ವೈಯಕ್ತಿಕ ವಿಷಯಕ್ಕೆ ಎದುರಾಳಿ ಕೈ ಹಾಕಿದ್ದಾನೆ ಎಂದರೆ ಸೋಲಿಗೆ ಮುಖ ಮಾಡಿದ್ದಾನೆ ಎಂದೇ ಅರ್ಥ!
ಚುನಾವಣೆ ಎಂದರೆ ನಾವು ವಾಸಿಸುವ ಪರಿಸರ, ನಮ್ಮ ಜಿಲ್ಲೆ, ನಮ್ಮ ರಾಜ್ಯ ಮತ್ತು ನಮ್ಮ ದೇಶಕ್ಕೆ ಸೂಕ್ತವಾದ ಕಾನೂನು, ಯೋಜನೆಗಳನ್ನು ರೂಪಿಸಬಲ್ಲ, ನಮ್ಮ ಮಧ್ಯದಲ್ಲಿಯೇ ಇರುವ ಕೆಲವು ವ್ಯಕ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವು ದೇಶ, ರಾಜ್ಯ, ಜಿಲ್ಲೆ, ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಶ್ರಮಿಸುತ್ತೇವೆ. ಜನರಿಗೆ ಬೇಕಾದ ಯೋಜನೆಗಳನ್ನು ತರುತ್ತೇವೆ. ಅದು ಬಿಟ್ಟು ನಮಗೆ ಲಾಭ ಇರುವ ಯೋಜನೆಗಳಿಗೆ ಕೈ ಹಾಕುವುದಿಲ್ಲ, ಜನರ ತೆರಿಗೆಯ ಹಣದ ಒಂದೇ ಒಂದು ರೂಪಾಯಿಯನ್ನು ವೈಯಕ್ತಿಕವಾಗಿ ಬಳಸದೇ ಯೋಜನೆಗೆ ಹಾಕುತ್ತೇವೆ. ಜನರ ಹಿತವೇ ನಮ್ಮ ಹಿತ ಎಂದು ಜನರಿಗೆ ಮನವರಿಕೆ ಮಾಡುವ ಪಕ್ಷವನ್ನು ಮತ್ತು ಅದರ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸಿ ಅವರ ಕೈಯಲ್ಲಿ ಅಧಿಕಾರ ಕೊಡುತ್ತಾರೆ. ಅವರು ಐದು ವರ್ಷಗಳಲ್ಲಿ ಎನು ಮಾಡಿದ್ದಾರೆ ಎಂದು ನೋಡುತ್ತಾರೆ. ಒಳ್ಳೆಯದು ಮಾಡಿದರೆ ಮತ್ತೆ ಅವರು ಪ್ರಚಾರ ಮಾಡಲೇ ಬೇಕಿಲ್ಲ. ಜನ ಗೆಲ್ಲಿಸುತ್ತಾರೆ. ಅದೇ ಕೈಯಲ್ಲಿ ಅಧಿಕಾರ ಕೊಟ್ಟು ಏನು ಮಾಡದೇ ಕುಳಿತರೆ ಆಗ ಜನ ಆ ವ್ಯಕ್ತಿ ಎಷ್ಟು ಗಂಟಲು ಚೀರಿಕೊಂಡು ಮತ ನೀಡಿ ಎಂದು ಬೇಡಿಕೊಂಡರೂ ಜನ ಹಿಂದಿರುಗಿ ನೋಡುವುದಿಲ್ಲ. ಇದು ನಡೆದುಕೊಂಡು ಬಂದಿರುವ ಸಂಪ್ರದಾಯ. ಇಷ್ಟೇ ಆದರೆ ಸಾಕು. ಜನರಿಗೆ ಗೊತ್ತಿದೆ. ಯಾರಿಗೆ ಮತ ಹಾಕಬೇಕು ಎನ್ನುವುದು.
ಗೆಲ್ಲಲು ವೈಯಕ್ತಿಕಕ್ಕೆ ಕೈ….
