ಮೋದಿ ಮಂಗಳೂರಿನ ಸರ್ಕೂಟ್ ಹೌಸಿನಲ್ಲಿ ನಿಲ್ಲುವುದು ನಿಜಾನಾ!
ಮೋದಿ ಬಂದು ಮಂಗಳೂರಿನ ಸಕ್ಯೂರ್ಟ್ ಹೌಸಿನಲ್ಲಿ ರಾತ್ರಿ ತಂಗುತ್ತಾರೆ ಎನ್ನುವ ಸಂದೇಶ ದಕ್ಷಿಣ ಕನ್ನಡದ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮತ್ತು ಪೊಲೀಸ್ ಕಮೀಷನರೇಟ್ ಕಚೇರಿಗೆ ತಲುಪಿದಾಗ ಅವರು ಎರಡೇರಡು ಬಾರಿ ಆ ಸಂದೇಶದ ಪ್ರತಿಯನ್ನು ಓದಿದರಂತೆ. ಒಂದು ಕ್ಷಣ ಜಿಲ್ಲಾಡಳಿತಕ್ಕೂ, ಉನ್ನತ ಪೊಲೀಸ್ ಅಧಿಕಾರಿಗಳಿಗೂ ಈ ವಿಷಯ ನಂಬಲು ಆಗಲಿಲ್ಲ. ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಕೂಡ “ಇನ್ನೊಮ್ಮೆ ಸರಿಯಾಗಿ ನೋಡ್ರಪ್ಪ, ಎಲ್ಲೋ ಮಿಸ್ಟೇಕ್ ಆಗಿರಬೇಕು, ರೀಚೆಕ್ ಮಾಡಿಕೊಳ್ಳಿ” ಎಂದು ಹೇಳಿದ್ದಾರೆ. ಯಾಕೆಂದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳೂರಿನ ಸರ್ಕೂಟ್ ಹೌಸ್ (ಸರಕಾರಿ ಅತಿಥಿ ಗೃಹ) ನಲ್ಲಿ ನಿದ್ರೆ ಮಾಡುತ್ತಾರೆ ಎನ್ನುವ ವಾಕ್ಯವನ್ನು ಸರಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಹಿತ ಮೊದಲು ಯಾರೂ ನಂಬಲಿಲ್ಲ. ಒಂದಾ ಆ ವಾಕ್ಯದಲ್ಲಿ ಯಾವುದೋ ಸಾಮಾನ್ಯ ವ್ಯಕ್ತಿಯ ಹೆಸರು ಬರೆಯಲು ಹೋಗಿ ನರೇಂದ್ರ ಮೋದಿ ಎಂದು ಬರೆದಿರಬೇಕು ಅಥವಾ ಓಶಿಯನ್ ಪರ್ಲ್ ಎಂದು ಬರೆಯಬೇಕಾದ ಕಡೆ ತಪ್ಪಿ ಸರ್ಕೂಟ್ ಹೌಸ್ ಎಂದು ಬರೆದಿರಬೇಕು. ಖಂಡಿತವಾಗಿ ಯಾವುದಾದರೂ ಒಂದು ತಪ್ಪಾಗಿ ಪ್ರಿಂಟಾಗಿರಬೇಕು ಎಂದು ಅಂದುಕೊಂಡವರೇ ಹೆಚ್ಚು.
ಆದರೆ ದೇಶದ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ ತನ್ನ ನಡೆ ನುಡಿಯಲ್ಲಿ ಸ್ಪಷ್ಟತೆಯನ್ನು ಕಾಯ್ದುಕೊಂಡಿದ್ದಾರೆ. ಅವರು ಮನಸ್ಸು ಮಾಡಿದರೆ ಮಂಗಳೂರಿನ ಯಾವುದಾದರೂ ಪಂಚತಾರಾ ಹೋಟೇಲಿನಲ್ಲಿ ನಿಲ್ಲಬಹುದಿತ್ತು. ಅವರು ಹಾಗೆ ಇಂತಹುದೇ ಹೋಟೇಲ್ ಬೇಕು ಎಂದರೆ ಆಗುವುದಿಲ್ಲ ಎಂದು ಪ್ರಧಾನಿ ಕಚೇರಿ ಅಥವಾ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೇಳುವಂತಿಲ್ಲ. ಅದರ ಬಿಲ್ ನಾವು ಕೊಡುವುದಿಲ್ಲ ಎಂದು ಕೇಂದ್ರ ಸರಕಾರದ ಯಾವುದೇ ಸಚಿವಾಲಯ ಅಥವಾ ಜಿಲ್ಲಾಡಳಿತ ಅಥವಾ ನಮ್ಮ ಸಂಸದರು ಹೇಳಲು