ಹುಬ್ಬಳ್ಳಿಯಲ್ಲಿ ಮಣಿವಣ್ಣನ್ ಮಾಡಿ ತೋರಿಸಿದ್ದು ಇಲ್ಲಿ ಅಕ್ಷಯ್ ಶ್ರೀಧರ್ ಅವರು ಮಾಡುತ್ತಾರೆ?
ವಾರ್ಡ ಕಮಿಟಿ ಮಾಡೋಣ, ಎಷ್ಟು ಮಂದಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ತಯಾರಿದ್ದಿರಿ ಎಂದು ಕೇಳಿ ನೋಡಿ, ಒಬ್ಬನಾದರೂ ನಾನು ತಯಾರಿದ್ದೆನೆ ಎಂದು ಕೈ ಮೇಲೆ ಮಾಡಿ ಎದ್ದು ನಿಲ್ಲಲು ಹೋದರೆ ಅವನ ಕೈಯನ್ನೆ ಮುರಿದು ಅವನನ್ನು ಪಕ್ಕಕ್ಕೆ ಕೂರಿಸಿಬಿಡುತ್ತಾರೆ ಇತರ ಸದಸ್ಯರು. ವಾರ್ಡ ಸಮಿತಿ ಮಾಡೋಣ ಎಂದು ಹೇಳುವಷ್ಟು ನೈತಿಕತೆಯನ್ನು ಮನಪಾದಲ್ಲಿ ಯಾವ ಸದಸ್ಯನೂ ಹೊಂದಿಲ್ಲ. ಯಾಕೆಂದರೆ ವಾರ್ಡ ಕಮಿಟಿ ಮಾಡಿ ತಮ್ಮ ಜುಟ್ಟನ್ನು ಬೇರೆಯವರ ಕೈಯಲ್ಲಿ ಕೊಡಲು ಯಾವ ಸದಸ್ಯ ತಾನೆ ತಯಾರಿದ್ದಾನೆ. ಒಂದು ಸಲ ಪಾಲಿಕೆ ಸದಸ್ಯನಾದರೂ ಸಾಕು, ಸಿಕ್ಕಿದಷ್ಟು ತಿನ್ನೋಣ ಎಂದು ಅಂದುಕೊಳ್ಳುವ ಮನಪಾ ಸದಸ್ಯರು, ಒಂದು ವೇಳೆ ವಾರ್ಡ ಕಮಿಟಿ ಏನಾದರೂ ಆದರೆ ನಾಲ್ಕು ಸಲ ಗೆದ್ದರೂ ನೂರು ರೂಪಾಯಿ ಕೂಡ ತಿನ್ನಲು ಆಗುವುದಿಲ್ಲ.
ಆದರೂ ಆ ನಿಟ್ಟಿನಲ್ಲಿ ಚಿಂತನೆಗಳು ಒಂದು ಹಂತದಲ್ಲಿ ಪ್ರಾರಂಭವಾಗಿದ್ದವು, ಏನೂ ಸದಸ್ಯರ ಇಚ್ಚೆಯಿಂದ ಅಲ್ಲ, ಜನರ ಒತ್ತಡ ಇತ್ತು, ವಾರ್ಡ ಕಮಿಟಿ ಆಗಲೇಬೇಕು ಎಂದು. 