ತೆಲಂಗಾಣದಲ್ಲಿ ಬಿಜೆಪಿ ನೆಟ್ಟ ಬೀಜ ಹಣ್ಣಾಗಲು ತಯಾರಾಗಿದೆ!
ಅಖಂಡ ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಬೇರ್ಪಡಿಸಿ ಪ್ರತ್ಯೇಕ ರಾಜ್ಯ ಮಾಡಬೇಕೆನ್ನುವ ಕೂಗನ್ನು ಎಬ್ಬಿಸಿದವರು ಕೆ ಚಂದ್ರಶೇಖರ್ ರಾವ್. ಅವರದ್ದು ಟಿಆರ್ ಎಸ್ ಪಕ್ಷ. ಹೋರಾಟದ ಕಾವು ಎಷ್ಟು ದೊಡ್ಡ ರೀತಿಯಲ್ಲಿ ಹೊತ್ತಿಕೊಂಡಿತು ಎಂದರೆ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಟಿಆರ್ ಎಸ್ ಎದುರು ಮಂಡಿಯೂರಿತು. ಕಾಂಗ್ರೆಸ್ಸಿನ ಘಟಾನುಘಟಿ ನಾಯಕರು ಏನೂ ಮಾಡಿದರೂ ಚಂದ್ರಶೇಖರ್ ಕೇಳುವ ಸ್ಥಿತಿಯಲ್ಲಿ ಇರಲೇ ಇಲ್ಲ. ಆ ಸಮಯದಲ್ಲಿ ಇಡೀ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅತ್ಯಂತ ಬಲಶಾಲಿ ಪಕ್ಷ. ಈಗಿನ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ತಂದೆ ರಾಜಶೇಖರ್ ರೆಡ್ಡಿ ಬಲಾಢ್ಯ ನಾಯಕ. ಟಿಆರ್ ಎಸ್ ಅಕ್ಷರಶ: ಒಂದು ಪುಟ್ಟ ರಾಜಕೀಯ ಪಕ್ಷ. ಎದುರಿಗೆ ಇದ್ದದ್ದು ಆನೆಯಂತಹ ಕಾಂಗ್ರೆಸ್. ಕಾಂಗ್ರೆಸ್ಸಿನಿಂದ ಹೈದ್ರಾಬಾದ್ ನಂತಹ ರಾಜಧಾನಿಯನ್ನು ಕಿತ್ತುಕೊಂಡು ಚಂದ್ರಶೇಖರ್ ಯಾವಾಗ ಬೀಗಿದರೋ ಅವರಿಗೆ ಒಂದು ವಿಷಯ ಗ್ಯಾರಂಟಿ ಇತ್ತು. ಇನ್ನು ನಮ್ಮನ್ನು ಹಿಡಿಯುವವರು ಯಾರೂ ಇಲ್ಲ. ಆಂಧ್ರದಿಂದ ವೆಂಕಯ್ಯನಾಯ್ಡು ಅವರಂತಹ ಬಿಜೆಪಿ ನಾಯಕರು ಇವತ್ತು ಉಪರಾಷ್ಟ್ರಪತಿಯ ಸ್ಥಾನದ ತನಕ ಹೋಗಿದ್ದರೂ ಅಲ್ಲಿ ಬಿಜೆಪಿ ಅಸ್ತಿತ್ವ ಅಷ್ಟಕಷ್ಟೆ. ರೆಡ್ಡಿಗಳ ಭದ್ರಕೋಟೆಯಲ್ಲಿ ಬಿಜೆಪಿ ಪತಾಕೆ ಕಾಣಿಸುವುದೇ ಡೌಟು ಎನ್ನುವಂತಹ ಸ್ಥಿತಿ. ಆದರೆ ಕಾಂಗ್ರೆಸ್ಸಿನ ಅವಸ್ಥೆ ಹೇಗೆ ಬದಲಾಗಿತ್ತು ಎಂದರೆ ಇವತ್ತು ಇಡೀ ಆಂಧ್ರ ಮತ್ತು ತೆಲಂಗಾಣವನ್ನು ಸೇರಿಸಿದರೆ ಕಾಂಗ್ರೆಸ್ಸ್ ಬೆರಳೆಣಿಕೆಯ ಶಾಸಕರನ್ನು ಹೊಂದಿದೆ. ಇಂತಹ ರಾಜಕೀಯ ವಾತಾವರಣದಲ್ಲಿ ತೆಲಂಗಾಣದ ರಾಜಧಾನಿ ಹೈದ್ರಾಬಾದಿನ ಪಾಲಿಕೆ ಚುನಾವಣೆ ಬಂದೊದಗಿತ್ತು. ಸಿಎಂ ಚಂದ್ರಶೇಖರ್ ಅವರಿಗೆ ಕೆಲವು ತಿಂಗಳ ಹಿಂದೆ ಡುಬಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಅವರ ನಿದ್ದೆಯನ್ನೇ ಕಿತ್ತುಕೊಂಡಿತ್ತು. ಆಡಳಿತರೂಢ ಪಕ್ಷದ ಅಭ್ಯರ್ಥಿ ಉಪಚುನಾವಣೆಯಲ್ಲಿ ಸೋಲುವುದೆಂದರೆ ಅದರಲ್ಲಿಯೂ ವಿಪಕ್ಷವೇ ಇಲ್ಲದ ರಾಜ್ಯದಲ್ಲಿ ಅದು ಯಾವ ಸಿಎಂಗೂ ದೊಡ್ಡ ಮುಖಭಂಗ. ಹೀಗಿರುವಾಗ ಅವರು ಎಚ್ಚರಿಕೆಯ ನಡೆಯನ್ನು ಪಾಲಿಕೆ ಚುನಾವಣೆಯಲ್ಲಿ ಇಡಲು ತೀರ್ಮಾನಿಸಿದ್ದರು. ಇತ್ತ ಡುಬಾಕ್ ಕ್ಷೇತ್ರ ಗೆದ್ದಂತೆ ಬಿಜೆಪಿಗೆ ಒಂದು ವಿಷಯ ಕನ್ಫರ್ಮ್ ಆಗಿತ್ತು. ನಾವು ಪೂರ್ಣ ಶಕ್ತಿಯೊಂದಿಗೆ ಇಳಿದರೆ ಹೈದ್ರಾಬಾದ್ ಗದ್ದುಗೆ ದೂರವೇನಲ್ಲ.
ಬಿಜೆಪಿ ಶಕ್ತಿ ಇರುವುದೇ ಹಾಗೆ. ಅವರು ಮರುಭೂಮಿಯಲ್ಲಿಯೂ ತೋಟ ಮಾಡೋಣ ಎಂದು ಹೊರಟು ಬಿಡುತ್ತಾರೆ. ಹಾಗಂತ ಮರಳಿನ ಮೇಲೆ ಗಿಡ ಬೆಳೆಯುತ್ತಾ ಎಂದು ಕೇಳಿ ನೋಡಿ. ಇವತ್ತು ಬೀಜ ಬಿತ್ತುತ್ತೇವೆ. ಅದು ಫಲ ಮುಂದಿನ ವಾರವೇ ಕೊಡಬೇಕು ಎನ್ನುವ ಆಸೆ ನಮಗಿಲ್ಲ ಎನ್ನುತ್ತಾರೆ. ಅದು ಸಂಘದ ನಿಯಮ. ಅವರದ್ದು ದಶಕದ ಮುಂದಿನ ಯೋಜನೆ. ಪ್ರಯತ್ನ ಮಾಡೋಣ. ಬಂದರೆ ಹಣ್ಣು, ಹೋದರೆ ಬೀಜ ಅಷ್ಟೇ ಅಲ್ವಾ ಎನ್ನುವ ಧೋರಣೆ. ಅದನ್ನೇ ಹಿಡಿದುಕೊಂಡು ಅಮಿತ್ ಶಾ ರಣರಂಗಕ್ಕೆ ಇಳಿದುಬಿಟ್ಟರು. ಇಡೀ ಬಿಹಾರ ಚುನಾವಣೆಯಲ್ಲಿ ಒಮ್ಮೆಯೂ ಬಿಹಾರದ ಒಳಗೆ ಪ್ರವೇಶಿಸದೇ ಇದ್ದ ಅಮಿತ್ ಭಾಯಿ ಕೇವಲ ಒಂದು ಪಾಲಿಕೆಯ ಚುನಾವಣೆಗೆ ವಿಮಾನ ಹತ್ತಿದ್ದೇ ಆಶ್ಚರ್ಯ. ಶಾ ಅಷ್ಟೇ ಅಲ್ಲ, ಕೇವಲ ಒಂದು ಪಾಲಿಕೆ ಚುನಾವಣೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಬಂದು ತಮ್ಮ ಟ್ರೇಡ್ ಮಾರ್ಕ್ ಹಿಂದೂ ಹೆಸರನ್ನು ಇಡುವ ಪ್ರಸ್ತಾವ ಮಾಡಿ ಹೋದರು. ಹೈದ್ರಾಬಾದ್ ಹಿಂದೂತ್ವದ ರಣಕೇಕೆಗೆ ಕಾಯುತ್ತಿತ್ತೋ ಇಲ್ವೋ ಬೇರೆ ವಿಷಯ. ಆದರೆ ಒಂದು ಬದಲಾವಣೆಗೆ ಕಾಯುತ್ತಿದ್ದದ್ದು ಮಾತ್ರ ಹೌದು. ಆ ಬದಲಾವಣೆ ಕಾಂಗ್ರೆಸ್ಸಿನಿಂದಲೂ ಸಿಕ್ಕಿದ್ದರೂ ಸಾಕಿತ್ತು. ಆದರೆ ಕಾಂಗ್ರೆಸ್ ಬಿಹಾರ ಸೋಲಿನ ಆತ್ಮಾವಲೋಕನದಲ್ಲಿ ಎಷ್ಟು ಒಳಗೆ ಹೋಗಿತ್ತೆಂದರೆ ಅವರಿಗೆ ಹೈದ್ರಾಬಾದ್ ಚುನಾವಣೆ ಬಂದು ಹೋದದ್ದೇ ಗೊತ್ತಾಗಲಿಲ್ಲ. ಸೋನಿಯಾ ಗೋವಾದ ಐಶಾರಾಮಿ ಹೋಟೇಲ್ ಆವರಣದಲ್ಲಿ ಸೈಕಲ್ ಬಿಡುತ್ತಾ ಇದ್ರು. ರಾಹುಲ್ ಗೋವಾದ ರೆಸಾರ್ಟ್ ನಲ್ಲಿ ಬಿಸಿಲಿಗೆ ಮೈ ಒಣಗಿಸುತ್ತಿದ್ದರು. ಅಲ್ಲಿಗೆ ಒಂದು ಕಾಲದಲ್ಲಿ ಆಂಧ್ರ, ತೆಲಂಗಾಣದ ಉಸ್ತುವಾರಿಯಾಗಿದ್ದ ವೀರಪ್ಪ ಮೊಯಿಲಿಯಿಂದ ಹಿಡಿದು ಕಾಂಗ್ರೆಸ್ ಜಾತ್ಯಾತೀತ ಮುಖ ಗುಲಾಂ ನಬಿ ಆಜಾದ್ ತನಕ ಎಲ್ಲರೂ ತಮ್ಮ ತಮ್ಮ ಚೇಂಬರಿನ ಎಸಿ ಕೋಣೆ ಬಿಟ್ಟು ಹೊರಗೆ ಬರಲೇ ಇಲ್ಲ. ಅದು ಟಿಆರ್ ಎಸ್ ಗೆ ಗೊತ್ತಿತ್ತು. ಓವೈಸಿಗೂ ಅರಿವಿತ್ತು. ಈ ಅವಕಾಶವನ್ನು ಬಿಜೆಪಿ ಖಂಡಿತ ಬಳಸುತ್ತೆ ಎಂದುಕೊಂಡ ಚಂದ್ರಶೇಖರ್ ಮತ್ತು ಓವೈಸಿ ಒಳಮೈತ್ರಿ ಮಾಡಿಕೊಂಡರು. ಟಿಆರ್ ಎಸ್ ಅಭ್ಯರ್ಥಿಗಳ ಎದುರು ಒವೈಸಿ ಎಂಐಎಂ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ. ಕೇಳಿದ್ರೆ ಅಲ್ಲಿ ಮುಸ್ಲಿಂ ಬಾಹುಳ್ಯ ಇಲ್ಲ ಎಂದು ಸಮಜಾಯಿಷಿಕೆ. ಹಾಗೇ ಎಂಐಎಂ ಅಭ್ಯರ್ಥಿ ಹಾಕಿದ ಕಡೆ ಚಂದ್ರಶೇಖರ್ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳಿಗೆ ಐಸ್ ಕ್ಯಾಂಡಿ ಹಂಚಿದಂತೆ ಟಿಕೆಟ್ ಕೊಟ್ಟರು. ಅಲ್ಲಿಗೆ ಒಂದು ಪಕ್ಕಾ ಆಗಿತ್ತು. ನಾವು ಸೋತರೂ ಪರವಾಗಿಲ್ಲ. ಮೋದಿಯ ಪಕ್ಷ ಅಧಿಕಾರಕ್ಕೆ ಬರಬಾರದು. ಕೊನೆಗೂ ಮೂರು ಪಕ್ಷದ ಲೆಕ್ಕಾಚಾರದಂತೆ ಆಗಿದೆ.
ಬಿಜೆಪಿ 4 ರಿಂದ 49 ಗೆದ್ದಿದೆ. ತಾವು ಅಧಿಕಾರಕ್ಕೆ ಬರದಿದ್ದರೂ ಟಿಆರ್ ಎಸ್ ಗೆ ಮಗ್ಗುಲಮುಳ್ಳಾಗಬಹುದಾದ ಎಂಐಎಂ ಜೊತೆ ಅನಿವಾರ್ಯವಾಗಿ ಅಧಿಕಾರ ಹಂಚಿಕೊಳ್ಳುವ ಹಾಗೆ ಬಿಜೆಪಿ ಮಾಡಿದೆ. ಇದು ಒಂದು ರೀತಿಯಲ್ಲಿ ಹೈದ್ರಾಬಾದಿನಲ್ಲಿ ಪಾಲಿಕೆ ತುಂಬಾ ದಿನ ಬಾಳಿಕೆ ಬರಲ್ಲ ಎನ್ನುವ ಸೂಚನೆ. ಅದೇ ರೀತಿಯಲ್ಲಿ ಅಲ್ಲಿ ಬಿಜೆಪಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮತಗಳ ಧ್ರುವೀಕರಣಕ್ಕೆ ಒಂದು ಅಸ್ತ್ರ ನೀಡಿದಂತಾಗಿದೆ. “ಹಿಂದೂಗಳು ಬಿಜೆಪಿಗೆ ವೋಟ್ ನೀಡದಿದ್ದರೆ ಟಿಆರ್ ಎಸ್ ಮತ್ತು ಒವೈಸಿ ಅಧಿಕಾರಕ್ಕೆ ಬರುತ್ತಾರೆ” ಎಂದು ಹೇಳುತ್ತಾ ಬಂದರೆ ಅಷ್ಟು ಸಾಕು, ತೆಲಂಗಾಣದ ಮುಂದಿನ ವಿಧಾನಸಭಾ ಚುನಾವಣೆ ಕುತೂಹಲದ ಕಾಲಘಟ್ಟಕ್ಕೆ ಬರುವುದೇ ಹೀಗೆ!
Leave A Reply