ಈ ಬಸ್ ಸ್ಟಾಪಿನಲ್ಲಿ ಊಟನೂ ಮಾಡಬಹುದು, ಶೌಚನೂ!
ಒಂದು ಬಸ್ ಸ್ಟಾಪ್ ನಿರ್ಮಾಣ ಮಾಡುವ ಉದ್ದೇಶ ಏನು ಎಂದು ನೀವು ಯಾರಿಗೆ ಕೇಳಿದರೂ ಸುಲಭವಾಗಿ ಸಿಗುವ ಉತ್ತರ ಬಸ್ ಗಳನ್ನು ನಿಲ್ಲಿಸಿ ಜನರನ್ನು ಹತ್ತಿಸಿ, ಇಳಿಸಲು ಇರುವ ವ್ಯವಸ್ಥೆ. ಹಾಗಾದರೆ ಒಂದು ಬಸ್ ಸ್ಟಾಪಿನಲ್ಲಿ ಏನು ವ್ಯವಸ್ಥೆ ಇರಬೇಕು ಎಂದು ಯಾರಿಗಾದರೂ ಕೇಳುವ ಮೊದಲು ಮಂಗಳೂರು ಮಹಾನಗರ ಪಾಲಿಕೆಯವರಿಗೆ ಕೇಳಿದರೆ ಒಂದಕ್ಕಿಂತ ಹೆಚ್ಚು ಉತ್ತರ ಬರುತ್ತದೆ. ಅಡುಗೆ ಮಾಡಲು ವ್ಯವಸ್ಥೆ ಇರಬೇಕು, ಮಲಗಲು ಅನುಕೂಲತೆ ಇರಬೇಕು. ರಾತ್ರಿ ಕುಡಿಯಲು ಅವಕಾಶ ಇರಬೇಕು. ಶೌಚಾಲಯ ಇರಬೇಕು. ಹೀಗೆ ಹಲವು ಉತ್ತರಗಳನ್ನು ಅವರು ಹೇಳಬಹುದು. ಇಷ್ಟೆಲ್ಲಾ ವ್ಯವಸ್ಥೆ ಇರುವ ಬಸ್ ಸ್ಟಾಪ್ ಮಂಗಳೂರಿನಲ್ಲಿ ಇರುತ್ತದೆಯಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಖಂಡಿತ ಇದೆ. ಇದೆಲ್ಲಾ ಪ್ರಯಾಣಿಕರಿಗೆ ಅಲ್ಲ. ಭಿಕ್ಷುಕರಿಗೆ, ಅಲೆಮಾರಿಗಳಿಗೆ, ಕುಡುಕರಿಗೆ, ಗಾಂಜಾ ವ್ಯಸನಿಗಳಿಗೆ, ಪುಂಡಪೋಕರಿಗಳಿಗೆ ಎಲ್ಲಾ ಅನುಕೂಲತೆಗಳನ್ನು ಮಾಡಿಕೊಡುವ ಪಾಲಿಕೆ ಇದೆ ಎಂದಾದರೆ ಅದು ಮಂಗಳೂರು ಮಹಾನಗರ ಪಾಲಿಕೆ ಮಾತ್ರ.