7-10-2014 ಅಂದರೆ ಆರು ವರ್ಷದ ಹಿಂದೆ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮನಪಾದ ಮಂಗಳಾ ಸಭಾಂಗಣದಲ್ಲಿ ಕರೆದ ಸಾರ್ವಜನಿಕ ಸಭೆಯಲ್ಲಿ ಜನರಿಂದ ಮನವಿಗಳನ್ನು ಸ್ವೀಕರಿಸಿದರು. ಮನವಿಗಳನ್ನು ತೆಗೆದುಕೊಂಡು ಅದರಲ್ಲಿದ್ದ ಎಲ್ಲ ಮನವಿಗಳನ್ನು ನೋಟ್ ಮಾಡಿ ಪ್ರತಿಯೊಂದು ಮನವಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅದನ್ನು ಸಂಬಂಧಪಟ್ಟ ವಿಭಾಗಕ್ಕೆ ಸೂಚನೆ ನೀಡಿ ಹೋದರು. ಆ ಮನವಿಗಳಲ್ಲಿ ಒಂದು ಮನವಿ ಇದ್ದದ್ದೇ ಮನಪಾ ವ್ಯಾಪ್ತಿಯ ಪ್ರತಿಯೊಂದು ward ನಲ್ಲಿಯೂ ವಾರ್ಡ ಕಮಿಟಿ ಮಾಡಬೇಕು. ಅಷ್ಟಕ್ಕೂ ರಾಜ್ಯ ಉಚ್ಚ ನ್ಯಾಯಾಲಯದಿಂದಲೇ ಈ ಬಗ್ಗೆ ಆದೇಶ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ ಕಮಿಟಿ ಸ್ಥಾಪನೆ ಆಗಬೇಕು. ಆದರೆ ಅದನ್ನು ಜಾರಿಗೊಳಿಸಲು ಮಾತ್ರ ಮನಪಾ ಹಿಂದೆ ಮುಂದೆ ನೋಡುತ್ತದೆ. ಯಾಕೆ ಎಂದು ಹೇಳುವುದೇ ಈ ಜಾಗೃತ ಲೇಖನದ ಉದ್ದೇಶ. ನೀವು ಮನಪಾ ವ್ಯಾಪ್ತಿಯಲ್ಲಿ ವಾಸಿಸುವವರಾದರೆ ನಾಳೆ ಅಥವಾ ಮುಂದೆ ಯಾವತ್ತಾದರೂ ನಿಮ್ಮ ward ನ ಮನಪಾ ಸದಸ್ಯ ಸಿಕ್ಕಿದರೆ ಅವನ ಅಥವಾ ಅವಳ ಬಳಿ ಒಂದು ಪ್ರಶ್ನೆ ಕೇಳಬೇಕು. ವಾರ್ಡ ಕಮಿಟಿ ಮಾಡಲು ಯಾಕೆ ನೀವು ಮುಂದಕ್ಕೆ ಬರುತ್ತಿಲ್ಲ, ಒಂದು ವೇಳೆ ವಾರ್ಡ ಕಮಿಟಿ ಆದರೆ ನಿನಗೆ ತಿನ್ನಲು ಕಡಿಮೆ ಆಗುತ್ತದಾ? ವಾರ್ಡ ಕಮಿಟಿ ನಿರ್ಮಾಣ ಆಗದೆ ಹೋದರೆ ಮುಂದಿನ ಸಲ ವೋಟ್ ಬೇಡಲು ಬರಬೇಡಾ. ಇಷ್ಟು ಹೇಳಿ ಸಾಕು, ಆ corporator ನಿಮ್ಮ ಮುಂದೆ ಜೊಲ್ಲು ಸುರಿಸದಿದ್ದರೆ ಕೇಳಿ.
