ಅಕ್ರಮ ಮರಳು ಗುತ್ತಿಗೆದಾರರು ಸಿಕ್ಕಿಬಿದ್ದರೆ ಶಿಕ್ಷೆ ಎಲ್ಲಿ ಆಗಿದೆ?
ಕರಾವಳಿಯಲ್ಲಿ ಮರಳು ಅಥವಾ ಹೊಯಿಗೆ ಎಂದರೆ ಅದಕ್ಕೆ ವಿಶೇಷ ಮರ್ಯಾದೆ ಇದೆ. ಮರಳು ಎತ್ತುವವರು ಕೋಟಿಗಳಲ್ಲಿ ಬೆಲೆಬಾಳುತ್ತಾರೆ. ಇದೇ ಕರಾವಳಿಯಲ್ಲಿ ಸಿಆರ್ ಝಡ್ ವಲಯ ಎನ್ನುವುದು ಇದೆ. ಈ ಪ್ರದೇಶದಲ್ಲಿ ಅಂದರೆ ಕೋಸ್ಟಲ್ ರೆಗ್ಯುಲೇಟರಿ ಝೋನ್ ನಲ್ಲಿ ಯಾರೂ ಮರಳುಗಾರಿಕೆ ನಡೆಸುವಂತಿಲ್ಲ. ಅದರ ಅರ್ಥ ಅಲ್ಲಿ ಮರಳು ತೆಗೆಯುವುದನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ನಿರ್ಭಂದಿಸಿದೆ. ಹಾಗಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಸಿಗುವುದಿಲ್ಲ ಎಂದು ಯಾರೂ ಅಂದುಕೊಳ್ಳಬೇಕಿಲ್ಲ. ದಕ್ಷಿಣ ಕನ್ನಡ ಜಿಲ್ಲಾಡಳಿತ ಒಂದು ಆ್ಯಪ್ ಮಾಡಿದೆ. ಅದರಲ್ಲಿ ನೀವು ಮರಳು ಬೇಕಾದ್ದಲ್ಲಿ ಬೇಡಿಕೆ ಸಲ್ಲಿಸಿದರೆ ನಿಮ್ಮ ಮನೆ ಬಾಗಿಲಿಗೆ ನೀವು ಕೇಳಿದಷ್ಟು ಮರಳು ಬಂದು ಬೀಳುತ್ತದೆ. ಅದಕ್ಕೆ ನೀವು ಸರಕಾರ ನಿಗದಿಗೊಳಿಸಿದಷ್ಟು ಹಣ ಪಾವತಿಸಿದರೆ ಸಾಕು. ಆದರೆ ಈ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ತೆಗೆಯಬಾರದು ಎಂದು ಸುಪ್ರೀಂಕೋರ್ಟಿನ ಹಸಿರು ಪೀಠ ಹೇಳಿದ ನಂತರ ಕಳೆದ ವರ್ಷ ಮೇನಲ್ಲಿಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಾದ ಡಾ.ರಾಜೇಂದ್ರ ಅವರು ನಿಷೇಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಡಿಸಿ ಆದೇಶದ ಬಳಿಕವೂ ಯಾರೂ ಕೂಡ ಸಿಆರ್ ಝಡ್ ನಲ್ಲಿ ಮರಳು ತೆಗೆಯಬಾರದು ಎಂದು ಹೇಳಿದರೂ ಅವ್ಯಾಹತವಾಗಿ ಅಲ್ಲಿಂದ ಮರಳು ತೆಗೆಯುವ ಪ್ರಕ್ರಿಯೆ ಮುಂದುವರೆದಿದೆ. ಕುಳೂರು ಬ್ರಿಡ್ಜ್ ನಲ್ಲಿ ಇತ್ತೀಚೆಗೆ ಅಧಿಕಾರಿಗಳು ದಾಳಿ ನಡೆಸಿ ಜೆಸಿಬಿ ಸಹಿತ ಕಾರು, ಬೈಕುಗಳನ್ನು ವಶಪಡಿಸಿದ್ದಾರೆ. ಇಲ್ಲಿ ಇರುವ ವಿಷಯ ಏನೆಂದರೆ ಯಾರೂ ಕೂಡ ಮರಳನ್ನು ಜೆಸಿಬಿಯಲ್ಲಿ ಸಿಆರ್ ಝಡ್ ನಲ್ಲಿ ಮಾತ್ರವಲ್ಲ, ಎಲ್ಲಿಯೂ ತೆಗೆಯುವಂತಿಲ್ಲ. ಎಲ್ಲಿ ತೆಗೆಯಲು ಅನುಮತಿ ಇದೆಯೋ ಅಲ್ಲಿ ಸಾಂಪ್ರದಾಯಿಕ ನಾಡದೋಣಿ ಬಳಸಿಯೇ ತೆಗೆಯಬೇಕು ಎಂದು ನಿಯಮ ಇದೆ. ಆದರೆ ಸ್ವಾರ್ಥಿಗಳು ದುರಾಸೆಯಿಂದ ಸಿಕ್ಕಿದ್ದಷ್ಟು ನುಂಗುವ ದೆಸೆಯಿಂದ ಜೆಸಿಬಿ ಬಳಸುತ್ತಾರೆ. ಇದರಲ್ಲಿ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ ಅಥವಾ ಆ ಪಾರ್ಟಿ, ಈ ಪಾರ್ಟಿ ಎಂದಿಲ್ಲ. ಎಲ್ಲರೂ ಸಮಾನ ದ್ರೋಹಿಗಳು. ಯಾವುದೇ ಸರಕಾರ ಬಂದರೂ ಪೊಲೀಸ್ ಇಲಾಖೆ, ಭೂಗರ್ಭ ಮತ್ತು ಗಣಿ ಇಲಾಖೆ, ತಹಶೀಲ್ದಾರ್ ಸಹಿತ ಜನಪ್ರತಿನಿಧಿಗಳಿಗೆ ಪಾಲಿದೆ. ಇದರಿಂದಾಗಿಯೇ ಪೊಲೀಸರು, ಅಧಿಕಾರಿಗಳು ಮೌನವಾಗಿ ಏನೂ ಮಾಡದೇ ಸುಮ್ಮನೆ ಇರುತ್ತಾರೆ. ಒಂದು ವೇಳೆ ಇವರ ನಡುವೆ ಯಾರಾದರೂ ಪ್ರಾಮಾಣಿಕ ಅಧಿಕಾರಿಗಳು ಎದ್ದುಬಂದು ದಾಳಿ ಮಾಡಿದರು ಎಂದೇ ಇಟ್ಟುಕೊಳ್ಳೋಣ, ಆಗ ಎಲ್ಲಿಂದಲಾದರೂ ಒತ್ತಡ ಬಂದು ಆರೋಪಿಗಳ ಮೇಲೆ ಯಾವುದಾದರೂ ಸಣ್ಣಪುಟ್ಟ ಕೇಸ್ ದಾಖಲಾಗುವಂತೆ ನೋಡಿಕೊಳ್ಳುತ್ತಾರೆ. ಇದರಿಂದ ಈ ಮರಳು ಮಾಫಿಯಾ ಅವ್ಯಾಹತವಾಗಿ ಬೆಳೆಯುತ್ತಿದೆ. ಕೆಲವೊಮ್ಮೆ ದಾಳಿಗೆ ಬಂದ ಅಧಿಕಾರಿಗಳ ಪ್ರಾಣ ತೆಗೆಯಲು ಕೂಡ ಈ ಅಕ್ರಮ ಮರಳು ಗುತ್ತಿಗೆದಾರರು ಹಿಂದೆ ಮುಂದೆ ನೋಡಲ್ಲ. ಗನ್ ಮ್ಯಾನ್ ಇದ್ದ ಪೊಲೀಸ್ ವರಿಷ್ಟಾಧಿಕಾರಿಗಳ ಮೇಲೆಯೂ ಇವರು ಶೂಟ್ ಮಾಡಿದ ಇತಿಹಾಸ ನಮ್ಮ ಕರಾವಳಿಯಲ್ಲಿದೆ. ಅದ್ದರಿಂದ ಸುಮ್ಮನೆ ರಿಸ್ಕ್ ಯಾಕೆ ಎಂದು ಸಿಕ್ಕಿದಷ್ಟು ಪಡೆದುಕೊಂಡು ಸಂಬಂಧಪಟ್ಟವರು ಹೊಟ್ಟೆ ತುಂಬಿಸಿಕೊಂಡಿರುತ್ತಾರೆ.
