ಅನುಭವದ ಸಂಜೀವಿನಿ ದಾಮಾಯಣ!
ಕಾಂತಾರಾ ಸಿನೆಮಾದಿಂದ ಆರಂಭವಾದ ಕರಾವಳಿಯ ಮಣ್ಣಿನ ಸೊಗಡನ್ನು ಹೊರಪ್ರಪಂಚಕ್ಕೆ ತಿಳಿಸುವ ಟ್ರೆಂಡ್ ದಾಮಾಯಣ ಸಿನೆಮಾದಿಂದ ಮುಂದುವರೆದಿದೆ. ಕೆಲವು ಸಿನೆಮಾಗಳು ಟೈಂಪಾಸ್ ಗಾಗಿ ಇರುತ್ತವೆ. ಕೆಲವು ಸಿನೆಮಾಗಳು ಯಾವತ್ತೂ ನೆನಪಿನಲ್ಲಿ ಇದ್ದು ಕಾಡುತ್ತವೆ. ಎರಡನೇ ಕೆಟಗರಿಗೆ ಸೇರಿದ ಸಿನೆಮಾ ದಾಮಾಯಣ. ಈ ಸಿನೆಮಾವನ್ನು ಕುಟುಂಬ ಸಮೇತರಾಗಿ ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರೂ ಬೇಕಾದರೂ ಖುಷಿಯಿಂದ ನೋಡಬಹುದು. ಯಾಕೆಂದರೆ ಸಿನೆಮಾದ ಚಿತ್ರಕಥೆಯೇ ಹಾಗೆ ಇದೆ. ಅದರಲ್ಲಿ ನವಿರಾದ ಹಾಸ್ಯ ಇದೆ. ಕಚಗುಳಿ ಇಡುವ ಹ್ಯೂಮರ್ ಇದೆ. ಒಂದು ಫ್ಯಾಮಿಲಿ ಕಥೆಯನ್ನು ಚೆಂದವಾದ ಪ್ಯಾಕೇಜಿನಲ್ಲಿ ಎಲ್ಲಿಯೂ ಬೋರು ಹೊಡೆಸದಂತೆ ಸಾಗಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಆ ಸಿನೆಮಾವನ್ನು ದಾಮಾಯಣ ಮಾಡಿದೆ. ಚಿತ್ರದ ಉದ್ದಕ್ಕೂ ಕಲಾವಿದರು ಆಕ್ಟಿಂಗ್ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಎಲ್ಲರದ್ದೂ ಸಹಜ ಅಭಿನಯ. ಚಿತ್ರದ ನಾಯಕ ದಾಮೋದರ್ ನಮ್ಮ ಆಸುಪಾಸಿನ ಮನೆಯ ಹುಡುಗನಂತೆ ಭಾಸವಾಗುತ್ತಾರೆ. ಅವರ ಅಭಿನಯ ಎಷ್ಟು ನೈಜವಾಗಿತ್ತು ಎಂದರೆ ಅವರು ಸಿನೆಮಾದ ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ. ಅದು ಅಭಿನಯ ಎಂದು ಅನಿಸುವುದೇ ಇಲ್ಲ. ದಾಮೋದರ ನಿಮ್ಮ ಪಕ್ಕದ ಸೀಟಿನಲ್ಲಿ ಕುಳಿತು ನಿಮ್ಮೊಂದಿಗೆ ಮಾತನಾಡುತ್ತಿದ್ದಾನೇನೋ ಎಂದು ಫೀಲ್ ಆಗುತ್ತದೆ. ಪಾತ್ರಗಳು ನಿಮ್ಮ ಎದುರೇ ವೇದಿಕೆ ಮೇಲೆ ಇದ್ದಾರೋ ಎಂದು ಅನಿಸುತ್ತದೆ. ಒಬ್ಬ ವ್ಯಕ್ತಿಯ ಮುಗ್ಧತೆ ಹೇಗೆ ಆತನ ಬದುಕಿನಲ್ಲಿ ತಿರುವನ್ನು ಪಡೆದುಕೊಳ್ಳುತ್ತೆ ಎನ್ನುವುದನ್ನು ಈ ಸಿನೆಮಾ ಹಾಸ್ಯದ ಹೊರಣದಲ್ಲಿ ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.
