ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
ಯಾವುದೇ ಒಂದು ಸರಕಾರ ಇರಲಿ ಚುನಾವಣೆಗೆ ಹೋಗುವಾಗ ಅದಕ್ಕೆ ಸಹಜವಾಗಿ ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತದೆ. ನೀವು ಎಷ್ಟೇ ಅಭಿವೃದ್ಧಿ ಮಾಡಿರಲಿ, ಸಿದ್ಧಾಂತದಲ್ಲಿ ಅಚಲವಾಗಿರಲಿ ಏನೇ ತಲೆ ಕೆಳಗೆ ಕಾಲು ಮೇಲೆ ಮಾಡಿರಲಿ ಜನ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಕೇಂದ್ರದಲ್ಲಿ ಮೋದಿ ಸರಕಾರ ಅದಕ್ಕೆ ಅಪವಾದ ಬಿಟ್ಟರೆ ಬೇರೆ ಎಲ್ಲ ರಾಜ್ಯ ಸರಕಾರಗಳು ಆಡಳಿತ ಅಲೆ ವಿರೋಧಿ ಅನುಭವಿಸಿವೆ. ಎಷ್ಟೋ ರಾಜ್ಯಗಳ ಸಿಎಂಗಳು ಪಕ್ಷ ಸರಳ ಬಹುಮತ ಪಾಸು ಮಾಡಿದರೂ ತಾವು ತಮ್ಮ ಕ್ಷೇತ್ರದಲ್ಲಿ ಸೋತ ಉದಾಹರಣೆಗಳು ನಮ್ಮ ಆಸುಪಾಸಿನಲ್ಲಿವೆ. ಹೀಗಿರುವಾಗ ಚುನಾವಣೆಗೆ 8 ತಿಂಗಳು ಇರುವಾಗ, ಅದರಲ್ಲಿಯೂ ರಾಜ್ಯವೀಡಿ ನೆರೆ ಪರಿಸ್ಥಿತಿ ಅನುಭವಿಸುತ್ತಾ, ಹತ್ತಾರು ಸಾವುಗಳನ್ನು ಪ್ರಕೃತಿ ವಿಕೋಪದ ಕಾರಣದಿಂದ ನೋಡುತ್ತಿರುವಾಗ ವಿಪಕ್ಷವೊಂದು ತಮ್ಮ ನಾಯಕನ ಹುಟ್ಟುಹಬ್ಬ ಆಚರಿಸಲು ಮುಂದಾಗುವುದಿದೆಯಲ್ಲ, ಅದು ನಿಜಕ್ಕೂ ದೊಡ್ಡ ರಿಸ್ಕ್. ಯಾಕೆಂದರೆ ಒಂದು ವೇಳೆ ಅವರ ನಿರೀಕ್ಷೆಯಷ್ಟು ಜನ ಸೇರದೇ ಹೋದರೆ ಅವರು ಅರ್ಧ ಯುದ್ಧ ಸೋತ ಹಾಗೆ. ಅವರ ಸೋಲು ಆಡಳಿತ ಪಕ್ಷಕ್ಕೆ ಚುನಾವಣೆಯ ತನಕ ಮಾತನಾಡಲು ಇಂಧನ ಕೊಟ್ಟ ಹಾಗೆ ಆಗುತ್ತದೆ. ಅದೇ ವಿಪಕ್ಷದ ಆ ಕಾರ್ಯಕ್ರಮ ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾದರೆ ಅನ್ನ ಬೆಂದಿದೆಯಾ ಎಂದು ನೋಡಲು ರೈಟ್ ಟೈಮ್ ಎಂದೇ ಹೇಳಬಹುದು. ಅಂತಹ ಒಂದು ತಂತಿ ನಡಿಗೆಯ ಮೇಲೆ ನಡೆದ ಸಿದ್ದು ಹುಟ್ಟಿದ ಹಬ್ಬದ ಸಂಭ್ರಮ ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದೇ ಸಮಯಕ್ಕೆ ಆಡಳಿತ ಪಕ್ಷದ ಜನೋತ್ಸವ ಕೂಡ ನಡೆದು ಅದು ಕೂಡ ಯಶಸ್ವಿಯಾಗಿದ್ದರೆ ಅದು ಒಂದಿಷ್ಟು ಟಾನಿಕ್ ಆದರೂ ಸಿಕ್ಕಿದ ಹಾಗೆ ಆಗುತ್ತಿತ್ತು. ಆದರೆ ಅದರ ಹಿಂದಿನ ದಿನ ನಡೆದ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಪದಾಧಿಕಾರಿಯೊಬ್ಬರ ಭೀಕರ ಹತ್ಯೆ ಜನೋತ್ಸವ ಮಾಡದಂತೆ ಬಿಜೆಪಿಯನ್ನು