ಇನ್ನು ಈ ಮರಳು ತೆಗೆಯುವ ಪರವಾನಿಗೆಯನ್ನು ತಿಂಗಳಿಗೆ ಇಂತಿಷ್ಟೇ ಎಂದು ಕೊಡಲಾಗಿದೆ. ದಿನಕ್ಕೆ ಒಂದರಂತೆ ತಿಂಗಳಿಗೆ ಮೂವತ್ತು ಪರ್ಮಿಟ್ ಸಿಕ್ಕಿದ ವ್ಯಕ್ತಿ ಅಷ್ಟು ಮಾತ್ರ ನ್ಯಾಯಬದ್ಧವಾಗಿ ತೆಗೆದರೆ ಪರವಾಗಿಲ್ಲ. ಆದರೆ ಆತ ದಿನಕ್ಕೆ ಏಳರಿಂದ ಹತ್ತು ಲೋಡ್ ಮರಳು ತೆಗೆಯಲು ಹೋದರೆ ಅದರಿಂದ ಪರಿಸರ ಏನಾಗಬೇಕು. ಹೀಗೆ ನೂರಾರು ಗುತ್ತಿಗೆದಾರರು ಮಾಡುತ್ತಾ ಹೋದರೆ ಪ್ರಕೃತಿಯ ಒಡಲು ತಕ್ಷಣ ಬರಿದಾಗಿ ಹೋಗುತ್ತದೆ. ಒಬ್ಬ ತನಗೆ ಪರ್ಮಿಟ್ ಸಿಕ್ಕಿದಷ್ಟು ಮರಳನ್ನು ಮಾತ್ರ ತೆಗೆಯುತ್ತಿದ್ದಾನೆ ಎಂದು ನೋಡಿಕೊಳ್ಳುವವರು ಯಾರೂ ಇಲ್ಲ. ಯಾರೂ ನೋಡುವುದಿಲ್ಲ ಎಂದ ಮೇಲೆ ಮರಳು ಎತ್ತುವವರು ಸತ್ಯ ಹರಿಶ್ಚಂದ್ರನ ಕುಟುಂಬದವರಂತೂ ಅಲ್ಲವೇ ಅಲ್ಲ. ಎದುರಿಗೆ ಭೂರಿ ಭೋಜನ ಇಟ್ಟುಕೊಂಡು ಜೋರು ಹಸಿವಿದ್ದವನಿಗೆ ಒಂದು ಜಿಲೇಬಿ ಮಾತ್ರ ತಿನ್ನು ಎಂದರೆ ಆತ ಬಿಡುತ್ತಾನಾ? ಆದ್ದರಿಂದ ಜೆಸಿಬಿ ಬಳಸಿಯೇ ಮರಳು ಲಾರಿಗಳಲ್ಲಿ ತುಂಬಲಾಗುತ್ತಿದೆ. ಇನ್ನು ಮರಳು ಪರ್ಮಿಟ್ ಗಳನ್ನು ಬೇಕಾಬಿಟ್ಟಿ ಹಂಚಲಾಗಿದ್ದು, ಬಾರ್ ಓನರ್, ಬಸ್ ಓನರ್ ಸಹಿತ ಯಾರ್ಯಾರೋ ವಶೀಲಿಬಾಜಿ ಮಾಡಿ ಪರ್ಮಿಟ್ ತೆಗೆದುಕೊಂಡಿದ್ದಾರೆ. ನಿಯಮ ಪ್ರಕಾರ ನದಿಪಾತ್ರದಲ್ಲಿ ವಾಸಿಸುವವರಿಗೆ ಮಾತ್ರ ಪರ್ಮಿಟ್ ನೀಡಬೇಕೆಂದು ಇದೆ. ಯಾಕೆಂದರೆ ಅವರಿಗೂ ಉದ್ಯೋಗಾವಕಾಶ ಸಿಗಲಿ ಎನ್ನುವುದು ಉದ್ದೇಶ. ಆದರೆ ಈಗ ಮಂಗಳೂರಿನ ಫ್ಲಾಟ್ ಗಳಲ್ಲಿ ವಾಸಿಸುವವರ ಎಷ್ಟೋ ಜನರ ಬಳಿಯಲ್ಲಿಯೂ ಮರಳು ತೆಗೆಯುವ ಪರ್ಮಿಟ್ ಇದೆ.
ಕೆಲವು ದಿನಗಳ ಹಿಂದೆ ಒಬ್ಬ ಕಾರ್ಮಿಕ ಮರಳು ದೋಣಿಯಲ್ಲಿ ನದಿಯಲ್ಲಿ ಮರಳು ತೆಗೆಯಲು ಹೋಗಿರುವಾಗ ದೋಣಿ ಮಗುಚಿ ನೀರಿಗೆ ಬಿದ್ದು ಅಕಾಲಿಕವಾಗಿ ಮರಣ ಅಪ್ಪಿದ್ದ. ಆತನ ಸಾವಿಗೆ ಏನಾದರೂ ನ್ಯಾಯ ಸಿಗುತ್ತಾ? ಇಲ್ಲವೇ ಇಲ್ಲ. ಯಾಕೆಂದರೆ ಯಾರಿಗೂ ಅದು ಬಿದ್ದು ಹೋಗೆ ಇಲ್ಲ. ಪೊಲೀಸ್ ಅಧಿಕಾರಿಗಳು ಕೂಡ ಆ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಅಷ್ಟರಲ್ಲಿಯೇ ಇದೆ. ಇನ್ನು ಹೀಗೆ ಸಾಯುವ ಎಷ್ಟೋ ಮಂದಿ ಯಾವುದೋ ರಾಜ್ಯದವರಾಗಿರುತ್ತಾರೆ. ಅವರ ಜೀವಕ್ಕೆ ಇಲ್ಲಿ ಅಕ್ರಮ ಮರಳು ತೆಗೆಯುವ ಗುತ್ತಿಗೆದಾರರು ಮರ್ಯಾದೆ ಕೊಡುವುದಿಲ್ಲ. ಕೇವಲ ಕೂಲಿ ಆಸೆಗೆ ಅವರು ಇಲ್ಲಿ ಬಂದು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುತ್ತಾರೆ. ಸತ್ತರೆ ದೇವರೇ ಗತಿ!
Leave A Reply