಅನುಮತಿ ಸಿಕ್ಕಿದ್ದು 2015 ರ ಮಾರ್ಚನಲ್ಲಿ. ಸರಿ, ಅಲ್ಲಿಯೇ ಎಂಟು ತಿಂಗಳ ಶುಲ್ಕ ನಷ್ಟವಾಯಿತು. ಅಷ್ಟೇ ಆಗಿದ್ದರೆ ಇದು ಹತ್ತರಲ್ಲಿ ಹನ್ನೊಂದು ಆಗುತ್ತಿತ್ತು. ಆದರೆ ವಿಷಯ ಇನ್ನೂ ಇದೆ. ನಾನು ಕೆಎಸ್ ಆರ್ ಟಿಸಿಗೆ ಮಾಹಿತಿ ಹಕ್ಕಿನಲ್ಲಿ application ಹಾಕಿದೆ. ಎಷ್ಟು ಹೋರ್ಡಿಂಗ್ ಹಾಕಲು ಒಪ್ಪಂದ ಆಗಿದೆ ಎಂದು ಕೇಳಿದೆ. ಉತ್ತರ ಬಂದದ್ದು ಒಪ್ಪಂದ ಆದದ್ದು ಎರಡು ಹೋರ್ಡಿಂಗ್ ಹಾಕಿಸಲು ಮಾತ್ರ. ಆದರೆ ಅಲ್ಲಿ ನಾಲ್ಕು ಹೋರ್ಡಿಂಗ್ ಬಿದ್ದಿವೆ. ನಾನು ಮನಪಾಗೆ ಮಾಹಿತಿ ಹಕ್ಕಿನಲ್ಲಿ ಅದೇ ಪ್ರಶ್ನೆ ಕೇಳಿ application ಹಾಕಿದೆ. ಬಂದ ಉತ್ತರ ನಾಲ್ಕು ಹೋರ್ಡಿಂಗ್ ಹಾಕಲು ಅನುಮತಿ ಕೇಳಿದ್ದಾರೆ. ಇಲ್ಲಿ ಯಾರನ್ನೂ ನಂಬುವುದು. ಒಪ್ಪಂದ ಆಗಿರುವುದು ಎರಡು ಹೋರ್ಡಿಂಗ್ ಹಾಕಲು. ಅಲ್ಲಿ ಮನಪಾದ ಬಳಿ ಅನುಮತಿ ಕೇಳಿದ್ದು ನಾಲ್ಕು ಹಾಕಲು. ಹಾಗಾದರೆ ನಾಲ್ಕು ಹೋರ್ಡಿಂಗ್ ಹಾಕಲು ಒಪ್ಪಂದವೇ ಆಗಿರದಿದ್ದ ಮೇಲೆ ನಾಲ್ಕು ಹಾಕಲು ಮನಪಾ ಹೇಗೆ ಅನುಮತಿ ಕೊಟ್ಟಿದೆ? ಹೋರ್ಡಿಂಗ್ ಗೆ ದೀಪ ಅಳವಡಿಸಲು ಅನುಮತಿ ಸಿಗದೇ ಇದ್ದಾಗ ಎರಡೇ ಹೋರ್ಡಿಂಗ್ ಗೆ ಒಪ್ಪಂದ ಆಗಿ ನಾಲ್ಕು ಹೋರ್ಡಿಂಗ್ ಹಾಕಿದರೂ ಇಲ್ಲಿಯ ತನಕ ಯಾವುದೇ ರೀತಿಯ ಶಿಸ್ತು ಕ್ರಮ ಜರುಗಿಲ್ಲ. ಇಂತಹ ಅಕ್ರಮಗಳನ್ನು ದಕ್ಕಿಸಿಕೊಳ್ಳುವಷ್ಟು ಸಾಮಥ್ರ್ಯ ಎಲ್ಲ ಜಾಹೀರಾತು ಏಜೆನ್ಸಿಯವರಿಗೆ ಇದೆ. ಇದು ಕೇವಲ ಒಂದು ಜಾಹೀರಾತು ಏಜೆನ್ಸಿಯ ಒಂದು ಜಾಗದ ಒಂದು ಒಪ್ಪಂದದ ಅಕ್ರಮ ಮಾತ್ರ. ಇಂತಹ ಅದೆಷ್ಟೋ ಅಕ್ರಮಗಳು ಎಲ್ಲ ಜಾಹೀರಾತು ಏಜೆನ್ಸಿಗಳ ಹಲವು ಜಾಗಗಳಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ.
ಬೇಕಾದರೆ ಇನ್ನೊಂದು ಅಕ್ರಮದ ಉದಾಹರಣೆ ಕೊಡುತ್ತೇನೆ. ಮಂಗಳೂರಿನ ರಥಬೀದಿಯ ಸಮೀಪವಿರುವ ಹಳೆಯ ಬಾಲಾಜಿ ಅಥವಾ ಈಗ ಶ್ರೀನಿವಾಸ್ ಹೆಸರಿನ ಚಲನಚಿತ್ರ ಮಂದಿರದ ಬಳಿ GEEDEE ಯವರ unipoll ಇದೆ. ಇವರು ಆ ಹೋರ್ಡಿಂಗ್ ಇರುವ ಜಾಗದ ಮಾಲೀಕನೊಂದಿಗೆ ಒಪ್ಪಂದ ಮಾಡಿರುವುದು 9.9.13 ಕ್ಕೆ. ಆದರೆ ಇವರು ಪಾಲಿಕೆಗೆ ಹೋರ್ಡಿಂಗ್ ಶುಲ್ಕ ಪಾವತಿಸಿರುವುದು 8.1.13. ಇದೆಂತಹಾ ಆಶ್ಚರ್ಯ. ಹೋರ್ಡಿಂಗ್ ಒಪ್ಪಂದ ಆಗುವ ಮೊದಲು ಪಾಲಿಕೆಗೆ ಹೋರ್ಡಿಂಗ್ ಶುಲ್ಕ ಹೇಗೆ ಕಟ್ಟಲು ಸಾಧ್ಯ? ಒಪ್ಪಂದವೇ ಆಗದಿದ್ದರೆ ಶುಲ್ಕ ತುಂಬುವ ಮಾತು ಎಲ್ಲಿಂದ ಬಂತು? ಇದರ ಹಿಂದೆ ಎಂತಹ ಅಕ್ರಮ ಇದೆ. ಇನ್ನೂ ಜಾಗದ ಮಾಲೀಕರು ಮತ್ತು ಜಾಹೀರಾತು ಏಜೆನ್ಸಿಯವರು ಸ್ಟ್ಯಾಂಪ್ ಪೇಪರ್ ಮೇಲೆ ಹೋರ್ಡಿಂಗ್ ಹಾಕಲು ಒಪ್ಪಂದ ಮಾಡಬೇಕು, ಬರಿ ಜಾಹೀರಾತು ಏಜೆನ್ಸಿಯವರ ಲೆಟರ್ ಹೆಡ್ ಮೇಲೆ ಮಾಡಿದರೆ ಆಗುವುದಿಲ್ಲ ಎಂದು ನಿನ್ನೆಯೇ ಹೇಳಿದ್ದೆ. ಆದರೆ ಅಲ್ಲಿ ಇನ್ನೊಂದು ಸೂಕ್ಷ್ಮ ಕೂಡ ಇದೆ. ಜಾಹೀರಾತು ಏಜೆನ್ಸಿಯರು ಜಾಗದ ಒಪ್ಪಂದ ಮಾಡಿಕೊಂಡು ಮನಪಾಗೆ ಒಪ್ಪಂದ ಸಲ್ಲಿಸುತ್ತಾರಲ್ಲ. ಅದನ್ನು ಕ್ರಾಸ್ ವಿಚಾರಣೆ ಮಾಡುವುದು ಯಾರು? ಆ ಜಾಗದ ಮಾಲೀಕನೇ ಒಪ್ಪಂದ ಮಾಡಿಕೊಂಡಿದ್ದಾನೆ ಎನ್ನುವುದನ್ನು ತೋರಿಸಲು ಏನಾದರೂ ಸಾಕ್ಷಿ ಇದೆಯಾ? ಯಾರದ್ದೋ ಹೆಸರಿನಲ್ಲಿ ಒಪ್ಪಂದ ಮಾಡಿ ಅದರ ಒಂದು ಪ್ರತಿ ತಂದು ಪಾಲಿಕೆಗೆ ತೋರಿಸಿದರೆ ಮನಪಾಗೆ ಅದು ನೈಜ ಮಾಲೀಕನೊಂದಿಗೆ ಮಾಡಿಕೊಂಡ ಒಪ್ಪಂದ ಎಂದು ಗೊತ್ತಾಗುತ್ತಾ? ಇಲ್ಲವೇ ಇಲ್ಲ. ಅಂತಹುದು ಇಲ್ಲಿಯ ತನಕ ಅಸಂಖ್ಯಾತ ಒಪ್ಪಂದಗಳು ನಡೆದಿವೆ. ಎಲ್ಲವೂ ಬರಿ ಗೋಲ್ ಮಾಲ್. ಗೋಲ್ ಮಾಲ್. ಬೇಕಾದರೆ ಕಾವೂರಿನಿಂದ ಮಂಗಳೂರು ವಿಮಾನ ನಿಲ್ದಾಣದ ತನಕ ಹೋಗಿ ಬನ್ನಿ. ರಸ್ತೆಯ ಬದಿಯಲ್ಲಿ ಅಸಂಖ್ಯಾತ ಹೋರ್ಡಿಂಗ್ ಗಳು ಕಂಡು ಬರುತ್ತದೆ. ಅವು ಕೂಡ ತುಂಬಾ ಆಕರ್ಷಕವಾಗಿ, ಕಣ್ಣಿಗೆ ಕುಕ್ಕುವಂತೆ ಎದ್ದು ಕಾಣುತ್ತವೆ. ಶ್ರೀಮಂತರೇ ಸಂಚರಿಸುವ ರಸ್ತೆಯಾಗಿರುವುದರಿಂದ ಆ ರಸ್ತೆಯ ಮೇಲೆ ಜಾಹೀರಾತು ಏಜೆನ್ಸಿಗಳಿಗೆ ವಿಪರೀತ ಮೋಹ. ಅಲ್ಲಿ unipoll, ಹೋರ್ಡಿಂಗ್ ಸಾಮಾನ್ಯ. ವಿವಿಧ ಅಳತೆಯ, ದೀಪ ಇರುವ ಎಲ್ಲವೂ ನೋಡಲು ಚೆಂದ. ಆದರೆ ಅದರ ಹಿಂದೆ ಇನ್ನೊಂದು ಗೋಲ್ ಮಾಲ್ ಇದೆ.
Leave A Reply