ಬಿಳಿಯಾನೆ ಆಗಲಿರುವ ಸ್ವಚ್ಚತೆ!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನರ ತೆರಿಗೆಯ ಹಣ ದೋಚಲು ವ್ಯವಸ್ಥಿತವಾಗಿರುವ ಸಂಚು ನಡೆಯುತ್ತಿದೆ. ಒಂದು ವೇಳೆ ಇದಕ್ಕೆ ಅಂಕುಶ ಹಾಕದೇ ಹೋದರೆ ನಮ್ಮ ಪಾಲಿಕೆ ಅವ್ಯವಸ್ಥೆ ಏನಾಗುತ್ತದೆ ಎಂದು ಬೆಂಗಳೂರನ್ನು ನೋಡಿ ಕಲಿಯಬಹುದು. ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದಂತೆ ಸರಕಾರಿ ಜಾಗವನ್ನು ಅಡವು ಇಟ್ಟು ಸಾಲಸೋಲ ಮಾಡಬೇಕಾಗುವ ಪರಿಸ್ಥಿತಿ ಬಂದರೂ ಬರಬಹುದು. ಇದಕ್ಕೆಲ್ಲಾ ಕಾರಣಗಳೇನು? ಅಂಕಿ ಸಂಖ್ಯೆಗಳ ಮೂಲಕ ಅದನ್ನು ವಿವರಿಸುತ್ತಾ ಹೋಗುತ್ತೇನೆ.
ಬಿಳಿಯಾನೆ ಆಗಲಿರುವ ಸ್ವಚ್ಚತೆ!
ಮನಪಾದಲ್ಲಿ 360 ಖಾಯಂ ಸ್ವಚ್ಚತಾ ಸಿಬ್ಬಂದಿಗಳು ಇದ್ದಾರೆ. ಇವರೊಂದಿಗೆ 429 ನೌಕರರನ್ನು ಪಾಲಿಕೆ ಕಡೆಯಿಂದ ನೇರಪಾವತಿ ಮೂಲಕ ವೇತನವನ್ನು ನೀಡಿ ಉದ್ಯೋಗಕ್ಕೆ ನೇಮಿಸಲಾಗಿದೆ. ಎರಡೂ ಸೇರಿಸಿದರೆ ಇದೇ ಒಟ್ಟು 789 ಜನರಾಗುತ್ತಾರೆ. ಪ್ರತಿಯೊಬ್ಬರಿಗೂ ತಲಾ 21000 ರೂಪಾಯಿಗಳನ್ನು ವೇತನದ ರೂಪದಲ್ಲಿ ನೀಡಲಾಗುತ್ತಿದೆ. ಈ ವೆಚ್ಚವೇ ತಿಂಗಳಿಗೆ ಅಂದಾಜು 1 ಕೋಟಿ 65 ಲಕ್ಷ ರೂಪಾಯಿ 69 ಸಾವಿರ ರೂಪಾಯಿ ಆಗುತ್ತದೆ. ಇದು ಈಗಾಗಲೇ ನಮ್ಮ ನಗರದ ಸ್ವಚ್ಚತೆ ಮೇಲೆ ನಮ್ಮ ಪಾಲಿಕೆ ಖರ್ಚು ಮಾಡುತ್ತಿರುವ ಹಣ. ಇದರೊಂದಿಗೆ ಈಗ ಹೊಸದಾಗಿ 27 ಕೋಟಿ ರೂ ಖರ್ಚು ಮಾಡಿ ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ವಾಹನಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಾಲಿಕೆಯನ್ನು ನಾಲ್ಕು ಭಾಗ ಮಾಡಿ ನಾಲ್ಕು ಭಾಗಗಳಿಗೂ ಈ ನೂತನ ಯಂತ್ರೋಪಕರಣಗಳ ವಾಹನಗಳನ್ನು ಹಂಚುವ ಕೆಲಸ ನಡೆಯಲಿದೆ. ಇದಕ್ಕಾಗಿ ಟೆಂಡರ್ ಗಳನ್ನು ಕರೆಯಲಾಗಿದೆ. ನಾಲ್ಕು