ಪ್ರಶಸ್ತಿ ಎನ್ನುವುದು ಶಾಪಿಂಗ್ ಮಾಲ್ ನಲ್ಲಿ ನಿಮಗೆ ಬೇಕಾದದ್ದು ಖರೀದಿಸಿದ ಹಾಗೆ!
Mangaluru:
ಇವತ್ತು ಕೆಲವು ಪತ್ರಿಕೆಗಳಲ್ಲಿ ಒಂದು ಪ್ರಕಟನೆ ಬಂದಿದೆ. “ಬಯಲು ಶೌಚಮುಕ್ತ ಗ್ರಾಮ ಪರಿಶೀಲನೆಗೆ ತಂಡ” ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತಿಗಳ 366 ಗ್ರಾಮಗಳ ಬಯಲು ಶೌಚ ಮುಕ್ತ ಗ್ರಾಮಗಳ ಸಾಮಾಜಿಕ ಪರಿಶೋಧನೆಯನ್ನು ನಡೆಸುವುದರ ಬಗ್ಗೆ ಕೆಲವು ಮನೆಗಳು ಬಯಲು ಶೌಚ ಮುಕ್ತ ಸಾಮಾಜಿಕ ಪರಿಶೋಧನೆಯಲ್ಲಿ ಬಿಟ್ಟು ಹೋಗಿರುವ ಬಗ್ಗೆ ದೂರು ನೀಡಿರುವ ಹಿನ್ನಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು ತಂಡ ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜನ ದೂರು ನೀಡಿರುವ ಕಾರಣ ಇದು ಬೆಳಕಿಗೆ ಬಂದಿದೆ. ಇಲ್ಲದೇ ಹೋದರೆ ಈ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಮಂಗಳೂರಿನಲ್ಲಿ ಎಲ್ಲಿಯೂ ಬಯಲು ಶೌಚ ಇಲ್ಲ ಎಂದು ವರದಿ ನೀಡಿದ ಹಾಗೆ ಇಲ್ಲೂ ಕೂಡ ವರದಿ ನೀಡಿ ಪ್ರಶಸ್ತಿಯನ್ನು ಕೊಡುತ್ತಿದ್ದರು. ಆದ್ದರಿಂದಲೇ ಅನಿಸ್ತಾ ಇರುವುದು ಈ ಪ್ರಶಸ್ತಿಯನ್ನು ಕೊಡುವುದು, ತೆಗೆದುಕೊಳ್ಳುವುದು ಒಂದು ರೀತಿಯ ಜೋಕ್ ಆಗಿದೆ. ನೀವು ಇಷ್ಟಿಷ್ಟು ಎಂದು ಹಣ ಕೊಟ್ಟರೆ ಇಂತಿಂತಹ ಪ್ರಶಸ್ತಿಯನ್ನು ಪಡೆದುಕೊಳ್ಳಬಹುದು. ಒಂದು ರೀತಿಯಲ್ಲಿ ಶಾಪಿಂಗ್ ಮಾಲ್ ನಲ್ಲಿ ನೀವು ಶಾಪಿಂಗ್ ಮಾಡಿದ ಹಾಗೆ. ಕ್ವಾಸ್ಟಿ ಬ್ರಾಂಡಿನ ವಸ್ತುಗಳಿಗೆ ರೇಟ್ ಹೆಚ್ಚಿರುತ್ತದೆ. ಅದನ್ನು ಉಪಯೋಗಿಸಿದವನ ಅಂತಸ್ತು ಕೂಡ ಜಾಸ್ತಿಯಾಗುತ್ತದೆ. ಕೆಲವರು ತಮ್ಮ ಹೆಸರಿನ ಎದುರು ಹಾಕಿಕೊಂಡು ಮೆರೆಯಲು ತಮಗೆ ಸೂಟ್ ಆಗುವ ಪ್ರಶಸ್ತಿಯನ್ನು ಎಷ್ಟು ಹಣ ಕೊಟ್ಟಾದರೂ ಖರೀದಿಸುತ್ತಾರೆ ಮತ್ತು ಅದನ್ನು ನಾಲ್ಕು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ಹಾಕಿಸುತ್ತಾರೆ. ಅಲ್ಲಿಗೆ ಅವರಿಗೂ ಖುಷಿ ಮತ್ತು ಕೊಟ್ಟವರಿಗೂ ಬಿಜಿನೆಸ್. ಅದಕ್ಕಾಗಿ ನಿಜವಾಗಿಯೂ ಯೋಗ್ಯರಾದವರಿಗೆ ಪ್ರಶಸ್ತಿಗಳು ಸಿಗುವುದಿಲ್ಲ.
