ರೈತರ ಮುಖವಾಡ ತೊಟ್ಟಿರುವ ಸಂಧಾನಕಾರರ ಷರತ್ತುಗಳೇನು, ಗೊತ್ತಾ?
Posted On December 12, 2020
ಆರಂಭದಲ್ಲಿ ರೈತರು ತಮ್ಮ ಹೋರಾಟದಲ್ಲಿ ರೈತರನ್ನು ಬಿಟ್ಟು ಬೇರೆ ಯಾರನ್ನೂ ಕೂಡ ಸೇರಿಸಲೇ ಇಲ್ಲ. ಪಕ್ಷಾತೀತವಾಗಿ ನಡೆಯುತ್ತಿದ್ದ ಆ ಹೋರಾಟದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಸಹಿತ ಕಮ್ಯೂನಿಸ್ಟರು ಪ್ರಯತ್ನಿಸಿದರಾದರೂ ಅದು ಯಶಸ್ವಿಯಾಗಲಿಲ್ಲ. ಇನ್ನು ಇಡೀ ದೇಶದ ಎಲ್ಲಾ ರೈತರಿಗೂ ಕೇಂದ್ರ ಸರಕಾರದ ಮೂರು ಮಸೂದೆಗಳು ಒಪ್ಪಿಗೆಯಾಗಿಲ್ಲ ಎನ್ನುವ ಸಂದೇಶ ಈ ಪ್ರತಿಭಟನೆಯಿಂದ ಸಾಬೀತಾಗಿಲ್ಲ. ಅದರೊಂದಿಗೆ ಒಂದು ವಿಷಯವಂತೂ ಸ್ಪಷ್ಟವಾಗಿದೆ. ಅದೇನೆಂದರೆ ಈ ಕಾಯ್ದೆಯ ಎಲ್ಲಾ ಅಂಶಗಳ ಬಗ್ಗೆ ಸಾರಾಸಗಟಾಗಿ ರೈತರಿಗೆ ವಿರೋಧ ಇಲ್ಲ. ಕೆಲ ಅಂಶಗಳ ಬಗ್ಗೆ ರೈತರು ಲಿಖಿತವಾಗಿ ಧೃಡಿಕರಣವನ್ನು ಕೇಳುತ್ತಿದ್ದಾರೆ. ಬಹುಶ: ಇಷ್ಟೇ ಆಗಿದಿದ್ದರೆ ಈ ಮಸೂದೆ ವಿರುದ್ಧ ರೈತರ ಹೋರಾಟ ಯಾವತ್ತೋ ಮುಗಿಯುತ್ತಿತ್ತು. ಆದರೆ ಇದರ ಒಳಾರ್ಥವನ್ನು ಅರಿತಿರುವ ಅನೇಕರಿಗೆ ಗೊತ್ತಿರುವ ಸಂಗತಿ ಎಂದರೆ ಇದು ಕೇವಲ ರೈತರ ಮತ್ತು ಕೇಂದ್ರ ಸರಕಾರದ ನಡುವಿನ ಸಂಘರ್ಷವಾಗಿ ಉಳಿದಿಲ್ಲ.
ಈಗ ಇದು ಬಂಡವಾಳಶಾಹಿ ಮಧ್ಯವರ್ತಿಗಳ ಮತ್ತು ಕೇಂದ್ರದ ಅಧಿಕಾರರೂಢ ಎನ್ ಡಿಎ ನಡುವಿನ ಹೋರಾಟವಾಗಿ ಪರಿವರ್ತನೆಯಾಗಿದೆ. ಮಲಗಿದವರನ್ನಾದರೂ ಎಬ್ಬಿಸಬಹುದು. ಆದರೆ ಮಲಗಿದಂತೆ ನಾಟಕವಾಡುವವರನ್ನು ಎಬ್ಬಿಸಲು ಸಾಧ್ಯವಿಲ್ಲ ಎನ್ನುವ ಮಾತಿದೆ. ರೈತರನ್ನಾದರೂ ಸಮಾಧಾನಪಡಿಸಬಹುದು ಆದರೆ ರೈತರ ಮುಖವಾಡ ಹೊತ್ತಿರುವವರನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ. ಯಾಕೆಂದರೆ ಅಂತವರು ಕೇಂದ್ರದ ಸಚಿವರೊಂದಿಗೆ ಮಾತುಕತೆಗೆ ಕುಳಿತುಕೊಳ್ಳುವಾಗಲೇ ನಾವು ಯಾವ ಕಾರಣಕ್ಕೂ ಸಂಧಾನಕ್ಕೆ ತಯಾರಿಲ್ಲ ಎನ್ನುವ ಮನಸ್ಥಿತಿ ಹೊಂದಿದರೆ ಹೇಗೆ ತಾನೆ ಸರಿ ಮಾಡಲು ಸಾಧ್ಯ. ಅದರಲ್ಲಿಯೂ ಈಗೀಗ ಸಂಧಾನಕ್ಕೆ ಬರುವವರ ಬೇಡಿಕೆಗಳು ಕೂಡ ಬೇರೆ ಬೇರೆಯಾಗಿವೆ. ಅವು ಬೇಡಿಕೆಗಳಾಗಿದ್ದರೆ ಪರಿಹರಿಸಬಹುದು. ಆದರೆ ಈಗ ಅವರು ಬೇಡಿಕೆ ಇಡುತ್ತಿಲ್ಲ. ಷರತ್ತುಗಳನ್ನು ಇಡುತ್ತಿದ್ದಾರೆ. ಆ ಷರತ್ತುಗಳಾದರೂ ಎಂತಹುದು. ಶಾಹಿನ್ ಭಾಗ್ ಮತ್ತು ಸಿಎಎ ವಿರುದ್ಧದ ಹೋರಾಟದಲ್ಲಿ ಗಲಾಟೆ ಮಾಡಿ ದೊಂಬಿ ಎಬ್ಬಿಸಿದವರ ವಿರುದ್ಧ ಕೇಸುಗಳು ದಾಖಲಾಗಿದ್ದವಲ್ಲ, ಅದನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು ಎನ್ನುವ ಷರತ್ತುಗಳನ್ನು ಸಂಧಾನಕಾರರು ವಿಧಿಸುತ್ತಿದ್ದಾರೆ. ಈ ಒಂದು ಷರತ್ತೆ ಸಾಕು, ರೈತರ ಹೆಸರಿನಲ್ಲಿ ಸಂಧಾನಕ್ಕೆ ಕೂರುತ್ತಿರುವವರು ಅಪ್ಪಟ ರೈತರೇ ಅಲ್ಲ. ಈ ಹೋರಾಟ ಕೇಂದ್ರ ಸರಕಾರದ ಇಮೇಜನ್ನು ಹಾಳು ಮಾಡಲು ಕಾಯಾ ವಾಚಾ ಮನಸಾ ಆಗಲೇಬೇಕು ಎನ್ನುವುದು ಯುಪಿಎ ನಿರ್ಧಾರ. ಇತ್ತ ಶರದ್ ಪವಾರ್ ಅತ್ತ ಅಮರೇಂದ್ರ ಸಿಂಗ್ ಬಾದಲ್ ಈ ಇಬ್ಬರೂ ವಾಸ್ತವವಾಗಿ ಬಹಳ ದೊಡ್ಡ ಮಂಡಿ ವ್ಯಾಪಾರಿಗಳು. ಕೇಂದ್ರದ ಈ ಮಸೂದೆಗಳು ಇಂತವರ ಮತ್ತು ಇಂತಹ ಎಷ್ಟೋ ಬೃಹತ್ ಮಂಡಿ ವ್ಯಾಪಾರಿಗಳ ನಡುವನ್ನು ಮುರಿಯಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕೇಂದ್ರದಲ್ಲಿ ಕುಳಿತಿರುವ ಬಿಜೆಪಿ ನೇತೃತ್ವದ ಸರಕಾರಕ್ಕೆ ರೈತರಿಗೆ ತಾವು ಬೆಳೆದ ಬೆಳೆಗಳ ನೇರ ಲಾಭ ಸಿಗಲಿ ಎನ್ನುವ ಇಚ್ಚೆ ಇದ್ದರೆ ಮಧ್ಯವರ್ತಿಗಳು ನಿಜಕ್ಕೂ ಕಂಗಾಲಾಗಿದ್ದಾರೆ. ಪ್ರತಿಭಟನೆಗೆ ಕೂಡ ಪಂಜಾಬ್ ಮತ್ತು ಹರಿಯಾಣ ರೈತರನ್ನೇ ನೋಡಿ. ಅದರಲ್ಲಿ ಬೇರೆ ರಾಜ್ಯಗಳ ರೈತರ ಸಂಖ್ಯೆ ಕಡಿಮೆ. ಈಗ ಬೆಂಗಳೂರಿನಲ್ಲಿ ಕೂಡ ಕೆಲವು ರೈತ ಮುಖಂಡರು ತಮ್ಮ ಸಾಮರ್ತ್ಯ ಪ್ರದರ್ಶನಕ್ಕೆ ಪ್ರತಿಭಟನೆ ಮಾಡುತ್ತಾ ಇರಬಹುದು, ಆದರೆ ನಿಜಕ್ಕೂ ರೈತನಿಗೆ ಕೇಳಿ ನೋಡಿ. ಅವರು ಹೇಳುವುದು ಈ ಮಸೂದೆ ಒಳ್ಳೆಯದಿದೆ. ಆದರೆ ನಮಗೆ ಪ್ರತಿಭಟನೆ ಮಾಡಲು ಕರೆಕೊಟ್ಟಿದ್ದಾರೆ, ಅದಕ್ಕೆ ಮಾಡುತ್ತಿದ್ದೇವೆ.
