ಟ್ರಾಫಿಕ್ ಪೋಲಿಸರ ಭಯ ಬಸ್ಸಿನವರಿಗೆ ಉಂಟಾ?
ಗಂಡ ಹೆಂಡಿರ ಜಗಳ, ಉಂಡು ಮಲಗುವ ತನಕ ಎನ್ನುವ ಮಾತಿದೆ. ಹಾಗೆ “ಮಂಗಳೂರಿನಲ್ಲಿ ಅಪಘಾತಗಳು ಕಡಿಮೆಯಾಗುವುದು, ಬಸ್ಸು, ಲಾರಿಯವರಿಗೆ ಟ್ರಾಫಿಕ್ ಪೊಲೀಸರ ಬಗ್ಗೆ ಹೆದರಿಕೆ ಬರುವ ತನಕ” ಎನ್ನುವ ಹೊಸ ಗಾದೆ ಹುಟ್ಟಿಕೊಂಡಿದೆ. ಹಾಗಂತ ಜೋಕು ಅಲ್ಲ. ಬಹಳ ಪ್ರಮುಖವಾಗಿರುವ ವಿಷಯ ಇದು. ಯಾಕೆಂದರೆ ಹದಿನೈದು ದಿನಗಳ ಅಂತರದಲ್ಲಿ ಬೆಂದೂರ್ ವೆಲ್ ಬಳಿ ಎರಡು ಅಪಘಾತ ನಡೆದು ಇಬ್ಬರು ಅಸುನೀಗಿದರು. ಕೆಲವು ದಿನಗಳ ಮೊದಲು ಅಲ್ಲಿಯೇ ಸನಿಹದಲ್ಲಿರುವ ನಂತೂರ್ ಬಳಿ ಅಪಘಾತ ನಡೆದು ಒಂದೇ ಕುಟುಂಬದ ಇಬ್ಬರು ಪ್ರಾಣ ತ್ಯಜಿಸಬೇಕಾಯಿತು. ಮಂಗಳೂರಿನಲ್ಲಿ ಬಸ್ ಅಪಘಾತ ಎನ್ನುವುದು ಬಹಳ ಸಾಮಾನ್ಯ ಎನಿಸುವಂತೆ ಆಗಿದೆ. ಇದಕ್ಕೆ ಮುಖ್ಯ ಕಾರಣ ಬಸ್ಸಿನವರಿಗೆ ಟ್ರಾಫಿಕ್ ಪೊಲೀಸರ ಭಯ ಇಲ್ಲದೇ ಇರುವುದು. ಟ್ರಾಫಿಕ್ ಪೊಲೀಸರು ಕೂಡ ಬಸ್ಸಿನವರಿಗೆ ಹೆದರಿಕೆ ಹುಟ್ಟಿಸುವಂತಹ ಕೆಲಸ ಮಾಡುತ್ತಿಲ್ಲ. ಯಾವಾಗ ಹೆದರಿಕೆಯೇ ಇರುವುದಿಲ್ಲವೋ ಆಗ ನಿಯಮಗಳ ಗೊಡವೆ ಯಾರಿಗೆ ಇರುತ್ತದೆ. ಇನ್ನು ಹೆಚ್ಚಿನ ಪೊಲೀಸರು ಮಂಗಳೂರಿನವರಲ್ಲ. ಅವರು ರಸ್ತೆಯಿಂದ ದೂರ ನಿಂತು ಅಥವಾ ಯಾವುದಾದರೂ ಸ್ಟ್ಯಾಂಡ್ ಹಾಕಿದ ಸ್ಕೂಟರ್ ಮೇಲೆ ಕುಳಿತು ಮೊಬೈಲ್ ಒತ್ತುತ್ತಾ ಇರುತ್ತಾರೆ. ಮನಸ್ಸಾದಾಗ ಫೋಟೋ ತೆಗೆಯುತ್ತಾರೆ. ಯಾವಾಗ ಫೋಟೋ ತೆಗೆದು ನೋಟಿಸು ಕಳುಹಿಸುವ ಪದ್ಧತಿ ಶುರುವಾಯಿತೋ ಅದರ ನಂತರ ಟ್ರಾಫಿಕ್ ಪೊಲೀಸರು ಫೋಟೋ ತೆಗೆಯುವುದೇ ತಮ್ಮ ಅಂತಿಮ ಗುರಿ ಮಾಡಿಕೊಂಡರು. ಇವತ್ತಿಗೂ ಅತೀ ಹೆಚ್ಚು ಕೇಸು ದಾಖಲಾಗಿರುವುದು ದ್ವಿಚಕ್ರ ವಾಹನಗಳ ಮೇಲೆ ವಿನ: ಬಸ್ಸುಗಳ ಮೇಲೆ ಇವರ ರೋಷ ಇಲ್ಲ. ಯಾಕೆಂದರೆ ಹೆಚ್ಚಿನ ಬಸ್ ಮಾಲೀಕರಿಗೂ ಟ್ರಾಫಿಕ್ ಉನ್ನತ ಪೊಲೀಸ್ ಅಧಿಕಾರಿಗಳಿಗೂ ಉತ್ತಮ ಬಾಂಧವ್ಯ ಇರುತ್ತದೆ. ಆದ್ದರಿಂದ ವಿಪರೀತ ವೇಗದಲ್ಲಿ ಹೋಗುವ ಬಸ್ಸುಗಳಿಗೆ ಇವರ ಹೆದರಿಕೆ ಇರುವುದಿಲ್ಲ. ಬೆಳಿಗ್ಗೆ ಮತ್ತು ಸಂಜೆ ಪೀಕ್ ಅವರ್ ನಲ್ಲಿ ಬಸ್ಸುಗಳಲ್ಲಿ ತುಂಬುವ ಜನರ ಸಂಖ್ಯೆಯನ್ನು ಎಣಿಸಬೇಕು. ಅಕ್ಷರಶ: ಕುರಿ ಮಂದೆಯನ್ನು ಮಿನಿ ಲಾರಿಯಲ್ಲಿ ತುಂಬಿಸಿದಂತೆ ತುಂಬಿಸುತ್ತಾರೆ. ಆರ್ಟಿಒದಲ್ಲಿ ಇವರಿಗೆ ಪರ್ಮಿಟ್ ಕೊಟ್ಟ ಅಧಿಕಾರಿಗೆ ಹಾರ್ಟ್ ಅಟ್ಯಾಕ್ ಆಗಬೇಕು. ಹಾಗೆ ರಶ್ ಇರುತ್ತದೆ. ಇವರಿಗೆಲ್ಲ ಪೊಲೀಸರ ಹೆದರಿಕೆ ಇರುವುದಿಲ್ಲವೋ ಅಥವಾ ಅನಿವಾರ್ಯತೆಯೋ ಅದರ ಹಿಂದೆನೆ ಇನ್ನೊಂದು ಕಥೆ ಇದೆ.
ಹಿಂದೆ ಒಂದು ಕಾಲದಲ್ಲಿ ಖಾಸಗಿ ಬಸ್ಸುಗಳು ಕಂಪನಿ ಮಾಲೀಕರ ಕೈಯಲ್ಲಿ ಇದ್ದವು. ಒಂದೊಂದು ಬಸ್ ಕಂಪನಿಯಲ್ಲಿ ಹತ್ತಾರು ಬಸ್ ಗಳಿದ್ದವು. ಆಗ ಬಸ್ ಚಾಲಕರಿಗೆ, ನಿರ್ವಾಹಕರಿಗೆ ತಿಂಗಳ ಸಂಬಳ ಇತ್ತು. ಅದರ ನಂತರ ಬಸ್ಸು ಕಂಪನಿಗಳು ಮುಚ್ಚುತ್ತಾ ಹೋದವು. ಒಂದೆರಡು ಬಸ್ಸುಗಳನ್ನು ಮಾತ್ರ ಹೊಂದಿರುವ ಮಾಲೀಕರು ಹೆಚ್ಚಾಗುತ್ತಾ ಹೋದರು. ಅವರಿಗೆ ಸಂಬಳ ಕೊಡುವುದಕ್ಕೆ ಪೂರೈಸುತ್ತಿರಲಿಲ್ಲ. ಯಾಕೆಂದರೆ ಬಸ್ಸಿನ ಆದಾಯದ ಮೇಲೆ ಕಂಟ್ರೋಲ್ ಮಾಲೀಕರಿಗೆ ಇರುತ್ತಿರಲಿಲ್ಲ. ಟಿಕೆಟ್ ಹರಿದರೆ ತಾನೆ ಮಾಲೀಕರಿಗೆ ಗೊತ್ತಾಗುವುದು. ಟಿಕೆಟ್ ಕೊಡುವ ಸಂಪ್ರದಾಯವೇ ಇರಲಿಲ್ಲ. ಬಂದ ಆದಾಯದಲ್ಲಿ ಒಂದಿಷ್ಟು ನಿರ್ವಾಹಕರು ನುಂಗಿದರೆ ಮಾಲೀಕರಿಗೆ ಅಂತದ್ದೇನೂ ತುಂಬಾ ಉಳಿಯುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಸ್ ಮಾಲೀಕರುಗಳು ಏನು ಮಾಡಿದರು ಎಂದರೆ ಕಂಡಕ್ಟರ್ ಗಳು ಕಲೆಕ್ಷನ್ ಮಾಡಿ ಮಾಲೀಕರಿಗೆ ಇಂತಿಷ್ಟು ಎಂದು ಕೊಡುವುದು. ಅದರ ನಂತರ ಲಾಭ, ನಷ್ಟ ನಿರ್ವಾಹಕರಿಗೆ ಬಿಟ್ಟಿದ್ದು. ಇದರಿಂದ ಏನಾಗಿದೆ ಎಂದರೆ ನಿರ್ವಾಹಕರು ತಮ್ಮ ಜೀವ ಬಿಟ್ಟು ದುಡಿಯುತ್ತಿದ್ದಾರೆ. ಅದರೊಂದಿಗೆ ಪಾದಚಾರಿಗಳ, ಪ್ರಯಾಣಿಕರ, ರಸ್ತೆಯಲ್ಲಿ ಹೋಗುವ ಇತರ ವಾಹನ ಚಾಲಕರ ಪ್ರಾಣವನ್ನು ಪಣಕ್ಕೆ ಇಡುತ್ತಿದ್ದಾರೆ.
