ಮಂಗಳೂರು ಈ ಪರಿ ನೆರೆ ಕಾಣಲು ಇರುವ ಕಾರಣಗಳೇನು!!
ಇಂತಹ ಮಳೆಯನ್ನು ನಾನು ಯಾವತ್ತೂ ಕಾಣಲಿಲ್ಲ ಮಾರಾಯ್ರೆ ಎಂದು ಹಲವಾರು ಜನ ಮಂಗಳವಾರ ಬೆಳಿಗ್ಗೆ ಸರಿಯಾಗಿ ಹತ್ತು ಗಂಟೆಗೆ ಡ್ಯೂಟಿಗೆ ಬಂದವನಂತೆ ಕಾಣಿಸುತ್ತಿದ್ದ ವರುಣನ ಬಗ್ಗೆ ಹೇಳಿದ್ದನ್ನು ನೀವು ಕೇಳಿರಬಹುದು. ಮಳೆರಾಯ ಕೂಡ ಭೂಮಿಯನ್ನು ನೋಡದೇ ಹಲವಾರು ದಿನ ಆದವನಂತೆ ದುಮ್ಮಿಕ್ಕಿದ ರೀತಿಯನ್ನು ನೋಡಿದವರಿಗೆ ಇವನು ಸದ್ಯಕ್ಕೆ ಹೋಗಲ್ಲ ಎಂದು ಅನಿಸಿದ್ದು ಮಧ್ಯಾಹ್ನದ ಹೊತ್ತಿಗೆ. ಚಂದಿರ ಆಗಸದಲ್ಲಿ ಕಾಣಿಸುತ್ತಿದ್ದಂತೆ ಸುಸ್ತಾದ ವರುಣದೇವ ತನ್ನ ಪಾಡಿಗೆ ತಾನು ಅಪರಾತ್ರಿಯ ಯಾವುದೋ ಘಳಿಗೆಯಲ್ಲಿ ಹೊರಟು ಹೋಗಿದ್ದಾನೆ. ಪ್ರಕೃತಿಯ ಒಡಲು ತಂಪಾಗಿದೆ. ಎಲ್ಲಿಯ ತನಕ ಅಂದರೆ ಮಳೆಯ ನೀರು ಸಮುದ್ರವನ್ನು ಸೇರುವ ಧಾವಂತದಲ್ಲಿ ಹೋದರೂ ಸಮುದ್ರ ಯಾವ ದಾಕ್ಷಿಣ್ಯವೂ ಇಲ್ಲದೆ ಹಿಂದಕ್ಕೆ ದೂಡಿದ ಪರಿಣಾಮವಾಗಿ ಮಳೆ ಹೋದ ದಾರಿಗೆ ಸುಂಕವಿಲ್ಲದೇ ಮುಖ್ಯರಸ್ತೆಯಲ್ಲಿ ಬೀಡುಬಿಟ್ಟಿತ್ತು. ಮಂಗಳವಾರ ಕೊಟ್ಟಾರಚೌಕಿ, ಬಳ್ಳಾಲ್ ಬಾಗ್, ಪಡೀಲ್ ಸಹಿತ ಅನೇಕ ಕಡೆ ಚರಂಡಿ ಯಾವುದು, ರಸ್ತೆ ಯಾವುದು ಎಂದು ಗೊತ್ತಾಗದೇ ಜನ ಗೊಂದಲಕ್ಕೆ ಈಡಾದರು. ಬುಧವಾರ ಮಳೆಯ ನೀರು ನಿಂತ ಕುರುಹುಗಳು ಅಲ್ಲಲ್ಲಿ ಕಾಣುತ್ತಿವೆ. ಈಗ ಈ ಪರಿಸ್ಥಿತಿ ಮತ್ತೆ ಬಾರದಿರಲಿ ಎನ್ನುವ ಪ್ರಾರ್ಥನೆ ಎಲ್ಲಾ ಕಡೆ ಕೇಳಿಬರುತ್ತಿದೆ.