ಆದರೆ ಈ ಬಾರಿಯ ಚುನಾವಣೆಯಲ್ಲಿ ಏನಾಗಿದೆ ಎಂದರೆ ಒಬ್ಬ ವ್ಯಕ್ತಿ ಕಳೆದ ಬಾರಿ ಗೆದ್ದು ಜನಪ್ರತಿನಿಧಿಯಾಗಿದ್ದರು ಎಂದು ಇಟ್ಟುಕೊಳ್ಳಿ. ಅವರು ಕಳೆದ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಎನ್ನುವುದನ್ನು ಅವರು ಜನರ ಮುಂದೆ ಇಟ್ಟು ಮತ ಕೇಳುತ್ತಾರೆ. ಆದರೆ ಅದರಲ್ಲಿ ಅವರು ಜನರನ್ನು ಸೆಳೆಯಲು ಕೆಲವು ಸತ್ಯಕ್ಕೆ ದೂರವಾದ ವಿಷಯಗಳನ್ನು ಕೂಡ ಸೇರಿಸುವ ಸಾಧ್ಯತೆ ಇದೆ. ಹಾಗೆ ಅವರು ಅಧಿಕಾರಕ್ಕೆ ಬರುವ ಮೊದಲು ಇದ್ದ ಪರಿಸ್ಥಿತಿ ಐದು ವರ್ಷಗಳ ನಂತರ ಹಾಗೆ ಮುಂದುವರೆದರೆ ಆಗ ಜನ ಇದಕ್ಕಾ ಇವರಿಗೆ ವೋಟ್ ಕೊಟ್ಟಿದ್ದು ಎಂದು ಪ್ರಶ್ನಿಸಿಯೇ ಪ್ರಶ್ನಿಸುತ್ತಾರೆ. ಅದನ್ನು ಅವರ ಎದುರಿಗೆ ನಿಂತ ಅಭ್ಯರ್ಥಿಗೆ ಕೇಳುತ್ತಾರೆ. ನೀವು ಕೂಡ ಹೀಗೆನೆ ಮಾಡುವುದಾ ಎನ್ನುತ್ತಾರೆ. ಆಗ ಜನರಿಗೆ ವಾಸ್ತವಾಂಶವನ್ನು ಪ್ರತಿಸ್ಪರ್ಧಿ ನೀಡಬೇಕಾಗುತ್ತದೆ. ಇನ್ನೊಂದು ಪಕ್ಷದ ಅಭ್ಯರ್ಥಿ ಅಥವಾ ಹಾಲಿ ಜನಪ್ರತಿನಿಧಿ ಏನೆಲ್ಲ ಮಾಡಬಹುದಿತ್ತು ಮತ್ತು ಏನೂ ಮಾಡದ ಕಾರಣಕ್ಕೆ ನಮ್ಮ ಊರು ಹೀಗಿದೆ ಎಂದು ಹೇಳಲೇಬೇಕಾಗುತ್ತದೆ. ಅವರಿಗೆ ಮತ್ತೆ ಅಧಿಕಾರ ಕೊಟ್ಟರೆ ಇಂತಹ ಯೋಜನೆಗಳು ಹಳ್ಳ ಹಿಡಿದು ಚರಂಡಿ ಸೇರುತ್ತವೆ ಎನ್ನಲೇ ಬೇಕಾಗುತ್ತದೆ.
ಇದರಿಂದ ಹಾಲಿ ಜನಪ್ರತಿನಿಧಿಗೆ ಸೋಲು ಗ್ಯಾರಂಟಿಯಾಗುತ್ತದೆ ಎನ್ನುವ ಆತಂಕ ಶುರುವಾದಾಗ ಆತ ಜನರ ದಾರಿ ತಪ್ಪಿಸಲು ಅಡ್ಡದಾರಿ ಹಿಡಿಯುವ ಸಾಧ್ಯತೆ ಈಗೀಗ ಹೆಚ್ಚೆಚ್ಚು ಕಾಣುತ್ತಿದೆ. ತನ್ನ ಸೋಲು ತಪ್ಪಿಸಿಕೊಳ್ಳಲು ಎದುರಾಳಿಯ ವೈಯಕ್ತಿಕ ವಿಷಯಕ್ಕೆ ಕೈ ಹಾಕುವ ಕೆಲಸಕ್ಕೆ ಕೆಲಸ ಮುಂದಾಗುತ್ತಾನೆ.
ಸೋಲಲು ತಯಾರಾದವರು ವೈಯಕ್ತಿಕ ವಿಷಯಕ್ಕೆ…
ಇದರಿಂದ ಜನರು ಕೊನೆಯ ಕ್ಷಣದಲ್ಲಿ ದಾರಿ ತಪ್ಪಿ ಭ್ರಷ್ಟನನ್ನು ಆಯ್ಕೆ ಮಾಡಿ ಸುಳ್ಳಿನ ಜಾಲದಲ್ಲಿ ಬೀಳುವ ಚಾನ್ಸ್ ಇರುತ್ತದೆ. ಜನಪ್ರತಿನಿಧಿಯಾಗುವವರು ತಮ್ಮ ಕ್ಷೇತ್ರದ ಜನರ ಅಭಿವೃದ್ಧಿ ಮಾಡಲು ಆಯ್ಕೆಯಾಗುವವರೇ ವಿನ: ರಾಜ್ಯಭಾರ ಮಾಡಲು ಅಲ್ಲ. ಈಗ ಏನಾಗುತ್ತಿದೆ ಎಂದರೆ ಅಭಿವೃದ್ಧಿ, ಕಳಪೆ ಯೋಜನೆಗಳು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಾನೂನು ಉಲ್ಲಂಘಿಸಿ ಸಹಾಯ ಈ ವಿಷಯಗಳು ಚರ್ಚೆಗೆ ಬರುವಾಗ ಅದಕ್ಕೆ ಸರಿಯಾಗಿ ಉತ್ತರ ಕೊಡಬೇಕಾಗಿರುವುದು ಬಿಟ್ಟು ಎದುರಾಳಿಯ ವೈಯಕ್ತಿಕ ವಿಚಾರಕ್ಕೆ ಕೈ ಹಾಕಿ ಚುನಾವಣೆಯನ್ನೇ ಅಸಹ್ಯಕ್ಕೆ ದೂಡುವ ಟ್ರೆಂಡ್ ಶುರುವಾಗುತ್ತಿದೆ. ಇನ್ನು ನೀವು ಮತ ಕೊಡುವುದು ಒಂದು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಅದರ ಬೆಳವಣಿಗೆಗೆ ತನು, ಮನ, ಧನ ಅರ್ಪಿಸಿ ದೇಶ ಕಟ್ಟಿದ ಯುವಕನಿಗೆ ವಿನ: ಯಾವ ಅಡ್ರೆಸ್ ಎಂದು ಗೊತ್ತಿಲ್ಲದ ಅಬ್ಬೆಪಾರಿಗೆ ಅಲ್ಲ. ನೀವು ಬಿಜೆಪಿಗೆ ಮತ ಕೊಡುವಾಗ ಅದರ ತತ್ವ, ಸಿದ್ಧಾಂತ ಹಾಗೆ ಕಾಂಗ್ರೆಸ್ ಗೆ ಮತ ಕೊಡುವುದಾದರೆ ಅವರ ತತ್ವ, ಸಿದ್ಧಾಂತ ನೋಡಿಯೇ ಮತ ಕೊಡುತ್ತೀರಿ. ಈ ಬಾರಿಯಂತೂ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಯನ್ನು ನಿಲ್ಲಿಸಿದೆ. ಒಬ್ಬ ಅಭ್ಯರ್ಥಿಯ ವೈಯಕ್ತಿಕ ವಿಚಾರವನ್ನು ನೀವು ನೋಡಲು ಇದೇ ಗ್ರಾಮ ಪಂಚಾಯತ್ ಚುನಾವಣೆ ಅಲ್ಲ. ಇನ್ನು ಇಲ್ಲಿ ಪಕ್ಷೇತರ ಅಭ್ಯರ್ಥಿಗಳ ನಡುವೆ ಕದನ ಅಲ್ಲ. ವಿಧಾನಸಭಾ ಚುನಾವಣೆ ಎಂದರೆ ಎರಡು ತತ್ವ, ಸಿದ್ಧಾಂತದ ನಡುವಿನ ಚುನಾವಣೆ.
ಚುನಾವಣೆ ಎಂದರೆ ಮದುವೆ ಅಲ್ಲ. ಇಲ್ಲಿ ಅಭ್ಯರ್ಥಿಯೊಂದಿಗೆ ನಾವು ನೆಂಟಸ್ತನ ಕೂಡಿಕೊಳ್ಳುವುದಲ್ಲ. ಅವನ ವೈಯಕ್ತಿಕ ಬದುಕು ಚೆನ್ನಾಗಿರಬೇಕು ನಿಜ, ಹಾಗಂತ ಯಾವುದೋ ವಿಷಯವನ್ನು ಅವನೊಂದಿಗೆ ಕಲ್ಪಿಸಿ ಅವನ ತೇಜೋವಧೆ ಮಾಡಲು ಇಳಿಯುವ ಅಗತ್ಯ ಯಾರಿಗಾದರೂ ಬಂದಿದೆ ಎಂದರೆ ಅವರಿಗೆ ಎದುರಿಗೆ ಸೋಲು ಕಾಣಿಸುತ್ತಿದೆ ಎಂದರ್ಥ!
Leave A Reply