ಚೌತಿಗೆ ಮುಗಿಸುವ ಭರವಸೆ ನವರಾತ್ರಿ ಆದರೂ ಈಡೇರಿಲ್ಲ!
ನೀವು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಒಂದು ರಸ್ತೆಯಲ್ಲಿ ಕಳೆದ ವರ್ಷ ನಡೆದುಕೊಂಡು ಹೋಗಿದ್ದಿರಿ ಎಂದು ಅಂದುಕೊಳ್ಳೋಣ. ನಂತರ ನಿಮಗೆ ಕಾರಣಾಂತರಗಳಿಂದ ಅದೇ ರಸ್ತೆಯಲ್ಲಿ ಒಂದು ವರ್ಷ ಹೋಗುವ ಅಗತ್ಯ ಬರಲಿಲ್ಲ ಎಂದು ಅಂದುಕೊಳ್ಳೋಣ. ಈ ವರ್ಷ ನೀವು ಮತ್ತೆ ಅದೇ ರಸ್ತೆಯಲ್ಲಿ ಹೋಗಬೇಕಾಯಿತು ಎಂದು ಇಟ್ಟುಕೊಳ್ಳೋಣ. ಆಗ ನಿಮಗೆ ಈ ರಸ್ತೆ ಕಳೆದ ವರ್ಷ ಕೂಡ ಹೀಗೆ ಅರ್ಧ ಕಾಮಗಾರಿಯಾಗಿ ಇದ್ದ ನೆನಪಾಗುತ್ತದೆ. ಹಾಗೆ ಈ ಬಾರಿಯೂ ಹಾಗೆ ಕಾಮಗಾರಿ ಅರ್ಧದಲ್ಲಿಯೇ ಇದೆ ಎಂದು ಅನಿಸುತ್ತದೆ. ಹಾಗಾದರೆ ಏನೂ ಬದಲಾವಣೆ ಯಾಕೆ ಆಗಿಲ್ಲ ಎಂದು ನಿಮಗೆ ಅನಿಸಬಹುದು. ಅನಿಸುವುದಲ್ಲ, ಏನೂ ಆಗಿರುವುದಿಲ್ಲ. ನೀವು ಮುಂದಿನ ವರ್ಷ ಆ ರಸ್ತೆಯಲ್ಲಿ ಹೋದರೂ ಆ ರಸ್ತೆ ಹಾಗೆ ಇರುತ್ತದೆ. ಇದು ನಮ್ಮ ಪಾಲಿಕೆಯ ವಿಶೇಷ. ನಿಮಗೆ ಶೀಘ್ರದಲ್ಲಿ ಒಂದು ರಸ್ತೆಯ ಕಾಮಗಾರಿ ಮುಗಿದು ಹೋದರೆ ತಾವು ಮಾಡುವ ಘನಂದಾರಿ ಕೆಲಸಗಳು ಗೊತ್ತಾಗುವುದಿಲ್ಲ ಎಂದು ಅಂದುಕೊಂಡಿರುವ ಮಹಾನಗರ ಪಾಲಿಕೆಯ ಕಮೀಷನರ್, ಅಧಿಕಾರಿಗಳು, ಇಂಜಿನಿಯರ್ಸ್ ಗಳು ಒಂದು ರಸ್ತೆಯ ಕಾಮಗಾರಿ ಪ್ರಾರಂಭವಾದರೆ ಜನ ಸಾಕಪ್ಪ ಸಾಕು ಎಂದು ಅಂದುಕೊಳ್ಳುವ ತನಕ ಅದನ್ನು ಜೀವಂತ ಇಟ್ಟುಕೊಂಡಿರುತ್ತಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳು ಯಾವಾಗ ಶುರುವಾಗುತ್ತೆ ಮತ್ತು ಯಾವಾಗ ಮುಗಿಯುತ್ತೆ ಎಂದು ಗೊತ್ತಾಗಲು ಏನು ಮಾಡಬೇಕು ಎನ್ನುವ ಪ್ರಶ್ನೆಯನ್ನು ನನಗೆ ಯಾರಾದರೂ ಕೇಳಿದರೆ ಕಾಮಗಾರಿಯ ಒಪ್ಪಂದದ ಸಮಯದಲ್ಲಿ ಗುತ್ತಿಗೆದಾರರು ಮತ್ತು