ಪಾಲಿಕೆಯ ಅಧಿಕಾರಿಗಳಿಗೆ ಬುದ್ಧಿ ಬರುವುದು ಯಾವಾಗ?
ಪ್ರತಿ ದಿನದ ಸಂಕಷ್ಟಕ್ಕೆ ಅಳುವುದ್ಯಾರು?
ಮಂಗಳೂರು ನಗರ ಪಾಲಿಕೆಯ ಹೃದಯ ಎಂದರೆ ಅಂದರೆ ಅದು ಬಂದರು ಪ್ರದೇಶ. ಇಡೀ ಮಂಗಳೂರಿನಲ್ಲಿ ಅತ್ಯಂತ ಹೆಚ್ಚು ಚಟುವಟಿಕೆಯಿಂದ ಇರುವ ಏರಿಯಾ ಅಂದರೆ ಅದು ಬಂದರು. ಅಲ್ಲಿ ಎಷ್ಟು ಸಲ ಕಸದ ರಾಶಿ ತೆಗೆದರೂ ಅಲ್ಲಿ ಕೆಲವೇ ಗಂಟೆಗಳಲ್ಲಿ ಮತ್ತೆ ರಾಶಿ ಬೀಳುತ್ತದೆ. ಅದು ಗೊತ್ತಿಲ್ಲದ ಯಾರಾದರೂ ಪಾಲಿಕೆಯಲ್ಲಿ ಇದ್ದರೆ ಅವರನ್ನು ಪಾಲಿಕೆಯಿಂದ ಬೇರೆ ಎಲ್ಲಿಯಾದರೂ ಕಳುಹಿಸಿಬಿಡುವುದು ಉತ್ತಮ. ಆದರೂ ಪಾಲಿಕೆಯಲ್ಲಿ ಅಂತವರು ಇದ್ದಾರೆ. ಇನ್ನು ನಮ್ಮ ದುರಾದೃಷ್ಟ ಅಂತವರು ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ಇದ್ದಾರೆ. ಅವರಿಗೆ ಹೆಲ್ತ್ ಇನ್ಸಪೆಕ್ಟರ್ ಎಂದು ಕರೆಯಲಾಗುತ್ತಿದೆ. ಇವರಿಂದ ಮಂಗಳೂರಿನ ಬಂದರು ಏರಿಯಾ ಆಗಾಗ ಕಸದ ಕೊಂಪೆಯಾಗಿ ಬದಲಾಗುತ್ತಾ ಇರುತ್ತದೆ.
ಒಬ್ಬ ಹೆಲ್ತ್ ಇನ್ಸಪೆಕ್ಟರ್ ಕರ್ತವ್ಯ ಏನು?
ಪ್ರತಿ ಬಾರಿ ಈ ಏರಿಯಾದ ಕಾರ್ಮಿಕ ಸಂಘದವರು ಇಲ್ಲಿ ವಾರಗಟ್ಟಲೆ ತೆಗೆಯದ ಕಸದ ರಾಶಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆಂಟೋನಿ ವೇಸ್ಟ್ ನವರು ಬಂದು ಕಸವನ್ನು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ನಂತರ ಮತ್ತದೇ ಹಣೆ ಬರಹ. ಇದಕ್ಕೆ ಪರಿಹಾರ ಇಲ್ಲವೇ? ಇದೆ. ಪಾಲಿಕೆಯಲ್ಲಿ ಆರೋಗ್ಯ ವಿಭಾಗದಲ್ಲಿ ಈಗ ಇರುವ ಹೆಲ್ತ್ ಇನ್ಸಪೆಕ್ಟರ್ ಅವರನ್ನು ಇಡೀ ದಿನ ಈ ಕಸದ ರಾಶಿಯ ಮುಂದೆ ಕುಳ್ಳಿರಿಸಿ ಈ ಗಲೀಜು ವಾಸನೆ ಹೀರುವಂತೆ ಮಾಡುವುದು. ಆಗ ಅವರಿಗೆ ಬುದ್ಧಿ ಬರುತ್ತದೆ. ಇಲ್ಲದಿದ್ದರೆ ಬಂದರಿನ ಕಾರ್ಮಿಕರ, ವ್ಯಾಪಾರಿಗಳ, ನಾಗರಿಕರ ಕಷ್ಟ ಅವರಿಗೆ ಗೊತ್ತಾಗುವುದಿಲ್ಲ.