ಗದ್ದೆಗಳಲ್ಲಿ ಈಗ ಫ್ಲಾಟ್ಸ್…
ಮಂಗಳವಾರ ಮಂಗಳೂರಿನ ಪರಿಸ್ಥಿತಿಗೆ ಅರ್ಧ ಪ್ರಕೃತಿ ಕಾರಣವಾದರೆ ಉಳಿದರ್ಧ ನಮ್ಮ ಅಂದರೆ ಜನರ ಸ್ವಯಂಕೃತಾಪರಾಧ. ನಾವು ಸರಿಯಾಗಿದ್ದರೆ ಮಳೆರಾಯ ಎಲ್ಲಿ ಹರಿಯಬೇಕೋ ಅಲ್ಲಿ ಹರಿಯುತ್ತಿದ್ದ. ಇದು ಒಂದು ರೀತಿಯಲ್ಲಿ ಅರಣ್ಯಗಳು ಕಡಿಮೆಯಾಗುತ್ತಿದ್ದಂತೆ ವನ್ಯಜೀವಿಗಳು ನಾಡಿಗೆ ದಾಳಿ ಇಡುತ್ತವೆಯಲ್ಲ ಹಾಗಿತ್ತು ಪರಿಸ್ಥಿತಿ. ನೀವು ಮೂವತ್ತು, ನಲ್ವತ್ತು ವರ್ಷಗಳ ಹಿಂದಿನ ಮಂಗಳೂರು ನಗರದ ಚಿತ್ರಣವನ್ನು ಎಲ್ಲಿಯಾದರೂ ಹಳೆಫೋಟೋಗಳಲ್ಲಿ ಇದ್ದರೆ ನೋಡಿ. ಎಂಜಿ ರಸ್ತೆಯ ಅಕ್ಕಪಕ್ಕದಲ್ಲಿ ಎಷ್ಟು ವಸತಿ ಸಮುಚ್ಚಯಗಳಿದ್ದವು ಎನ್ನುವುದು ಗೊತ್ತಾಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಇದ್ದದ್ದು ಗದ್ದೆಗಳು. ಮಳೆಯ ನೀರು ಸಮುದ್ರಕ್ಕೆ ಹೋಗುವಾಗ ಹೆಚ್ಚಾದರೆ ಈ ಗದ್ದೆಗಳಿಗೆ ಮರಳುತ್ತಿತ್ತು. ಈ ಮೂಲಕ ಸಮತೋಲನ ಕಾಣುತ್ತಿತ್ತು. ಆದರೆ ಕಾಲಕ್ರಮೇಣ ನಗರದ ಗದ್ದೆಗಳು ಬಿಲ್ಡರ್ ಗಳ ಪಾಲಾದವು. ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕಿರ್ಣಗಳು ತಲೆ ಎತ್ತಿದವು. ಗದ್ದೆಗಳು ಫೋಟೋಗಳಿಗೆ ಬಾಕಿಯಾದವು.
ವಸತಿ ಸಮುಚ್ಚಯಗಳು ಹೆಚ್ಚಾದಂತೆ ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಬೇಕಾಗಿರುವುದು ಸ್ಥಳೀಯಾಡಳಿತದ ಜವಾಬ್ದಾರಿ. ಸ್ಥಳೀಯಾಡಳಿತ 1969 ರಲ್ಲಿ ಪೈಪುಗಳನ್ನು ಹಾಕುವ ಮೂಲಕ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಟ್ಟಿತ್ತು. ಇವತ್ತಿಗೂ 49 ವರ್ಷಗಳ ಬಳಿಕ ಅವೇ ಪೈಪುಗಳು ಇವೆ. ಮಂಗಳೂರಿನ ಜನಸಂಖ್ಯೆ ನಾಲ್ಕು ಪಟ್ಟು ಜಾಸ್ತಿಯಾಗಿದೆ. ಆವತ್ತು ಜನಸಂಖ್ಯೆ ಒಂದು ಲಕ್ಷ ಇದ್ದರೆ ಈಗ ಐದು ಲಕ್ಷ. ಇನ್ನು ಪಾಲಿಕೆ ಆವತ್ತು ಹಾಕಿದ್ದ ಎರಡು ಇಂಚು ಪೈಪುಗಳು ಹಳೆಯದಾಗಿವೆ. ಈಗ ಇವರು ಕನಿಷ್ಟ 10 ಇಂಚಿನ ಪೈಪಾದರೂ ಹಾಕಬೇಕು. ಹಾಕದ ಪರಿಣಾಮವಾಗಿ ಕೃತಕ ನೆರೆ ನಮ್ಮ ಮನೆಯ ಬಾಗಿಲನ್ನು ಪ್ರವೇಶಿಸಿವೆ.
ಕಬ್ಬಿಣದ ಜಾಲಿಯನ್ನು ಕ್ಯಾರೇ ಮಾಡಲಿಲ್ಲ….