ಯಾವುದೇ ಮಸೂದೆಗಳು ಬರುವಾಗ ಅದು ನೂರಕ್ಕೆ ನೂರು ಸರಿಯಾಗಿರುತ್ತೆ ಎಂದು ನಾನು ಹೇಳುವುದಿಲ್ಲ, ಅದು ಯಾವುದೇ ಸರಕಾರದ ಅವಧಿಯಾಗಿರಲಿ. ಒಂದಂತೂ ನಿಜ. ಎಷ್ಟೇ ಪರಿಣಿತರನ್ನು ಕರೆದು ಸಂಶೋಧಿಸಿ ಮಸೂದೆಯ ರೂಪುರೇಶೆ ತಯಾರಿಸಲಾಗಿದೆ ಎಂದು ಹೇಳಿದರೂ ಎಸಿ ಕೋಣೆಯಲ್ಲಿ ಕುಳಿತ ಅಧಿಕಾರಿಗಳು ತಮ್ಮ ಬುದ್ಧಿಮತ್ತೆ ಪ್ರದರ್ಶಿಸಿ ಒಂದಷ್ಟು ಕಿಸೆಯಿಂದ ತೆಗೆದು ಜಾಣತನ ತೋರಿಸಿರುತ್ತಾರೆ. ಆದ್ದರಿಂದ ಒಂದು ವೇಳೆ ಮಸೂದೆಗೆ ವಿರೋಧ ತೋರಿ ಬಂದಾಗ ಅಂತಹ ಅಪಸ್ವರದ ಅಂಶಗಳನ್ನು ಬದಲಾಯಿಸುವುದರಲ್ಲಿ ತಪ್ಪಿಲ್ಲ. ಯಾವುದೇ ಸರಕಾರ ಈ ಕುರಿತು ತಮ್ಮ ಇಗೋ ತೋರಿಸಲು ಹೋಗಲೇಬಾರದು. ಅದೇ ರೀತಿಯಲ್ಲಿ ಹೋರಾಟಗಾರರು ಕೂಡ ಪ್ರತಿಭಟನೆ, ಬಂದ್ ಹಿಂದಕ್ಕೆ ಪಡೆದುಕೊಂಡರೆ ತಾವು ಸೋಲೊಪ್ಪಿಕೊಂಡಂತೆ ಆಗುತ್ತದೆ ಎಂದು ಅಂದುಕೊಳ್ಳಲೇಬಾರದು. ಒಂದಿಷ್ಟು ದೇಶಕ್ಕಾಗಿ ಎರಡೂ ಕಡೆಯಿಂದ ತ್ಯಾಗ ಆಗಲೇಬೇಕು. ಸಾಮಾನ್ಯವಾಗಿ ರೈತರು ಪ್ರತಿಭಟನೆ ಮಾಡುತ್ತಾರೆ ಎಂದರೆ ಜನಸಾಮಾನ್ಯರಿಗೆ ಅವರ ಬಗ್ಗೆ ಸಿಂಪಥಿ ಉಂಟಾಗುತ್ತದೆ. ಸರಕಾರದ ಬಗ್ಗೆ ಕೋಪ ಬರುತ್ತದೆ. ಈ ಹಂತದಲ್ಲಿ ನಾಜೂಕಾಗಿ ಬೆಣ್ಣೆಯ ಮೇಲೆ ಬಿದ್ದ ಕೂದಲನ್ನು ತೆಗೆಯಬೇಕಾಗಿರುವುದು ಕೇಂದ್ರ ಸಚಿವರ ಕೆಲಸ. ಹಾಗಂತ ಇವರು ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಸಿಎಎ ವಿರುದ್ಧದ ಹೋರಾಟದಲ್ಲಿ ಗಲಭೆ ಮಾಡಿದವರ ಕೇಸುಗಳನ್ನು ಹಿಂದಕ್ಕೆ ಪಡೆಯಲು ಆಗುತ್ತದೆಯಾ? ಅದೇ ರೀತಿಯಲ್ಲಿ ತಿಂಗಳುಗಟ್ಟಲೆ ಒಂದು ಮುಖ್ಯ ರಸ್ತೆ ಶಾಹಿನ್ ಭಾಗ್ ಬಂದ್ ಮಾಡಿ ರಸ್ತೆಯಲ್ಲಿಯೇ ಪ್ರತಿಭಟನೆಗೆ ಕುಳಿತು ದೆಹಲಿಯ ಶಾಂತಿ ಸುವ್ಯವಸ್ಥೆಗೆ ಸವಾಲು ಹಾಕಿದವರ ವಿರುದ್ಧದ ಕೇಸುಗಳನ್ನು ಹಿಂದಕ್ಕೆ ಪಡೆಯಲು ಆಗುತ್ತಾ? ಯಾಕೋ ಹೋರಾಟವೊಂದು ದಾರಿ ತಪ್ಪುತ್ತಿದೆ ಎಂದು ಅನಿಸುವುದೇ ಈ ಕಾರಣಗಳಿಗೆ!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply