ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
ಮುತಾಲಿಕ್ ಕೊನೆಗೂ ತಮ್ಮ ರಾಜಕೀಯ ಜೀವನದ ಮಹಾನ್ ಆಸೆಯಾಗಿರುವ ಶಾಸಕನಾಗುವ ಕನಸನ್ನು ಈಡೇರಲು ಸಿದ್ಧರಾಗಿದ್ದಾರೆ. 2004 ರಲ್ಲಿ ಭಾರತೀಯ ಜನತಾ ಪಾರ್ಟಿಯವರು ಅದಕ್ಕೆ ಅವಕಾಶ ಮಾಡಿಕೊಡುವ ಮನಸ್ಸು ಹೊಂದಿದ್ದರೂ ಸ್ವತ: ಮುತಾಲಿಕ್ ಅವರೇ ನಿರಾಕರಿಸಿ ತ್ಯಾಗಮೂರ್ತಿಯಾಗಿದ್ದರು. ಅದರ ನಂತರ ಈಗ 2023 ರಲ್ಲಿ ಅವರ ಈ ಗುರಿ ಬೃಹದಾಕಾರವಾಗಿ ನಿಂತಿದೆ. ಅಷ್ಟಕ್ಕೂ ಮುತಾಲಿಕ್ ಅವರನ್ನು ಹತ್ತಿರದಿಂದ ನೋಡಿದವರಿಗೆ ತಾವು ಇಲ್ಲಿ ಶಾಸಕನಾಗುವುದಕ್ಕಿಂತ ತಮ್ಮ ಹಳೆಯ ಶಿಷ್ಯ ಸುನೀಲ್ ಕುಮಾರ್ ಅವರನ್ನು ಸೋಲಿಸುವುದೇ ಆದ್ಯತೆ ಎನ್ನುವಂತೆ ಕಾಣುತ್ತಿರುವುದು ಸುಳ್ಳಲ್ಲ. ಒಂದು ಕಾಲದಲ್ಲಿ ಇದೇ ಮುತಾಲಿಕ್ ಬಾಬಾಬುಡನಗಿರಿ ಹೋರಾಟದಲ್ಲಿ ಸುನೀಲ್ ಹಾಗೂ ಸಿಟಿ ರವಿಗೆ ಗುರುವಾಗಿ, ಮಾರ್ಗದರ್ಶಕರಾಗಿದ್ದರು. ನಂತರ ಶಿಷ್ಯರಿಬ್ಬರು ಶಾಸಕರಾದರು. ಗುರು ತೆರೆಯ ಮರೆಯಲ್ಲಿ ಹಿಂದೂತ್ವದ ಸೇವೆಯಲ್ಲಿ ನಿಂತರು. ಆದರೆ ಈಗ ಅದ್ಯಾಕೋ ಶಿಷ್ಯನ ವಿರುದ್ಧ ಬಹಿರಂಗವಾಗಿ ಹೇಳಲಾಗದ ಒಂದು ಕೋಪ ಗುರುವಿಗೆ ಆಗಾಗ ಚುಚ್ಚುತ್ತಿದೆಯೋ ಎಂದು ಅನಿಸುತ್ತದೆ ಅಥವಾ ಸುನೀಲ್ ಬಗ್ಗೆ ಕೋಪ, ದ್ವೇಷ ಇರುವವರು ಮುತಾಲಿಕ್ ಅವರನ್ನು ಬಳಸುತ್ತಿರುವುದು ನಿಸ್ಸಂದೇಯ ಎನಿಸುತ್ತದೆ. ಅದಕ್ಕಿರುವ ಲಾಜಿಕ್ ನೋಡೋಣ.
ಇಡೀ ಕರಾವಳಿಯಲ್ಲಿ ಕಾಂಗ್ರೆಸ್ ಅಕ್ಷರಶ: ಇಲ್ಲವೇ ಇಲ್ಲ ಎಂದು ಹೇಳಬಹುದಾದ ಯಾವುದಾದರೂ ಕ್ಷೇತ್ರ ಇದ್ದರೆ ಅದು ಕಾರ್ಕಳ. ಗೋಪಾಲ ಭಂಡಾರಿಯವರು ಬದುಕಿರುವವರೆಗೂ ಅಲ್ಲಿನ ಕಾಂಗ್ರೆಸ್ಸಿಗೆ ಅವರೇ ಬಾಸ್. ಮೊಯಿಲಿ ಸಿಎಂ ಆಗಿ, ಬಳಿಕ ಸಂಸದರಾಗಿ, ಕೇಂದ್ರ ಸಚಿವರಾಗಿ ರಾಜ್ಯ, ರಾಷ್ಟ್ರ ರಾಜಕಾರಣಕ್ಕೆ ಹೋಗುವಾಗ ತನ್ನ ಮಗ ರಾಜಕೀಯಕ್ಕೆ ಬರುವ ತನಕ ಆ ಕಾರ್ಕಳದ ಗದ್ದುಗೆಯಲ್ಲಿ ಟವೆಲ್ ಇಟ್ಟು ಅದನ್ನು ಕಾಪಾಡಿಕೊಂಡು ಬರುವಂತೆ ಸೂಚಿಸಿದ್ದೇ ಗೋಪಾಲ ಭಂಡಾರಿಯವರನ್ನು. ಭಂಡಾರಿ ತಮ್ಮ ಪರಮ ಗುರುವಿನ ಆದೇಶವನ್ನು ಕೊನೆಯ ತನಕ ಕಾಪಾಡಿಕೊಂಡು ಬಂದರು. ಅವರು ಅಚಾನಕ್ ಆಗಿ ಹೃದಯಾಘಾತದಿಂದ ತೀರಿಕೊಳ್ಳದೇ ಹೋಗಿದ್ದರೆ ಕಾರ್ಕಳದ ಫಲಿತಾಂಶ ಯಾವತ್ತೂ ಕುತೂಹಲಕಾರಿಯಾಗಿಯೇ ಇರುತ್ತಿತ್ತು. ಆದರೆ ಈಗಲೂ ಮೊಯಿಲಿ ಮಗ ಕಾರ್ಕಳದತ್ತ ಸುಳಿಯದೇ ಕಾರ್ಕಳ ಕಾಂಗ್ರೆಸ್ ಅಕ್ಷರಶ: ಅನಾಥವಾಗಿದೆ. ಮೊಯಿಲಿ ಅಪರೂಪಕ್ಕೊಮ್ಮೆ ಬಂದು ಹೋಗುತ್ತಾರೆ ಬಿಟ್ಟರೆ ಅವರ ಮುಖದಲ್ಲಿ ಆ “ಹರ್ಷ” ಕಾಣುತ್ತಾ ಇಲ್ಲ. ಗೋಪಾಲ ಭಂಡಾರಿಯವರಂತೆ ತಮ್ಮ ಹೃದಯಕ್ಕೆ ಅಷ್ಟು ಹತ್ತಿರವಾಗಿರುವ ಮತ್ತೊಬ್ಬನನ್ನು ಮೊಯಿಲಿ ಸೃಷ್ಟಿಸದೇ ಹೋದದ್ದು ಸುನೀಲ್ ಅದೃಷ್ಟ ಎನ್ನಬಹುದು. ಹಾಗೆ ವಾಕ್ ಓವರ್ ಸಿಗುವಂತಹ ಸನ್ನಿವೇಶದಲ್ಲಿ ಯಾವುದೇ ಖರ್ಚಿಲ್ಲದೇ ವಿಧಾನಸಭೆಗೆ ಮತ್ತೆ ಪ್ರವೇಶಿಸಬಹುದು ಎನ್ನುವ ಲೆಕ್ಕಾಚಾರ ಹಾಕಿ ಕುಳಿತಿದ್ದ ಸುನೀಲ್ ಅವರಿಗೆ ಒಂದು ಕಾಲದ ಗುರು ಧುತ್ತನೇ ಎದುರಾಗುತ್ತಾರೆ ಎನ್ನುವ ಕಲ್ಪನೆ ಇರಲಿಲ್ಲ.
ಮೂಲತ: ಮುತಾಲಿಕ್ ಮಹತ್ವಾಕಾಂಕ್ಷಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸೇವೆ ಸಲ್ಲಿಸುವವರಿಗೆ ಮಹತ್ವಾಕಾಂಕ್ಷೆ ಇದ್ದರೆ ಅದು ಅವರ ಮೊದಲ ಶತ್ರು. ಆರ್ ಎಸ್ ಎಸ್ ಯಾವತ್ತೂ ನಮ್ಮಲ್ಲಿ ಕೆಲಸ ಮಾಡಿದವರನ್ನು ಶಾಸಕ, ಸಂಸದ, ಮಂತ್ರಿ, ಸಿಎಂ, ಪಿಎಂ ಮಾಡುತ್ತೇನೆ ಎಂದು ಭರವಸೆ ಕೊಡುವುದಿಲ್ಲ. ಏನೂ ಆಸೆ ಇಲ್ಲದೆ ಸಂಘಕ್ಕೆ ಕೆಲಸ ಮಾಡುತ್ತೇನೆ ಎಂದಾದರೆ ಮಾತ್ರ ನಮ್ಮಲ್ಲಿಗೆ ಬಾ ಎಂದು ಮೊದಲೇ ಹೇಳಲಾಗುತ್ತದೆ. ಅಂತಹ ಮುತಾಲಿಕ್ ಅವರನ್ನು ಸಂಘದಿಂದ ಹೊರಗೆ ಹಾಕಲಾಯಿತಾ, ಅವರೇ ಹೊರಗೆ ಬಂದರಾ? ಈ ಪ್ರಶ್ನೆಗಳಿಗೆ ಇನ್ನು ಉತ್ತರ ಸಿಕ್ಕಿಲ್ಲ. ಅದನ್ನು ಸಂಘದವರು ಹೇಳಲ್ಲ, ಮುತಾಲಿಕ್ ಕೂಡ ಬಾಯಿ ಬಿಡುವುದಿಲ್ಲ.
