ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
ಸಾವರ್ಕರ್ ಕಾರ್ಯಕ್ರಮ ಕೊಟ್ಟ ಟೆನ್ಷನ್ ಇದು!
ಮೈಸೂರಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಸಾವರ್ಕರ್ ಪ್ರತಿಷ್ಟಾನದ ಕಾರ್ಯಕ್ರಮದ ಸೈಡ್ ಇಫೆಕ್ಟ್ ಇದು. ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದು ಬೆಂಬಲಿತರು ಎನ್ನಲಾದ ಎಡಪಂಥಿಯ ಮನಸ್ಥಿತಿಗಳು ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ವೇದಿಕೆಯಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಇದನ್ನು ಹಿಟ್ಲರ್ ಸರಕಾರ ಎಂದಿದ್ದಾರೆ. ವಿಷಯ ಇಷ್ಟೇ. ಯಾವುದೇ ಸರಕಾರ ಬರಲಿ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಕಾನೂನಿನ ಪರಿಧಿಯಲ್ಲಿ ನಮಗೆ ಬೇಕಾದ ಕಾರ್ಯಕ್ರಮಗಳನ್ನು ಆಚರಿಸುವ ಅವಕಾಶ ಖಂಡಿತ ಇದೆ. ಅದರಲ್ಲಿಯೂ ವೀರ್ ಸಾವರ್ಕರ್ ದೇಶದ ಹೆಮ್ಮೆ. ಈ ನೆಲ ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಗಲು ತಮ್ಮನ್ನು ಅರ್ಪಿಸಿಕೊಂಡ ಮಹಾನ್ ವ್ಯಕ್ತಿ. ಅಂತವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದು ಎಂದರೆ ಬಲಪಂಥಿಯರಿಗೆ ಖುಷಿ ಮತ್ತು ಎಡಪಂಥಿಯರಿಗೆ ಕಹಿ. ಇದನ್ನು ಸಿದ್ಧರಾಮಯ್ಯ ಬಣ ವಿರೋಧಿಸಿ ಆಡಬಾರದ ಆಟಗಳನ್ನು ಆಡಿದ ನಂತರ ರಾಜ್ಯಪಾಲರ ಕೃಪೆಯಿಂದ ಕಾರ್ಯಕ್ರಮ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ಆವಾಗಲೇ ಸೂಲಿಬೆಲೆಯವರು ಹೀಗೆ ಹೇಳಿದ್ದು. ಅದಕ್ಕೆ ಎಂಬಿಪಾ ರಿಯಾಕ್ಟ್ ಮಾಡಿದ್ದು. ಸಾವರ್ಕರ್ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮುಂದಿನ ಐದು ವರ್ಷಗಳಲ್ಲಿ ನಡೆಯುವುದು ಅಷ್ಟು ಸುಲಭವಲ್ಲ ಎನ್ನುವ ಸಂದೇಶ ಒಂದು ಕಾರ್ಯಕ್ರಮದಿಂದ ಹೋಗಿದೆ. ಹಿಟ್ಲರ್ ಕೂಡ ತನ್ನ ಆಡಳಿತದಲ್ಲಿ ಹೀಗೆ ತನಗೆ ಆಗದವರ ಬಗ್ಗೆ ಕೆಂಡ ಕಾರುತ್ತಿದ್ದ. ಹಾಗಾದರೆ ಅದು ಮತ್ತೆ ಪುನರಾವರ್ತನೆ ಆಗುತ್ತಿದೆಯಾ? ಇನ್ನು ಯಾರೂ ಕೂಡ ಬಲಪಂಥಿಯ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಾಧ್ಯವಿಲ್ಲವಾ? ಅಂತಹ ಒಂದು ಪ್ರಶ್ನೆ ರಾಜ್ಯದ ಕಾಂಗ್ರೆಸ್ ಸರಕಾರದ ಮುಂದೆ ಇದೆ. ಯಾಕೆಂದರೆ ನಿರೀಕ್ಷೆಗಿಂತ ಹೆಚ್ಚು ಸೀಟುಗಳನ್ನು ಪಡೆದುಕೊಂಡಿರುವುದರಿಂದ ಸಹಜವಾಗಿ ನಾಲ್ಕು ವರ್ಷದಲ್ಲಿ ಅಧಿಕಾರವಿಲ್ಲದ ಕೋಪ, ಆವೇಶ ಕಾಂಗ್ರೆಸ್ ಪಕ್ಷದಲ್ಲಿದೆ. ಅದನ್ನು ಸಚಿವ ಎಂಬಿ ಪಾಟೀಲ್ ಹೊರಗೆ ಹಾಕಿದ್ದಾರೆ.