ಬೇಕಾದರೆ ದಿನೇಶ ಹೊಳ್ಳ ಅವರನ್ನು ತೆಗೆದುಕೊಳ್ಳಿ. ಅವರಿಗೆ ಇರುವಷ್ಟು ಪರಿಸರ ಕಾಳಜಿ ಇಲ್ಲಿಯ ತನಕ ಬಂದ ರಾಜ್ಯ, ರಾಷ್ಟ್ರದ ಅಷ್ಟೂ ಪರಿಸರ ಸಚಿವರನ್ನು ಸೇರಿಸಿದರೂ ಕಡಿಮೆ. ಹಾಗಂತ ಅವರಿಗೆ ಪರಿಸರ ಪ್ರಶಸ್ತಿ ಕೊಡುವ ವಿಷಯ ಯಾವುದಾದರೂ ಕಮಿಟಿಯಲ್ಲಿ ಬಂದ ಕೂಡಲೇ ಕಮಿಟಿಯಲ್ಲಿದ್ದ ರಾಜಕಾರಣಿಗಳೇ ಬೇಡಾ ಎನ್ನುತ್ತಾರೆ. ಏಕೆಂದರೆ ಆ ಮನುಷ್ಯ ಪ್ರಶಸ್ತಿ ತೆಗೆದುಕೊಂಡ ಸಭೆಯಲ್ಲಿಯೇ ಉಪಸ್ಥಿತರಿದ್ದ ಯಾವುದೇ ಪಕ್ಷದ ರಾಜಕಾರಣಿಗಳು ಪರಿಸರದ ವಿಷಯದಲ್ಲಿ ಮಾಡುತ್ತಿರುವ ನಿರ್ಲಕ್ಷ್ಯ ಕ್ಕೆ ಕ್ಲಾಸ್ ತೆಗೆದುಕೊಳ್ಳುವ ಚಾನ್ಸ್ ಇದೆ. ಅದಕ್ಕಾಗಿ ಅಂತವರಿಗೆ ಸಿಗುವುದಿಲ್ಲ. ನೇತ್ರಾವತಿಯ ವಿಷಯದಲ್ಲಿ ಅವರ ನೈಜ ಕಾಳಜಿ ನೋಡಿದ ನಂತರ ಯಾವ ಸಚಿವ ಆದರೂ ಅವರಿಗೆ ಪ್ರಶಸ್ತಿ ಕೊಡಲು ಮುಂದೆ ಬಂದಾರು. ಇಂತಹುದೇ ಸಂಗತಿ ನನಗೂ ಅಪ್ಲೈ ಆಗುತ್ತದೆ. ಕೆಲವು ಸಮಯದ ಹಿಂದೆ ನನಗೆ ಒಂದು ಕಡೆಯಿಂದ ಫೋನ್ ಬಂದಿತ್ತು. ಅವರ ಬಿಜಿನೆಸ್ ಮತ್ತು ಹೆಸರು ಹಾಳಾಗದಿರಲಿ ಎನ್ನುವ ಕಾರಣಕ್ಕೆ ಅದು ಬೇಡಾ, ಏಕೆಂದರೆ ನನಗೆ ಕಾಲ್ ಮಾಡಿ ಅವರು 10 ಸಾವಿರ ಕೊಟ್ಟರೆ ತಮ್ಮ ಪ್ರತಿಷ್ಠಿತ ಪ್ರಶಸ್ತಿಯನ್ನು ಕೊಡುವುದಾಗಿ ಹೇಳಿದರು. ನನಗೆ ಈ ಪ್ರಶಸ್ತಿಗಳಿಂದ ಆಗುವುದು ಏನೂ ಇಲ್ಲ. ನಾನು ನನ್ನ ಆತ್ಮತೃಪ್ತಿಗೆ ಜನರ ಸೇವೆ ಮಾಡುವುದು. ಅದು ಬಿಟ್ಟು ನೀವು ಅಥವಾ ಬೇರೆಯವರು ಪ್ರಶಸ್ತಿ ಕೊಡುತ್ತಿರೆಂದು ನಾನು ಜನಸೇವೆ ಮಾಡುವುದಲ್ಲ ಎಂದೆ. ಅದರ ನಂತರ ಅವರಿಗೆ ಇವರಿಗ್ಯಾಕೆ ಫೋನ್ ಮಾಡಿ ಸಿಕ್ಕಿಬಿದ್ದೆವು ಎಂದು ಅನಿಸಿತೋ ಏನೊ. ಹತ್ತು ಸಾವಿರ ಬೇಡಾ, ಐದು ಸಾವಿರ ಸಾಕು ಎಂದರು. ಐದು ಸಾವಿರ ಅಲ್ಲ, ಐನೂರು ರೂಪಾಯಿ ಆದರೂ ನನಗೆ ಬೇಡಾ. ನಿಮ್ಮ ಪ್ರಶಸ್ತಿಯ ಮೌಲ್ಯ ನನಗೆ ಈಗ ಗೊತ್ತಾಯಿತು ಎಂದು ಝಾಡಿಸಿದೆ. ಅದರ ನಂತರ ಅವರ ಕಾಲ್ ಇಲ್ಲ. ಬಹುಶ: ಬೇರೆ ಯಾರಿಗೋ ಕೊಟ್ಟಿರಬೇಕು. ಇದು ಪ್ರಶಸ್ತಿಯ ಕಥೆ.