ವಿಭಾಗಗಳಿಗೆ ನಾಲ್ಕು ಟೆಂಡರ್ ಗಳನ್ನು ನೀಡಲಾಗುತ್ತದೆ. ಯಾರು ಟೆಂಡರ್ ಪಡೆದುಕೊಳ್ಳುತ್ತಾರೋ ಅವರು 310 ಜನರನ್ನು ಹೊಸದಾಗಿ ಕೆಲಸಕ್ಕೆ ನೇಮಿಸಿಕೊಳ್ಳಬೇಕಾಗುತ್ತದೆ. ನಾಲ್ಕು ವಿಭಾಗಗಳಿಗೆ ಒಬ್ಬರೇ ಟೆಂಡರ್ ಪಡೆದುಕೊಳ್ಳಬಹುದು ಅಥವಾ ನಾಲ್ಕು ಜನ ಬೇರೆಯವರು ಕೂಡ ಸೇರಿ ಟೆಂಡರ್ ಪಡೆದುಕೊಳ್ಳಲು ಸಾಧ್ಯವಿದೆ. ಗುತ್ತಿಗೆಯನ್ನು ವಹಿಸಿಕೊಂಡವರು ನೇಮಿಸಿರುವ 310 ಜನರು ಮುಖ್ಯವಾಗಿ ಪಾಲಿಕೆ ನೀಡಲಿರುವ ವಾಹನಗಳ ಚಾಲಕರಾಗಿ ಮತ್ತು ಸೂಪರ್ ವೈಸರ್ ಗಳಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ತ್ಯಾಜ್ಯ ವಾಹನಗಳಿಗೆ ಡಿಸೀಲ್ ಖರ್ಚು ಮತ್ತು ನಿರ್ವಹಣೆಯನ್ನು ಗುತ್ತಿಗೆದಾರರು ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಪಾಲಿಕೆ ಗುತ್ತಿಗೆದಾರರಿಗೆ ಹಣ ನೀಡಬೇಕಾಗುತ್ತದೆ. ಆ ಹಣವೇ ಸರಾಸರಿ ತಿಂಗಳಿಗೆ ಒಂದೂವರೆ ಕೋಟಿ ರೂಪಾಯಿಯಷ್ಟು ವೆಚ್ಚ ಬರಬಹುದು. ಪಾಲಿಕೆ ನೌಕರರ ಸಂಬಳ, ವಾಹನ ಖರೀದಿಯ ಕೋಟ್ಯಾಂತರ ರೂಪಾಯಿ, ಗುತ್ತಿಗೆದಾರರಿಗೆ ಕೋಟಿ ರೂ ಇದರೊಂದಿಗೆ ಇನ್ನೊಂದು ಇದೆ.
ಹೌದು, ಇಷ್ಟೇ ಅಲ್ಲ, ಗುತ್ತಿಗೆದಾರರಿಗೆ ಇನ್ನೊಂದು ಜಾಕ್ ಪಾಟ್ ಇದೆ. ಅದೇನೆಂದರೆ ಅವರಿಗೆ ಉತ್ತಮ ಸೇವಾ ಪ್ರದರ್ಶನ ಪ್ರೋತ್ಸಾಹ ಧನವನ್ನು ಕೂಡ ನೀಡುವ ರೂಪುರೇಶೆ ಸಿದ್ಧವಾಗಿದೆ. ಅಂದರೆ ಅವರು ಸಂಗ್ರಹಿಸಿದ ತ್ಯಾಜ್ಯಕ್ಕೆ ತೂಕದ ಆಧಾರದಲ್ಲಿ ಮತ್ತೆ ಸಂಭಾವನೆಯನ್ನು ನೀಡಲಾಗುತ್ತದೆ. ಹೀಗೆ ಹೆಚ್ಚುವರಿಯಾಗಿ ಅವರಿಗೆ ಮತ್ತೆ ಆದಾಯ ಸಿಗುತ್ತದೆ. ಜಗತ್ತಿನಲ್ಲಿಯೇ ಒಂದು ನಗರದಲ್ಲಿ ಇಷ್ಟು ಕೋಟಿ ಖರ್ಚು ಮಾಡುವ ಒಂದು ಪಾಲಿಕೆ ಇದ್ದರೆ ಅದು ಮಂಗಳೂರು ಮಹಾನಗರ ಪಾಲಿಕೆ ಮಾತ್ರ ಎನ್ನುವುದು ಈಗ ಕಾಣುತ್ತಿರುವ ಆಶ್ಚರ್ಯ.