ಒಂದು ವಾರ್ಡ ಕಮಿಟಿ ನಿರ್ಮಾಣ ಆದರೆ ಸಹಜವಾಗಿ ಅದಕ್ಕೆ ಆಯಾ ward ನ ಮನಪಾ ಸದಸ್ಯರೇ ಅಧ್ಯಕ್ಷರು. ಇನ್ನೂ ಹತ್ತು ಜನರನ್ನು ಪಬ್ಲಿಕ್ ನಿಂದ ಆಯ್ಕೆ ಮಾಡಲಾಗುತ್ತದೆ. ಆ ಹತ್ತು ಜನರಲ್ಲಿ ಒಬ್ಬರು ನಿವೃತ್ತ ಸರಕಾರಿ ಅಧಿಕಾರಿ, ಇನ್ನೊಬ್ಬರು ಹಿರಿಯ ನಾಗರಿಕರು, ಇನ್ನೊಬ್ಬರು ಇಂಜಿನಿಯರ್ ಗ್ರೇಡಿನ ಅಥವಾ ಅದರ ಸಮಾನ ಶ್ರೇಣಿಯ ಉದ್ಯೋಗಿ, ಮೂರು ಜನಸಾಮಾನ್ಯರು ಮತ್ತು ಓರ್ವ ಮಹಿಳೆ ಹಾಗೂ ಇತರ ಬೇರೆ ಬೇರೆ ಕ್ಷೇತ್ರದ ನಾಗರಿಕರನ್ನು ಸೇರಿಸಲಾಗುತ್ತದೆ. ಹಾಗಂತ ಇದೇನೂ ಹೊಸ ಕಲ್ಪನೆ ಅಲ್ಲವೇ ಅಲ್ಲ. ಸರಕಾರದಲ್ಲಿ ಜನರ ಭಾಗಿದಾರಿಕೆಯನ್ನು ಖಾತ್ರಿಗೊಳಿಸಲು ನಗರ ಮಟ್ಟದಲ್ಲಿಯೇ ಯೋಜಿಸಿದಂತಹ ಪ್ಲಾನ್. ಹತ್ತು ವರ್ಷಗಳ ಹಿಂದೆಯೇ ನ್ಯಾಯಾಲಯ ಆದೇಶ ಕೊಟ್ಟರೂ ನಮ್ಮ ಸ್ಥಳೀಯ ಸಂಸ್ಥೆಗಳು ಕ್ಯಾರೇ ಮಾಡುವುದಿಲ್ಲ ಎಂದಾದರೆ ಅದೆಂತಹ ಪೊಗರು ಇದೆ ನೋಡಿ. ಹಾಗಂತ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ ಇದು ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಕಾರಣ ಅಲ್ಲಿ ಆಯುಕ್ತರಾಗಿದ್ದ ದಕ್ಷ ಮತ್ತು ಜನಸಾಮಾನ್ಯರ ಪ್ರೀತಿಯ ಅಧಿಕಾರಿ ಮಣಿವಣ್ಣನ್. ಅವರು ಹುಬ್ಬಳ್ಳಿಯ ಆಯುಕ್ತರಾಗಿದ್ದಾಗ ಇದನ್ನು ಮಾಡಿ ಬಿಟ್ಟರು. ಆದರೆ ನಾವು ಹುಬ್ಬಳ್ಳಿಯವರಾಗೇ ಅಲ್ಲವಲ್ಲ. ನಮ್ಮದು ತುಂಬಾ ಬುದ್ಧಿವಂತರ ಜಿಲ್ಲೆ. ನಮಗೆ ನಮ್ಮ corporator ಅಂದರೆ ಭಾರಿ ಪ್ರೀತಿ. ತಿನ್ನಲಿ ಬಿಡು, ಪಾಪ ನಮ್ಮ ಮಗಳ ನಾದಿನಿಯ ತಮ್ಮನ ಎಂಗೇಜ್ ಮೆಂಟ್ ಫಂಕ್ಷನ್ ಗೆ ಬಂದಿದ್ದಾರೆ. ತುಂಬಾ ಒಳ್ಳೆಯವರು ಎಂದು ಹೇಳುತ್ತೇವೆ ವಿನ: ಅವನು ನಿಮ್ಮ ಮನೆಯ ಎದುರಿನ ರಸ್ತೆಯಲ್ಲಿ ಎಷ್ಟು ಕಮೀಷನ್ ತಿಂದಿದ್ದಾನೆ ಎಂದು ವಿಚಾರಿಸುವುದೇ ಇಲ್ಲ. ಒಂದು ವಾರ್ಡ ಕಮಿಟಿ ಆದರೆ ಇಡೀ ward ನ ಸರ್ವಾಂಗಿಣ ಬೆಳವಣಿಗೆಗೆ ಅದು ಎಷ್ಟು ಉಪಯುಕ್ತ ಎಂದು ಯೋಚಿಸುವುದೇ ಇಲ್ಲ.