ಅಂತಹ ಮುತಾಲಿಕ್ ಅವರು ಹಿಂದೂತ್ವದ ವಿಷಯದಲ್ಲಿ ಯಾವತ್ತೂ ರಾಜಿಯಾಗಿಲ್ಲ. ಈ ವಿಷಯದಲ್ಲಿ ಅವರ ಅಚಲ ನಿಷ್ಠೆಯ ಬಗ್ಗೆ ಯಾರಿಗೂ ಸಂಶಯ ಬೇಡಾ. ಆದರೆ ಬಿಜೆಪಿಗೆ ಬಂದರೆ ಅವರು ಅದಕ್ಕೂ ವಿನಾಯಿತಿ ಕೊಡಬೇಕಾಗುತ್ತದೆ. ಯಾಕೆಂದರೆ ರಾಜಕೀಯದಲ್ಲಿ ಯಾವತ್ತೂ 2 ಮತ್ತು 2 ನಾಲ್ಕು ಆಗಲ್ಲ. ಯಾಕೆಂದರೆ ಈ ಅನುಭವ ಸುನೀಲ್ ಕುಮಾರ್ ಅವರಿಗೂ ಆಗಿದೆ. ಹಿಂದೂತ್ವದ ವಿಷಯದಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದ ಪರಿಣಾಮ ಅವರು ಕೂಡ ಮಧ್ಯದಲ್ಲಿ ಒಂದು ಚುನಾವಣೆಯಲ್ಲಿ ಗೋಪಾಲ ಭಂಡಾರಿಯವರ ವಿರುದ್ಧ ಸೋತಿದ್ದರು. ಆಗ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಅಲ್ಲ ಎನ್ನುವುದು ಅವರಿಗೂ ಗೊತ್ತಿದೆ. ಸ್ವತ: ಬಿಜೆಪಿಯಲ್ಲಿರುವ ಹಿಂದೂಗಳೇ ಅವರನ್ನು ಸೋಲಿಸಿ ನಮಗೆ ಗೆಲ್ಲಿಸಲಿಕ್ಕೂ ಗೊತ್ತು. ಸೋಲಿಸಲಿಕ್ಕೂ ಗೊತ್ತು ಎನ್ನುವ ಸಂದೇಶ ರವಾನಿಸಿದ್ದರು. ಅಂತಹ ಸುನೀಲ್ ಈ ಬಾರಿ ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಎಲ್ಲದರಲ್ಲಿಯೂ ಶಕ್ತಿಶಾಲಿಯಾಗಿದ್ದಾರೆ. ಅವರನ್ನು ಸೋಲಿಸುವುದು ಮುತಾಲಿಕ್ ಅವರಿಗೆ ಅಷ್ಟು ಸುಲಭವಲ್ಲ. ಆದರೆ ಎಲ್ಲಿಯಾದರೂ ಬಿಜೆಪಿ ಅಭ್ಯರ್ಥಿ ವೀಕ್ ಇದ್ದ ಕಡೆ ನಿಂತಿದ್ದರೆ ಮುತಾಲಿಕ್ ಕಾಂಗ್ರೆಸ್ ವಿರುದ್ಧ ಗೆದ್ದು ಪರೋಕ್ಷವಾಗಿ ಬಿಜೆಪಿಗೆ ಶಕ್ತಿ ತುಂಬಬಹುದಿತ್ತು. ಆದರೆ ಈಗ ಸನ್ನಿವೇಶ ಹಾಗಿಲ್ಲ. ಮುತಾಲಿಕ್ ಒಂದು ವೇಳೆ ಗೆದ್ದರೂ ಅವರು ಸೋಲಿಸಿದ್ದು ತಮ್ಮದೇ ಒಬ್ಬ ಶಿಷ್ಯನನ್ನು ಎಂದು ಆಗುತ್ತದೆ. ಅಷ್ಟಕ್ಕೂ ಹುಬ್ಬಳ್ಳಿ ಮೂಲದ ಮುತಾಲಿಕ್ ಉತ್ತರ ಕರ್ನಾಟಕದ ಅಷ್ಟೂ ಕ್ಷೇತ್ರಗಳನ್ನು ಬಿಟ್ಟು ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲಿಗೆ ರಣವೀಳ್ಯ ಹಿಡಿದು ಬಂದಿದ್ದಾರೆ ಎಂದರೆ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟವರು ದೊಡ್ಡ ಚಾಣಾಕ್ಷರೇ ಆಗಿರಬೇಕು!
Leave A Reply