ದೇಸಾಯಿ, ಡೈನೆಸ್ಟಿ, ಡೆವಲಪ್‍ಮೆಂಟ್- ಮೋದಿ 3ಡಿ ಮಂತ್ರ
>> ಭ್ರಷ್ಟಾಚಾರ, ಜಾತೀಯತೆ, ಕೋಮುಗಲಭೆ ಮತ್ತು ವಂಶಾಡಳಿತ – ಇದು ಕಾಂಗ್ರೆಸ್ ಅಭಿವೃದ್ಧಿಯ ಮಾದರಿಗೆ ಆಧಾರಸ್ತಂಭಗಳು.
>> ಈ ವಿಧಾನಸಭೆ ಚುನಾವಣೆ ವಂಶಾಡಳಿತ ಮತ್ತು ಅಭಿವೃದ್ಧಿ ನಡುವೆ.
>> ಸರ್ದಾರ್ ಪಟೇಲ್ ತುಳಿಯಲು ಹರಸಾಹಪಟ್ಟ ಕಾಂಗ್ರೆಸ್, ಈಗಲೂ ಗುಜರಾತಿಗರನ್ನು ಮುಗಿಸುವ ಹುನ್ನಾರದಿಂದ ಚುನಾವಣೆ ರಣತಂತ್ರ
>> ರಾಜ್ಯದ ರೈತರಿಗೆ ರೂ. 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಘೋಷಿಸಿದ ಸಿಎಂ ರೂಪಾನಿ
ಗಾಂಧಿನಗರ : ಪ್ರಧಾನಿ ಮೋದಿ ಮತ್ತೆ ಗುಡುಗಿದ್ದಾರೆ. ಆದರೆ ಈ ಬಾರಿ ತವರು ರಾಜ್ಯ ಗುಜರಾತ್‍ನಲ್ಲಿ ಡಿಸೆಂಬರ್‍ಗೆ ಎದುರಾಗುವ ವಿಧಾನಸಭೆ ಚುನಾವಣೆಗೆ ರಣಕಹಳೆ ಎನ್ನಲಾದ “ಗುಜರಾತ್ ಗೌರವ್ ಮಹಾಸಮ್ಮೇಳನ” ದಲ್ಲಿ ಕಾಂಗ್ರೆಸ್ ಒಳಸಂಚುಗಳನ್ನು ಬಟಾಬಯಲು ಮಾಡಿ ಆರ್ಭಟಿಸಿದ್ದಾರೆ. ಸೋಮವಾರ ನಡೆದ ಮಹಾಸಮ್ಮೇಳನದಲ್ಲಿ 7 ಲಕ್ಷ ಮಂದಿ ಪ್ರಧಾನಿ ಅವರ ಅಭಿವೃದ್ಧಿ ಘೋಷಣೆಗೆ ಸಾಕ್ಷಿಯಾದರು.
ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರ ಬಗ್ಗೆ ಇಲ್ಲಸಲ್ಲದ ವದಂತಿ ಹಬ್ಬಿಸಿದ್ದು ಕಾಂಗ್ರೆಸ್. ಸರ್ದಾರ್ ಪಟೇಲ್‍ರನ್ನು ರಾಜಕೀಯವಾಗಿ ಮುಗಿಸಲು ಹರಸಾಹಸಪಟ್ಟಿತ್ತು ಕಾಂಗ್ರೆಸ್. ಇಂಥ ಕಾಂಗ್ರೆಸ್ ಕುಟುಂಬ ರಾಜಕಾರಣ ಗುಜರಾತಿಗರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದ್ದಾರೆ.
ಅಮಿತ್ ಷಾ “ಪಂದ್ಯ ಪುರುಷೋತ್ತಮ”
ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಶ್ರಮಕಾರಣ. ಅವರು ಮ್ಯಾನ್ ಆಫ್ ದಿ ಮ್ಯಾಚ್ ಎಂದು ಮೋದಿ ಹೊಗಳಿದರು. ಅಂಥ ಷಾರನ್ನು ಜೈಲಿಗೆ ಅಟ್ಟಲು ಕಾಂಗ್ರೆಸ್ ಯುಪಿಎ ಅವಧಿಯಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಷಾ ಮೂಲಕ ನನ್ನನ್ನು ಹಣಿಯಲು ಹೊರಟಿತ್ತು ನೆಹರು-ಗಾಂಧಿ ಫ್ಯಾಮಿಲಿ ಎಂದು ಮೋದಿ ಕುಟುಕಿದ್ದಾರೆ.
ಜಿಎಸ್‍ಟಿಯಲ್ಲಿ ಕಾಂಗ್ರೆಸ್ ಪಾಲಿದೆ
ಪ್ರಸ್ತುತ ಜಿಎಸ್‍ಟಿ ಬಗ್ಗೆ ಅಪಪ್ರಚಾರವನ್ನೇ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ತನ್ನ ಆಡಳಿತದ ರಾಜ್ಯಗಳ ಸರ್ಕಾರಗಳಿಂದ ಅನುಮೋದನೆ ಕೊಡಿಸಿದ್ದೇಕೆ? ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳನ್ನು ಸಂಪರ್ಕಿಸಿ, ಅವರ ಒಪ್ಪಿಗೆ ಪಡೆದೇ ಜಿಎಸ್‍ಟಿ ಜಾರಿ ಮಾಡಿತು ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
ನ.8 “ಕಪ್ಪುಹಣ ಮುಕ್ತ ದಿನಾಚರಣೆ”
ದೇಶದ ಆರ್ಥಿಕತೆಗೆ ಸಬಲೀಕರಣ ತಂದ ನೋಟು ಅಮಾನ್ಯೀಕರಣ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ನ.8ನ್ನು “ಕರಾಳ ದಿನ’ ಎಂದು ಆಚರಿಸಲು ಮುಂದಾಗಿದೆ. ಇದು ದುರಾದೃಷ್ಟ. ಆದರೆ ಬಿಜೆಪಿ ಮಾತ್ರ ನ.8ಕ್ಕೆ ಸಂಭ್ರಮಿಸಿ ಕಾಳಧನ ಮುಕ್ತ ದಿನ ಎಂದು ಆಚರಿಸಲಿದೆ ಎಂದು ಮೋದಿ ಕಾಂಗ್ರೆಸ್ ಕಾಲೆಳೆದಿದ್ದಾರೆ.
ರಾಹುಲ್‍ರಿಂದ ಅಸಮಾಧಾನದ ಟೀಕೆ
ಮೋದಿ ಗುಜರಾತ್‍ನಲ್ಲಿ ಭಾಷಣ ಆರಂಭಿಸುವ ಮುನ್ನ ಟ್ವಿಟ್ಟರ್‍ನಲ್ಲಿ ಟಾಂಗ್ ಕೊಟ್ಟ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ” ಇಂದು ಹವಾಮಾನ ಇಲಾಖೆ ಪ್ರಕಾರ, ಪೊಳ್ಳು ಭರವಸೆಗಳ ಮಳೆ ಸುರಿಯಲಿದೆ” ಎಂದು ಟೀಕೆ ಮಾಡಿದ್ದರು. ಆದರೆ ಮೋದಿ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಂಶಾಡಳಿತ ಟೀಕಿಸಿ, ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ರಾಹುಲ್ ಪಟ್ಟಾಭಿಷೇಕದ ತಯಾರಿಯನ್ನು ಕುಟುಕಿ ನೆಹರು-ಗಾಂಧಿ ಕುಟುಂಬಕ್ಕೆ ಮುಜುಗರ ತಂದಿಟ್ಟರು.
Leave A Reply