ದಾಳಿತೋವೆ ಮತ್ತು ಡಾಮರ್ ಎರಡೂ ಗುಣಮಟ್ಟ ಕಡಿಮೆ ಇದ್ದರೆ ನಿಲ್ಲಲ್ಲ!
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅನೇಕ ರಸ್ತೆಗಳಿಗೆ ದೃಷ್ಟಿ ಬೀಳಬಾರದು ಎನ್ನುವ ಕಾರಣಕ್ಕೆ ಪಾಲಿಕೆ ಏನು ಮಾಡಬಹುದು ಎಂದು ಯೋಚಿಸಿ ಕೊನೆಗೆ ಅಲ್ಲಲ್ಲಿ ಹೊಂಡಗಳನ್ನು ಇಟ್ಟಿದೆ. ಆದ್ದರಿಂದ ನೀವು ಅಂತಹ ರಸ್ತೆಗಳಲ್ಲಿ ಸಂಚರಿಸುವಾಗ ನಿಮಗೆ ಆ ರಸ್ತೆಯ ಬಗ್ಗೆ ಕನಿಕರ ಬರುತ್ತದೆ. ಹೊಂಡಗಳು ಇಲ್ಲದಿದ್ದ ಪಕ್ಷದಲ್ಲಿ ಈ ರಸ್ತೆಗಳು ಎಷ್ಟು ಚೆಂದವಾಗಿ ಇರುತ್ತಿತ್ತು ಎಂದು ನಿಮಗೆ ಅನಿಸದೇ ಇರದು. ಹಾಗಂತ ಪಾಲಿಕೆಗೂ ಈ ರಸ್ತೆಗಳಿಗೆ ಹೊಂಡಗಳನ್ನು ಇಡುವ ಉದ್ದೇಶ ಇರಲಿಲ್ಲ. ಆದರೆ ರಸ್ತೆಗಳ ಪ್ಯಾಚ್ ವರ್ಕ್ ಗಳಿಗೆಂದು ಬಂದು ನಾಲ್ಕು ಕೋಟಿ ರೂಪಾಯಿಗಳನ್ನು ಪಾಲಿಕೆಯ ಸದಸ್ಯರು, ಅಧಿಕಾರಿಗಳು “ಸಮರ್ಕಪ” ವಾಗಿ ಬಳಸಿಕೊಂಡ ಪರಿಣಾಮವಾಗಿ ಈ ರಸ್ತೆಗಳು ತಮ್ಮ ಎಂದಿನ ಸೌಂದರ್ಯವನ್ನು ಉಳಿಸಿಕೊಂಡು ಬಂದಿವೆ. ಅಷ್ಟಕ್ಕೂ ಮಳೆಗಾಲದ ಮೊದಲೇ ರಸ್ತೆಗಳ ಪ್ಯಾಚ್ ಅಪ್ ಕೆಲಸಕ್ಕೆಂದು ಬಂದ ಆ ನಾಲ್ಕು ಕೋಟಿ ರೂಪಾಯಿಗಳು ಎಲ್ಲಿಗೆ ಹೋಯಿತು ಎನ್ನುವುದು ಪ್ರಶ್ನೆ.
ಪ್ಯಾಚ್ ವರ್ಕ್ ಮಾಡಿದ ಗುತ್ತಿಗೆದಾರರಿಗೆ ಕೇಳಿದರೆ ಪ್ಯಾಚ್ ವರ್ಕ್ ಗಳಿಗೆ ಯಾವತ್ತೂ ಮೆಯಿಂಟೆನೆಸ್ಸ್ ಪಿರೀಡ್ ಎಂದು ಕೊಡಲು ಆಗುವುದಿಲ್ಲ ಎನ್ನುತ್ತಾರೆ. ಆದರೆ ನಾನು ಕೇಳುವುದು ಹಾಗಾದರೆ ಒಂದೇ ಮಳೆಗೆ ನಿಮ್ಮ ಡಾಮರು, ಜಲ್ಲಿ ಕಿತ್ತು ಹೋಗಿ ಮೂಗಿನ ಹೊಳ್ಳೆಗಳ ತರಹ ಹೊಂಡಗಳು ಉಳಿಯಬೇಕಾದರೆ ನೀವು ಅದೆಂತಹ ಡಾಮರ್, ಜಲ್ಲಿ ಹಾಕಿ ಅದನ್ನು ಮುಚ್ಚಿದಿರಿ ಎಂದು ಜನರಿಗೆ ಗೊತ್ತಾಗಬೇಕಲ್ಲ?
