ಕಮೀಷನ್ ಕೊಡದೇ ಕೆಲಸ ಆಗಲ್ಲದಿದ್ದರೆ ಗುತ್ತಿಗೆಯನ್ನೇ ತೆಗೆದುಕೊಳ್ಳಲ್ಲ ಎಂದು ನಿರ್ಧಾರ ಮಾಡಿ!!
ನಮ್ಮ ಕಾಮಗಾರಿಗಳಲ್ಲಿ ಜನಪ್ರತಿನಿಧಿಗಳು 40% ದಷ್ಟು ಕಮೀಷನ್ ಕೇಳುತ್ತಾರೆ, ಇದರಿಂದ ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಚರ್ಚೆ ಶುರುವಾಗುವ ಎಲ್ಲಾ ಸಾಧ್ಯತೆ ಇದೆ. ಸದ್ಯ ರಾಜ್ಯದ ಬಹುತೇಕ ಕಡೆ ವಿಪರೀತ ಮಳೆ ಮತ್ತು ಪರಿಷತ್ ಚುನಾವಣೆಯ ಟಿಕೆಟ್ ವಿಷಯ ಹೈಲೈಟ್ ಆಗುತ್ತಿರುವುದರಿಂದ ಈ ಕಮೀಷನ್ ವ್ಯವಹಾರದ ವಿಷಯ ಇನ್ನು ಮುಂಚೂಣಿಗೆ ಬರಲಿಲ್ಲ. ಇಲ್ಲದಿದ್ದರೆ ಇಷ್ಟೊತ್ತಿಗೆ ಇದು ಟಾಪ್ ಸುದ್ದಿಯಲ್ಲಿರಬೇಕಿತ್ತು. ಇದು ಬಹಳ ಗಮನಾರ್ಹವಾಗಿರುವ ವಿಷಯ. ಅದರಲ್ಲಿಯೂ ರಾಜ್ಯದ ಗುತ್ತಿಗೆದಾರರ ಸಂಘದವರು ಮೋದಿಗೆ ಪತ್ರ ಬರೆದಿರುವುದರಿಂದ ಇದು ನಿಜಕ್ಕೂ ಗಂಭೀರವಾದ ವಿಷಯ. ಮೋದಿಗೆ ಪತ್ರ ಬರೆದಿರುವುದರ ಹಿಂದೆ ಒಂದು ಸಕರಾತ್ಮಕ ಆಯಾಮ ಮತ್ತು ಇನ್ನೊಂದು ನಕರಾತ್ಮಕ ಆಯಾಮ ಇದೆ. ಸಕರಾತ್ಮಕ ಆಯಾಮ ಎಂದರೆ ಮೋದಿ ಮೇಲೆ ಇರುವ ವಿಶ್ವಾಸ. ಮೋದಿಯವರಿಗೆ ಹೇಳಿದರೆ ಸಮಸ್ಯೆ ಏನಾದರೂ ಪರಿಹಾರ ಆಗಬಹುದು ಎನ್ನುವ ಭರವಸೆ. ಅದು ಭಾರತೀಯ ಜನತಾ ಪಾರ್ಟಿಯ ಮಟ್ಟಿಗೆ ಇದು ಪ್ಲಸ್ ಪಾಯಿಂಟ್. ಅದೇ ಇನ್ನೊಂದು ಆಯಾಮ ಎಂದರೆ ಬಿಜೆಪಿಯ ಮಟ್ಟಿಗೆ ಇದು ಮೈನಸ್ ಕೂಡ ಆಗಿದೆ. ಹೇಗೆ ಎಂದರೆ ಬಿಜೆಪಿಯದ್ದೇ ಆಡಳಿತ ಇರುವ ರಾಜ್ಯದಿಂದ ಇಂತಹ ಒಂದು ದೂರು ಹೋಗಿರುವುದು. ಇಲ್ಲಿ ಎಗೈನ್ ಎರಡು ಕಾರಣಗಳಿವೆ. ಮೊದಲನೇಯದಾಗಿ ವಿಪಕ್ಷಗಳು ಒತ್ತಡ ಹಾಕಿ ನೀವು ಮೋದಿಗೆ ದೂರು ಕೊಟ್ಟು ನೋಡಿ, ಅವರ ಬಂಡವಾಳ ಹೊರಗೆ ಬರುತ್ತದೆ ಎಂದು ಒತ್ತಡ ಹಾಕಿ ಕೂಡ ಹೀಗೆ ಮಾಡಿಸಿರಬಹುದು, ಇನ್ನೊಂದು ಮೋದಿಯವರಿಗೆ ದೂರು ಕೊಟ್ಟಿದ್ದೇವೆ ಎಂದು ಹೆದರಿಸಿದರೆ ಇನ್ನು ಮುಂದೆ ಕಮೀಷನ್ ಕೊಡದೆ ಕೆಲಸ ಮಾಡಿಸಲು ಆಗುತ್ತದೆ.
