ಪ್ರಧಾನಿ ಹುದ್ದೆ ಹೊರತುಪಡಿಸಿ ಉಳಿದೆಲ್ಲಾ ಸ್ಥಾನ ಅಲಂಕರಿಸಿದ್ದ ಕರ್ನಾಟಕದ ಹಿರಿಯ ರಾಜಕಾರಣಿ ಎಸ್ ಎಂಕೆ ಇನ್ನಿಲ್ಲ!
ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ 1960 ರಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದ ಎಸ್ ಎಂ ಕೃಷ್ಣ ಅವರು ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ 1968 ರಲ್ಲಿ ಮಂಡ್ಯದಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದಿದ್ದರು. ನಂತರ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಮರು ಆಯ್ಕೆಗೊಂಡಿದ್ದರು.
ಆ ಬಳಿಕ ಮತ್ತೆ ಮಂಡ್ಯ ಲೋಕಸಭೆಗೆ ಆಯ್ಕೆಯಾಗಿದ್ದ ಕೃಷ್ಣ 1985 ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದರು. 1999 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಾಂಚಜನ್ಯ ಯಾತ್ರೆಯ ಮೂಲಕ ಶಂಖ ಊದಿ ಚುನಾವಣಾ ರಣರಂಗದಲ್ಲಿ ಧುಮುಕಿದ ಕೃಷ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಸಹಜವಾಗಿ ಐದು ವರ್ಷ ಯಾವುದೇ ಅಡೆತಡೆ ಇಲ್ಲದೇ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆಂದು ಘೋಷಿಸಿದ್ದರು. ಆದರೆ 2004 ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದಾಗ ಜಾತ್ಯಾತೀತ ಜನತಾದಳದೊಂದಿಗೆ ಸರಕಾರ ರಚಿಸಬೇಕಾಗಿ ಬಂದಾಗ ಕೃಷ್ಣ ಸಿಎಂ ಆಗಲು ದೇವೆಗೌಡರು ಒಪ್ಪದೇ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು.
ಆ ಬಳಿಕ ಕೃಷ್ಣ ಅವರನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದ ಕಾರಣ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಳುಹಿಸಿಕೊಡಲಾಗಿತ್ತು. ನಂತರ 2008 ರಲ್ಲಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ ಕೃಷ್ಣ ಅವರು ಮನಮೋಹನ್ ಸಿಂಗ್ ಅವರ ಸಚಿವ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದರು.
ಆ ಬಳಿಕ ಯುಪಿಎ ಅಧಿಕಾರ ಕಳೆದುಕೊಂಡು ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ನಿಧಾನವಾಗಿ ಅವರು ಬದಿಗೆ ಸರಿಯಲಾರಂಭಿಸಿದರು. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಶಕೆ ಆರಂಭಗೊಂಡಿದ್ದ ಕಾರಣ ಇಲ್ಲಿಯೂ ಅವರಿಗೆ ಅಷ್ಟಾಗಿ ಪ್ರಾತಿನಿಧ್ಯ ಸಿಗಲಿಲ್ಲ. ಇದರಿಂದ ಆಕ್ರೋಶಿತಗೊಂಡ ಕೃಷ್ಣ ಅವರು ಭಾರತೀಯ ಜನತಾ ಪಾರ್ಟಿಯ ಸಂಪರ್ಕಕ್ಕೆ ಬಂದರು. ಆದರೆ ರಾಜಕಾರಣದಲ್ಲಿ ಎಲ್ಲವನ್ನು ಅನುಭವಿಸಿದ್ದ ಕೃಷ್ಣ ಅವರಿಗೆ ಬಿಜೆಪಿಯಿಂದ ಕೊಡುವಂತದ್ದು ಏನೂ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಚುನಾವಣಾ ಪ್ರಚಾರದಲ್ಲಿ, ಸುದ್ದಿಗೋಷ್ಟಿಯಲ್ಲಿ ಬಳಸಿದ್ದು ಬಿಟ್ಟರೆ ಕೃಷ್ಣ ಅವರು ರಾಜಕೀಯ ಜೀವನದ ಸಂಧ್ಯಾ ಕಾಲಕ್ಕೆ ಬಂದಾಗಿತ್ತು.
