ಚಿಲಿಂಬಿ ಗುಡ್ಡದ ಮೇಲೆ ಫ್ಲಾಟ್ ತೆಗೆದುಕೊಂಡರೆ ಅದಕ್ಕೆ ನೀವೆ ಜವಾಬ್ದಾರರು!
“ಗುಡ್ಡದ ಮೇಲೊಂದು ಮನೆಯ ಮಾಡಿ ಕಾನೂನಿಗೆ ಅಂಜಿದರೆ ಎಂತಯ್ಯ” ಎನ್ನುವಂತಹ ಹೊಸ ಗಾದೆಯನ್ನು ಇವತ್ತು ಹಳೆಗಾದೆಯೊಂದಕ್ಕೆ altration ಮಾಡಿ ಹುಟ್ಟುಹಾಕುತ್ತಿದ್ದೇನೆ. ಅದನ್ನು ಲೇಡಿಹಿಲ್ ನಿಂದ ಮುಂದೆ ಚಿಲಿಂಬಿಯಲ್ಲಿ ನಿರ್ಮಾಣವಾಗುತ್ತಿರುವ 32 ಮಹಡಿಗಳ ಬೃಹತ್ ವಸತಿ ಸಮುಚ್ಚಯವನ್ನು ನೋಡಿ ಇಟ್ಟಿರುವ ಹೊಸ ಗಾದೆ. ಕಟ್ಟಡ ಗುಡ್ಡದ ಮೇಲಿರುವುದರಿಂದ ಮತ್ತು ನಿಯಮಗಳನ್ನು ಮೀರಿ ಕಟ್ಟಿರುವುದರಿಂದ ಈ ಹೊಸ ಗಾದೆಯನ್ನು ಎರವಲು ಪಡೆಯಲಾಗಿದೆ. ನೀವು ಕಟ್ಟಿ, ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲ ನೋಡಿ ಕುಳಿತರೆ ಯಾವ ಬಿಲ್ಡಿಂಗ್ ಕೂಡ ಕಟ್ಟಲು ಆಗುವುದಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಸದಸ್ಯ ತನ್ನ ತನ್ನ ವಾರ್ಡಿನಲ್ಲಿ ಹೇಳುತ್ತಾ ಬಂದಿರುವುದರಿಂದ ಇವತ್ತು ಆರುವತ್ತು ವಾರ್ಡಿನ 90 ಶೇಕಡಾ ಮನೆಗಳಲ್ಲಿ ಇನ್ನೊಂದು ಗಾದೆ ಹುಟ್ಟಿಕೊಂಡಿದೆ. “ಬಿಲ್ಡರ್ ಕೊಟ್ಟರೆ ಮನೆ ತನಕ ಕಾರ್ಪೋರೇಟರ್ ಕೊಟ್ಟರೆ ಕೊನೆ ತನಕ” ಈ ಮಾತನ್ನು ನಂಬಿ ಅನೇಕ ಫ್ಲಾಟ್ ಗಳು ಈಗ ಜೀವಂತ ಇವೆ. ಅದರಂತೆ ಎಲ್ಲವೂ ಕಂಪ್ಲೀಟ್ ಆಗಿ “ದಾರಿ ಕಾಣದಯ್ಯ ಬಿಲ್ಡಿಂಗ್ ಗೆ” ಎಂದು ಕಾಯುತ್ತಿರುವ ವಸತಿ ಸಮುಚ್ಚಯದ ಹೆಸರು Land Trades Solitaire.
ಯಾವುದೇ ಒಂದು ರಸ್ತೆ ಅಗಲೀಕರಣವಾಗಬೇಕಾದರೆ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, KTCP ಅವರದ್ದು ಇಂತಿಂತಹ ನಿಯಮಗಳು ಎಂದು ಇವೆ. ಒಂದು ರಸ್ತೆ ಅಗಲವಾಗುತ್ತೆ ಎಂದರೆ ಆ ರಸ್ತೆಯಲ್ಲಿ ಇರುವ ಮನೆಗಳಲ್ಲಿ ಯಾರ್ಯಾರ ಜಮೀನು ಎಷ್ಟೆಷ್ಟು ಹೋಗುತ್ತೆ ಎನ್ನುವ ಸರ್ವೆ ಆದ ನಂತರ ಭೂಮಿ ಕಳೆದುಕೊಳ್ಳುವ ಮಾಲೀಕರಿಗೆ ನಕ್ಷೆ ಸಹಿತ ತಿಳುವಳಿಕೆ ಪತ್ರವನ್ನು ನೀಡಬೇಕಾಗುತ್ತದೆ. ಅದರ ನಂತರ ಎರಡು ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟು ಇಂತಿಂತಹ ರಸ್ತೆ ಅಗಲವಾಗುತ್ತೆ ಎಂದು ತಿಳಿಸಬೇಕಾಗುತ್ತದೆ. ಅದರ ತರುವಾಯ ಅಗಲ ಆಗುವ ರಸ್ತೆಯಲ್ಲಿ ಮಾಹಿತಿ ಫಲಕ ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಗುತ್ತದೆ. ಇಷ್ಟು ಮಾಡದೆ ರಸ್ತೆಯನ್ನು ಅಗಲ ಮಾಡಲು ಸಾಧ್ಯವೇ ಇಲ್ಲ.
ಇವತ್ತು ನಾನು ಬರೆಯುತ್ತಿರುವ ಕಟ್ಟಡವನ್ನು ಲೇಡಿಹಿಲ್ ನಿಂದ ಉರ್ವಾಸ್ಟೋರ್ ಕಡೆಗೆ ಹೋಗುವ ಪ್ರತಿಯೊಬ್ಬರು ಒಂದಲ್ಲ ಒಂದು ನೋಡಿಯೇ ಇರುತ್ತೀರಿ. ಚಿಲಿಂಬಿ ಗುಡ್ಡೆಯ ಮೇಲಿರುವ ಆ ಕಟ್ಟಡಕ್ಕೆ ಹೋಗಲು ಒಂದು ಕಾರು ಮಾತ್ರ ಹೋಗುವಷ್ಟು ಸಪೂರ ದಾರಿ ಇದೆ. ಅದನ್ನು ಶಾರದಾ ನಿಕೇತನ ರಸ್ತೆ ಎಂದು ಕರೆಯುತ್ತಾರೆ. ಆ ರಸ್ತೆ ಸರಾಸರಿ ಐನೂರು ಮೀಟರ್ ಉದ್ದ ಆರು ಮೀಟರ್ ಅಗಲ ಇದೆ.
ಆವತ್ತು ಪಾಲಿಕೆಯಲ್ಲಿ ಇದ್ದದ್ದು ಭಾರತೀಯ ಜನತಾ ಪಾರ್ಟಿಯ ಸರಕಾರ. ಚಿಲಿಂಬಿ ಗುಡ್ಡದ ಮೇಲೆ 32 ಮಾಳಿಗೆಯ ಬೃಹತ್ ಕಟ್ಟಡ ನಿರ್ಮಾಣ ಮಾಡುವುದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಪ್ರಪೋಸಲ್ ಬಂದಿದೆ. ಪ್ರಪೋಸಲ್ ಬಂದರೂ 32 ಮಹಡಿ ಮಾಡಲು ಮೊದಲು ಕಾನೂನು ಪ್ರಕಾರ ಎಷ್ಟು ಅಗಲ ರಸ್ತೆ ಇರಬೇಕೋ ಅಷ್ಟು ಅಗಲದ ರಸ್ತೆ ಇಲ್ಲ. ನಿಯಮದ ಪ್ರಕಾರ ಅಷ್ಟು ಮಹಡಿ ಇರುವ ಕಟ್ಟಡ ಕಟ್ಟಲು ಹನ್ನೆರಡು ಮೀಟರ್ ಅಗಲದ ರಸ್ತೆ ಬೇಕು. ಇಲ್ಲದಿದ್ದರೆ ಕಟ್ಟಡ ಕಟ್ಟಲು ಅನುಮತಿ ಇರುವುದಿಲ್ಲ. ಇವರು ಏನು ಮಾಡಿದ್ದಾರೆ ಎಂದರೆ ಆಗ ಮನಪಾದಲ್ಲಿ ಆಡಳಿತ ಇದ್ದದ್ದು ಭಾರತೀಯ ಜನತಾ ಪಾರ್ಟಿಯಾದ ಕಾರಣ ಮತ್ತು ಆ ಬಿಲ್ಡಿಂಗ್ ಇರಬೇಕಾದ ಜಾಗದ ಕಾರ್ಪೋರೇಟರ್ ಪ್ರವೀಣ್ ಬಿಜೆಪಿಯವರೇ ಆಗಿದ್ದ ಕಾರಣ ಶಾರದಾನಿಕೇತನ ರಸ್ತೆ ಅಗಲ ಮಾಡಬೇಕು ಎಂದು ಪಾಲಿಕೆಗೆ ಪತ್ರ ಬರೆದರು. ಇವರದ್ದೇ ಸರಕಾರ ಇದ್ದ ಕಾರಣ ಭಯಂಕರ ವೇಗದಲ್ಲಿ ಆ ಪತ್ರಕ್ಕೆ ಚಾಲನೆ ಸಿಕ್ಕಿತು. ಸಹಾಯಕ ನಗರ ಯೋಜನಾ ಅಧಿಕಾರಿಗೆ ಸರ್ವೆ ಮಾಡಿ ವರದಿ ಕೊಡಲು ಸೂಚನೆ ಹೋಯಿತು. ಅಧಿಕಾರಿ ತಡ ಮಾಡದೇ ಸರ್ವೆ ಮಾಡಿ ರಿಪೋರ್ಟ್ ಕೊಟ್ಟರು. ಆ ರಸ್ತೆ ಈಗಾಗಲೇ ಅಭಿವೃದ್ಧಿಯಾಗಿದೆ. ಅದನ್ನು 12 ಮೀಟರ್ ಅಗಲ ಮಾಡಲಾಗದ ಪರಿಸ್ಥಿತಿ ಇದೆ. ಹೆಚ್ಚೆಂದರೆ ಒಂಭತ್ತು ಮೀಟರ್ ಅಗಲ ಮಾಡಬಹುದು ಎಂದು ಬರೆದರು. ಆ ವರದಿ ಹೋದ ನಂತರ ರಸ್ತೆ ಅಗಲ ಮಾಡುವ ಕಾರ್ಪೋರೇಟರ್ ಉತ್ಸಾಹಕ್ಕೆ ಒಂದಿಷ್ಟು ಬ್ರೇಕ್ ಬಿತ್ತು. ಕಾರ್ಪೋರೇಟರ್ ಪ್ರವೀಣ್ ತಮ್ಮ ವರದಿಯಲ್ಲಿ ಎಷ್ಟು ಮೀಟರ್ ಅಗಲ ಮಾಡಬೇಕು ಎಂದು ಉಲ್ಲೇಖ ಮಾಡಿರಲಿಲ್ಲ. ನಂತರ ಅದೇ ಪತ್ರದಲ್ಲಿ 12 ಮೀಟರ್ ಅಗಲ ಮಾಡಬೇಕು ಎಂದು ಸೇರಿಸಲಾಗಿತ್ತು.