ಪಾಲಿಕೆ ನಡುವೆ ಆದ ಕರಾರು ಪತ್ರ ನೋಡಿ ಎಂದು ನಾನು ಹೇಳುವುದಿಲ್ಲ. ಅದರ ಬದಲಿಗೆ ಯಾವುದಾದರೂ ಜ್ಯೋತಿಷಿಯನ್ನು ಕೇಳಿ ಎಂದು ಹೇಳುತ್ತೇನೆ. ಯಾಕೆಂದರೆ ಕರಾರು ಪತ್ರಗಳು ಪಾಲಿಕೆಯಲ್ಲಿ ನಾಮಕಾವಸ್ತೆ. ಅದರಲ್ಲಿ ಕಾಮಗಾರಿ ಪ್ರಾರಂಭವಾದ ದಿನ ಮತ್ತು ಮುಗಿಯಬೇಕಾದ ದಿನ ಎಂದು ಏನು ಬರೆದಿರುತ್ತದೆಯೊ ಅದು ಕೇವಲ ಕಾಲಂ ಭರ್ತಿ ಮಾಡಲು ಮಾತ್ರ. ಅದರ ಮೇಲೆ ಅದನ್ನು ಯೋಜನಾ ವಿಭಾಗದ ಯಾವುದಾದರೂ ಹಳೆ ಕಪಾಟಿನ ಒಳಗೆ ಇಟ್ಟರೆ ಅದರ ಅಗತ್ಯ ಯಾರಿಗೂ ಬೀಳುವುದಿಲ್ಲ.
ಇಷ್ಟು ಹೇಳಲು ಕಾರಣ ಮಂಗಳೂರಿನ ರಥಬೀದಿಯ ಸಮೀಪವಿರುವ ರಾಮಮಂದಿರದಿಂದ ರಾಮ ಲಂಚ್ ಹೋಂ ಇದೆಯಲ್ಲ, ಆ ರಸ್ತೆಯ ಕಾಮಗಾರಿ ಯಾವತ್ತೋ ಪ್ರಾರಂಭವಾಗಿತ್ತು. ಅದರಲ್ಲಿ ರಾಮ ಮಂದಿರದಿಂದ ರಾಮಕಾಂತಿ ಸಿನೆಮಾ ಗೃಹದ ತನಕದ ಕಾಮಗಾರಿ ಅರ್ಧ ಮುಗಿದಿದೆ. ನಂತರ ಗುತ್ತಿಗೆದಾರರ ಕಣ್ಣಿಗೆ ಅಪರಿಚಿತರು ಬಟ್ಟೆ ಕಟ್ಟಿ ಎಲ್ಲಿಯಾದರೂ ಕಾಡಿನಲ್ಲಿ ಬಿಟ್ಟು ಬಂದಿದ್ದಾರಾ ಎನ್ನುವಂತೆ ಗುತ್ತಿಗೆದಾರರು ಈ ಕಡೆ ಸುಳಿಯಲಿಲ್ಲ. ಅವರಿಗೆ ಇಲ್ಲಿನ ವಿಳಾಸವೇ ಮರೆತು ಹೋದಂತಿತ್ತು. ಅದರ ಪರಿಣಾಮವಾಗಿ ಕೆಲಸ ನಿಂತು ಹೋಯಿತು. ಕಾಮಗಾರಿ ಮುಂದುವರೆಯದೆ ಇದ್ದ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿತ್ತು. ಇಲ್ಲಿನ ಮನಪಾ ಸದಸ್ಯೆ ಪೂರ್ಣಿಮಾ ಅವರು ಎಷ್ಟು ಸಲ ಹೋಗಿ ಕಮೀಷನರ್ ಅವರತ್ರ ವಿನಂತಿ ಮಾಡಿಕೊಂಡರೂ ಕೆಲಸ ಮುಂದುವರೆಯಲೇ ಇಲ್ಲ. ನಂತರ ಪೂರ್ಣಿಮಾ ಅವರ ಅದೃಷ್ಟವೋ ಏನೋ, ಈ ಹೆಂಗಸು ಇಷ್ಟು ಸಲ ಕೇಳಿಕೊಂಡ ಮೇಲೆ ಒಂದು ನೂರು ಮೀಟರ್ ಉದ್ದದ ಕಾಮಗಾರಿಯನ್ನು ಮುಗಿಸುವ ಮಾತುಕತೆಯೊಂದಿಗೆ ಗಣೇಶ್ ಚೌತಿ ಹತ್ತಿರದಲ್ಲಿ ಇರುವುದರಿಂದ ಅಷ್ಟರೊಳಗೆ ಮುಗಿಸುವ ಭರವಸೆಯೊಂದಿಗೆ ಕಮೀಷನರ್ ಮೊಹಮ್ಮದ್ ನಝೀರ್ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆ ನೀಡಿದರು. ಅಬ್ಬಾ, ಇನ್ನಾದರೂ ಕೆಲಸ ಬೇಗ ಮುಗಿಯುತ್ತೆ ಎಂದು ಈ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡವರು, ವ್ಯಾಪಾರ ಮಾಡುತ್ತಿರುವವರು ಎಲ್ಲಾ ಅಂದುಕೊಂಡರು. ಆದರೆ ಚೌತಿ ಮುಗಿದು ಎರಡು ತಿಂಗಳಾಗುತ್ತಾ ಬಂದರೂ ಕೆಲಸ ಪೂರ್ಣಗೊಂಡಿಲ್ಲ. ಶ್ರೀರಾಮ ಲಂಚ್ ಹೋಂ ಎದುರಿನ ರಾಘವೇಂದ್ರ ಮಠಕ್ಕೆ ಹೋಗುವ ರಸ್ತೆ ಇಳಿಜಾರು ಮಾಡಿಕೊಡದೇ ಈ ರಸ್ತೆಯಲ್ಲಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಇದಕ್ಕೆಲ್ಲಾ ಏನು ಕಾರಣ. ಸಿಂಪಲ್, ಪಾಲಿಕೆಯ ಗುತ್ತಿಗೆದಾರರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಹೇಳುವ ನೈತಿಕತೆ ಅಧಿಕಾರಿಗಳಿಗಿಲ್ಲ, “ಕೇಳುವುದು” ಅಭ್ಯಾಸವಾಗಿರುವುದರಿಂದ ಅದು ನೈತಿಕತೆಯನ್ನು ನುಂಗಿ ಹಾಕಿದೆ. ಒಬ್ಬ ಗುತ್ತಿಗೆದಾರ ಇಷ್ಟು ನಿಗದಿತ ಸಮಯದೊಳಗೆ ಕೆಲಸ ಮುಗಿಸದಿದ್ದರೆ ಅವನನ್ನು ಕಪ್ಪು ಪಟ್ಟಿಗೆ ಸೇರಿಸುವ ಅವಕಾಶ ಇಂಜಿನಿಯರ್ ವಿಭಾಗಕ್ಕೆ ಇದೆ. ಆದರೆ ಇವರು ಅವನಿಂದ ಕಪ್ಪು ಹಣ ಸ್ವೀಕರಿಸುವುದರಿಂದ ಕಪ್ಪು ಪಟ್ಟಿ ಇವರ ಚರಿತ್ರೆಯಲ್ಲಿಯೇ ಇಲ್ಲ. ಎಲ್ಲವೂ ಸೆಟಲ್ ಮೆಂಟ್ ಬಿಜಿನೆಸ್. ಆದ್ದರಿಂದ ಕೆಲಸ ಪ್ರಾರಂಭಿಸುವಾಗ 20 ರೂಪಾಯಿ ಸ್ಟ್ಯಾಂಪ್ ಪೇಪರ್ ಮೇಲೆ ನಡೆದ ಕರಾರು ಒಪ್ಪಂದ ಹಾಗೆ ಮುದುಡಿ ಗಾಳಿಯಾಡದ ಕಪಾಟಿನಲ್ಲಿ ಪ್ರಾಣ ಬಿಡುತ್ತಿದ್ದರೆ ಇತ್ತ ಈ ರಸ್ತೆಯಲ್ಲಿ ನಡೆಯುವ ಜನ, ಓಡಾಡುವ ವಾಹನಗಳು ಪಾಲಿಕೆಗೆ ಶಾಪ ಹಾಕುತ್ತಿರುತ್ತವೆ.
Leave A Reply