ಅಷ್ಟೊತ್ತಿಗಾಗಲೇ ಅವರಿಗೆ ವಯೋ ಸಹಜವಾಗಿ ಆರೋಗ್ಯ ಕೈಕೊಟ್ಟಿತ್ತು. ಅದರ ನಂತರ ಬಿಜೆಪಿ ನಾಯಕರು ಮನೆಗೆ ಭೇಟಿ ಕೊಟ್ಟರೆ ಮಾತನಾಡುತ್ತಿದ್ದರು ಬಿಟ್ಟರೆ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅಂತಿಮವಾಗಿ ಡಿಸೆಂಬರ್ 10 , 2024 ರಂದು ತಮ್ಮ 92 ನೇಯ ವಯಸ್ಸಿನಲ್ಲಿ ತುಂಬು ಜೀವನ ನಡೆಸಿದ ಕೃಷ್ಣ ನಿಧನರಾದರು.
ಮನಮೋಹನ್ ಸಿಂಗ್ ಪ್ರಧಾನಿಯಾಗದೇ ಇದ್ದಿದ್ದರೆ ಆ ಸ್ಥಾನಕ್ಕೆ ಕೃಷ್ಣ ಅವರೇ ಯೋಗ್ಯ ಆಯ್ಕೆಯಾಗಿ ಗಾಂಧಿ ಕುಟುಂಬಕ್ಕೆ ಕಂಡಿದ್ದರು. ಗಾಂಧಿ ಕುಟುಂಬದ ಆಪ್ತರಲ್ಲಿ ಒಬ್ಬರಾಗಿದ್ದ ಕೃಷ್ಣ ಅವರು ರಾಜೀವ್ ಹಾಗೂ ಸೋನಿಯಾ ಗಾಂಧಿಯವರಿಗೂ ಹತ್ತಿರದವರಾಗಿದ್ದರು. ಇಂಗ್ಲೀಷ್ ನಲ್ಲಿ ಪ್ರೌಢಿಮೆ ಸಾಧಿಸಿದ್ದ ಕೃಷ್ಣ ಅವರ ರಾಜಕೀಯ ಅನುಭವ, ಪಾಂಡಿತ್ಯದಿಂದ ಅವರು ಪ್ರಧಾನಿ ಹುದ್ದೆಗೆ ಯೋಗ್ಯರೂ ಆಗಿದ್ದರು. ಆದರೆ ಕೊನೆಗೆ ಗಾಂಧಿ ಕುಟುಂಬ ಮನಮೋಹನ್ ಸಿಂಗ್ ಅವರನ್ನೇ ಅಂತಿಮಗೊಳಿಸಿತ್ತು. ಅದೀಗ ಇತಿಹಾಸ.
ಡಿಕೆ ಶಿವಕುಮಾರ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿಯೇ ಬಿಂಬಿಸಿದ್ದ ಕೃಷ್ಣ ಅವರ ಮಾರ್ಗದರ್ಶನ ಡಿಕೆಶಿ ಅವರ ರಾಜಕೀಯ ಏಳಿಗೆಗೆ ಕಾರಣವಾಗಿತ್ತು. ಕೃಷ್ಣ ಅವರ ಮೊಮ್ಮೊಗನಿಗೆ ಡಿಕೆ ಮಗಳನ್ನು ಮದುವೆ ಮಾಡಿಸುವ ಮೂಲಕ ಆ ಎರಡೂ ಕುಟುಂಬ ಬಂಧುಗಳಾಗಿಯೂ ಮಾರ್ಪಟ್ಟಿದ್ದಾರೆ. ಕಾಫಿ ಡೇ ಎಂಬ ಸಾಮ್ರಾಜ್ಯ ಕಟ್ಟಿದ್ದ ಸಿದ್ಧಾರ್ಥ ಅವರು ಕೃಷ್ಣ ಅವರ ಅಳಿಯನಾಗಿಯೂ ಕೃಷ್ಣ ಅವರ ರಾಜಕೀಯ ಜೀವನದ ನೇಪಥ್ಯದಲ್ಲಿ ಕೆಲಸ ಮಾಡಿ ಮಾವನ ರಾಜಕಾರಣದಲ್ಲಿ ಹೆಗಲು ನೀಡಿದ್ದರು. ಆದರೆ ಅವರ ಹಠಾತ್ ಅಗಲುವಿಕೆಯೂ ಕೃಷ್ಣ ಅವರನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತ್ತು.
Leave A Reply