ಉತ್ತರ ಸ್ಪಷ್ಟ. ಗುತ್ತಿಗೆದಾರರು ಹಾಕಿದ ಡಾಮರಿನಲ್ಲಿ ಗುಣಮಟ್ಟ ಇರಲೇ ಇಲ್ಲ. ಹೇಗೆಂದು ಉದಾಹರಣೆ ಕೊಡುತ್ತೇನೆ. ಕೆಲವು ದೇವಸ್ಥಾನಗಳಲ್ಲಿ ಈ ದಾಳಿತೋವೆ ಎಂದು ಮಾಡುತ್ತಾರಲ್ಲ, ಅದನ್ನು ಅನ್ನ ಇಲ್ಲದೆ ಹಾಗೆ ಬಾಯಿ ಚಪ್ಪರಿಸಿ ಊಟ ಮಾಡಬಹುದು. ಅದೇ ಕೆಲವು ಹೋಟೇಲ್ ಗಳಲ್ಲಿ 35 ರೂಪಾಯಿ ಊಟದಲ್ಲಿ ತೋವೆ ಎಂದು ಕೊಡುತ್ತಾರೆ. ಅದನ್ನು ಅನ್ನ ಇಲ್ಲದೆ ಎಲೆಯ ಮೇಲೆ ಹಾಕಿದರೆ ಅದು ಸೆಕೆಂಡಿನೊಳಗೆ ನಿಮ್ಮ ಪ್ಯಾಂಟಿನ ಮೇಲೆ ಬಿದ್ದು ಅಲ್ಲಿಂದ ಜೋಗ ಜಲಪಾತದಲ್ಲಿ ನೆಲ ಸೇರುತ್ತದೆ. ಎರಡೂ ಕೂಡ ದಾಳಿತೋವೆನೆ. ಆದರೆ ಕ್ವಾಲಿಟಿ ನೋಡಿ. ಅಂದರೆ ನಾವು ದಾಳಿತೋವೆ ಮಾಡುವಾಗ ಎಷ್ಟು ತೊಗರಿಬೇಳೆ ಹಾಕಿದ್ದೇವೆ ಎನ್ನುವುದರ ಮೇಲೆ ಅದು ಎಲೆಯಲ್ಲಿ ನಿಲ್ಲತ್ತಾ, ಹರಿದು ಹೋಗುತ್ತಾ ಎನ್ನುವುದು ನಿರ್ಧಾರವಾಗುತ್ತದೆ. ಹಾಗೆ ಈ ಡಾಮರು ಕೂಡ. ನಾಲ್ಕು ಕೋಟಿಗಳಲ್ಲಿ ಕೆಲವು ಸೊನ್ನೆಗಳನ್ನು ಸದಸ್ಯರು, ಅಧಿಕಾರಿಗಳು ನುಂಗಿ ಉಳಿದದ್ದನ್ನು ಗುಂಡಿಗೆ ಹಾಕಿದರೆ ಜೋರು ಮಳೆ ಬಂದರೆ ಡಾಮರು ಮತ್ತು ಜಲ್ಲಿ ಪಕ್ಕದ ಚರಂಡಿಯಲ್ಲಿ ಹೋಗಿ ಮಲಗಿರುತ್ತವೆ.
ಒಂದು ರಸ್ತೆಗೆ ಹೊಸದಾಗಿ ಡಾಮರು ಹಾಕುವಾಗ ಅದರ ಎರಡು ವರ್ಷಗಳ ತನಕ ಮೆಂಯಿಂಟನೆಸ್ಸ್ ಪಿರೀಡ್ ಎಂದು ಇರುತ್ತದೆ. ಆ ಸಂದರ್ಭದಲ್ಲಿ ರಸ್ತೆ ಹಾಳಾದರೆ ಆಗ ಆ ಗುತ್ತಿಗೆದಾರನೇ ಸರಿ ಮಾಡಬೇಕು. ಹಾಗೆ ಈ ಪ್ಯಾಚ್ ವರ್ಕ್ ಎನ್ನುವಾಗ ಗುತ್ತಿಗೆದಾರರಿಗೆ ಜವಾಬ್ದಾರಿ ಇರುವುದಿಲ್ಲ. ಅದು ನಾಲ್ಕು ಕೋಟಿ ಇರಲಿ, ನಲ್ವತ್ತು ಕೋಟಿ ಇರಲಿ. ಒಂದೇ ಮಳೆಗೆ ಹೋಗಲಿ ಅಥವಾ ಒಂದು ಇಡೀ ಮಳೆಗಾಲಕ್ಕೆ ಬರಲಿ, ಅವರು ಯೋಚಿಸುವುದಿಲ್ಲ. ನಾಲ್ಕು ಕೋಟಿಯಲ್ಲಿ ಯಾವ ಸದಸ್ಯ, ಅಧಿಕಾರಿ ಎಷ್ಟು ಸೊನ್ನೆ ಕಿತ್ತುಕೊಳ್ಳುತ್ತಾರೋ ಅದರ ಮೇಲೆ ಡಿಪೆಂಡ್ ಆಗುತ್ತದೆ. ಅಷ್ಟಕ್ಕೂ ನಾಲ್ಕು ಕೋಟಿ ಚಿಕ್ಕ ಅಮೌಂಟ್ ಅಲ್ಲ. ಒಂದೀಡಿ ಕುಟುಂಬದ ಎಲ್ಲಾ ಸದಸ್ಯರು ದುಡಿದರೂ ತಮ್ಮ ಜೀವನಮಾನದಲ್ಲಿ ನಾಲ್ಕು ಕೋಟಿ ದುಡಿಯುವುದು ಅಸಾಧ್ಯವಾಗಿರುವ ಪರಿಸ್ಥಿತಿ ಈಗ ಇದೆ. ಹಾಗಿರುವಾಗ ಇವರು ಒಂದೇ ಮಳೆಗಾಲಕ್ಕೆ ಅಷ್ಟೂ ಹಣವನ್ನು ಚಿಂದಿ ಉಡಾಯಿಸುತ್ತಾರೆ ಎಂದರೆ ಪರಿಸ್ಥಿತಿ ನೀವೆ ಊಹಿಸಿ.
ಪ್ರತಿ ವರ್ಷ ಹೀಗೆ ರಸ್ತೆಗಳಿಗೆ ಪ್ಯಾಚ್ ವರ್ಕ್ ಹೆಸರಿನಲ್ಲಿ ಹಣ ಪೋಲಾಗುವ ಬದಲು ಒಂದು ಉಪಾಯ ಮಾಡಬಹುದು. ಅದೇನೆಂದರೆ ಇತ್ತೀಚೆಗೆ ಎರಡು ವರ್ಷಗಳ ಒಳಗೆ ಡಾಮರು ಬಿದ್ದಿರುವ ರಸ್ತೆಗಳ ಪಟ್ಟಿ ಮಾಡಿ. ಆ ರಸ್ತೆಗಳಲ್ಲಿ ಎಷ್ಟು ರಸ್ತೆಗಳು ಚೆನ್ನಾಗಿವೆ ಮತ್ತು ಎಷ್ಟು ಗುಂಡಿ ಬಿದ್ದಿವೆ ಎನ್ನುವುದರ ಪಟ್ಟಿ ಮಾಡುವುದು. ಹೊಂಡ, ಗುಂಡಿ ಬಿದ್ದಿರುವ ರಸ್ತೆಗಳ ಗುತ್ತಿಗೆದಾರರನ್ನು ಕರೆಸುವುದು ಮತ್ತು ಅವರಿಂದಲೇ ಈ ರಸ್ತೆಗಳನ್ನು ಮತ್ತು ಆ ಹೊಂಡ ಗುಂಡಿ ಬಿದ್ದಿರುವ ರಸ್ತೆಗಳನ್ನು ಎರಡನ್ನೂ ಸರಿ ಮಾಡಿಸಬೇಕು. ಆಗ ನಮ್ಮ ತೆರಿಗೆಯ ಹಣ ಉಳಿಯುತ್ತದೆ. ಅದನ್ನು ಯಾರು ನೋಡಬೇಕು? ಸಾರ್ವಜನಿಕರು ಮೊದಲು ಪ್ರಶ್ನೆ ಈ ಎತ್ತಬೇಕು. ಒಂದು ರಸ್ತೆ ಡಾಮರು ಹಾಕಿದ ಎರಡು ವರ್ಷಗಳಲ್ಲಿ ಹಾಳಾಗುತ್ತದೆ ಎಂದರೆ ಅದನ್ನು ಒಮ್ಮೆ ಪ್ಯಾಚ್ ವರ್ಕ್ ಮಾಡಿದರೂ ಮುಂದಿನ ವರ್ಷಕ್ಕೆ ಮತ್ತೆ ಪ್ಯಾಚ್ ವರ್ಕ್ ಮಾಡಲೇಬೇಕಾಗುತ್ತದೆ. ಅದಕ್ಕಾಗಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಶಿಕ್ಷೆಯ ರೂಪದಲ್ಲಿ ಇನ್ನೊಂದು ಗುಂಡಿ ಬಿದ್ದ ರಸ್ತೆ ಕೊಟ್ಟರೆ ಆಗ ಉಳಿಯುವುದು ನಮ್ಮ ತೆರಿಗೆಯ ಹಣ!
Leave A Reply