ಗೀತೆ ಇರುವಷ್ಟು ದಿನ ನಮ್ಮ ಸಂಸ್ಕೃತಿಗೆ ಅಳಿವಿಲ್ಲ!
ಸನಾತನ ಧರ್ಮ ಕೇವಲ ಒಂದು ಮತ, ಹಾಗೂ ಒಂದು ಪಂಗಡಕ್ಕೆ ಮೀಸಲಾಗಿಲ್ಲ. ಇದು ವಿಶ್ವದ ಎಲ್ಲಾ ಸಮಾಜದ ಸರ್ವೊನ್ನತಿಗಾಗಿ ಇರುವಂತಹ ಧರ್ಮ.ಕಣ್ಣು ಮುಚ್ಚಿ, ಕೈ ಎತ್ತಿ ಧೈರ್ಯದಿಂದ ಹೇಳಬಹುದು. ಮತ ಮತಗಳ ತಾಕಲಾಟದ ನಡುವೆ ಇದು ಕೂಡ ಒಂದು ಮತ ಎನ್ನುವ ರೀತಿಯಲ್ಲಿ ಕಲ್ಪಿಸಿಕೊಳ್ಳಲಾಗುತ್ತಿದೆ. ಇದು ಸರ್ವತಾ ತಪ್ಪು.
ಈ ಧರ್ಮದಲ್ಲಿರುವ ಪ್ರತಿಯೊಂದು ಮಾತು ವಿಶ್ವಕ್ಕೆ ಸಂಬಂಧಿಸಿದ್ದು. ಇದಕ್ಕೆ ವ್ಯತಿರಿಕ್ತವಾದ ಒಂದೇ ಒಂದು ಮಾತು, ಇಲ್ಲಿ ಖಂಡಿತ ಸಿಗಲಾರದು. ಕೋಟಿಗಟ್ಟಲೆ ಶ್ಲೋಕಗಳ ಮೂಲಕ, ಲಕ್ಷಗಟ್ಟಲೆ ಗ್ರಂಥಗಳ ಮೂಲಕ ಸನಾತನ ಧರ್ಮದ ವಾಂಙ್ಮಯ ವೃಕ್ಷ ವಿಸ್ತಾರವಾಗಿ ಹರಡಿ ನಿಂತಿದೆ. ವ್ಯಾಸ ನಿರ್ಮಿತ ಮಹಾಭಾರತದ ಈ ಭಗವದ್ಗೀತೆ ಅದೆಲ್ಲ ಗ್ರಂಥ ರಾಶಿಗಳ ತಿರುಳನ್ನು ಪಡೆದು ಬೇರಾಗಿ ನಿಂತಿದೆ. ಆದ್ದರಿಂದಲೇ ಸನಾತನ ಧರ್ಮದಲ್ಲಿ ಶಿಖರ ಪ್ರಾಯವಾಗಿ ನಿಂತದ್ದು ಭಗವದ್ಗೀತೆ. ಇಲ್ಲಿರುವ ಧರ್ಮ ಸಂದೇಶ ಪ್ರಪಂಚದ ಎಲ್ಲಾ ವೈಚಾರಿಕ ವಿಚಾರಗಳನ್ನು ತನ್ನೊಳಗೆ ಸೇರಿಸಿಕೊಂಡು ಹೊಳೆಯುತ್ತಿದೆ.
ಸನಾತನ ಧರ್ಮ ಪ್ರಕೃತಿಯೊಂದಿಗೆ ತನ್ನನ್ನು ಬೆಸೆದುಗೊಂಡಿದೆ ಎನ್ನುವುದೇ ಈ ಧರ್ಮದ ದೊಡ್ಡ ಹೆಗ್ಗಳಿಕೆ. ಹೇಗೆ ಪ್ರಕೃತಿ ತನ್ನನ್ನು ತಾನು ಉಳಿಸಿಕೊಳ್ಳಲು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತದೆಯೋ, ಅದೇ ರೀತಿಯಾಗಿ ಸನಾತನ ಧರ್ಮವೂ ಕೂಡ ಉಳಿಸಿಕೊಂಡು ಬೆಳೆಯುತ್ತಲೇ ಇರುತ್ತದೆ. ಇದರಲ್ಲಿ ಎಳ್ಳಿನ ಸಂಶಯವಿಲ್ಲ. ಇದರ ಉಳಿಯುವಿಕೆಗಾಗಿ ,ಬೆಳೆಯುವಿಕೆಗಾಗಿ ತಾನೇ ತನ್ನನ್ನು ಬೇಕಾದ ಹಾಗೆ ಬದಲಿಸಿಕೊಳ್ಳುವ ವಿಶಿಷ್ಟ ಚೈತನ್ಯ ಈ ಧರ್ಮದಲ್ಲಿದೆ.
ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಂ ||
ಪರಿತ್ರಾಣಾಯ ಸಾಧೂನಾಂ
ವಿನಾಶಾಯ ಚ ದುಷ್ಕೃತಾಂ | ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ!! ||
ಜೀವನ ಧರ್ಮಕ್ಕೆ ಯಾವಾಗ ದೌಷ್ಟ್ಯದ ಶಕ್ತಿಗಳಿಂದ ಉಪಟಳವಾಗುತ್ತದೆಯೋ ಆಗ ನಾನು ಒಂದಲ್ಲ ಒಂದು ರೂಪದಿಂದ ಬರುತ್ತೇನೆ ಎನ್ನುವ ಗೀತಾಚಾರ್ಯನ ಈ ಮಾತು ಸಾರ್ವಕಾಲಿಕವಾದ ಸತ್ಯ. ಇದು ಗೀತೆಯ ಅತ್ಯಂತ ಪ್ರಸಿದ್ಧ ಶ್ಲೋಕ ಹಾಗೂ ಹೃದಯ. ಗೀತೆಯ ಬಗ್ಗೆ ಎಷ್ಟು ಮಾತುಗಳನ್ನು ಆಡಿದರೂ ಕೂಡ ಈ ಮಾತು ಬಾರದಿದ್ದರೆ ಅದು ಅಪೂರ್ಣವಾಗಿಯೇ ಇರುತ್ತದೆ. ಮಾತ್ರವಲ್ಲ ಈ ಒಂದು ಮಾತು ಪೂರ್ಣತೆಯನ್ನು ಕೊಡುತ್ತದೆ ಎನ್ನುವುದು ಕೂಡ ಅಷ್ಟೇ ಸತ್ಯ.
ರಾಮ ಮಂದಿರವಾಗಲಿ ಕೃಷ್ಣ ಮಂದಿರವಾಗಲಿ ಈ ನೆಲದ ಅಸ್ತಿತ್ವ ಹಾಗೂ ನಮ್ಮ ಅಸ್ಮಿತೆಯ ಪ್ರತೀಕ. ಕಳೆದ 700 ವರ್ಷಗಳಿಂದ ಹೋರಾಟದ ಮೇಲೆ ಹೋರಾಟ ನಡೆಯುತ್ತಲೇ ಇತ್ತು. ರಾಮ ಮಂದಿರದ ನಿರ್ಮಾಣ ನಮ್ಮ ಕಾಲದಲ್ಲಿ ನಡೆಯುತ್ತಿದೆ. ಅದಕ್ಕೆ ಸರಿಯಾದವರು ರಾಜ್ಯದಲ್ಲೂ ರಾಷ್ಟ್ರದಲ್ಲೂ ಹುಟ್ಟಿ ಬಂದ ಕಾರಣವಲ್ಲದೇ ಮತ್ತೇನು.
ಭಗವಂತ ನೇರವಾಗಿ ಇಳಿದುಬರುವದಿಲ್ಲ. ಒಂದಲ್ಲ ಒಂದು ರೂಪದಿಂದ ತನ್ನ ಅಸ್ತಿತ್ವವನ್ನು ತೋರಿಸಿ ಕೊಡುತ್ತಾನೆ. ತೆರೆದ ಮನಸ್ಸು, ಹಾಗೂ ನೋಡುವ ಕಣ್ಣು ಇರಬೇಕಷ್ಟೇ. ಸಾಧ್ಯವಿದ್ದರೆ ಅವನ ಸಂಕಲ್ಪದ ಕಾರ್ಯಗಳಿಗೆ ನಮ್ಮ ಜೀವನದ ಸಾರ್ಥಕತೆಗಾಗಿ ನಾವು ಸಮರ್ಪಿಸಿಕೊಳ್ಳಬಹುದು. ಸುಮ್ಮನಿದ್ದರೆ ಅದೇನು ನಿಲ್ಲುವುದಿಲ್ಲ, ಎಂಬುದಕ್ಕೆ ಇವತ್ತು ಜಗತ್ತು ಸಾಕ್ಷಿಯಾಗುತ್ತಿದೆ…
ಪ್ರತಿಯೊಂದು ಮಾತು ಕೂಡ ಬೆಂಕಿಯ ಕಡ್ಡಿ. ಅದರಿಂದ ಎಷ್ಟು ದೊಡ್ಡ ದೀಪವು ಹತ್ತಿಸಿ, ನಮ್ಮನ್ನು ಬೆಳಕಿನ ಕಡೆಗೆ ಒಯ್ಯಬಹುದು. ಅಥವಾ ಕ್ಷಣ ಮಾತ್ರದ ಬೆಳಕನ್ನು ನೋಡಿ ಖುಷಿಪಡಲುಬಹುದು. ಈ ಗ್ರಂಥ ಈ ನೆಲದಲ್ಲಿ ಇರುವ ತನಕ ಈ ನೆಲಕ್ಕೂ ನಮ್ಮ ಧರ್ಮಕ್ಕೂ ನಾಶವಿಲ್ಲ.
“ಕ್ಲೈಬ್ಯಂ ಮಾಸ್ಮ ಗಮಃ ಪಾರ್ಥ.. “ಕೊಟ್ಟ ಕೊನೆಯದಾಗಿ ಈ ಒಂದು ಮಾತು ಉಳಿದರು ಸಾಕು ನಮ್ಮನ್ನು ನಾವು ಉಳಿಸಿಕೊಳ್ಳಬಹುದು.ಇದು ವಿವೇಕಾನಂದರ ಅಭಿಪ್ರಾಯ.
ನಾವು ನಮಗಾಗಿ, ನಮ್ಮವರಿಗಾಗಿ, ನಮ್ಮ ಪರಂಪರೆಗಾಗಿ, ಗೀತೆಯನ್ನು ಬಿಟ್ಟು ಮತ್ಯಾವುದನ್ನು ಉಳಿಸಿಯೂ ಪ್ರಯೋಜನವಿಲ್ಲ. ಗೀತೆ ಇರುವಷ್ಟು ದಿನ ನಮ್ಮ ಸಂಸ್ಕೃತಿಗೆ ಅಳಿವಿಲ್ಲ. ಇದಕ್ಕಾಗಿ ನಮ್ಮ ಸಂಸ್ಕೃತಿಯ ಕೇಂದ್ರಬಿಂದುವಾಗಿ ಗೀತೆ ಗುರುತಿಸಿಕೊಂಡಿದ್ದು. ಮತಚಾರ್ಯರಿಂದ ಹಿಡಿದು ವೈದಿಕರತನಕವು, ವಿಜ್ಞಾನಿಗಳಿಂದ ಹಿಡಿದು ದೇಶ ಕಟ್ಟುವ ನಾಯಕರ ತನಕವೂ ಕೂಡ ಈ ಗೀತೆಯ ಸ್ಪೂರ್ತಿಯಿಂದಲೇ, ಈ ಗೀತೆಯ ಜ್ಞಾನದಿಂದಲೇ ಪೂರ್ಣತೆಯನ್ನು ಪಡೆದುಕೊಂಡಿದ್ದಾರೆ. ಈ ದೇಶದಲ್ಲಿ ಬಿಡಿ ಅಣ್ವಸ್ತ್ರ ಪಿತಾಮಹ ಓಪನ್ ಹಮರ್ ನ ತನಕವೂ ತಮ್ಮ ಸಾರ್ಥಕತೆಯನ್ನು ಈ ಗೀತಾದ್ವಾರ ಪಡೆದುಕೊಂಡವರೇ ಹೆಚ್ಚು.
ಈ ನಿಟ್ಟಿನಲ್ಲಿ ನಮ್ಮನ್ನು ಭಗವದ್ಗೀತೆಗೆ ಸಮರ್ಪಿಸಿಕೊಳ್ಳುವಲ್ಲಿ ಸಾರ್ಥಕತೆಯನ್ನು ಪಡೆಯೋಣ.ಈ ಗೀತೆಯ ಸ್ಪೂರ್ತಿಯಿಂದ ನಮ್ಮ ಬದುಕು ನಿಸ್ವಾರ್ಥದ ದಿಕ್ಕಿನಲ್ಲಿ ಸಾಗಿದರೆ ಮಾತ್ರ ಸಾರ್ಥಕದ ಬದುಕನ್ನು ಪಡೆದುಕೊಳ್ಳುತ್ತೇವೆ. ಗೀತೆಯ ಒಂದು ಕಿಡಿ ನಮ್ಮ ಇಡೀ ಜೀವನವನ್ನು ಬದಲಿಸಲಿ.
ಈ ಮೂಲಕ ಗೀತಾ ಜಯಂತಿ ಸಾರ್ಥಕವಾಗಲಿ.
ಎಲ್ಲರಿಗೂ ಗೀತಾ ಜಯಂತಿಯ ಶುಭಾಶಯಗಳು.
Leave A Reply