ಇನ್ನು ಕಾಂಕ್ರೀಟ್ ರಸ್ತೆಯ ಬಳಿಕ ಫುಟ್ ಪಾತ್ ಮಾಡುವಾಗ ಕರ್ಬ್ ಸ್ಟೂನ್ ಎನ್ನುವ ವ್ಯವಸ್ಥೆ ಇದೆ. ಅದಕ್ಕೆ ಸಣ್ಣ ಸಣ್ಣ ತೂತುಗಳನ್ನು ಇಡಲಾಗುತ್ತದೆ. ಆದರೆ ಮಳೆಗಾಲ ಪ್ರಾರಂಭವಾಗುವ ಹದಿನೈದು ದಿನಗಳಿರುವಾಗ ಅದನ್ನು ಸ್ವಚ್ಚ ಮಾಡದಿದ್ದಲ್ಲಿ ಆ ಜಾಗದಲ್ಲಿ ಮಣ್ಣು, ಮರಳು ನಿಂತು ನೀರು ಚರಂಡಿಗೆ ಇಳಿಯಲು ಆಗುವುದಿಲ್ಲ. ಇನ್ನು ಕೆಲವಡೆ ತೂತುಗಳನ್ನು ರಸ್ತೆಯಿಂದ ಮೇಲೆ ಇಡಲಾಗುತ್ತದೆ. ಇದರಿಂದ ನೀರು ಒಳಪ್ರವೇಶಿಸಲು ಕಷ್ಟವಾಗಿ ನೀರು ಒಳಗೆ ಹೋಗುವುದಿಲ್ಲ.
ಇನ್ನು ಕಾಂಕ್ರೀಟ್ ರಸ್ತೆಗಳಿಗೆ ಕಬ್ಬಿಣದ ಜಾಲಿಯನ್ನು ಅಳವಡಿಸುವ ಕ್ರಮ ಇದೆ. ನೀರು ರಸ್ತೆಯಲ್ಲಿ ಬಿದ್ದಾಗ ಅದು ಕಬ್ಬಿಣದ ಜಾಲಿಯಿಂದ ಕೆಳಗೆ ಇಳಿಯಲಿ ಎನ್ನುವ ಉದ್ದೇಶ. ಆದರೆ ಹಲವೆಡೆ ಏನಾಗುತ್ತದೆ ಎಂದರೆ ಕಬ್ಬಿಣದ ಜಾಲಿಯಲ್ಲಿ ನೀರು ಪ್ರವೇಶಿಸದ ಹಾಗೆ ಗಿಡಗಂಟೆಗಳು ಬೆಳೆದಿರುವುದನ್ನು ನೀವು ನೋಡಿರಬಹುದು.
ಮೇಲ್ನೋಟಕ್ಕೆ ನೋಡುವಾಗ ಇದೆಲ್ಲ ಚಿಕ್ಕ ವಿಷಯಗಳು ಅನಿಸಬಹುದು. ಅನೇಕ ಬಾರಿ ಎಪ್ರಿಲ್-ಮೇ ತಿಂಗಳಲ್ಲಿ ಬಿರು ಬೇಸಿಗೆಗೆ ಈ ವಿಷಯಗಳು ಒಂದೋ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ ಅಥವಾ ಮುಂದೂಡಲ್ಪಟ್ಟಿರುತ್ತವೆ. ಇದನ್ನೆಲ್ಲ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಮುಂದೆ ಬರಬಹುದಾಗಿರುವ ನೆರೆಯ ಅಂದಾಜು ಸಿಗುತ್ತದೆ. ಒಂದು ಕರ್ಬ್ ಸ್ಟೋನ್ ಮತ್ತು ಕಬ್ಬಿಣದ ಜಾಲಿ ಬ್ಲಾಕ್ ಆದರೆ ಏನಾಗುತ್ತೆ ಎನ್ನುವ ಕ್ಯಾರ್ ಲೇಸ್ ಮೊನ್ನೆಯ ಮಂಗಳವಾರವನ್ನು ಭವಿಷ್ಯದಲ್ಲಿ ಮತ್ತೆ ನೆನಪಿಸಲಿದೆ. ಇನ್ನು ಮೂರ್ನಾಕು ತಿಂಗಳು ವರುಣನ ಸೀಸನ್, ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇರುವ ಸವಾಲು ಚಿಕ್ಕದ್ದಲ್ಲ!
Leave A Reply