ಅದಕ್ಕೆ ಉದಾಹರಣೆಯಾಗಿ ಒಂದು ಫೋಟೋ ಇಲ್ಲಿ ಪೋಸ್ಟ್ ಮಾಡಿದ್ದೇವೆ. ಇದು ಮಂಗಳೂರಿನ ಕೆಪಿಟಿ ಬಳಿ ಇರುವ ಬಸ್ ಸ್ಟಾಪ್. ಇಲ್ಲಿಂದ ಕತ್ತು ಎತ್ತರಿಸಿ ನೋಡಿದರೆ ಕದ್ರಿ ಪೊಲೀಸ್ ಠಾಣೆ ಕಾಣುತ್ತದೆ. ಕೆಪಿಟಿ ಜಂಕ್ಷನ್ ಬಳಿಯೇ ಇರುವ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಆರಂಭದಲ್ಲಿಯೇ ಇರುವ ಬಸ್ ಸ್ಟಾಪಿದು. ಯಥಾಪ್ರಕಾರ ಈ ಬಸ್ ಸ್ಟಾಪನ್ನು ನೋಡಿದಾಗ ಜಾಹೀರಾತು ಬೋರ್ಡುಗಳು ಎಲ್ಲಾ ಎದ್ದು ಕಾಣುತ್ತವೆ. ನಮ್ಮ ಪಾಲಿಕೆಗೆ ಕೂಡ ಬೇಕಾಗಿರುವುದು ಅಷ್ಟೇ. ಅವರು ಬಸ್ ಸ್ಟಾಪ್ ನಿರ್ಮಾಣ ಮಾಡುವಾಗ ಮೊದಲು ನೋಡುವುದು ಜಾಹೀರಾತು ಹಾಕಲು ಎಲ್ಲೆಲ್ಲಿ ಸಾಧ್ಯವಿದೆ ಎನ್ನುವುದು ಮಾತ್ರ. ಅಷ್ಟಾದರೆ ಅವರ ಕೆಲಸ ಮುಗಿಯಿತು. ಒಂದು ವೇಳೆ ಅದು ಸ್ಮಾರ್ಟ್ ಸಿಟಿ ಫಂಡಿನಿಂದ ಮಾಡಿದ ಬಸ್ ಸ್ಟಾಪ್ ಆದರೆ 16 ರಿಂದ 20 ಲಕ್ಷದ ತನಕ ಖರ್ಚು ಬಿದ್ದಿರುತ್ತದೆ. ನೋಡಲು ವಿದೇಶದಲ್ಲಿ ರಾಂಪ್ ಮೇಲೆ ನಡೆಯುವ ಮಾಡೆಲ್ ಗಿಂತ ತೆಳ್ಳಗಾಗಿರುವ ಬಸ್ ಸ್ಟಾಪಿನಲ್ಲಿ ಯಾರು ಎಷ್ಟು ನುಂಗಿ ನೀರು ಕುಡಿದಿದ್ದಾರೋ ಎನ್ನುವುದು ಬೇರೆ ವಿಷಯ.
ಆದರೆ ಬಸ್ ಸ್ಟಾಪ್ ಎಂದ ಮೇಲೆ ಅದನ್ನು ಹಾಗೆ ಕಟ್ಟಿ ಬಿಟ್ಟರೆ ಸಾಕಾಗುವುದಿಲ್ಲ. ಅದನ್ನು ನಿರ್ವಹಣೆ ಮಾಡುವ ಅವಶ್ಯಕತೆ ಕೂಡ ಇದೆ. ಅದನ್ನು ಸ್ವಚ್ಚವಾಗಿಟ್ಟುಕೊಳ್ಳುವ ಜವಾಬ್ದಾರಿ ಕೂಡ ಪಾಲಿಕೆ ಮೇಲೆ ಇದೆ. ಮಳೆ ಬಂದಾಗ ಮಳೆನೀರಿಗೆ ಸ್ವಚ್ಚವಾಗಿಬಿಡುತ್ತದೆ ಎಂದು ಸುಮ್ಮನೆ ಕುಳಿತುಕೊಂಡರೆ ಆಗುವುದಿಲ್ಲ. ಅದನ್ನು ಆಗಾಗ ಗುಡಿಸಿ, ಒರೆಸಿ ಸ್ವಚ್ಚವಾಗಿಟ್ಟುಕೊಳ್ಳಬೇಕು. ಆದರೆ ಅದನ್ನು ನೋಡಿಕೊಳ್ಳುವವರು ಯಾರು?
ಗಲೀಜು ಮಾಡಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ!!
ಅದಕ್ಕಾಗಿ ಇವತ್ತು ಜಾಗೃತ ಅಂಕಣದಲ್ಲಿ ಈ ವಿಷಯ ಬರೆಯಬೇಕಾಗಿದೆ. ಇಲ್ಲಿಯೇ ಅಡುಗೆ ಮಾಡಿ, ಇಲ್ಲಿಯೇ ಪಾತ್ರೆ ತೊಳೆದು ಝಂಡಾ ಊರುವವರು ಮೊದಲು ಯಾರಾದರೂ ಜೋರು ಮಾಡುತ್ತಾರಾ ಎನ್ನುವ ಆತಂಕದಿಂದ ಇರುತ್ತಾರೆ. ಆದರೆ ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಆದ್ದರಿಂದ ಇಂತವರು ಅಲ್ಲಿಯೇ ತಮ್ಮ ಡೇರೆ ಹಾಕಿ ಇದ್ದುಬಿಡುತ್ತಾರೆ. ಕೆಲವೇ ದಿನಗಳಲ್ಲಿ ಆ ಬಸ್ ಸ್ಟಾಪಿನಲ್ಲಿ ಯಾರೂ ಪ್ರಯಾಣಿಕರು ನಿಲ್ಲುವ ಪರಿಸ್ಥಿತಿ ಇರುವುದಿಲ್ಲ. ಯಾಕೆಂದರೆ ಅಷ್ಟು ಗಲೀಜು ಅಲ್ಲಿ ತುಂಬಿರುತ್ತದೆ. ಕೆಲವೇ ದಿನಗಳ ನಂತರ ಪ್ರಯಾಣಿಕರು ಬಸ್ ಸ್ಟಾಪಿನ ಹೊರಗೆ ನಿಲ್ಲಬೇಕಾಗುತ್ತದೆ. ಗಲೀಜು ಮತ್ತು ಅದನ್ನು ಮಾಡಿದವರು ಮಾತ್ರ ಬಸ್ ಸ್ಟಾಪಿನ ಒಳಗೆ ಇರುತ್ತಾರೆ. ಐದು ನಿಮಿಷ ಬಸ್ ಸ್ಟಾಪಿನಲ್ಲಿ ನಿಲ್ಲುವ ನಮಗ್ಯಾಕೆ ಇದನ್ನು ಸರಿಪಡಿಸುವ ಉಸಾಬರಿ ಎಂದು ಯಾರೂ ಏನೂ ಹೇಳಲು ಹೋಗುವುದಿಲ್ಲ. ಯಾರಾದರೂ ಒಂದು ವೇಳೆ ದೂರು ಕೊಡಲು ಬಯಸಿದರೂ ಯಾರಿಗೆ ಕೊಡಬೇಕು ಎಂದು ಗೊತ್ತಿರುವುದಿಲ್ಲ. ಒಂದು ವೇಳೆ ಗೊತ್ತಿದ್ದರೂ ಪಾಲಿಕೆಯಲ್ಲಿ ದೂರು ಕೊಟ್ಟ ನಂತರ ಅವರು ಒಂದು ಸಲ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ಹೇಳಿ ಓಡಿಸಬಹುದು. ಆದರೆ ಕೆಲವು ದಿನಗಳ ಬಳಿಕ ಅಲ್ಲಿ ಪರಿಸ್ಥಿತಿ ಹಿಂದಿನಂತೆ ಮುಂದುವರೆಯುತ್ತದೆ. ನಂತರ ಇನ್ನೊಮ್ಮೆ ಪಾಲಿಕೆಗೆ ಯಾರಾದರೂ ಪುಣ್ಯಾತ್ಮರು ದೂರು ಕೊಟ್ಟರೂ ಅದನ್ನು ಪೊಲೀಸರಿಗೆ ಹೇಳಿದ್ದೇವೆ. ಅವರು ಸರಿ ಮಾಡಬೇಕು ಎನ್ನುವ ಉತ್ತರ ಬರುತ್ತದೆ. ಪೊಲೀಸಿನವರಿಗೆ ಹೇಳಿದರೆ ಅದು ಪಾಲಿಕೆ ಕಡೆಯಿಂದ ನೋಡಬೇಕು ಎನ್ನುವ ಉತ್ತರ ಬರುತ್ತದೆ. ಹೀಗೆ ಅವರು ನೋಡಬೇಕು ಎಂದು ಇವರು. ಇವರು ನೋಡಬೇಕು ಎಂದು ಅವರು. ನಡೆಯುತ್ತಲೇ ಇರುತ್ತದೆ. ಅದರ ನಡುವೆ ಅಲ್ಲಿ ಗಲೀಜು ಮುಂದುವರೆಯುತ್ತದೆ.
