ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!

ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ ” ಹಸೀನಾ ಮತ್ತು ಇತರ ಕಥೆಗಳು” ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್ ಗೆ ಪ್ರಶಸ್ತಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿರುವುದು ವಿಶೇಷ. ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್ ( ಅಂದಾಜು 57.28 ಲಕ್ಷ ರೂ) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ “ಪೆನ್ ಟ್ರಾನ್ಸಲೇಟ್ಸ್” ಪ್ರಶಸ್ತಿಯೂ ಸಿಕ್ಕಿತು.
1990 ಮತ್ತು 2023 ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು. ಮೇ 21 ರಂದು ಲಂಡನ್ ನಲ್ಲಿ ಟೇಟ್ ಮಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಲಾಯಿತು.
ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಷ್ತಾಕ್ ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ. “ಯಾವ ಕತೆಯೂ ಸಣ್ಣದಲ್ಲ. ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು” ಎಂದು ಹೇಳಿದ್ದಾರೆ. “ನನ್ನ ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು” ಎಂದು ಅನುವಾದಕಿ ಭಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ಫ್ರೆಂಚ್ ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್, ಇಟಾಲಿಯನ್ ಹಾಗೂ ಡ್ಯಾನಿಶ್ ಭಾಷೆಯ ತಲಾ ಒಂದು ಕೃತಿ ಶಾರ್ಟ್ ಲಿಸ್ಟ್ ನಲ್ಲಿದ್ದವು. ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಬಾನು ಮುಷ್ತಾಕ್ 1948 ರಲ್ಲಿ ಹಾಸನದಲ್ಲಿ ಹುಟ್ಟಿದರು. ಎಂಟನೇ ವಯಸ್ಸಿಗೆ ಅವರನ್ನು ಶಿವಮೊಗ್ಗದ ಕನ್ನಡ ಭಾಷಾ ಮಿಶಿನರಿ ಶಾಲೆಗೆ ದಾಖಲಿಸುವಾಗ ಅಲ್ಲಿ ಆಡಳಿತ ಮಂಡಳಿ ಹಾಕಿದ ಷರತ್ತು ” ಆರು ತಿಂಗಳಲ್ಲಿ ಕನ್ನಡ ಓದಲು ಮತ್ತು ಬರೆಯಲು ಕಲಿಯಬೇಕು” ಅದನ್ನು ಸವಾಲಾಗಿ ಸ್ವೀಕರಿಸಿದಾಗ ಹೆಣ್ಣುಮಗಳು ಎಲ್ಲರ ನಿರೀಕ್ಷೆಗಳನ್ನು ಮೀರಿ ಬಹುಬೇಗನೆ ಕನ್ನಡ ಬರೆಯಲು ಮತ್ತು ಓದಲು ಕಲಿತಿದ್ದಳು. ಅಂದು ಶಾಲೆ ಹಾಕಿದ ಕಂಡಿಷನ್ ಮುಂದೊಂದು ದಿನ ಆ ಹೆಣ್ಣುಮಗಳಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಕಿರೀಟ ಮುಡಿಗೇರುತ್ತದೆ ಎಂದು ಯಾರೂ ಅಂದುಕೊಂಡಿರಲಿಕ್ಕಿಲ್ಲ.
ಸಮುದಾಯದ ಅಪೇಕ್ಷೆಗೆ ವಿರುದ್ಧವಾಗಿ ಆಕೆ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತಳಾಗಿ ಉದ್ಯೋಗಕ್ಕೆ ಸೇರಿದರು. ಆಲ್ ಇಂಡಿಯಾ ರೇಡಿಯೋ ಬೆಂಗಳೂರು ಇಲ್ಲಿಯೂ ಕೆಲಸ ಮಾಡಿದ ಬಾನು ಮುಷ್ತಾಕ್ ಅವರ ಕರಿ ನಗರಗಳು ಕೃತಿ 2003 ರಲ್ಲಿ ಹಸೀನಾ ಸಿನೆಮಾವಾಗಿ ಮೂಡಿ ಬಂದಿದೆ. ಅವರ ಮಹಿಳಾ ಬದುಕಿನ ಆಧಾರಿತ ದಕ್ಷಿಣ ಭಾರತದ ಮುಸ್ಲಿಂ ಹೆಣ್ಣುಮಕ್ಕಳ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿ ಇಂಗ್ಲಿಷಿನಲ್ಲಿ ಹಾರ್ಟ್ ಲ್ಯಾಂಪ್ ಆಗಿ ಅನುವಾದಗೊಂಡಿದ್ದು ಅದಕ್ಕೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರಕಿರುವುದು ಕನ್ನಡಿಗರು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ. ಮೊದಲ ಕನ್ನಡ ಸಾಹಿತಿಗೆ ಈ ಪ್ರಶಸ್ತಿ ದೊರಕಿರುವುದು ಇತಿಹಾಸದಲ್ಲಿ ದಾಖಲಾಯಿತು. ಕೃತಿಯ ಇಂಗ್ಲೀಷ್ ಅನುವಾದಕಿ ದೀಪಾ ಭಸ್ತಿಯವರು ಕೂಡ ಮೊದಲ ಭಾರತೀಯ ಅನುವಾದಕಿ ಆಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಮತ್ತು ಮೊದಲ ಕಿರುಕಥೆಗಳ ಗೊಂಚಲು ಕೃತಿಗೆ ಈ ಪ್ರಶಸ್ತಿ ದೊರಕಿರುವುದು ಎಲ್ಲವೂ ಚರಿತ್ರೆಯಲ್ಲಿ ಚಿರಸ್ಮರಣೀಯವಾಗಿವೆ.
ಮಹಿಳಾ ಹೋರಾಟಗಾರರಾಗಿಯೂ ಗುರುತಿಸಿಕೊಂಡಿರುವ ಇವರಿಗೆ ಮತ್ತು ಇವರ ಕುಟುಂಬಕ್ಕೆ 2000 ರಲ್ಲಿ ಮೂರು ತಿಂಗಳ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಅದಕ್ಕೆ ಕಾರಣ ಇವರು ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶದ ಹಕ್ಕಿನ ಪರವಾಗಿ ವಾದಿಸಿದ್ದರು.
Leave A Reply