ಹೊಂಡದಿಂದಾಗಿ ನಾನು ಬಸ್ಸಿನ ಅಡಿಗೆ ಬೀಳುತ್ತಿದ್ದೆ ಎಂದ ಮಹಿಳೆಗೆ ಜೈ!
ನಾನು ಬಸ್ ಅಡಿಗೆ ಬೀಳಲು ಚೂರು. ನೀವು ಆ ಹೊಂಡಗಳನ್ನು ಮುಚ್ಚದಿದ್ರೆ….. ಹೀಗೆ ಒಂದು ಸಂಭಾಷಣೆ ಸಾಗುತ್ತದೆ. ಮಾಡಿಸ್ತೇನೆ ಎಂದು ಮಂಗಳೂರಿನ ಮೇಯರ್ ಭರವಸೆ ಕೊಡುತ್ತಾರೆ. ಆ ಹೆಂಗಸಿನ ಧ್ವನಿಯಲ್ಲಿ ಇದ್ದ ನೋವು, ಕಳಕಳಿಯನ್ನು ಅದನ್ನು ಅನುಭವಿಸಿದವರೇ ಅರ್ಥ ಮಾಡಿಕೊಳ್ಳಬಹುದು. ಆ ಹೆಂಗಸು ಮಾತನಾಡಿದ್ದು ಕೇವಲ ಒಂದು ಸ್ಯಾಂಪಲ್. ಆ ಮಹಿಳೆಯಂತೆ ದಿನಕ್ಕೆ ಸಾವಿರಾರು ಜನ ಮಂಗಳೂರಿನ ರಸ್ತೆಯಲ್ಲಿ ತಮ್ಮ ವಾಹನಗಳಲ್ಲಿ ಸಂಚರಿಸುವಾಗ ಬವಣೆ ಪಡುತ್ತಿದ್ದಾರೆ. ಒಂದು ಕಡೆ ವಿಪರೀತ ಸುಡುವ ಬಿಸಿಲು, ಕಾರಿನಲ್ಲಿ ಏಸಿ ಹಾಕಿ ಎಲ್ಲಾ ಗ್ಲಾಸುಗಳನ್ನು ಮೇಲೆ ಏರಿಸಿ ಸಂಚರಿಸುವವರಿಗೆ ಆಗುವ ತೊಂದರೆಗಿಂತ ಹೆಂಡತಿ, ಮಕ್ಕಳನ್ನು ಕುಳ್ಳಿರಿಸಿಕೊಂಡು ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಾರಲ್ಲ, ಅವರು ಅನುಭವಿಸುವ ಸಂಕಟ ದೊಡ್ಡದು. ಇನ್ನು ಶಾಲೆಯಿಂದ ಮಗುವನ್ನು ಮನೆಗೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬರುವ ಮಹಿಳೆಯ ಎದುರು ಇರುವ ರಿಸ್ಕ್ ದೊಡ್ಡದು. ಅದನ್ನೇ ಆ ಮಹಿಳೆ ಹೇಳಿದ್ದು. ಇದನ್ನು ನಾನು ಹಿಂದೆ ಕೂಡ ಬರೆದಿದ್ದೆ. ನಾನು ಬರೆದರೆ ಅದನ್ನು ಮೇಯರ್ ಹೇಗೆ ತೆಗೆದುಕೊಳ್ಳುತ್ತಾರೋ, ಆದರೆ ಇವರು ತಿಂಗಳಿಗೊಮ್ಮೆ ಮಾಡುವ ಫೋನ್ ಇನ್ ಕಾರ್ಯಕ್ರಮದಲ್ಲಿ ಸಿಗುವ ಒಂದು ಗಂಟೆಯ ಕಾಲಾವಧಿಯಲ್ಲಿ ಹೊಂಡದಲ್ಲಿ ಬಿದ್ದು ಬಸ್ಸಿನ ಅಡಿಗೆ ಸಿಲುಕಲಿದ್ದ ಹೆಣ್ಣುಮಗಳು ಮಾತನಾಡಿದ್ದನ್ನು ಮೇಯರ್, ಪಾಲಿಕೆ ಸದಸ್ಯರು, ಅಧಿಕಾರಿಗಳು ಕ್ಯಾರ್ ಲೆಸ್ ಮಾಡಿದರೆ ಮುಂದಿನ ಬಾರಿ ಇವರನ್ನು ಕ್ಯಾರೇ ಎಂದು ಕೇಳುವವರು ಇರುವುದಿಲ್ಲ. ಮೇಯರ್ ಕವಿತಾ ಸನಿಲ್ ಆ ನೊಂದ ಮಹಿಳೆಗೆ ಯಾವ ರೀತಿಯಲ್ಲಿ ಸಮುಜಾಯಿಷಿಕೆ ಕೊಟ್ಟರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದರೆ ನೀವು ಅರ್ಥ ಮಾಡಿಕೊಳ್ಳಿ. ಮಂಗಳೂರಿನ ಪರಿಸ್ಥಿತಿ ಹೇಗಿರಬಹುದು. ಆದರೂ ಕವಿತಾ ಸನಿಲ್ ಮುಗುಳು ನಗುತ್ತಾ ನೋಡುತ್ತೇವೆ, ಮಾಡುತ್ತೇವೆ ಎಂದು ಹೇಳುತ್ತಾರೆ. ಅವರಿಗೆ ಗೊತ್ತಿದೆ. ಅದು ಕೇವಲ ಭರವಸೆ ಮಾತ್ರ.