ಈ ಪೊಲೀಸ್ ಇಲಾಖೆಯಲ್ಲಿಯೂ ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಇರುತ್ತವೆ. ಅದನ್ನು ಕೊಡುವಾಗ ಆ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ತಾವು ಸೇವೆ ಸಲ್ಲಿಸಿದ ಸ್ಟೇಶನ್ ವ್ಯಾಪ್ತಿಯ ಯಾವುದಾದರೂ ಸರಕಾರೇತರ ಸಂಘ ಸಂಸ್ಥೆಯಿಂದ ಶಿಫಾರಸ್ಸು ಪತ್ರ ತೆಗೆದುಕೊಂಡು ಬರಲು ಕಡ್ಡಾಯ ನಿಯಮ ಇದೆ. ಇವರು ಹಾಗೆ ತಂದ ಬಳಿಕವೇ ಪ್ರಶಸ್ತಿ.
ನಿಮಗೆ ಗೊತ್ತಿರುವಂತೆ ಯಾವ ಪೊಲೀಸ್ ಅಧಿಕಾರಿ ತಾನೆ ಲಂಚಕ್ಕೆ ಕೈ ಒಡ್ಡದೆ ಕೆಲಸ ಮಾಡಿರುತ್ತಾನೆ. ಮಾತನಾಡಿದರೆ ಲಕ್ಷಗಳಲ್ಲಿಯೇ ಡೀಲ್ ಇರುತ್ತದೆ. ಎಷ್ಟೋ ಸ್ಟೇಶನ್ ಗಳು ಇವತ್ತಿಗೂ ಪಂಚಾಯತಿ ಕಟ್ಟೆ. ನೀನು ಇಷ್ಟು ಕೊಡು, ಅವನು ಇಷ್ಟು ಕೊಡಲಿ. ಅಂತವರೇ ಪ್ರಶಸ್ತಿಗೆ ಟ್ರೈ ಮಾಡುವುದು. ನಂತರ ಇವರು ಹಣ ಕೊಟ್ಟು ಪ್ರಶಸ್ತಿ ಪಡೆದು ಫೋಟೋ ಫ್ರೇಮ್ ಹಾಕಿ ವಸೂಲಿಗೆ ಹೊರಡುತ್ತಾರೆ. ಅಂತವರ ಫೋಟೋ ಪೇಪರಲ್ಲಿ ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಎಂದು ಬರುವಾಗ ನನ್ನ ಮುಖದಲ್ಲಿ ಯಾವುದೋ ಜೋಕ್ ಓದಿದ ಹಾಗೆ ನಗೆ ಬರುತ್ತದೆ. ಹಾಗೆ ಇತ್ತೀಚೆಗೆ ಜೋಕ್ ಓದಿದ ಹಾಗೆ ನಗು ಬಂದದ್ದು ಮಂಗಳೂರು ಮಹಾನಗರ ಪಾಲಿಕೆಗೆ ಬಯಲು ಶೌಚಮುಕ್ತ ನಗರ ಎಂದು ಪ್ರಶಸ್ತಿ ಬಂದಾಗ.
ಮಂಗಳೂರಿನಲ್ಲಿರುವ ಕೆಲವು ಶೌಚಾಲಯಗಳ ಪರಿಸ್ಥಿತಿ ಹೇಗಿದೆ ಎಂದು ಬೇರೆ ಹೇಳಬೇಕಿಲ್ಲ. ಮಂಗಳೂರು ಬಿಜೆಪಿ ಕಚೇರಿಯ ಹತ್ತಿರದ, ಕೋರ್ಟ್ ರಸ್ತೆಯ, ಪಾಂಡೇಶ್ವರದ ಸಾರ್ವಜನಿಕ ಶೌಚಾಲಯದ ಕಥೆ ಮೇಯರ್ ಅವರಿಗೆ ಗೊತ್ತಿರಬೇಕು. ಅದು ಸರಿಯಿಲ್ಲದೆ ಇರುವುದರಿಂದ ಬೆಳಿಗ್ಗೆ ರಸ್ತೆಯ ಹತ್ತಿಪತ್ತು ಮೀಟರ್ ಆಚೆಈಚೆ ಅಲ್ಲಲ್ಲಿ ಆ ಗಲೀಜು ಇರುತ್ತದೆ. ಸರಿ, ಈ ಪ್ರಶಸ್ತಿ ಬಂದಾಯಿತು. ಮುಂದೆ ಯಾವುದು ತೆಗೆದುಕೊಂಡು ಬರೋಣ ಎಂದು ಮೇಯರ್ ಮತ್ತು ಕಮೀಷನರ್ ಯೋಚಿಸುತ್ತಿರುವುದರಿಂದ ಅವರಿಗೆ ಇದೆಲ್ಲ ಮುಖ್ಯವಾಗಲ್ಲ!
Leave A Reply