ಇದಕ್ಕೆ ಪರಿಹಾರ ಇಲ್ಲವೇ? ಇದೆ. ಬಸ್ಸುಗಳಿಗೆ ಸ್ಪೀಡ್ ಲಿಮಿಟ್ ಕಡ್ಡಾಯಗೊಳಿಸುವುದು. ಬಸ್ಸು ನಿರ್ವಾಹಕರಿಗೆ ಸಂಬಳ ನಿಗದಿಪಡಿಸುವುದು. ಮಾಲೀಕರು ಟಿಕೆಟ್ ವೆಂಡಿಂಗ್ ಮಿಶನಿನಿಂದ ಟಿಕೆಟ್ ಕೊಡಲೇಬೇಕು ಎಂದು ಕಡ್ಡಾಯ ಮಾಡುವುದು. ಆಗಾಗ ತಮ್ಮ ಬಸ್ಸಿನಲ್ಲಿ ಟಿಕೆಟ್ ಸರಿಯಾಗಿ ಕೊಡಲಾಗುತ್ತಿದೆಯಾ ಎಂದು ಚೆಕ್ ಮಾಡುವುದು ಹೀಗೆ ಬೇರೆ ಬೇರೆ ಪ್ಲಾನ್ ಬಳಸಿದರೆ ಆಕ್ಸಿಡೆಂಟ್ ಕಡಿಮೆಯಾಗುತ್ತದೆ. ಅದರೊಂದಿಗೆ ಟ್ರಾಫಿಕ್ ಪೊಲೀಸರು ಕ್ಯಾರ್ ಲೆಸ್ ಆಗದೇ ಬಸ್ ಚಾಲಕರನ್ನು ಮತ್ತು ಮಾಲೀಕರನ್ನು ತಮ್ಮ ಸೋದರ ಸಂಬಂಧಿ ಎಂದು ಅಂದುಕೊಳ್ಳದೇ ಕ್ರಮ ಜರುಗಿಸಿದರೆ ಕೆಲವು ಜೀವಗಳು ಉಳಿಯಬಹುದು. ಅದರೊಂದಿಗೆ ನಾಗರಿಕರ ಕರ್ತವ್ಯ ಕೂಡ ಇದೆ. ಬೈಕು ಎಂದರೆ ಯಮಹಾ ಎಂದು ಇದ್ದ ಕಾಲದಲ್ಲಿ ಸ್ಪೀಡ್ ಹೋಗುವುದು ಒಂದು ಫ್ಯಾಶನ್ ಆಗಿತ್ತು. ಆಗ ರಸ್ತೆಯಲ್ಲಿ ಈಗಿನಷ್ಟು ವಾಹನಗಳು ಇರಲಿಲ್ಲ. ಆದರೆ ಈಗ ಹಾಗಿಲ್ಲ. ಪ್ರತಿ ಮನೆಯಲ್ಲಿ ವಾಹನಗಳಿವೆ. ರಸ್ತೆಗಳು ಅಗಲವಾದರೂ ಪಾರ್ಕಿಂಗ್ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಸ್ಪೀಡ್ ಹೋಗುವುದು ಬಿಡಿ, ನಾರ್ಮಲ್ ಹೋದರೂ ರಸ್ತೆಯಲ್ಲಿ ಪಕ್ಕದ ವಾಹನಕ್ಕೆ ಸಾರಿಸಿ ಹೋಗುವ ಸಾಧ್ಯತೆ ಇದೆ. ಇನ್ನು ಸಿಕ್ಕಿದ ಕಡೆ ರಸ್ತೆ ದಾಟುವುದು ಕೂಡ ರಿಸ್ಕ್. ಒಟ್ಟಿನಲ್ಲಿ ಅಪಘಾತ ತಡೆಯುವುದು ನಮ್ಮ ಕೈಯಲ್ಲಿಯೂ ಇದೆ. ಅದರೊಂದಿಗೆ ಸ್ಟೇರಿಂಗ್ ಕೈಯಲ್ಲಿ ಹಿಡಿದುಕೊಂಡವರ ಮನಸ್ಸು ರಸ್ತೆಯ ಮೇಲೆಯೂ ಇರಲಿ ಎಂದು ನಿರೀಕ್ಷೆ!
Leave A Reply