ಅಡವು ಇಡುವ ಪರಿಸ್ಥಿತಿ ಖಂಡಿತ!
ನಮ್ಮ ಪಾಲಿಕೆ ವ್ಯಾಪ್ತಿಯ ರಸ್ತೆ ಗುಡಿಸುವ ಜವಾಬ್ದಾರಿ ಈಗಾಗಲೇ ತಿಂಗಳಿಗೆ 21000 ರೂ ಸಂಬಳ ಪಡೆಯುತ್ತಿರುವ ಸ್ವಚ್ಚತಾ ಕಾರ್ಮಿಕರದ್ದು. ಅದರೊಂದಿಗೆ ಕಸ ಸಂಗ್ರಹವನ್ನು ಅವರು ಮಾಡಬೇಕು. ಅಲ್ಲಲ್ಲಿ ರಸ್ತೆಗಳ ಬದಿಗಳಲ್ಲಿ ಬೆಳೆದಿರುವ ಹುಲ್ಲು, ಕುರುಚಲು ಗಿಡಗಳನ್ನು ಅವರು ತೆಗೆಯಬೇಕು. ಅವರೆಷ್ಟು ಮಾಡುತ್ತಿದ್ದಾರೆ, ಬಿಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ ಈ ಎಲ್ಲವೂ ಸೇರಿದರೆ ಪಾಲಿಕೆಗೆ ತಿಂಗಳಿಗೆ ಎಷ್ಟು ಖರ್ಚು ಬೀಳುತ್ತದೆ ಎನ್ನುವುದು ಜನಸಾಮಾನ್ಯರಿಗೆ ಗೊತ್ತಾಗಬೇಕಿರುವ ವಿಷಯ. ಎಲ್ಲವೂ ಸೇರಿ 4 – 5 ಕೋಟಿ ರೂಪಾಯಿ ಆಸುಪಾಸಿನಲ್ಲಿ ಪ್ರತಿ ತಿಂಗಳು ಪಾಲಿಕೆಯ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ. ಇಷ್ಟೆಲ್ಲಾ ಒಂದು ತಿಂಗಳಿಗೆ ಮಾಡಿದರೆ ವರ್ಷಕ್ಕೆ ಎಷ್ಟಾಗುತ್ತದೆ. ಪಾಲಿಕೆಯ ಬಜೆಟ್ ನ ಸಿಂಹಪಾಲು ಈ ಸ್ವಚ್ಚತೆಗೆ ಇಡಲಾಗುತ್ತದೆಯಾ? ಇದು ಬೇರೆ ಎಲ್ಲಿಯಾದರೂ ಹೀಗೆ ಇದೆಯಾ? ಇಷ್ಟೆಲ್ಲಾ ವ್ಯಯ ಮಾಡಿದರೆ ಮಂಗಳೂರು ಸಿಂಗಾಪುರ ಆಗುತ್ತದೆಯಾ?ಇದು ಅನುಷ್ಟಾನಕ್ಕೆ ಬರುವ ಮೊದಲು ಪಾಲಿಕೆ ವ್ಯಾಪ್ತಿಯ ಶಾಸಕದ್ವಯರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿಯವರು ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಜನರ ತೆರಿಗೆಯ ಹಣ ಎಲ್ಲಿಯೂ ಪೋಲಾಗದಂತೆ ನೋಡಿಕೊಳ್ಳಬೇಕಾಗಿ ಸವಿನಯ ವಿನಂತಿ. ಇಲ್ಲದಿದ್ರೆ ಸ್ವಚ್ಚತೆಯ ಹೆಸರಿನಲ್ಲಿ ಪಾಲಿಕೆ ಕೋಟ್ಯಾಂತರ ರೂಪಾಯಿ ಸಾಲ ಮಾಡಬೇಕಾಗುತ್ತದೆ. ಅದಕ್ಕಾಗಿ ನೆಹರೂ ಮೈದಾನವನ್ನು ಅಡವು ಇಡಬೇಕಾಗುತ್ತದೆ. ಪಾಲಿಕೆಯಲ್ಲಿ ಯಾರು ಆಡಳಿತಕ್ಕೆ ಬಂದರೂ ಕಥೆ ಇಷ್ಟೇನಾ
Leave A Reply