ಅಧಿಕಾರಿಗಳು, ಬಿಜೆಪಿ ಜನಪ್ರತಿನಿಧಿಗಳು ಹೆದರಿ ಕಮೀಷನ್ ಗಾಗಿ ಒತ್ತಾಯಿಸುವುದಿಲ್ಲ ಎನ್ನುವ ಧೈರ್ಯ ಇರಬಹುದು. ಈಗಿನ ಆಧುನಿಕ ದಿನಗಳಲ್ಲಿ ಯಾವುದೇ ಕಾಮಗಾರಿ ಆನ್ ಲೈನ್ ಮೂಲಕವೇ ಸಂಪೂರ್ಣ ಪಾರದರ್ಶಕವಾಗಿಯೇ ನಡೆಯುವುದು. ಆನ್ ಲೈನ್ ಮೂಲಕ ಅರ್ಜಿ ಹಾಕಿ ಕಾಮಗಾರಿ ಪಡೆದುಕೊಳ್ಳುವುದು. ಐದು ಲಕ್ಷದೊಳಗಿನ ಚಿಕ್ಕಪುಟ್ಟ ಕಾಮಗಾರಿಗಳನ್ನು ಬಿಟ್ಟರೆ ಹೆಚ್ಚಿನ ಕಾಮಗಾರಿಗಳು ಇ-ಟೆಂಡರ್ ಮೂಲಕವೇ ನಡೆಯುತ್ತದೆ. ಆದ್ದರಿಂದ ಇಲ್ಲಿ ಕಮೀಷನ್ ಕೊಡದೇ ಯಾವುದೇ ಕೆಲಸವೇ ಆಗುವುದಿಲ್ಲ ಎನ್ನುವುದನ್ನು ಯಾವ ಆಧಾರದ ಮೇಲೆ ಹೇಳಿದರು ಎನ್ನುವುದು ಒಂದು ಪ್ರಶ್ನೆ. ಹಾಗಂತ ಕಮೀಷನ್ ಇಲ್ಲದೆ ಕೆಲಸ ಮಾಡಲು ಆಗುತ್ತಾ? ಅದು ಕೂಡ ಆಗುವುದಿಲ್ಲ. ಯಾಕೆಂದರೆ ಯಾವುದೇ ಒಂದು ಕಾಮಗಾರಿ ಆಗುವಾಗ ಅದರ ಬಿಲ್ ಪಾಸು ಮಾಡಬೇಕಾಗಿರುವಾಗ ಲಂಚದ ಆಟ ಶುರುವಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಕಮೀಷನ್ ಸಿಗಲಿಲ್ಲ ಎಂದು ಬಿಲ್ ಕೂಡ ಪಾಸ್ ಮಾಡದೇ ಆಡಿಸಿದ ಅನೇಕ ಉದಾಹರಣೆಗಳು ಇವೆ. ಕಮೀಷನ್ ಸಿಗದೇ ಇದ್ದ ಕಾರಣ ನೀವು ಕಾಮಗಾರಿ ಸರಿಯಾಗಿ ಮಾಡಲಿಲ್ಲ ಎಂದು ಆಟವಾಡಿಸಲಾಗುವ ಕಥೆಗಳು ಇರುತ್ತದೆ.
ಇನ್ನು ಕಮೀಷನ್ ಸಿಗಲಿಲ್ಲ ಎಂದು ಕೆಲಸ ನಿಲ್ಲಿಸಿದ ಉದಾಹರಣೆಗಳು ಕೂಡ ಇವೆ. ಆದ್ದರಿಂದ ಸಚಿವರಿಗೆ, ಅಧಿಕಾರಿಗಳಿಗೆ ಕಮೀಷನ್ ಕೊಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಗುತ್ತಿಗೆದಾರರದ್ದು. ಆದರೆ ತಮ್ಮ ಲಾಭದಲ್ಲಿ ಹತ್ತು ಶೇಕಡಾ ಕಮೀಷನ್ ಕೊಡಲು ಗುತ್ತಿಗೆದಾರರು ಅಲಿಖಿತವಾಗಿ ಒಪ್ಪಿಕೊಂಡಿದ್ದರು. ನಂತರ ಇದು ನಿಧಾನವಾಗಿ ಹೆಚ್ಚಾಗುತ್ತಾ ಹೋದ ಹಾಗೆ ಈ ವಿಷಯ ಯಾವಾಗಲೋ ಪ್ರಧಾನಿಯ ಕಿವಿಯಲ್ಲಿ ಬಿದ್ದು ಕೂಡ ಆಗಿತ್ತು. ಗುಜರಾತ್ ರಾಜ್ಯವನ್ನು 13 ವರ್ಷ ಆಳಿದ ವ್ಯಕ್ತಿಗೆ ಈ ಕಮೀಷನ್ ವ್ಯವಹಾರದ ವಿಷಯ ಗೊತ್ತಿಲ್ಲದೆ ಇರಲು ಸಾಧ್ಯವಿಲ್ಲ. ಇಲ್ಲದಿದ್ದರೆ ಕಳೆದ ಚುನಾವಣೆಯಲ್ಲಿ ಸ್ವತ: ಮೋದಿಯೇ ಚುನಾವಣಾ ಪ್ರಚಾರದಲ್ಲಿರುವಾಗ ಆಗಿನ ಕಾಂಗ್ರೆಸ್ ಸರಕಾರವನ್ನು ಹತ್ತು ಶೇಕಡಾ ಕಮೀಷನ್ ಸರಕಾರ ಎಂದು ಟೀಕಿಸುತ್ತಿರಲಿಲ್ಲ. ಈಗ ಅವರದ್ದೇ ಸರಕಾರ ಬಂದಿದೆ. ಗುತ್ತಿಗೆದಾರರು ದೂರು ನೀಡಿದ್ದಾರೆ. ಈಗ ತುರ್ತಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೂರುಕೊಟ್ಟವರನ್ನು ಕರೆಸಿ ಎಲ್ಲಿಂದ ಅವರಿಗೆ ತೊಂದರೆ ಆಗಿದೆ ಎನ್ನುವುದನ್ನು ಪತ್ತೆ ಹಚ್ಚಿ ಅಂತಹ ಅಧಿಕಾರಿಗಳನ್ನು, ಇಂಜಿನಿಯರ್ ಗಳನ್ನು, ಜನಪ್ರತಿನಿಧಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ಗ್ರಾಮ ಪಂಚಾಯತ್ ಮಟ್ಟದಿಂದ ಕಮೀಷನ್ ಜಾಡು ಹಿಡಿದು ತನಿಖೆ ಮಾಡುವುದು ಅಷ್ಟು ಸುಲಭವಲ್ಲ. ಅನೇಕ ಸಂದರ್ಭದಲ್ಲಿ ಐದು ಲಕ್ಷಗಿಂತಲೂ ಹೆಚ್ಚು ಅನುದಾನದ ಕೆಲಸ ಇದ್ದರೆ ಈ-ಟೆಂಡರ್ ಕೊಡಬೇಕಾಗುತ್ತದೆ ಎಂದು ಇಪ್ಪತ್ತೈದು ಲಕ್ಷದ ಕಾಮಗಾರಿಗಳನ್ನು ಐದಾರು ತುಂಡು ಮಾಡಿ ಗುತ್ತಿಗೆ ಕೊಡುವುದು ಕೂಡ ಇದೆ. ಆಗ ತಮಗೆ ಬೇಕಾದವರಿಗೆ ಗುತ್ತಿಗೆ ಕೊಡಬಹುದು ಎನ್ನುವುದು ಪ್ಲಾನ್. ಇನ್ನು ಇ-ಟೆಂಡರ್ ಗಿಂತ ಅದೇ ವಾಸಿ ಎನ್ನುವುದು ಚಿಕ್ಕಪುಟ್ಟ ಗುತ್ತಿಗೆದಾರರ ಅಹವಾಲು. ಯಾಕೆಂದರೆ ಇ-ಟೆಂಡರ್ ಆದರೆ ಅರ್ಜಿ ಹಾಕುವಾಗಲೇ ಕಡಿಮೆಗೆ ಹಾಕಬೇಕು. ನಂತರ ಮತ್ತೆ ಕಮೀಷನ್ ಕೊಡಬೇಕು. ಅದರ ನಂತರ ಏನು ಉಳಿಯುತ್ತದೆ ಎನ್ನುವುದು ಅವರ ಕೂಗು. ಆದರೆ ಇದರಲ್ಲಿ ಇನ್ನೊಂದು ಆಯಾಮ ನೋಡುವುದಾದರೆ ಗುತ್ತಿಗೆದಾರರು ಹೀಗೆ ದೂರು ಕೊಡುವ ಮೂಲಕ ತಮ್ಮ ಲಾಭ ಪೂರ್ಣ ಪ್ರಮಾಣದಲ್ಲಿ ತಮಗೆ ಸಿಗಲಿ. ಇನ್ನಷ್ಟು ತಿಜೋರಿಯನ್ನು ತುಂಬಿಸಿಕೊಳ್ಳೋಣ ಎನ್ನುವ ಉದ್ದೇಶವೂ ಇರಬಹುದು. ಯಾಕೆಂದರೆ ಲಾಭ ಇಲ್ಲದೆ ಇದ್ದರೆ ಆಯೇ ಬೊಳ್ಳಡ್ ಪೊಪ್ಪುಜಿ ಎನ್ನುವುದು ನಮಗೆಲ್ಲ ಗೊತ್ತಿರುವ ಸಂಗತಿ!!.
Leave A Reply