ಅನುಭವದ ಸಂಜೀವಿನಿ ದಾಮಾಯಣ!
ಬದುಕಿನಲ್ಲಿ ಎಲ್ಲಾ ಪಾಠವನ್ನು ನಾವು ನಮಗೆ ಆದ ಅನುಭವಗಳಿಂದ ಕಲಿತುಕೊಳ್ಳಲು ಆಗುವುದಿಲ್ಲ. ಕೆಲವನ್ನು ಬೇರೆಯವರ ಜೀವನದಿಂದಲೂ ನೋಡಿ ಕಲಿಯಬೇಕು. ದಾಮಾಯಣ ಅಂತಹ ಅನುಭವವನ್ನು ನಿಮಗೆ ನೀಡುತ್ತದೆ. ಇತ್ತೀಚೆಗೆ ಒಟಿಟಿಯಲ್ಲಿ ಎಂತೆಂತಹ ಹಾಳುಮೂಳು ಸಿನೆಮಾಗಳು ಬಂದು ಯುವಕರನ್ನು ದಾರಿತಪ್ಪಿಸುತ್ತಿರುವ ಈ ದಿನಗಳಲ್ಲಿ ಯುವಕರನ್ನು ಉತ್ತಮ ದಾರಿಯಲ್ಲಿ ಕರೆದುಕೊಂಡು ಹೋಗಬೇಕಾದರೆ ಇಂತಹ ಸಿನೆಮಾಗಳು ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯವರೇ ಇಂತಹ ಸಿನೆಮಾಗಳನ್ನು ಮಾಡಲು ಸಾಧ್ಯ ಎನ್ನುವುದು ಮತ್ತೆ ಸಾಬೀತಾಗಿದೆ. ಕಾಂತಾರಾದ ಬಳಿಕ ನನಗೆ ತುಂಬಾ ಇಷ್ಟವಾದ ಸಿನೆಮಾ ದಾಮಾಯಣ. ಇದರಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಶ್ರೀಮುಖ ಅವರು ಸುಳ್ಯದವರಾಗಿದ್ದು, ಗ್ರಾಮೀಣ ಭಾಗದಿಂದ ಬಂದಿರುವ ಅವರಿಗೆ ಅಲ್ಲಿನ ನಾಡಿಮಿಡಿತ ಗೊತ್ತಿದೆ. ಅದರೊಂದಿಗೆ ನಿರ್ದೇಶನವನ್ನು ಕೂಡ ಅವರೇ ಮಾಡಿರುವುದರಿಂದ ಸಿನೆಮಾದ ಆಗುಹೋಗಿನ ಪ್ರತಿ ಸೆಕೆಂಡಿನಲ್ಲಿಯೂ ಅವರ ಛಾಯೆ ಎದ್ದು ಕಾಣುತ್ತದೆ. ಇನ್ನು ಇಂತಹ ಸಿನೆಮಾಕ್ಕೆ ಬಂಡವಾಳ ಹಾಕಿ ನಿರ್ಮಾಪಕರಾಗಲು ಮುಂದೆ ಬಂದಿರುವ ರಾಘವೇಂದ್ರ ಕುಡ್ವ ಅವರನ್ನು ಮೆಚ್ಚಬೇಕು. ರಾಘವೇಂದ್ರ ಕುಡ್ವ ಅವರು ಒಂದು ಉತ್ತಮ ಸಿನೆಮಾವನ್ನು ನಿರ್ಮಿಸಿದ್ದಕ್ಕೆ ಮೊತ್ತಮೊದಲಿಗೆ ಅವರಿಗೆ ಹ್ಯಾಟ್ಸಪ್. ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಘವೇಂದ್ರ ಕುಡ್ವ ಅವರದ್ದು ಸಕರಾತ್ಮಕ ಚಿಂತನೆಗಳು ಮತ್ತು ಪಾದರಸದಂತಹ ವ್ಯಕ್ತಿತ್ವ. ಅದು ಸಿನೆಮಾದಲ್ಲಿಯೂ ಕಾಣುತ್ತದೆ. ಸಿನೆಮಾ ತಾಂತ್ರಿಕವಾಗಿಯೂ ಉತ್ತಮವಾಗಿ ಮೂಡಿಬಂದಿದೆ. ಸಂಭಾಷಣೆಗಳು ಸಿನೆಮಾದ ಹೈಲೈಟ್ಸ್. ಪಾಯಿಂಟ್ ಟು ಪಾಯಿಂಟ್ ಮಾತನಾಡುವ ಪಾತ್ರಗಳು ಎಲ್ಲಿಯೂ ಅಸಂಬದ್ಧ ಸಂಭಾಷಣೆಗಳಿಂದ ನಮಗೆ ಇದು ಬೇಕಿತ್ತಾ ಎಂದು ಅನಿಸುವುದಿಲ್ಲ. ಇನ್ನು ಎಲ್ಲಿಯೂ ಅನಗತ್ಯ ವೈಭವೀಕರಣ, ದುಂದುವೆಚ್ಚದ ಪ್ರಯೋಗ ಮಾಡದೇ ಸಿನೆಮಾ ನೋಡಿ ಹೊರಗೆ ಬಂದವರಿಗೆ ಶುಚಿರುಚಿಯಾದ ಹೋಟೇಲಿನ ಬಾಳೆಎಲೆ ಊಟ ಮಾಡಿ ಕೈಗೆ ಬಣ್ಣ ತಾಗಿಸಿಕೊಳ್ಳದೇ ಸಂತೃಪ್ತಿಯ ತೇಗು ಬರುವಂತೆ ಮಾಡುವಲ್ಲಿ ದಾಮಾಯಣ ಯಶಸ್ವಿಯಾಗಿದೆ.
ಜನರು ನಿರೀಕ್ಷಿಸುತ್ತಿದ್ದ ಚಿತ್ರ ಇದು!
ಕನ್ನಡಿಗರು ಇಂತಹ ಸಿನೆಮಾಗಳನ್ನು ಇತ್ತೀಚೆಗೆ ಬಯಸುತ್ತಿರುವುದು ಮತ್ತು ಅಂತಹ ಕಾಲಘಟ್ಟದಲ್ಲಿಯೇ ದಾಮಾಯಣ ಬಿಡುಗಡೆಯಾಗುತ್ತಿರುವುದು ಶುದ್ಧ ಕಾಕತಾಳಿಯ ಎನಿಸಬಹುದು. ಹೀರೋ ಓರಿಯೆಂಟೆಂಡ್ ಸಿನೆಮಾದ ಕಾಲ ಹೋಗಿದೆ. ಈಗ ನಾಯಕನ ವಿಜೃಂಭಣೆಯನ್ನು ಅಂತವರ ಅಭಿಮಾನಿಗಳು ಮಾತ್ರ ನೋಡುತ್ತಿದ್ದಾರೆ. ಬೇರೆಯವರಿಗೆ ಅದು ಹಳತ್ತಾದ ಫಾರ್ಮುಲ ಅನಿಸಿದೆ. ಆದ್ದರಿಂದ ಹೆಚ್ಚಿನ ಸಿನೆಮಾ ಪ್ರಿಯರು ದಾಮಾಯಣದಂತಹ ಸಿನೆಮಾಗಳನ್ನು ಬಯಸುತ್ತಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನೆಮಾ ನೋಡಿದರೆ ಆಗ ಇಂತಹ ಸಿನೆಮಾಗಳು ಹೆಚ್ಚೆಚ್ಚು ಬರಲು ಸಹಾಯವಾಗುತ್ತದೆ. ಹಾಗೆ ಆಗಲಿ ಎನ್ನುವುದೇ ಹಾರೈಕೆ.
Leave A Reply