ತಡೆಯಿತು. ಹತ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮ ಬೆಳ್ಳಾರೆಯಲ್ಲಿ ನಡೆದಿದ್ದಾರೂ ಇಡೀ ರಾಜ್ಯದ ಯುವಮೋರ್ಚಾ ಕೆರಳಿ ನಿಂತಿತಲ್ಲ. ಅದರ ನಂತರ ಜನೋತ್ಸವ ಮಾಡಿದರೆ ಮೆಚ್ಚನಾ ಭಗವಂತನು ಎಂದು ಅಂದುಕೊಂಡ ವರಿಷ್ಟರು ಕೇಂದ್ರದಿಂದಲೇ ಸೂಚನೆ ಕೊಟ್ಟು ಜನೋತ್ಸವ ನಿಲ್ಲಿಸಿದರು. ಒಂದು ಬೃಹತ್ ಉತ್ಸವ ಹಾಗೆ ನಿಂತಿತು ಎಂದಾದಾಗ ಸಹಜವಾಗಿ ಅದರ ಕಾರಣಗಳ ಬಗ್ಗೆ ದೆಹಲಿಯಲ್ಲಿ ಕುಳಿತಿರುವ ಹೈಕಮಾಂಡ್ ವರದಿ ತರಿಸುತ್ತದೆ. ಹಾಗೆ ವರದಿ ನೋಡಿದ ಮೋದಿ-ಶಾ-ನಡ್ಡಾ ಜೋಡಿಗೆ ಕರ್ನಾಟಕ ಈ ಬಾರಿ ಸುಲಭದ ತುತ್ತಲ್ಲ ಎನ್ನುವುದು ನಿಕ್ಕಿಯಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರವನ್ನು ಮತ್ತೆ ಪ್ರತಿಷ್ಟಾಪಿಸಲು ಓವೈಸಿಯಂತಹ ರಣತಂತ್ರಗಳನ್ನು ಪ್ರಯೋಗಿಸಿದವರಿಗೆ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಏನೇನು ಮಾಡಬೇಕು ಎಂದು ತಿಳಿಯದಷ್ಟು ಗೊಂದಲವನ್ನು ರಾಜ್ಯ ನಾಯಕರು ಮಾಡಿದ್ದಾರೆ. ಒಂದು ಕಡೆ ವಯಸ್ಸಿನ ಕಾರಣದಿಂದ ಯಡ್ಡಿ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಪಕ್ಷಕ್ಕೆ ಶಕ್ತಿ ತುಂಬುತ್ತಾರೆ ಎಂದು ಗೊತ್ತಿಲ್ಲವಾದರೂ ಅವರನ್ನು ಮಾತನಾಡಿ ವಿಶ್ವಾಸ ತುಂಬೋಣ ಎಂದು ಶಾ ನೇರವಾಗಿ ಬೆಂಗಳೂರಿಗೆ ಬಂದು ಇಳಿದರು. ನೆಪಕ್ಕೆ ಸರಕಾರಿ ಕಾರ್ಯಕ್ರಮವಾದರೂ ಅಲ್ಲಿ ಇದ್ದ ಉದ್ದೇಶ ಒಂದೇ ಯಡ್ಡಿಯೊಂದಿಗೆ ಮಾತನಾಡುವುದು. ಯಡ್ಡಿ ಏನು ಹೇಳಿದರು, ಶಾ ಏನು ಕೇಳಿದರು ಎನ್ನುವುದಕ್ಕಿಂತ ಯಡ್ಡಿಯೊಂದಿಗೆ 20 ನಿಮಿಷ ಏಕಾಂಗಿಯಾಗಿ ಅಮಿತ್ ಶಾ ಮಾತನಾಡಿದರು ಎನ್ನುವುದು ರಾಜ್ಯಕ್ಕೆ ಅದರಲ್ಲಿಯೂ ಲಿಂಗಾಯಿತ ಸಮಾಜಕ್ಕೆ ಹೋಗುವ ಸಂದೇಶ ಇದೆಯಲ್ಲ, ಅದು ಒಂದಿಷ್ಟು ಲಾಭ ತಂದು ನೀಡುತ್ತದೆ. ಇನ್ನು ಏನೂ ಅಪಾಯಿಂಟ್ ಮೆಂಟ್ ಇಲ್ಲದೆ ಯಡ್ಡಿ ಸೀದಾ ಅಮಿತಾ ಶಾ ಭೇಟಿಯಾದರು ಎಂದು ಕೂಡ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಶಾ ಬಂದದ್ದೇ ಯಡ್ಡಿ ಭೇಟಿಗೆ ಎಂದ ಮೇಲೆ ಅಲ್ಲಿ ಪುನ: ಅಪಾಯಿಂಟಮೆಂಟ್ ಬೇಕಾ? ಯಡ್ಡಿ ಜೊತೆ ಮಾತನಾಡಿ ಶಾ ದೆಹಲಿಗೆ ವಾಪಾಸಾಗಿದ್ದಾರೆ. ಯಡ್ಡಿ ನಮ್ಮ ರಾಜ್ಯದ ಮಾಸ್ ಲೀಡರ್ ಎಂದು ಶಾ ಸೂಚ್ಯವಾಗಿ ರಾಜ್ಯದ ಲಿಂಗಾಯಿತ ಸಮುದಾಯಕ್ಕೆ ತಲುಪಿಸಿದ್ದಾರೆ. ಇಂತಹ ಹೊತ್ತಿನಲ್ಲಿ ಏನಾದರೂ ಗಿಮಿಕ್ ಮಾಡದಿದ್ದರೆ ಅಧಿಕಾರ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಶಾಗೆ ಅರಿವಾಗಿದೆ. ಅದಕ್ಕಾಗಿ ಅವರು ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಖಡಕ್ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ಇನ್ನು ಈಶ್ವರಪ್ಪನಂತವರು ಕಾರ್ಯಕರ್ತರ ವಿಷಯದಲ್ಲಿ ಲೂಸ್ ಟಾಕ್ ಮಾಡದಂತೆ ಹೇಳಲು ಸಿಎಂಗೆ ಹೇಳಲಾಗಿದೆ. ಅರಗರಿಗೆ ಖಡಕ್ ಆಗಿ ಇರುವಂತೆ ತಿಳಿಸಲಾಗಿದೆ. ಕಟ್ಟಾ ಸಂಘದ ಹಿನ್ನಲೆಯಿಂದ ಬಂದವರು ಸರಕಾರದ ಆಯಕಟ್ಟಿನ ಸ್ಥಳದಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಅರಗ ಆ ಸ್ಥಾನದಲ್ಲಿ ಇರುವುದು ಪಕ್ಷಕ್ಕೂ ಅಗತ್ಯ. ಇಲ್ಲದೇ ಹೋದರೆ ಸಿಎಂನಿಂದ ಹಿಡಿದು ಪ್ರಮುಖ ಖಾತೆಗಳನ್ನು ಹೊಂದಿರುವ ಎಲ್ಲರೂ ವಲಸೆ ಬಂದವರು ಎನ್ನುವ ಸಂದೇಶ ಹೋಗಬಾರದು ಎನ್ನುವ ಕಾರಣಕ್ಕೆ ಪಕ್ಕಾ ಸಂಘದ ಹಿನ್ನಲೆ ಅರಗ ಗೃಹ ಸಚಿವರಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಹೀಗೆ ಚುನಾವಣೆಯ ಬ್ಲೂಪ್ರಿಂಟ್ ರೆಡಿ ಮಾಡಿ ಎಂದು ತಿಂಗಳ ಹಿಂದೆ ಒಮ್ಮೆ ಹೇಳಿ ಹೋದ ಶಾ ಈಗ ಮತ್ತೊಮ್ಮೆ ಅದನ್ನೇ ಹೇಳಿದ್ದಾರೆ. ಆದರೆ ಸದ್ಯ ನೀವೆ ದಾರಿ ತೋರಿಸಬೇಕು ಎಂದು ಶಂಖದಿಂದ ಬರುವ ತೀರ್ಥಕ್ಕಾಗಿ ಕಾದು ಕುಳಿತಿರುವ ರಾಜ್ಯ ನಾಯಕರು ಸಿದ್ದು ಎದುರಿಸಲು ಮೋದಿ-ಯೋಗಿ-ಶಾ ಅವರನ್ನೇ ನೆಚ್ಚಿಕೊಂಡಿದ್ದಾರೆ. ಅಂತಹ ಒಂದು ಪರಿಸ್ಥಿತಿ ಕಾಂಗ್ರೆಸ್ಸಿನಲ್ಲಿಯೂ ಇದೆ. ಇತಿಹಾಸದ ದುರ್ಬಲ ಹೈಕಮಾಂಡ್ ಜೊತೆಗೂಡಿ ಅದು ಚುನಾವಣೆ ನಡೆಸಬೇಕಾಗುತ್ತದೆ. ಅಲ್ಲಿ ರಾಜ್ಯ ನಾಯಕತ್ವದಲ್ಲಿ ಎಂತದ್ದೇ ಬಣ ರಾಜಕೀಯ ಇದೆ ಎಂದು ಅಂದುಕೊಂಡರೂ ಬದಲಾವಣೆ ಬೇಕು ಎಂದು ಮತದಾರ ಅಂದುಕೊಂಡರೆ ಉಳಿದ ಎಲ್ಲವೂ ಗೌಣವಾಗುತ್ತದೆ. ಹಾಗೆ ಇಲ್ಲಿ ಮೋದಿ-ಶಾ ಚುನಾವಣೆಗೆ ಆರು ತಿಂಗಳು ಇರುವಾಗಿನಿಂದ ನೂರಾರು ರ್ಯಾಲಿ ಆರಂಭಿಸದಿದ್ದರೆ ಬಸ್ಸು ಬೊಮ್ಮಾಯಿಯವರನ್ನು ದೇವರೆ ಕಾಪಾಡಬೇಕು!
Leave A Reply