ಹೋಗುವುದಿಲ್ಲ. ಮೋದಿಯವರೊಂದಿಗೆ ಬರುವ ಅವರ ಅಷ್ಟೂ ಸೆಕ್ಯೂರಿಟಿ, ಸಹಾಯಕ ಅಧಿಕಾರಿಗಳು ಎಲ್ಲರೂ ಅದೇ ಹೋಟೇಲಿನಲ್ಲಿ ನಿಲ್ಲಬೇಕಾಗುತ್ತದೆ, ಅದರ ಖರ್ಚು, ವೆಚ್ಚ ಕೂಡ ಸ್ಥಳೀಯ ಜಿಲ್ಲಾಡಳಿತವೋ ಅಥವಾ ಯಾರಾದರೂ ಭರಿಸಲೇಬೇಕು. ಒಟ್ಟಿನಲ್ಲಿ ಅವರು ಬಂದು ಹೋದ ಮೇಲೆ ಯಾರಾದರೂ ತಮ್ಮ ಜೇಬು ಹಗುರ ಮಾಡಿಕೊಳ್ಳಬೇಕಿತ್ತು. ಜಿಲ್ಲಾಡಳಿತ ಭರಿಸಿದರೂ ಅದು ನಮ್ಮ ತೆರಿಗೆಯ ಹಣವೇ ಆಗುತ್ತಿತ್ತು. ಸಂಸದರು ಕೊಟ್ಟರೂ ಯಾರಾದರೂ ಸ್ಥಳೀಯ ಸಿರಿವಂತ ನಾಯಕರಿಂದಲೂ ಒಟ್ಟು ಮಾಡಿಯೇ ಕೊಡಬೇಕಿತ್ತು. ಕೊಟ್ಟವರು ಸುಮ್ಮನೆ ಕೊಡುತ್ತಾರಾ, ಏನಾದರೂ ಫೆವರ್ ಕೇಳಿಯೇ ಕೇಳುತ್ತಾರೆ. ಒಟ್ಟಿನಲ್ಲಿ ಪ್ರಧಾನ ಮಂತ್ರಿ ಬಂದು ಫೈವ್ ಸ್ಟಾರ್ ಹೋಟೇಲಿನಲ್ಲಿ ನಿಲ್ಲುವಾಗ ಆ ಹೋಟೇಲಿನ ಒಂದೊಂದು ಅಂತಸ್ತನ್ನೇ ಖಾಲಿ ಇಡಬೇಕು. ಅದರ ಹೊರೆ ಕೂಡ ಕೊಡುವವರಿಗೆ ಬೀಳುತ್ತದೆ. ಆದ್ದರಿಂದ ಪ್ರಧಾನ ಮಂತ್ರಿಗಳು ಮಂಗಳೂರಿಗೆ ಬಂದು ಒಂದು ರಾತ್ರಿ ತಂಗುತ್ತಾರೆ ಎಂದರೆ ಪಕ್ಷದ ಸ್ಥಳೀಯ ನಾಯಕರು ಟೆನ್ಷನ್ ಮಾಡಿಕೊಳ್ಳಬೇಕಿತ್ತು. ಆದರೆ ಮೋದಿ ಹಾಗೆ ತಮ್ಮ ಪಕ್ಷದವರಿಗೆ ಟೆನ್ಷನ್ ಕೊಡುವ ಜಾಯಮಾನದವರೇ ಅಲ್ಲ. ಅವರದೇನಿದ್ದರೂ ಒಳ್ಳೊಳ್ಳೆಯ ಕೆಲಸ ಮಾಡಿ ವಿಪಕ್ಷಗಳಿಗೆ ಟೆನ್ಷನ್ ಕೊಡುವ ಕೆಲಸ. ಇವತ್ತು ಕೂಡ ಹಾಗೆ ದೇಶದ ಪ್ರಧಾನ ಸೇವಕ ಎಂದೇ ತಮ್ಮನ್ನು ತಾವು ಕರೆಸಿಕೊಳ್ಳುವ ಮೋದಿ ಒಬ್ಬ ಎ ಗ್ರೇಡಿನ ಸರಕಾರಿ ಅಧಿಕಾರಿ ನಿಲ್ಲುವ ಸರ್ಕೂಟ್ ಹೌಸಿನಲ್ಲಿ ನಿಲ್ಲಲಿದ್ದಾರೆ. ಇದರಲ್ಲಿ ದೊಡ್ಡ ವಿಷಯ ಏನೆಂದರೆ ಮಂಗಳೂರಿಗೆ ಮುಖ್ಯಮಂತ್ರಿ ಬಂದರೆ ಸುರಕ್ಷತೆಗೆಂದು ಬರುತ್ತಾರಲ್ಲ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಅವರು ಕೂಡ ನಿಲ್ಲುವುದು ಓಶಿಯನ್ ಪರ್ಲ್ ನಲ್ಲಿ. ಅವರಿಗೆ ಕೂಡ ಐಷಾರಾಮಿ ವ್ಯವಸ್ಥೆ ಬೇಕು. ಅವರು ಬಂದು ಮುಖ್ಯಮಂತ್ರಿ ಅಥವಾ ರಾಜ್ಯಪಾಲರು ಹೋಗುವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿಕೊಟ್ಟು ಬೆಂಗಳೂರಿಗೆ ಹಿಂತಿರುಗುತ್ತಾರೆ. ಅಂತವರು ಕೂಡ ಸರ್ಕೂಟ್ ಹೌಸಿನ ಕಡೆ ಮುಖ ತಿರುಗಿಸಿ ನೋಡುವುದಿಲ್ಲ. ಅಂತಹ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಏರ್ ಪೋರ್ಟಿನಿಂದ ಓಶಿಯನ್ ಪರ್ಲ್ ಗೆ ಬರುವುದಾದರೆ ಜೀರೋ ಟ್ರಾಫಿಕ್ ಮಾಡಿ ಹತ್ತಿಪ್ಪತ್ತು ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ತಮ್ಮ ಮುಖ್ಯ ಕೆಲಸ ಬಿಟ್ಟು ಹಲ್ಲು ಗಿಂಜಿ ನಿಲ್ಲುತ್ತಾರೆ. ಇನ್ನು ನಮ್ಮ ರಾಜ್ಯದ ಯಾವುದಾದರೂ ಮಂತ್ರಿ ಮಂಗಳೂರಿಗೆ ಬಂದರೆ ನಿಲ್ಲುವುದು ಒಂದಾ ಓಶಿಯನ್ ಪರ್ಲ್ ಅಥವಾ ಗೇಟ್ ವೇ ಇನ್ ನ್. ಅವರಿಗೂ ಸರ್ಕೂಟ್ ಹೌಸ್ ಬೇಡಾ. ಇಂತವರೆಲ್ಲ ಇವತ್ತು ಕಣ್ಣು ಬಾಯಿ ಬಿಟ್ಟು ಪ್ರಧಾನಿಯನ್ನು ನೋಡಿ ಕಲಿಯಬೇಕು. ಉನ್ನತ ಪೊಲೀಸ್ ಅಧಿಕಾರಿಗಳು ಬಂದರೆ ಓಶಿಯನ್ ಪರ್ಲ್ ಅಥವಾ ದೊಡ್ಡ ಹೋಟೇಲೆ ಬೇಕು ಎಂದು ಹೇಳುವುದು ಏಕೆಂದರೆ ಬಿಲ್ ಕೊಡುವುದು ಅವರ ಕಿಸೆಯಿಂದ ಅಲ್ಲವಲ್ಲ. ಇವರು ನಿಂತ, ಮಲಗಿದ, ತಿಂದ, ಬಿಟ್ಟ ಎಲ್ಲದರ ಬಿಲ್ ಕೊಡುವುದು ಆ ವ್ಯಾಪ್ತಿಯ ಪೊಲೀಸ್ ಸ್ಟೇಶನ್ ನ ಇನ್ಸಪೆಕ್ಟರ್. ಇವರ ಬಿಲ್ ತನ್ನ ಕಿಸೆಯಿಂದ ಕೊಟ್ಟರೆ ಅವರು ಎರಡು ತಿಂಗಳಿನ ಸಂಬಳ ಅದಕ್ಕೆ ತೆಗೆದಿಡಬೇಕು. ಅದಕ್ಕೆ ಅವರು ಏನು ಮಾಡುತ್ತಾರೆ ಎಂದರೆ ತಮ್ಮ ವ್ಯಾಪ್ತಿಯಲ್ಲಿ ದೋ ನಂಬರಿನ ವ್ಯಾಪಾರ ಮಾಡುವವರಿಂದ ಬಿಲ್ ಕೊಡಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಆ ಉದ್ಯಮಿ ಇನ್ನಷ್ಟು ಆರಾಮವಾಗಿ ಅವ್ಯವಹಾರ ಮಾಡುತ್ತಾನೆ, ಯಾಕೆಂದರೆ ಅವನು ಹೋಟೇಲಿನ ಬಿಲ್ ಕಟ್ಟಿ ತನ್ನ ಪಾಲಿನ ಹಫ್ತಾ ಕೊಟ್ಟಿದ್ದಾನಲ್ಲ. ಇದನ್ನು ಉನ್ನತ ಪೊಲೀಸ್ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.
ಮೊನ್ನೆ ಗುಜರಾತಿನಲ್ಲಿ ಸರದಿಯಲ್ಲಿ ನಿಂತು ವೋಟ್ ಹಾಕಿ ಬಂದದ್ದು, ಧರ್ಮಸ್ಥಳ ದೇವಸ್ಥಾನದಲ್ಲಿ ದೇವರ ದರ್ಶನ ಆಗುವ ತನಕ ಉಪವಾಸ ಇದ್ದದ್ದು ಎಲ್ಲಾ ನೋಡುವಾಗ ಯಾಕೋ ಪ್ರಧಾನ ಸೇವಕನನ್ನು ಇನ್ನಷ್ಟು ವರ್ಷ ನಮ್ಮ ಸೇವೆಗೆ ಉಳಿಸಬೇಕು ಎಂದೆನಿಸುತ್ತದೆ. ಈಗಿನ ಕಾಲದಲ್ಲಿ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಕೆಲಸ ಮಾಡುವ ಸೇವಕರು ಎಲ್ಲಿ ಸಿಗ್ತಾರೆ ಹೇಳಿ, ನಮ್ಮ ದೇಶಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ!
Leave A Reply