ಆ್ಯಪ್ ನಲ್ಲಿ ಆವಾರ್ಡು, ಊರು ನೋಡಿದರೆ ಮಹಾ ಗಲೀಜು!!
ಹೋರ್ಡಿಂಗ್ ಗಳಲ್ಲಿ ಸ್ವಚ್ಚ ಮಂಗಳೂರು ಎಂದು ಬರೆದು ಹಾಕಿದರೆ ಮಂಗಳೂರು ಸ್ವಚ್ಚ ಆಗಲ್ಲ. ಆ್ಯಪ್ ನಲ್ಲಿ ಸ್ವಚ್ಚ ಮಂಗಳೂರು ಎಂದು ಬರೆದರೆ ಯಾರಿಗೂ ಪ್ರಯೋಜನವಿಲ್ಲ. ಫೇಸ್ ಬುಕ್ ನಲ್ಲಿ ಸ್ವಚ್ಚ ಮಂಗಳೂರು ಎಂದರೆ ಅದರಿಂದ ಆಗುವುದು ಏನೂ ಇಲ್ಲ. ಯಾಕೆಂದರೆ ಸ್ವಚ್ಚತೆ ಎನ್ನುವುದು ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಕಾಣಬೇಕು. ಅಷ್ಟು ಬುದ್ಧಿವಂತರಿರುವವರು ಪಾಲಿಕೆಯಲ್ಲಿ ಕಡಿಮೆ ಇರುವುದರಿಂದ ಅವರು ಜಾಹೀರಾತಿನ ಮೊರೆ ಹೋಗುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರಸರಕಾರ ಸ್ವಚ್ಚ ಸರ್ವೇಕ್ಷಣ್ ಎಂದು ಮಾಡುತ್ತದೆ. ಅದರ ಕಥೆ ಏನೆಂದರೆ ಜನರೇ ತಮ್ಮ ನಗರ ಹೇಗೆ ಸ್ವಚ್ಚ ಇದೆ ಎಂದು ಆ್ಯಪ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು. ಹೆಚ್ಚೆಚ್ಚು ಜನ ಇದರಲ್ಲಿ ಭಾಗಿಯಾಗಿ ಸಮರ್ಪಕವಾದ ಉತ್ತರವನ್ನು ಕೊಡುತ್ತಾ ಹೋದರೆ ಆಗ ಕೇಂದ್ರದಲ್ಲಿ ಕುಳಿತ ಅಧಿಕಾರಿಗಳು ನಮ್ಮ ನಗರ ಎಷ್ಟನೇ ಸ್ಥಾನದಲ್ಲಿ ಬರುತ್ತದೆ ಎಂದು ಲಿಸ್ಟ್ ಬಿಡುಗಡೆ ಮಾಡುತ್ತಾರೆ. ಮಧ್ಯಪ್ರದೇಶದ ಇಂದೋರ್ ಹೆಚ್ಚಿನ ಸಂದರ್ಭದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಆಕ್ರಮಿಸಿಕೊಂಡಿರುತ್ತದೆ. ನಾವು ಆ್ಯಪ್ ನಲ್ಲಿ ಪ್ರಶ್ನೆಗೆ ಉತ್ತರ ಕೊಟ್ಟು ಆವಾರ್ಡ್ ತೆಗೆದುಕೊಳ್ಳುವುದು ಮುಖ್ಯ ಅಲ್ಲವೇ ಅಲ್ಲ. ನಮ್ಮ ನಗರ ಗಲೀಜಾಗಿ ಇದ್ದು ಕೇವಲ ಆ್ಯಪ್ ನಲ್ಲಿ ಉತ್ತಮ ಸಾಧನೆ ಮಾಡಿದರೆ ಏನು ಲಾಭ? ಆವಾರ್ಡ್ ಬರದಿದ್ದರೆ ಅಷ್ಟೇ ಹೋಯಿತು. ಅದಕ್ಕಾಗಿ ಪಾಲಿಕೆಯವರು ಹಣವನ್ನು ಖರ್ಚು ಮಾಡಿ ಸ್ವಚ್ಚ ಸರ್ವೇಕ್ಷಣ್ ನಲ್ಲಿ ಭಾಗವಹಿಸಲು ಜನರಲ್ಲಿ ಮನವರಿಕೆ ಮಾಡುವ ಬದಲು ನಿಜಕ್ಕೂ ಮಂಗಳೂರನ್ನು ಸ್ವಚ್ಚ ಮಾಡಲು ಯೋಗ್ಯ ಕ್ರಮಗಳನ್ನು ಕೈಗೊಂಡರೆ ನಗರದ ಜನ ನಿಮಗೆ ಋಣಿಯಾಗಿರುತ್ತಾರೆ. ಹಾಗಾದರೆ ಏನು ಮಾಡಬೇಕು?
ತಾವಿನ್ನೂ ಮಂಗಳೂರಿಗೆ ಕೆಲವು ದಿನಗಳ ಅತಿಥಿ ಎನ್ನುವುದು ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿಗೆ ಗೊತ್ತಾಗಿದೆ. ಅದಕ್ಕಾಗಿ ಕಳೆದ 5-6 ತಿಂಗಳುಗಳಿಂದ ಅವರು ಮನೆಮನೆಗಳಿಂದ ಸರಿಯಾಗಿ ಕಸವನ್ನು ಸಂಗ್ರಹ ಮಾಡುತ್ತಿಲ್ಲ. ಇದರಿಂದ ಏನಾಗಿದೆ ಎಂದರೆ ನಾಗರಿಕರು ಮನೆಯ ಕಸ, ತ್ಯಾಜ್ಯವನ್ನು ರಸ್ತೆಯ ಬದಿ ಸುರಿಯುತ್ತಿದ್ದಾರೆ. ಇನ್ನು ಕೆಲವು ರಸ್ತೆಗಳನ್ನು ನಿತ್ಯ, ಕೆಲವನ್ನು ಎರಡು ದಿನಗಳಿಗೊಮ್ಮೆ, ಕೆಲವು ರಸ್ತೆಗಳನ್ನು ಮೂರು ದಿನಗಳಿಗೊಮ್ಮೆ ಕಡ್ಡಾಯವಾಗಿ ಗುಡಿಸಬೇಕೆಂಬ ನಿಯಮ ಇದೆ. ಅದನ್ನು ಪಾಲಿಸದೇ ಅದೆಷ್ಟು ಕಾಲವಾಯಿತೋ ಯಾರಿಗೆ ಗೊತ್ತು. ಇನ್ನು ಫುಟ್ ಪಾತ್, ಡಿವೈಡರ್, ಒಂದು ಮೀಟರ್ ಅಗಲದ ತೋಡುಗಳನ್ನು ಸ್ವಚ್ಚ ಮಾಡಲು ಆಂಟೋನಿಯವರು ಆರಂಭದಿಂದಲೇ ಆಸಕ್ತಿಯೇ ತೋರಿಸಲಿಲ್ಲ. ಅವರಿಗೆ ಕರೆದು ಯಾವ ಮೇಯರ್ ಕೂಡ ಜೋರು ಮಾಡಲಿಲ್ಲ. ಆಂಟೋನಿಯಲ್ಲಿ ಇಷ್ಟು ಜನ ಕೆಲಸದವರು ಇರಬೇಕು ಎನ್ನುವ ನಿಯಮ ಇದ್ದರೂ ನಮ್ಮ ವಾರ್ಡ್ ಯಾಕೆ ಕ್ಲೀನ್ ಮಾಡುತ್ತಿಲ್ಲ ಎಂದು ಯಾವ ಕಾರ್ಪೋರೇಟರ್ ಕೂಡ ಧ್ವನಿ ಎತ್ತಿಲ್ಲ. ಯಾವ ಕಾರ್ಪೋರೇಟರ್ ಕೂಡ ಲಿಖಿತವಾಗಿ ದೂರು ಕೊಡದೇ ಇದ್ದರೆ ಏನು ಅರ್ಥ? ಒಂದೋ ಅಂತವರ ವಾರ್ಡನ್ನು ಆಂಟೋನಿಯವರು ಸ್ವಚ್ಚವಾಗಿ ಇಟ್ಟುಕೊಂಡಿದ್ದಾರೆ. ಇಲ್ಲದಿದ್ದರೆ ಆ ಕಾರ್ಪೋರೇಟರ್ ಗಳು ಆಂಟೋನಿಯವರೊಂದಿಗೆ “ಚೆನ್ನಾಗಿ” ಇದ್ದಾರೆ.