ನಾನು ಇಲ್ಲಿ ಮೇಯರ್ ಕಾಂಗ್ರೆಸ್ ಎಂದು ಹೀಗೆ ಹೇಳುತ್ತಿದ್ದೇನೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಇಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯರು ಕೂಡ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿದ್ದಿರುವ ಹೊಂಡ, ಗುಂಡಿಗಳಿಗೆ ಸಮ ಪ್ರಮಾಣದಲ್ಲಿ ಜವಾಬ್ದಾರರು. ಈ ಬಾರಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿ ಅವರನ್ನು ಹೆಚ್ಚು ಹೊಣೆ ಮಾಡಲಾಗಿದೆ ಅಷ್ಟೇ. ಇಲ್ಲದಿದ್ದರೆ ಪಾಲಿಕೆಯ ಎಲ್ಲರದ್ದೂ ಸಮಪಾಲು, ಸಮಬಾಳು.
ಹಿಂದೆ ಮಂಗಳೂರನ್ನು ಬಂದರು ನಗರಿ ಎನ್ನುತ್ತಿದ್ದರು. ಈಗ ಹೊಂಡ, ಗುಂಡಿಗಳ ನಗರಿ ಎಂದು ಹೊಗಳಿಕೆಯನ್ನು ಬದಲಾಯಿಸಬೇಕು. ಗುತ್ತಿಗೆದಾರ, ಪಾಲಿಕೆ ಸದಸ್ಯರು, ಅಧಿಕಾರಿಗಳು ಒಂದೇ ತಟ್ಟೆಯಲ್ಲಿ ಊಟ ಮಾಡುವ ತನಕ ಆ ಹೊಂಡ ಗುಂಡಿಗಳಲ್ಲಿ ಜನರು ಏಳುವುದು, ಬೀಳುವುದು ಸಹಜ. ಯಾಕೆಂದರೆ ಹೊಂಡಕ್ಕೆ ಬಂದ ಹಣ ಇವರ ಹುಂಡಿಯನ್ನು ಸೇರುತ್ತಿದೆಯಲ್ಲ. ಆದರೂ ಹೆಚ್ಚಿನ ಜನ ಈ ಹೊಂಡದಲ್ಲಿ ಎದ್ದು ಬಿದ್ದು ಹೋಗುತ್ತಾರೆ. ಮಾತನಾಡಲು ಹಿಂಜರಿಕೆ. ಮಾತನಾಡಿದರೆ ತಮ್ಮ ವಾರ್ಡಿನ ಕಾರ್ಪೋರೇಟರ್ ಎದುರು ನಿಷ್ಠುರ ಆಗುತ್ತೇನಾ? ಕಾರ್ಪೋರೇಟರ್ ಕೋಪಿಸಿಕೊಂಡರೆ ನನಗೆ ಏನಾದರೂ ಬಿಟ್ಟಿಕೆಲಸ ಬೇಕಾದಾಗ ಅವನು/ಳು ಫೋನ್ ತೆಗೆಯದಿದ್ದರೆ ಏನು ಮಾಡುವುದು ಎನ್ನುವ ಆತಂಕ. ಇನ್ನು ಶಾಸಕರನ್ನು ಕೇಳೋಣ ಎಂದರೆ ಪಾಪ, ಅವರು ನಮ್ಮ ಯುವಕ ಮಂಡಲದ ಕಾರ್ಯಕ್ರಮಕ್ಕೆ ಕರೆದ ಕೂಡಲೇ ಬಂದಿದ್ದಾರೆ, ನನ್ನ ಚಿಕ್ಕಪ್ಪನ ಮಗಳ ಮದುವೆಗೆ ಬಂದಿದ್ದಾರೆ, ನಮ್ಮ ಏರಿಯಾದಲ್ಲಿ ಯಕ್ಷಗಾನ ನಡೆದಾಗ ಬಂದು ಬೆನ್ನು ತಟ್ಟಿ ಹೋಗಿದ್ದಾರೆ, ಕಳೆದ ವರ್ಷ ಕೋಲಕ್ಕೆ ಕರೆದಾಗ ಬಂದಿದ್ದಾರೆ, ನಾಡಿದ್ದು ಗುರ್ಜಿಗೆ ಮುಖ್ಯ ಅತಿಥಿಯಾಗಿ ಬರುತ್ತಾರೆ, ನಮ್ಮ ದೇವಸ್ಥಾನದಲ್ಲಿ ಶಾರದೆ ಇಟ್ಟಾಗ ಬಂದಿದ್ದಾರೆ, ನಮ್ಮ ಶಾಲೆಗೆ ವಾರ್ಷಿಕೋತ್ಸವ ಇಟ್ಟಾಗ ಬಂದು ಭಾಷಣ ಮಾಡಿ ಹೋಗಿದ್ದಾರೆ. ಹಾಗಿರುವಾಗ ನಾನು ಶಾಸಕರಿಗೆ ಪ್ರಶ್ನೆ ಕೇಳಿದರೆ ಮುಂದಿನ ಬಾರಿ ನಮ್ಮ ವರ್ಷಾವಧಿ ನೇಮಕ್ಕೆ ಅವರು ಬರದಿದ್ದರೆ. ಹೀಗೆ ನಮಗೆ ಪ್ರತಿಯೊಬ್ಬರಿಗೂ ಕಾರಣಗಳು ಇವೆ. ಅದಕ್ಕೆ ನಾವು ಯಾರೂ ಕೂಡ ಪ್ರಶ್ನೆ ಮಾಡಲ್ಲ. ಆದ್ದರಿಂದ ಗುಂಡಿಗಳು ದೊಡ್ಡದಾಗುತ್ತಿವೆ. ಮಳೆ ಬಂದಾಗ ರಸ್ತೆ ಯಾವುದು, ಹೊಂಡ ಯಾವುದು ಎಂದು ಗೊತ್ತಿರುವುದಿಲ್ಲ. ಆದರೂ ನಮಗೆ ಶಾಸಕರು, ಮೇಯರ್ ನಮ್ಮ ಜಾತ್ರೆಗೆ ಬರುವುದು ಮುಖ್ಯ. ಹೊಂಡವಾದರೆ ಎಡ್ಜಸ್ಟ್ ಮಾಡುತ್ತೇವೆ.
ಆದರೆ ನನಗೆ ಇಂತಹ ಯಾವುದೇ ಮರ್ಜಿ ಇಲ್ಲ. ಅವರು ನಮ್ಮ ಉತ್ಸವ, ಜಾತ್ರೆಗೆ ಬರುವುದು ನಮ್ಮ ದೇವರ, ದೇವಸ್ಥಾನದ ಮೇಲಿನ ಭಕ್ತಿಯಿಂದ ಅಲ್ಲ, ನಮ್ಮ ವೋಟಿನ ಮೇಲಿನ ಕಣ್ಣು ಇಟ್ಟು ಎನ್ನುವುದು ಗೊತ್ತಿಲ್ಲದಷ್ಟು ಮೂರ್ಖ ನಾವ್ಯಾರು ಅಲ್ಲ. ಆದರೂ ಅವರು ಬರಲಿ ಎನ್ನುವ ಕಾರಣಕ್ಕೆ ನಮ್ಮ ಹೊಂಡ ನಮಗೆ ಮರೆತು ಹೋಗುತ್ತದೆ. ನಾನು ಈ ಕುರಿತೇ ಒಂದು ಮನವಿ ಪತ್ರ ಬರೆದು ಹಾಕಿದೆ. ಒಂದು ವರ್ಷ ಹೊಸ ಡಾಮರೀಕರಣವಾಗಿ ಅದರ ಎರಡು ವರ್ಷ ಆ ರಸ್ತೆಗೆ ಯಾವುದೇ ಹೊಂಡ ಬಿದ್ದರೆ ಅದನ್ನು ಸರಿ ಮಾಡಬೇಕಾಗಿರುವುದು ಅದೇ ಗುತ್ತಿಗೆದಾರ. ಆದರೆ ನಮ್ಮ ಪಾಲಿಕೆ ನಮ್ಮ ತೆರಿಗೆ ಹಣದಲ್ಲಿ ಪುನರ್ ರಿಪೇರಿ ಮಾಡುತ್ತದೆ, ಇದು ಸರಿನಾ. ಇದನ್ನು ಮಾತನಾಡಬೇಕಾದ ಬಿಜೆಪಿ ನಾಯಕರಿಗೆ ಯಾವಾಗ ಗಂಟಲಿನಿಂದ ಸ್ವರ ಹೊರಗೆ ಬರುತ್ತದೋ!
Leave A Reply