ರಾತ್ರಿ ಈ ಬಸ್ ಸ್ಟಾಪ್ ಒಳಗೆ ಏನು ನಡೆಯುತ್ತದೆ!
ಇಂತಹ ಬಸ್ ಸ್ಟಾಪಿನಲ್ಲಿ ರಾತ್ರಿ ವೇಳೆ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಯಲು ಅಗತ್ಯವಾಗಿ ಮಾಡಬೇಕಾಗಿರುವುದು ಅಲ್ಲಿ ರಾತ್ರಿ ಹೊತ್ತಿನಲ್ಲಿಯೂ ಬಹಳ ಬ್ರೈಟಾಗಿರುವ ವಿದ್ಯುತ್
ಸಂಪರ್ಕದ ವ್ಯವಸ್ಥೆ ಮಾಡಬೇಕಾಗಿರುವುದು. ಬಸ್ ಸ್ಟಾಪಿನ ಜಾಹೀರಾತು ಫಲಕದಲ್ಲಿ ಡೀಮ್ ಆಗಿ ಅದು ಎಷ್ಟು ಕಾಣಬೇಕೋ ಅಷ್ಟು ಲೈಟ್ ಇರುತ್ತದೆ. ಆದರೆ ಬಸ್ ಸ್ಟಾಪಿನ ಒಳಗೆ ಬರೀ ಕತ್ತಲು. ದುಬೈ ರಾಷ್ಟ್ರದಲ್ಲಿ ಇರುವಂತೆ ಬಸ್ ಸ್ಟಾಪಿನ ಒಳಗೆ ಏರ್ ಕಂಡೀಷನ್ ವ್ಯವಸ್ಥೆ ಮಾಡಿ ಎಂದು ಹೇಳುವುದಿಲ್ಲ. ಕನಿಷ್ಟ ಉತ್ತಮ ಲೈಟ್ ಬೀಳುವಂತಹ ವ್ಯವಸ್ಥೆ ಮಾಡಿದರೆ ರಾತ್ರಿ ವೇಳೆ ಯಾರೂ ಕೂಡ ಬಸ್ ಸ್ಟಾಪನ್ನು ಕೆಟ್ಟ ಉದ್ದೇಶಗಳಿಗೆ ಬಳಸುವುದಿಲ್ಲ. ಅದರೊಂದಿಗೆ ನೈಟ್ ಬೀಟ್ ನಲ್ಲಿ ಹೋಗುವ ಪೊಲೀಸರಿಗೂ ಬಸ್ ಸ್ಟಾಪಿನಲ್ಲಿ ಏನಾದರೂ ನಡೆಯುತ್ತಿದ್ದರೆ ಅದು ಎದ್ದು ಕಾಣುತ್ತದೆ. ಈಗಿನ ಮೇಯರ್ ವಾರ್ಡಿಗೆ ಹೋಗಿ ಬರುವ ರಸ್ತೆ ಇದು. ಉಳಿದದ್ದು ಅವರಿಷ್ಟ!
Leave A Reply