ಒಬ್ಬ ಹೆಲ್ತ್ ಇನ್ಸಪೆಕ್ಟರ್ ಕರ್ತವ್ಯ ಏನು? ಪಾಲಿಕೆಯ ಅರವತ್ತು ವಾರ್ಡುಗಳನ್ನು ತಲಾ ಇಂತಿಷ್ಟು ಎಂದು ಎಲ್ಲಾ ಹೆಲ್ತ್ ಇನ್ಸಪೆಕ್ಟರ್ ಗಳ ನಡುವೆ ಹಂಚಿಯಾಗಿದೆ. ಅವರು ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಆಯಾ ವಾರ್ಡುಗಳಲ್ಲಿ ಸಂಚರಿಸಿ ಸ್ವಚ್ಚತೆಯನ್ನು ನೋಡಬೇಕಾಗುತ್ತದೆ. ಮಧ್ಯಾಹ್ನ ಊಟ ಮಾಡಿ 3 ಗಂಟೆಗೆ ಪಾಲಿಕೆಯ ಕಚೇರಿಗೆ ಬಂದು ಹೆಲ್ತ್ ಆಫೀಸರ್ ಅವರಿಗೆ ವರದಿ ನೀಡಬೇಕಾಗುತ್ತದೆ. ಇನ್ನು ಬಂದರು ಏರಿಯಾ ಪಕ್ಕಾ ಕಮರ್ಶಿಯಲ್. ಅಲ್ಲಿ ಮನೆಗಳಿಲ್ಲ. ಇನ್ನು ಇಲ್ಲಿನ ಅಂಗಡಿಯವರು ಟ್ರೇಡ್ ಲೈಸೆನ್ಸ್ ಮಾಡಿಸುವಾಗಲೇ ತ್ಯಾಜ್ಯದ ಶುಲ್ಕವನ್ನು ಅದರೊಂದಿಗೆ ಕಟ್ಟಿರುತ್ತಾರೆ. ಅಲ್ಲಿ ತ್ಯಾಜ್ಯದ ಒತ್ತಡ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವ ಅಂದಾಜು ಹೆಲ್ತ್ ಆಫೀಸರ್ ಅವರಿಗಾದರೂ ಇರಲೇಬೇಕು. ಯಾರಿಗೂ ಈ ಬಗ್ಗೆ ಕ್ಯಾರೇ ಇಲ್ಲ ಎಂದ ಮೇಲೆ ಏನು ಮಾಡಬಹುದು?
ಪಾಲಿಕೆಯ ಅಧಿಕಾರಿಗಳಿಗೆ ಬುದ್ಧಿ ಬರುವುದು ಯಾವಾಗ?
ಅವರಿಗೆ ನೋಟಿಸು ಕೊಡಬೇಕು. ಹೆಲ್ತ್ ಇನ್ಸಪೆಕ್ಟರ್, ಪರಿಸರ ಅಭಿಯಂತರರಿಗೆ ನೋಟಿಸು ಕೊಟ್ಟು ಈ ನಿರ್ಲಕ್ಷ್ಯಕ್ಕೆ ಕಾರಣ ಕೇಳಬೇಕು.
ಇನ್ನು ಎಷ್ಟೋ ಏರಿಯಾಗಳಲ್ಲಿ ಮನೆಯ ಕಸಗಳನ್ನು ತೊಟ್ಟೆಯಲ್ಲಿ ಹಾಕಿ ರಸ್ತೆಬದಿ ಬಿಸಾಡಿಹೋಗುತ್ತಾರೆ. ಅಲ್ಲಿ ಕೂಡ ಹೆಲ್ತ್ ಇನ್ಸಪೆಕ್ಟರ್ ಹೋಗಿ ಅದರ ಬಗ್ಗೆ ಪರಿಶೀಲನೆ ನಡೆಸಬೇಕು. ಯಾಕೆ ಹಾಗೆ ಮಾಡಲಾಗುತ್ತಿದೆ ಎಂದು ವಿಚಾರಿಸಬೇಕು. ಏನಾದರೂ ದಂಡ ಹಾಕಬಹುದು ಎಂದು ಯಾರೂ ಮಾಹಿತಿ ಕೊಡಲು ಹೋಗುವುದಿಲ್ಲ. ಆದರೂ ಅಂತಹ ಘಟನೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಇನ್ನು ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳು ಹಾಕಲ್ಪಟ್ಟಿವೆ. ಅಪಘಾತಗಳಾದಾಗ ಸಿಸಿಟಿವಿ ದೃಶ್ಯಗಳು ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಅದೇ ರೀತಿಯಲ್ಲಿ ಈ ತ್ಯಾಜ್ಯ ಬಿಸಾಡಿ ಹೋಗುವವರದ್ದು ವಿಡಿಯೋ ನಾಲ್ಕು ಸಲ ವೈರಲ್ ಆದರೆ ನಂತರ ಅವರಿಗೂ ಬುದ್ಧಿ ಬರುತ್ತದೆ. ಆದರೆ ಪಾಲಿಕೆಯ ಅಧಿಕಾರಿಗಳಿಗೆ ಬುದ್ಧಿ ಬರುವುದು ಯಾವಾಗವೋ ದೇವರಿಗೆ ಗೊತ್ತು!!
Leave A Reply