ಬಳಿಕ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಕಾರ್ಯಸೂಚಿ ಮಾಡಿ ಶಾರದಾನಿಕೇತನ ರಸ್ತೆಯನ್ನು ಒಂಭತ್ತು ಮೀಟರ್ ಅಗಲ ಮಾಡುವುದು ಎಂದು ತೀರ್ಮಾನಿಸಲಾಯಿತು. ಅದರ ನಂತರ ಅದು ಕೌನ್ಸಿಲ್ ಗೆ ಬರುವಾಗ 12 ಮೀಟರ್ ಅಗಲ ಮಾಡುವುದು ಎಂದು ಬದಲಾಗಿತ್ತು. ನಿಯಮ ಪ್ರಕಾರ ಒಂಭತ್ತು ಮೀಟರ್ ಅಗಲ ಎಂದು ಸ್ಥಾಯಿ ಸಮಿತಿ ಪಾಸ್ ಆಗಿರುವುದನ್ನು 12 ಮೀಟರ್ ಎಂದು ಮಾಡಿದ್ದು ತಪ್ಪು. ತಮ್ಮ ರಸ್ತೆ 12 ಮೀಟರ್ ಅಗಲವಾಗುತ್ತೆ ಎಂದು ಹೆದರಿದ ಶಾಂತಿನಿಕೇತನ ರಸ್ತೆಯ ನಿವಾಸಿಗಳು ಈ ರಸ್ತೆ ಅಗಲೀಕರಣ ಆಗಬಾರದು ಎಂದು ಪಾಲಿಕೆಗೆ ಪತ್ರ ಬರೆದು ಲೋಕಾಯುಕ್ತಕ್ಕೆ ದೂರು ಕೊಟ್ಟರು. ಇಷ್ಟೆಲ್ಲಾ ಆಗುವಾಗ ಪಾಲಿಕೆಯಲ್ಲಿ ಬಿಜೆಪಿ ಸರಕಾರ ಬಿದ್ದು ಹೋಗಿ ಕಾಂಗ್ರೆಸ್ ಸರಕಾರ ಬಂತು. ಅದರ ನಂತರ ಆ ಫೈಲ್ ಗೆ ಜೀವ ಬಂತು. ಬಿಲ್ಡರ್ ಪರವಾಗಿ ಪಾಲಿಕೆಯ ಕಾಂಗ್ರೆಸ್ ಮುಖಂಡ ಶಶಿಧರ್ ಹೆಗ್ಡೆ, ಇನ್ನೊರ್ವ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ಡಿಕೆ ನಿಂತರು. ನಾನು ಅಲ್ಲಿನ ನಿವಾಸಿಗಳ ಪರವಾಗಿ ನಿಂತೆ. ಆಗ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಒಂದು ದಿನ ಸಾರ್ವಜನಿಕ ಕುಂದುಕೊರತೆ ಸಭೆ ಕರೆದಿದ್ದರು. ಅಲ್ಲಿ ಏನಾಯಿತು? ಈ ಕಟ್ಟಡದಲ್ಲಿ ಫ್ಲಾಟ್ ಅಂದರೆ ಮನೆಗಳನ್ನು ಖರೀದಿ ಮಾಡಿದರೆ ಏನಾಗುತ್ತದೆ? ನೀವು ಗುಡ್ಡದ ಮೇಲಿನಿಂದ ಹಾರುವ ಪರಿಸ್ಥಿತಿ ಬರುತ್ತದೆಯಾ? ಬ್ಯಾಂಕಿನವರ ಡಬ್ಬಲ್ ಗೇಮ್ ಏನು? ಇದನ್ನೆಲ್ಲಾ ನಾಳೆಯಿಂದ ಬರೆಯುತ್ತೇನೆ!
Leave A Reply