ನ್ಯಾಯಮೂರ್ತಿಯವರು ಕೊಟ್ಟ “ಸಂದೇಶ” ಅರ್ಥವಾದರೆ ದೇಶ ಉದ್ಧಾರ!!
ಭ್ರಷ್ಟಾಚಾರ ನಿಗ್ರಹ ದಳ ಅಥವಾ ಚಿಕ್ಕದಾಗಿ ಎಸಿಬಿ ಎಂದು ಕರೆಯಲಾಗುವ ವ್ಯವಸ್ಥೆಯ ಉದ್ದೇಶ ಏನು? ಎಲ್ಲಿ ಭ್ರಷ್ಟಾಚಾರ ಆಗುತ್ತಿದೆಯೋ ಅಲ್ಲಿ ರೇಡ್ ಮಾಡಿ ಭ್ರಷ್ಟಾಚಾರದಲ್ಲಿ ನಿರತರಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಾಗಿದ್ದರೆ ಶಿಕ್ಷೆ ಅನುಭವಿಸುವಂತೆ ಮಾಡುವ ತನಕ ವಿರಮಿಸದಿರುವುದೇ ಎಸಿಬಿ ಅಧಿಕಾರಿಗಳ ಕೆಲಸ. ಆದರೆ ಈಗ ಆಗುತ್ತಿರುವುದೇನು? ಭ್ರಷ್ಟಾಚಾರಿಗಳ ಮೇಲೆ ರೇಡ್ ಆಗುತ್ತದೆ. ಕೋಟ್ಯಾಂತರ ರೂಪಾಯಿ ಹಣ, ಬಂಗಾರ, ಭೂದಾಖಲೆಗಳು ಸಹಿತ ವಿವಿಧ ಬಂಡವಾಳದ ದಾಖಲೆಗಳು ಪತ್ತೆಯಾಗುತ್ತವೆ. ಅದನ್ನು ಸೀಜ್ ಮಾಡಲಾಗುತ್ತದೆ. ನಂತರ ಅದು ಒಂದೆರಡು ದಿನ ಮಾಧ್ಯಮಗಳಲ್ಲಿ ಬರುತ್ತದೆ. ಆ ಬಳಿಕ ಆ ಭ್ರಷ್ಟರ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿ ಅದನ್ನು ಮುಚ್ಚಲಾಗುತ್ತದೆ. ಹಾಗೆ ಮುಚ್ಚಲಾಗುವುದಕ್ಕಾಗಿ ಎಸಿಬಿ ಅಧಿಕಾರಿಗಳಿಗೆ ಇಂತಿಷ್ಟು ಶೇಕಡಾ ಪಾಲು ನೀಡಲಾಗುತ್ತದೆ ಎನ್ನುವುದು ಒಂದು ರೀತಿಯಲ್ಲಿ ಬಹಿರಂಗ ರಹಸ್ಯ. ಆದರೆ ಆ ಬಗ್ಗೆ ಯಾರೂ ಮಾತನಾಡಲು ಹೋಗುತ್ತಿರಲಿಲ್ಲ. ಭ್ರಷ್ಟರು ಇಂತಿಷ್ಟು ಕೊಟ್ಟು ತಮ್ಮ ಸ್ವತ್ತುಗಳನ್ನು ಬಿಡಿಸಿಕೊಂಡು ಬರುತ್ತಿದ್ದರು. ಒಂದು ವೇಳೆ ಎಸಿಬಿ ಕೇಸು ಮುಚ್ಚುವುದಕ್ಕಾಗಿ ಬಿ ರಿಪೋರ್ಟ್ ತಯಾರು ಮಾಡಿ ಅದನ್ನು ಅಂಗೀಕರಿಸುವುದಕ್ಕಾಗಿ ನ್ಯಾಯಾಲಯಕ್ಕೆ ಸಲ್ಲಿಸುವಾಗ ಅದನ್ನು ನ್ಯಾಯಾಧೀಶರು ಅಂಗೀಕರಿಸದೇ ಹೋದರೆ ಅವರನ್ನೇ ವರ್ಗಾವಣೆ ಮಾಡಲಾಗುತ್ತಿತ್ತು. ನಂತರ ಬಂದ ನ್ಯಾಯಮೂರ್ತಿಗಳಿಗೆ ಅಂಗೀಕರಿಸಲೇಬೇಕಾದ ಒತ್ತಡ ನಿರ್ಮಿಸಲಾಗುತ್ತಿತ್ತು. ಒಟ್ಟಿನಲ್ಲಿ ಹಣಕ್ಕೆ ಬಗ್ಗದಿದ್ದರೆ ವರ್ಗಾವಣೆಯ ಶಿಕ್ಷೆ ಹೀಗೆ ಎಸಿಬಿಯ ಬಳಿ ಎಲ್ಲಾ ರೀತಿಯ ಆಯುಧಗಳು ಇದ್ದವು. ಹೀಗೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಹೀಗೆ ಇರುವಾಗಲೇ ಒಂದು ಪ್ರಕರಣ ಹೈಕೋರ್ಟ್ ನ್ಯಾಯಾಧೀಶರಾದ ಎಚ್ ಪಿ ಸಂದೇಶ ಅವರ ಬಳಿ ಬಂದಿದೆ. ಅಲ್ಲಿ ಎಸಿಬಿಯ ನಿಜವಾದ ಬಣ್ಣ ಕಳಚುವ ಲಕ್ಷಣ ಕಂಡುಬಂದಿರುವುದು. ಹಾಗಂತ ಸಂದೇಶ್ ಅವರು ತಾವು ತಮ್ಮ ಮೂಗಿನ ನೇರಕ್ಕೆ ಎಸಿಬಿ ಮೇಲೆ ಹರಿಹಾಯ್ದಿಲ್ಲ, ಆವತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರು ನೂಪುರ್ ಶರ್ಮಾ ವಿರುದ್ಧ ಗಾಳಿಯಲ್ಲಿ ಹೇಳಿಕೆ ಕೊಟ್ಟರಲ್ಲ, ಹಾಗೆ ಇವರು ಮಾತನಾಡಿಲ್ಲ. ಇವರು ವ್ಯವಸ್ಥೆಯ ವಿರುದ್ಧ ಮಾತನಾಡಿದ್ದಾರೆ.
ಸಂದೇಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದವರು. ಖಡಕ್ ವ್ಯಕ್ತಿತ್ವ.
ಯಾರಿಂದಲೂ ಏನೂ ಆಗಬೇಕಾಗಿಲ್ಲ, ನ್ಯಾಯದ ಪರ ಇದ್ದರೆ ಸಾಕು ಎನ್ನುವ ನಿಲುವು. ಇಂತವರು ಸಾಮಾನ್ಯವಾಗಿ ಯಾವುದೇ ಆಮಿಷಗಳಿಗೆ ಬಗ್ಗುವುದಿಲ್ಲ. ಸಂದೇಶ್ ಅವರು ಮಂಗಳೂರಿನಲ್ಲಿದ್ದಾಗ ಅವರಿಗೆ ನ್ಯಾಯಾಲಯದ ಸಿಬ್ಬಂದಿ ಕೂಡ ಹೆದರುತ್ತಿದ್ದರು. ಪೊಲೀಸ್ ಇಲಾಖೆ ಕೂಡ ಈ ನ್ಯಾಯಾಧೀಶರ ಮುಂದೆ ಪ್ರಕರಣ ಬಂದಾಗ ಹೆಚ್ಚು ಜಾಗರೂಕತೆಯನ್ನು ತೆಗೆದುಕೊಳ್ಳುತ್ತಿತ್ತು. ಎಚ್ ಪಿ ಸಂದೇಶ್ ಅವರು ಮಂಗಳೂರಿನಲ್ಲಿದ್ದಾಗ ಹಲವು ಹೈಫೈ ಕ್ರಿಮಿನಲ್ ಪ್ರಕರಣಗಳಿಗೂ ಗತಿ ಕಾಣಿಸಿದ್ದಾರೆ. ಅವರು ಈಗ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಉಪತಹಶೀಲ್ದಾರ್ ಭ್ರಷ್ಟಾಚಾರದಲ್ಲಿ ತೊಡಗಿದ ಪ್ರಕರಣ ಅವರ ಮುಂದೆ ಬಂದಿದೆ. ಆಗಲೇ ಅವರು ಎಸಿಬಿ ಎಡಿಜಿಪಿ ಮೇಲೆ ತಮ್ಮ ಖಡಕ್ ಮಾತುಗಳನ್ನು ಎಸೆದದ್ದು. ಈ ದೇಶದ ಯಾವುದೇ ನ್ಯಾಯಾಧೀಶರಾಗಿರಲಿ ಅವರು ಒಂದು ಪ್ರಕರಣದ ಬಗ್ಗೆ ತೀರ್ಪು ನೀಡುವಾಗ ತಮ್ಮ ಮುಂದೆ ವಾದಿ, ಪ್ರತಿವಾದಿಗಳು ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಅಭ್ಯಸಿಸಿ ಅದರ ಆಧಾರದ ಮೇಲೆ ತೀರ್ಪು ನೀಡಬೇಕಾಗುತ್ತದೆ. ಇಂತವರು ಅಪರಾಧ ಮಾಡಿದ್ದಾರೆ ಎಂದು ನೂರಕ್ಕೆ ನೂರು ಗೊತ್ತಿದ್ದರೂ ಅದಕ್ಕೆ ಸರಿಯಾದ ಸಾಕ್ಷ್ಯವನ್ನು ತನಿಖಾ ಸಂಸ್ಥೆ ನ್ಯಾಯಾಲಯದ ಮುಂದೆ ಇಡದೇ ಹೋದರೆ ನ್ಯಾಯಮೂರ್ತಿಗಳು ಏನು ತೀರ್ಪು ಕೊಡಲು ಸಾಧ್ಯ. ಆಗ ಸಹಜವಾಗಿ ಒಬ್ಬ ಪ್ರಾಮಾಣಿಕ ನ್ಯಾಯಾಧೀಶರ ಮನಸ್ಸು ನೋಯುತ್ತದೆ. ತಾವು ಎಲ್ಲಾ ಗೊತ್ತಿದ್ದು ಅಪರಾಧ ಮಾಡಿದವರನ್ನು ಬಿಡಬೇಕಾಯಿತಲ್ಲ ಎಂದು ಆತ್ಮಸಾಕ್ಷಿ ಮಮ್ಮಲ ಮರಗುತ್ತದೆ. ಬೇರೆ ನ್ಯಾಯಮೂರ್ತಿಗಳಾದರೆ ಅದನ್ನು ಒಳಗೆ ನುಂಗಿ ಬಿಡುತ್ತಾರೆ. ಸಂದೇಶ್ ಅವರಂತಹ ನ್ಯಾಯಮೂರ್ತಿಗಳು