ಸ್ಮಾರ್ಟ್ ಸಿಟಿಗೆ ಕಾವಲು ಸಮಿತಿ ಮಾಡದಿದ್ದರೆ ಹತ್ತು ವರ್ಷ ಹಿಂದಿನ ಕಥೆ ಪುನರಾರ್ವನೆಯಾಗುತ್ತದೆ!
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬರುವ ಸಾವಿರ ಕೋಟಿ ರೂಪಾಯಿಗಳನ್ನು ಹೇಗೆ ಬೇಕಾದರೆ ಹಾಗೆ ಖರ್ಚು ಮಾಡಿಬಿಡಿ ಎಂದು ಶಾಸಕ ಜೆ ಆರ್ ಲೋಬೊ ಅವರಿಗೆ, ಪಾಲಿಕೆಯ ಕಮೀಷನರ್ ಮೊಹಮ್ಮದ್ ನಜೀರ್ ಮತ್ತು ಮೇಯರ್ ಕವಿತಾ ಸನಿಲ್ ಅವರಿಗೆ ಬಿಟ್ಟರೆ ಏನಾಗಬಹುದು ಎಂದು ಯೋಚಿಸುತ್ತಿದ್ದೇನೆ. ಅದು ಅನುಷ್ಟಾನಕ್ಕೆ ಬರುವಾಗ ಸ್ಪೆಶಲ್ ಪರ್ಪಸ್ ವೆಹಿಕಲ್ ಎಂದು ಮಾಡಿ ಒಬ್ಬರು ಐಎಎಸ್ ಅಧಿಕಾರಿಯನ್ನು ಉಸ್ತುವಾರಿ ಕೊಡಬಹುದು. ಆದರೆ ಅವರು ಕೂಡ ಅಧಿಕಾರಿಯೇ ಆಗಿಯಿರುವುದರಿಂದ ಮಂಗಳೂರಿನ ಅಭಿವೃದ್ಧಿಗೆ ಈ ಅನುದಾನ ಎಷ್ಟು ಸಮರ್ಪಕವಾಗಿ ಬಳಕೆಯಾಗುತ್ತೆ ಎನ್ನುವುದನ್ನು ನೋಡಬೇಕಾಗಿರುವುದು ಯಾರು?
ಪ್ರಧಾನಿ ಅಥವಾ ಸಿಎಂ ಇಲ್ಲಿ ಬಂದು ಕುಳಿತು ನೋಡಲು ಆಗುವುದಿಲ್ಲ. ಆದ್ದರಿಂದ ಜನಪ್ರತಿನಿಧಿಗಳಿಲ್ಲದ ಮತ್ತು ಜನಸಾಮಾನ್ಯರೇ ಇರುವ ಒಂದು ಸಾರ್ವಜನಿಕ ಸಮಿತಿಯನ್ನು ರಚಿಸಲು ನಾನು ವಿಝನ್ 2025 ರ ಸಭೆಯಲ್ಲಿ ಕೇಳಿಕೊಂಡದ್ದು. ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಇದ್ದರೆ ಯೋಜನೆ ಹೇಗೆ ಹಳ್ಳ ಹಿಡಿಯುತ್ತದೆ ಎನ್ನುವುದನ್ನು ಉದಾಹರಣೆಯೊಂದಿಗೆ ನಾನು ವಿವರಿಸುತ್ತೇನೆ. ಹತ್ತು ವರ್ಷಗಳ ಹಿಂದಿನ ಕಥೆ. ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕಿನಿಂದ ಮಂಗಳೂರಿಗೆ ಸಾಲ ಸಿಕ್ಕಿತ್ತು. ಚಿಕ್ಕ ಮೊತ್ತವೇನಲ್ಲ. ಭರ್ಥಿ 308 ಕೋಟಿ ರೂಪಾಯಿ. ಆ 308 ಕೋಟಿ ರೂಪಾಯಿ ಖರ್ಚು ಮಾಡಿ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಮತ್ತು ಒಳಚರಂಡಿಯನ್ನು ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆಗ ಇದರ ಜವಾಬ್ದಾರಿ ಇದ್ದದ್ದು ಆಗ ಕುಂಡ್ಸೆಂಪು ನಿರ್ದೇಶಕರಾಗಿದ್ದ ಜೆ ಆರ್ ಲೋಬೋ ಅವರಿಗೆ. ಲೋಬೋ ಅವರು ಏನು ಮಾಡಿದ್ರು ಎಂದು ಇಡೀ ಊರಿಗೆ ಗೊತ್ತಿದೆ. ಇವತ್ತಿಗೂ ಒಂದು ಗಂಟೆ ಜೋರು ಮಳೆ ಬಂದರೆ ಮಂಗಳೂರಿನ ಹೃದಯ ಭಾಗದಲ್ಲಿಯೇ ರಸ್ತೆಗಳು ಕೃತಕ ಕೆರೆಗಳಾಗುತ್ತವೆ. ಅದರ ಚೆಂದ ನೋಡಲು ಆಗ ಅಧಿಕಾರಿಯಾಗಿದ್ದ ಮತ್ತು ಈಗ ಶಾಸಕರಾಗಿರುವ ಜೆಆರ್ ಲೋಬೋ ಧಾವಿಸುತ್ತಾರೆ. ಅಂದರೆ ಪರಿಸ್ಥಿತಿ ಆವತ್ತಿನಿಂದ ಇವತ್ತಿನಿಂದ ಹಾಗೆ ಇದೆ. ಲೋಬೋ ಅವರ ಸ್ಥಾನ ಮಾತ್ರ ಬದಲಾಗಿದೆ. ಆಗಾದರೆ ಒಳಚರಂಡಿಗೆ ಬಂದ ಕೋಟಿಗಟ್ಟಲೆ ಹಣ ಒಳಗೊಳಗೆ ಇಂಗಿ ಹೋಯಿತಾ? ಲೋಬೋ ಅವರು ಹೇಳಬೇಕು. ಶಾಸಕ ಲೋಬೋ ಆಗಿ ಅಲ್ಲ. ಆವತ್ತು ಜವಾಬ್ದಾರಿಯಲ್ಲಿದ್ದ ಕುಡ್ಸೆಂಪು ನಿರ್ದೇಶಕರಾಗಿ. ಇನ್ನು ಕುಡಿಯುವ ನೀರಿನ ಯೋಜನೆ.
ಆ 308 ಕೋಟಿ ರೂಪಾಯಿಯಲ್ಲಿ 2025 ರ ತನಕ 24 ಗುಣಿಸು 7 ನೀರನ್ನು ಪಾಲಿಕೆಯ ವ್ಯಾಪ್ತಿಯಲ್ಲಿ ಪೂರೈಸುವ ಯೋಜನೆ ಇತ್ತು. ಆದರೆ ಇವತ್ತಿನ್ನೂ 2017. ಅಶೋಕನಗರ, ಮಣ್ಣಗುಡ್ಡೆ, ಬೋಳಾರದಲ್ಲಿ 48 ಗಂಟೆಗಳಲ್ಲಿ 4 ಗಂಟೆ ನೀರು ಬಂದರೆ ಅದೇ ಆಶ್ಚರ್ಯ. ಒಂದು ಕಡೆ ಕೃತಕ ನೆರೆಗೆ ಮ್ಯಾನ್ ಹೋಲ್ ಗಳು ತುಂಬಿ ತ್ಯಾಜ್ಯ ಮೇಲೆ ಬರುತ್ತಿದ್ದರೆ, ಪೈಪಿನಲ್ಲಿ ನೀರು ಹೊರಗೆ ಬರಲು ಜನ ಕಾಯುತ್ತಿದ್ದಾರೆ. ಹಾಗಾದರೆ 308 ಕೋಟಿ ರೂಪಾಯಿ ಎಲ್ಲಿಗೆ ಹೋಯಿತು? ಇಡೀ ದಿನ ನೀರು ಕೊಡಿ ಎಂದು ಕೋಟಿಗಟ್ಟಲೆ ಹಣ ಬಂದರೆ ಇವರು ಆ ಯೋಜನೆಗೆ ಎಳ್ಳುನೀರು ಬಿಟ್ಟರು. ತುಂಬೆಯಿಂದ ಮಂಗಳೂರು ತನಕ ಮತ್ತು ಮಂಗಳೂರಿನಿಂದ ಸುರತ್ಕಲ್ ತನಕ ಹೊಸ ನೀರಿನ ಪೈಪ್ ಹಾಕಿ, ಅಲ್ಲಲ್ಲಿ ವಾಟರ್ ಹೆಡ್ ಟ್ಯಾಂಕ್ ರಚಿಸಿ ನೀರು ಪೂರೈಸುವ ವ್ಯವಸ್ಥೆ ಎಲ್ಲಿಗೆ ಹೋಯಿತು. ಕೇಳುವವರಿಲ್ಲ.
ಅದಕ್ಕೆ ನಾನು ಹೇಳಿದ್ದು, ಸಾರ್ವಜನಿಕರೇ ಇರುವ ಒಂದು ಸಮಿತಿಯನ್ನು ರಚಿಸಿ. ಪಾರದಶ್ಯಕತೆ ಮುಖ್ಯ ಎಂದು ಕೇಂದ್ರ ಅಥವಾ ರಾಜ್ಯ ಸರಕಾರಕ್ಕೆ ಅನಿಸಿದ್ದಲ್ಲಿ ಈ ಸಮಿತಿ ಅಸ್ತಿತ್ವಕ್ಕೆ ಬರಬೇಕು. ಹೇಗೂ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವುದರಿಂದ ಈ ಸಮಿತಿಯ ಸಭೆಗಳು ಆಗಾಗ ನಡೆಯಬಹುದು. ಬೇಕಾದರೆ ಈ ಸಮಿತಿಯ ಸದಸ್ಯರಿಗೆ ಯಾವುದೇ ಟಿಎ, ಡಿಎ ಕೊಡಬೇಕಾಗಿಲ್ಲ. ಒಂದು ವಾಚ್ ಡಾಗ್ ಆಗಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಆದರೆ ನನಗೇಕೋ ಜನಪ್ರತಿನಿಧಿಗಳ ಮೇಲೆ ಡೌಟು. ಅವರು ತಮ್ಮ ಭ್ರಷ್ಟಾಚಾರವನ್ನು ಹೊರಗೆಡಹಲು ಯಾರಿಗೂ ಬಿಡುವುದಿಲ್ಲ. ಒಂದು ವೇಳೆ ಈ ಸಮಿತಿ ಅಸ್ತಿತ್ವಕ್ಕೆ ಬಂದರೆ ಯಾವುದೇ ಗುತ್ತಿಗೆದಾರನಿಗೆ ತಿನ್ನಲು, ತಿನ್ನಿಸಲು ಆಗುವುದಿಲ್ಲ. ಅದರೊಂದಿಗೆ ಟೈಮ್ ಬಾಂಡ್ ಆಧಾರದ ಮೇಲೆ ಎಲ್ಲ ಕಾಮಗಾರಿಗಳು ಕೂಡ ಮುಗಿಯಲಿವೆ. ಆದರೆ ವಾರ್ಡ್ ಸಮಿತಿ ಮಾಡಲು ಧೈರ್ಯ ತೋರದ ಮಂಗಳೂರು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿಗೆ ಕಾವಲು ಸಮಿತಿ ಮಾಡಲು ಮುಂದೆ ಬರುತ್ತಾ!
Leave A Reply