ಬೇಕಾದರೆ ವಾರ್ಡ ಕಮಿಟಿ ಅಸ್ತಿತ್ವಕ್ಕೆ ಬಂದರೆ ನಮಗೆ ನಿಮಗೆ ಏನೇನು ಲಾಭ ಎಂದು ಒಂದೊಂದೇ ಹೇಳಿ ಬಿಡ್ತೇನೆ. ನಾಳೆ ನೀವು corporator ಅವರಲ್ಲಿ ಕೇಳುವಾಗ ಅವರೇ ನಿಮಗೆ ಉಲ್ಟಾ ವಾರ್ಡ ಕಮಿಟಿ ಮಾಡಿದರೆ ಏನು ಲಾಭ ಎಂದು ಕೇಳಿದರೆ ನೀವು ಗೊತ್ತಿಲ್ಲ ಅನ್ನಬಾರದು. ಮೊದಲ ಪ್ರಯೋಜನ ಎಂದರೆ ವಾರ್ಡ ಕಮಿಟಿ ಅಸ್ತಿತ್ವಕ್ಕೆ ಬಂದರೆ ನಿಮ್ಮ corporator ಅವರಿಗೆ ಅಥವಾ ಪಾಲಿಕೆಗೆ ಬೇಕಾಬಿಟ್ಟಿ ತಮಗೆ ಖುಷಿ ಬಂದ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ನಿಮಗೆ ಗೊತ್ತಿರಲಿ, ಕೆಲವು ಕೆಲಸಗಳು ಅಗತ್ಯವಿದೆಯೋ, ಇಲ್ಲವೊ corporator ಗಳು ತುಂಬಾ ಆಸಕ್ತಿವಹಿಸಿ ಅದನ್ನು ಮಾಡಿ ಮುಗಿಸುತ್ತಾರೆ. ಕಾರಣ ಅದರಲ್ಲಿ ಕಮೀಷನ್ ಜಾಸ್ತಿ. ನಿಮಗೆ ಅಂತಹ ಸಂದರ್ಭದಲ್ಲಿ ಅನಿಸಬಹುದು, ಈ ಕೆಲಸ ಅಗತ್ಯ ಇರಲಿಲ್ಲವಲ್ಲ, ಆ ಕೆಲಸ ಮೊದಲು ಆಗಬೇಕಿತ್ತು. corporator ಯಾಕೆ ಇದನ್ನು ಮೊದಲು ಪ್ರಾರಂಭಿಸಿದರು, ಸಿಂಪಲ್ ಮಾರಾಯ್ರೆ, ಈ ಕೆಲಸದಲ್ಲಿ ಕಮೀಷನ್ ಹೆಚ್ಚು ಸಿಗುತ್ತೆ. ಇಂತಹ ಪ್ರಾಬ್ಲಂಗಳು ವಾರ್ಡ ಕಮಿಟಿ ಯಿಂದ ನಿಲ್ಲುತ್ತವೆ, ಯಾಕೆಂದರೆ ಯಾವುದೇ ಕೆಲಸ ಕೈಗೆ ತೆಗೆದುಕೊಳ್ಳಬೇಕಾದರೆ ಅದಕ್ಕೆ ಮೊದಲು ವಾರ್ಡ ಕಮಿಟಿ ಯಿಂದ ಒಪ್ಪಿಗೆ ಪಡೆಯಬೇಕು, ಹೇಗಿದೆ ಮೊದಲ ನಿಯಮ! ಇನ್ನೂ ಹೇಳ್ತಿನಿ,
Leave A Reply