ಅಸಹಾಯಕತೆಯಾ, ಮಿಂಚುವ ಅರ್ಜೆಂಟಾ?
ಅವರಿಗೆ ಸಡನ್ ಆಗಿ ರಾಜ್ಯದಲ್ಲಿ ಮಿಂಚುವ ಅನಿವಾರ್ಯತೆ ಹಿಂದಿಗಿಂತ ಹೆಚ್ಚಿದೆ. ಲಿಂಗಾಯತರನ್ನು ಸಚಿವ ಸಂಪುಟ ರಚನೆಯಲ್ಲಿ ಕಡೆಗಣಿಸಲಾಗಿದೆ ಎನ್ನುವ ಆರೋಪ ಸ್ವಪಕ್ಷದ ವಿನಯ್ ಕುಲಕರ್ಣಿಯಂತವರಿಂದ ಬಂದಿದೆ. ಸಿಕ್ಕಿದ ಖಾತೆಯಲ್ಲಿ ತೃಪ್ತಿ ಇದೆಯೋ ಇಲ್ಲವೋ ಎಂದು ಬಹಿರಂಗವಾಗಿ ಹೇಳಿದರೆ ಈಗ ಇರುವುದು ಕೂಡ ಎರಡು ವರ್ಷಗಳ ಬಳಿಕ ಉಳಿಯುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಯಾಕೆಂದರೆ ಎಂಬಿ ಪಾಟೀಲ್ ಇರುವುದು ಸಿದ್ದು ಬಣ. ಮುಂದಿನ ಐದು ವರ್ಷ ಸಿದ್ದು ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸ್ವತ: ಸೋನಿಯಾ ಗಾಂಧಿಯವರೇ ಹೇಳುತ್ತಿಲ್ಲ. ರಾಹುಲ್, ವೇಣು, ಸುರ್ಜೇವಾಲ ಸಹಿತ ಡಿಕೆಶಿ ಹಾಗೂ ಸಿದ್ದು ನಡುವೆ ನಡೆದ ಒಂದು ಆಂತರಿಕ ಒಪ್ಪಂದದಂತೆ ಸಿದ್ದು ಸಿಎಂ ಆಗಿದ್ದಾರೆ. ಈ ಐವರ ಹೊರತು ಎರಡೂವರೆ ವರ್ಷಗಳ ಬಳಿಕ ಸಿಎಂ ಸಿದ್ದುವಾ ಅಥವಾ ಡಿಕೆಶಿಯಾ ಎನ್ನುವುದು ಗೊತ್ತಿರುವುದು ಭಗವಂತನಿಗೆ ಮಾತ್ರ. ಆದರೂ ಎಂಬಿ ಪಾಟೀಲರಿಗೆ ತಡೆಯಲು ಸಾಧ್ಯವಾಗುತ್ತಿಲ್ಲ. ಎಲ್ಲಿಯವರೆಗೂ ಸಿದ್ದು ಸಿಎಂ ಆಗಿ ಇರುತ್ತಾರೋ ಅಲ್ಲಿಯವರೆಗೆ ಮಾತ್ರ ಅವರು ಸಚಿವರು. ಯಾವಾಗ ಡಿಕೆಶಿ ಸಿಎಂ ಆಗಿ ಪದಗ್ರಹಣ ಸ್ವೀಕರಿಸುತ್ತಾರೋ ಆವತ್ತು ಎಂಬಿಗೆ ವಿಧಾನಸೌಧದ ಮೂರನೇ ಮಹಡಿ ಹತ್ತಲು ಕೂಡ ಡಿಕೆ ಬ್ರದರ್ ಅವಕಾಶ ಕೊಡುವುದು ಡೌಟು. ಪಾಟೀಲರೇ ಸ್ವಲ್ಪ ಗಟ್ಟಿಯಾಗಿರಿ ಎಂದು ಡಿಕೆಸು ಕೊಟ್ಟಿರುವ ಎಚ್ಚರಿಕೆ ಇದೆಯಲ್ಲ, ಅದು ಎಂಬಿಗೆ ಈ ಜನ್ಮದಲ್ಲಿ ಸಾಕು. ಒಬ್ಬರು ವಿಪಕ್ಷದ ಸಂಸದರು ಒಂದು ರಾಜ್ಯ ಸರಕಾರದ ಸಚಿವರಿಗೆ ಕೊಟ್ಟಿರುವ ವಾರ್ನಿಂಗ್ ಎನ್ನುವುದಕ್ಕಿಂತ ಒಬ್ಬ ಸಂಭಾವ್ಯ ಮುಖ್ಯಮಂತ್ರಿಯ ಸ್ವಂತ ಸಹೋದರ ಕೊಟ್ಟಿರುವ ಎಚ್ಚರಿಕೆ ಎಂದು ಪರಿಗಣಿಸಬಹುದು. ಯಾಕೆಂದರೆ ಮುಂದಿನ ಐದು ವರ್ಷ ಸಿದ್ದುವೇ ಸಿಎಂ ಎಂದು ಎಂಬಿ ಹೇಳಿದ್ದಕ್ಕೆ ಜಸ್ಟ್ ವಾರ್ನಿಂಗ್ ಸಿಕ್ಕಿದೆ. ಅದೇ ಬೇರೆ ಯಾರಾದರೂ ಆರ್ಡಿನರಿ ಲೀಡರ್ ಹೇಳಿದ್ದರೆ ಇಷ್ಟೊತ್ತಿಗೆ ಅವನ ಅಡ್ರೆಸ್ ಹುಡುಕಬೇಕಾಗಿತ್ತು. ಆದರೂ ಡಿಕೆಸು ಕೊಟ್ಟ ಬಹಿರಂಗ ವಾರ್ನಿಂಗ್ ಎಂಬಿ ಗಂಟಲಿನಿಂದ ಕೆಳಗೆ ಇಳಿಯುತ್ತಿಲ್ಲ. ನಾನು ವಾರ್ನಿಂಗ್ ಸ್ವೀಕರಿಸುವಷ್ಟು ಚಿಕ್ಕವನಲ್ಲ. ನಾನೇನಿದ್ದರೂ ವಾರ್ನಿಂಗ್ ಕೊಡುವವನು ಎಂದು ಮಾಧ್ಯಮಗಳ ಮುಂದೆ ಎಂಬಿ ಹೇಳಿದರಾದರೂ ಆಂತರಿಕವಾಗಿ ಡಿಕೆಸು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದು ಅವರಿಗೆ ಅರಗಿಸಲು ಐದು ವರ್ಷ ಸಾಕಾಗುವುದಿಲ್ಲ ಎಂದು ಗೊತ್ತಿದೆ.
ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
ಅಂತಹ ಎಂಬಿಗೆ ತಾವು ಮಹಾನ್ ನಾಯಕ ಎಂದು ಅರ್ಜೆಂಟಾಗಿ ರಾಜ್ಯಕ್ಕೆ ತೋರಿಸಬೇಕಾಗಿದೆ. ಅದಕ್ಕಾಗಿ ಅವರು ಚಕ್ರವರ್ತಿ ಸೂಲಿಬೆಲೆಯವರು ಏನಾದರೂ ಹೆಚ್ಚು ಮಾತನಾಡಿದರೆ ಜೈಲಿಗೆ ಹಾಕಬೇಕಾಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಅಸಹಾಯಕತೆಯ ಹೇಳಿಕೆ ಅದು. ಏನ್ರೀ, ಪಾಟೀಲರೇ, ನಿಮಗೆ ಸುರೇಶ್ ಮಂಗಳಾರತಿ ಮಾಡಿದ್ರೇನಿ ಎಂದು ಯಾರಾದರೂ ಹಿರಿಯ ಸಚಿವರು ಕೇಳಿದರೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿ ಹೋದ ನಂತರ ಒಂದು ನಿಟ್ಟುಸಿರು ಇರುತ್ತದೆ ಅಲ್ಲ, ಅದರ ಅಭಿವ್ಯಕ್ತಿತನದ ಒಂದು ಭಾಗವಾಗಿ ಎಂಬಿ ಜೈಲಿಗೆ ಹಾಕುವ ಮಾತನಾಡಿದ್ದಾರೆ. ಅಷ್ಟಕ್ಕೂ ಚಕ್ರವರ್ತಿ ಭಯೋತ್ಪಾದಕರಲ್ಲ. ಅವರು ಯುವಕರನ್ನು ಸಂಘಟಿಸಿ ಉತ್ತಮ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಯುವಕ, ಯುವತಿಯರು ಒಟ್ಟಾಗಿ ಕೆರೆ, ನದಿ ಸ್ವಚ್ಚ ಮಾಡುವುದೋ, ಶಾಲೆಗಳನ್ನು ಅಂದಗೊಳಿಸುವುದೋ, ದೇವಾಲಯದ ಜೀರ್ಣೋದ್ಧಾರಕ್ಕೆ ಕೈಜೋಡಿಸುವುದೋ, ಸಾಹಿತ್ಯದ ಜಾತ್ರೆ ಮಾಡುವುದೋ ಕೇಳುವುದೇ ಸಂಭ್ರಮ. ಅಂತಹ ಮಾದರಿ ಕಾರ್ಯ ಮಾಡುತ್ತಿರುವ ಚಕ್ರವರ್ತಿಯವರನ್ನು ಜೈಲಿಗೆ ಹಾಕುವುದು ಬಿಡಿ, ಮುಟ್ಟಿದರೂ ಪರಿಸ್ಥಿತಿ ಚೆನ್ನಾಗಿರಲ್ಲ ಎಂದು ಯುವ ಬ್ರಿಗೇಡ್ ಯುವಕರು ಹೇಳಿಯಾಗಿದೆ. ಒಟ್ಟಿನಲ್ಲಿ ಚಕ್ರವರ್ತಿ ಬಗ್ಗೆ ಎಂಬಿ ಸಹಿತ ಕೆಲವು ಕಾಂಗ್ರೆಸ್ಸಿಗರಿಗೆ ಒಂದು ತೆರನಾದ ಹೆದರಿಕೆ ಇದೆ. ಮುಂದಿನ ಲೋಕಸಭಾ ಚುನಾವಣೆಗೆ ಸರಿಯಾಗಿ ಈ ಚಕ್ರವರ್ತಿ ಸೂಲಿಬೆಲೆಯವರನ್ನು ಜೈಲಿನೊಳಗೆ ಕೂರಿಸಿದರೆ ತಮ್ಮ ಹಾದಿ ಸುಗಮ ಎನ್ನುವ ಭಾವನೆ ರಾಜ್ಯ ಸರಕಾರದ ಕೆಲವರಲ್ಲಿ ಇದ್ದಿರಬಹುದು. ಅದಕ್ಕೆ ಎಂಬಿ ಪೀಠಿಕೆ ಹಾಕಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಸಿದ್ದು ಬದಲಾಗುವ ಹಂತದಲ್ಲಿ ಇದೇ ಎಂಬಿ ಸಾಮಾನ್ಯ ಶಾಸಕರಾಗಿಯೇ ಉಳಿಯಬೇಕು ಎನ್ನುವ ಪೀಠಿಕೆ ಸ್ವತ: ಡಿಕೆ ಮನೆಯಿಂದ ಹೋಗಿದೆ!
Leave A Reply