ಇಂತಹ ಸಂದರ್ಭಗಳಲ್ಲಿ ವ್ಯವಸ್ಥೆಗೆ ಚಾಟಿ ಏಟು ಬೀಸುತ್ತಾರೆ. ಅವರಿಗೆ ಗೊತ್ತಿದೆ. ಭ್ರಷ್ಟ ಸಾಕಷ್ಟು ಆಸ್ತಿಪಾಸ್ತಿಯನ್ನು ಮಾಡಿ ಬೀಗುತ್ತಿದ್ದಾನೆ. ಆದರೆ ಎಸಿಬಿ ಸರಿಯಾದ ತನಿಖೆ ಮಾಡದೇ ಬಿ ರಿಪೋರ್ಟ್ ಹಾಕುತ್ತಿದೆ. ಏಕೆಂದರೆ ಎಸಿಬಿಯ ಎಡಿಜಿಪಿಯವರೇ ಬಳ್ಳಾರಿಯಲ್ಲಿ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದಾಗ ದಾಳಿಗೆ ಒಳಗಾದವರು.
ಸಾಮಾನ್ಯವಾಗಿ ಯಾವುದೇ ಇಲಾಖೆಯಲ್ಲಿ ಉನ್ನತ ಸ್ತರದಲ್ಲಿರುವ ಅಧಿಕಾರಿಗಳು ಲಂಚವನ್ನು ನೇರವಾಗಿ ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿ ತಮ್ಮ ಕೈಕೆಳಗಿನ ಸಿಬ್ಬಂದಿಗಳನ್ನು ಇಟ್ಟುಕೊಂಡಿರುತ್ತಾರೆ. ಅನೇಕ ಬಾರಿ ಅಂತಹ ಸಿಬ್ಬಂದಿಗಳು ಸರಕಾರದ ಅಧೀನ ಹುದ್ದೆಯಲ್ಲಿಯೂ ಇರುವುದಿಲ್ಲ. ಆದರೆ ಉನ್ನತ ಅಧಿಕಾರಿಯ ಕೈಕೆಳಗೆ ಕೆಲಸ ಮಾಡುತ್ತಿರುತ್ತಾರೆ. ಸಿಕ್ಕಿಬಿದ್ದರೆ ಆ ಸಿಬ್ಬಂದಿ. ಇಲ್ಲದಿದ್ದರೆ ಲಾಭ ಅಧಿಕಾರಿಗೆ. ಆ ಸಿಬ್ಬಂದಿಗೆ ಈ ಕೆಲಸ ಮಾಡುವುದಕ್ಕಾಗಿ ಒಂದಿಷ್ಟು ಚಿಲ್ಲರೆಯನ್ನು ಕೊಟ್ಟರೆ ಮುಗಿಯುತ್ತಲ್ಲ. ಅದಕ್ಕೆ ಸಂದೇಶ್ ಅವರು ಹೇಳಿದ್ದು ” ನಾನು ನ್ಯಾಯಾಧೀಶರಾಗಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಇಲ್ಲಿ ವರ್ಗಾವಣೆಯಾದರೂ ಅದಕ್ಕೆ ಬದ್ಧನಿದ್ದೇನೆ. ಕೆಲಸ ಹೋದರೆ ಊರಿಗೆ ಹೋಗಿ ತಂದೆಯ ಹೊಲದಲ್ಲಿ ದುಡಿಯುತ್ತೇನೆ. 500 ರೂಪಾಯಿಯಲ್ಲಿಯೂ ಬದುಕಲು ಗೊತ್ತಿದೆ. ಸಾವಿರಾರು ರೂಪಾಯಿ ಇದ್ದರೂ ಬದುಕಲು ತಿಳಿದಿದೆ” ಇಂತಹ ಒಂದು ಮಾತು ಪ್ರತಿಯೊಬ್ಬ ಸರಕಾರಿ ಸಂಬಳ ಪಡೆಯುವ ಅಧಿಕಾರಿಯಿಂದ ಹೊರಬಂದರೆ ಮಾತ್ರ ನಮ್ಮ ದೇಶ ಸುಭಿಕ್ಷೆಯಾಗುತ್ತದೆ. ಆದರೆ ಸಂದೇಶ್ ಅವರಂತಹವರು ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಇದ್ದಾರೆ. ಅದಕ್ಕೆ ಇವತ್ತಿಗೂ ನಾವು ಹೀಗೆ ಇದ್ದೇವೆ!
Leave A Reply