ಹಾಗಾದರೆ ಈಗ ಜಾಹೀರಾತು ಕೊಡುವುದಕ್ಕೆ ತಲೆ ಉಪಯೋಗಿಸುವ ಬದಲು ಹೆಚ್ಚುವರಿ ಅಧಿಕಾರದ ಅವಕಾಶವನ್ನು ಪಡೆದಿರುವ ಅನುಭವಿ ಮೇಯರ್ ಏನು ಮಾಡಬೇಕು ಎಂದರೆ ಆಂಟೋನಿಯವರನ್ನು ತಮ್ಮ ಚೇಂಬರಿಗೆ ಕರೆಯಬೇಕು. ಮುಂದಿನ ಹದಿನೈದು ದಿನಗಳಲ್ಲಿ ಮನೆ-ಮನೆ ಕಸ ಸಂಗ್ರಹ, ರಸ್ತೆ ಗುಡಿಸುವಿಕೆ, ಫುಟ್ ಪಾತ್, ಡಿವೈಡರ್, ಒಂದು ಮೀಟರ್ ಅಗಲದ ತೋಡುಗಳನ್ನು ಸ್ವಚ್ಚ ಮಾಡಬೇಕು. ಆಂಟೋನಿಯವರು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ವೋ ಎನ್ನುವುದನ್ನು ಆಯಾ ವಾರ್ಡಿನ ಕಾರ್ಪೋರೇಟರ್ ಗಮನಿಸಬೇಕು. ಇನ್ನು ಪಾಲಿಕೆಯ ಆರೋಗ್ಯ ನಿರೀಕ್ಷಕರಿಗೆ ಇದರ ಜವಾಬ್ದಾರಿ ನೀಡಬೇಕು. ಹದಿನೈದು ದಿನಗಳ ನಂತರ ಆಯಾ ವಾರ್ಡುಗಳು ಕ್ಲೀನ್ ಆಗದೇ ಇದ್ದರೆ ಅಲ್ಲಿನ ನಾಗರಿಕರು ಮೇಯರ್ ಅವರಿಗೆ ದೂರು ಕೊಡಲು ವ್ಯವಸ್ಥೆ ಮಾಡಬೇಕು. ಒಂದು ವೇಳೆ ದೂರು ಬಂದ ವಾರ್ಡಿನಲ್ಲಿ ಸ್ವಚ್ಚತೆ ಆಗದೇ ಇದ್ದು ತ್ಯಾಜ್ಯದ ಸಮಸ್ಯೆ ಬೃಹದಾಕಾರ ಬೆಳೆದಿದ್ದರೆ ಪಾಲಿಕೆಯ ಆಯುಕ್ತರು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅದರೊಂದಿಗೆ ಅದೇ ವಾರ್ಡಿನ ಕಾರ್ಪೋರೇಟರ್ ಭಾರತೀಯ ಜನತಾ ಪಾರ್ಟಿಯವರಾಗಿದ್ದರೆ ಆ ಪಕ್ಷದ ಮುಖಂಡರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಷ್ಟೆಲ್ಲ ಮಾಡಿದ ನಂತರವೂ ವಾರ್ಡುಗಳು ಸ್ವಚ್ಚವಾಗದಿದ್ದರೆ ಅದು ನಮ್ಮ ಗ್ರಹಚಾರ. ಆದರೆ ಅದು ಬಿಟ್ಟು ಆ್ಯಪ್ ನಲ್ಲಿ ಉತ್ತರ ಕೊಡಿ, ಆವಾರ್ಡ್ ಗೆಲ್ಲಿ ಎಂದು ಹೇಳಿದರೆ ನಾನು ಆರಂಭದಲ್ಲಿ ಹೇಳಿದ ಹಾಗೆ ಯಾರಿಗೂ ಪ್ರಯೋಜನವಿಲ್ಲ. ಅದರ ಬದಲು ವಾಸ್ತವದಲ್ಲಿ ನಮ್ಮ ನಗರ ಸ್ವಚ್ಚವಾಗಿದ್ದು ಆವಾರ್ಡ್ ಬರದಿದ್ದರೂ ಬೇಸರವಿಲ್ಲ. ಇದೆಲ್ಲವೂ ಹೇಳಿದರೆ ಕೆಲವರಿಗೆ ನಾನು ಆಂಟೋನಿ ವಿರೋಧಿಯಾಗಿ ಅವರ ಕಣ್ಣು ಕೆಂಪಾಗುತ್ತದೆ. ನನಗೆ ಊರಿನ ಸ್ವಚ್ಚತೆ ಮುಖ್ಯ. ಯಾವುದಕ್ಕೂ ಉಪಯೋಗಕ್ಕೆ ಬಾರದ, ಕೇವಲ ಎರಡು ದಿನ ಫೋಟೋ ಹಾಕಿ ಪ್ರಚಾರ ಪಡೆಯುವ ಆವಾರ್ಡು ಅಲ್ಲ!!
Leave A Reply