ಕೊಡುವ ಕೈ ಒಂದು ಕಡೆಯಾದರೆ ಬಾರಿಸುವ “ಕೈ” ಇನ್ನೊಂದು ಕಡೆ!
ಒಂದೇ ದಿನ ಒಂದೇ ಊರಿನಲ್ಲಿ ಇಬ್ಬರು ಮಹಿಳೆಯರ ವಿಷಯ ಕೇಳಿ ಆಶ್ಚರ್ಯವಾಗುತ್ತದೆ. ಒಬ್ಬರು ತಾನು ವಾಸಿಸುವ ಫ್ಲಾಟಿನ ಕಾವಲುಗಾರನ ಹೆಂಡತಿ, ಮಗುವಿಗೆ ಹೊಡೆದು ಸುದ್ದಿಯಾದರೆ ಮತ್ತೊಬ್ಬರು ತನಗೆ ದೇವರು ಕನಸಿನಲ್ಲಿ ಬಂದ ಎಂದು ತನ್ನಲ್ಲಿದ್ದ 23 ಗ್ರಾಂ ಬಂಗಾರವನ್ನು ಶ್ರೀ ವಿಠೋಭ ರುಕುಮಾಯಿ ದೇವರಿಗೆ ಅರ್ಪಿಸಿ ಧನ್ಯರಾಗಿದ್ದಾರೆ. ಅದರಲ್ಲಿ ಸಕರಾತ್ಮಕ ಮಹಿಳೆಯ ಬಗ್ಗೆ ನಿಮಗೆ ಹೇಳಲೇಬೇಕು. ಅದನ್ನು ನಾಳೆ ಹೇಳುತ್ತೇನೆ. ಒಂದಿಷ್ಟು ಪ್ರೇರೆಪಣೆ, ತ್ಯಾಗದ ಮನೋಭಾವ, ಎಲ್ಲವೂ ಭಗವಂತನದ್ದು, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಹೀಗೆ ಪಾಸಿಟಿವ್ ಏನರ್ಜಿ ನಮ್ಮೆಲ್ಲರಲ್ಲಿ ಪ್ರವಹಿಸಲಿ ಎನ್ನುವ ಕಾರಣಕ್ಕೆ ನೆಗೆಟಿವ್ ಸುದ್ದಿಗಳ ನಡುವೆ ಬರೀ ಕಣ್ಣಿಗೆ ಕಂಡ ಘಟನೆಯನ್ನು ನಿಮಗೆ ವಿವರಿಸುತ್ತೇನೆ. ಈ ನಡುವೆ ಮಂಗಳೂರು ವೈಜ್ಞಾನಿಕವಾಗಿ, ಟ್ರಾಫಿಕ್ ಜಾಮ್ ರಹಿತವಾಗಿ, ರಸ್ತೆ ಅಗಲವಾದರೂ ನಾವು ಇಕ್ಕಟ್ಟಾಗಿ ಚಲಿಸುವುದು ಎಲ್ಲವೂ ಸರಿಯಾಗಬೇಕಾದರೆ ಏನು ಮಾಡಬೇಕು ಎಂದು ಎಲ್ಲರ ಪ್ರಶ್ನೆ. ಮಂಗಳೂರು ಮಹಾನಗರ ಪಾಲಿಕೆಯ ಕಾರಕೂನನಿಂದ ಹಿಡಿದು, ಜಿಲ್ಲಾ ಉಸ್ತುವಾರಿ ಸಚಿವರ ತನಕ ಎಲ್ಲರಿಗೂ ಮಂಗಳೂರು ಸರಿಯಾಗಬೇಕು, ಆದರೆ ಹೇಗೆ ಎಂದು ಗೊತ್ತಾಗುತ್ತಿಲ್ಲ. ನನ್ನ ಮೊದಲ ಮತ್ತು ಪ್ರಮುಖ ಸಲಹೆ ಎಂದರೆ ಸಿಡಿಪಿಯನ್ನು ಸರಿಯಾಗಿ ಪಾಲಿಸಿ. ಅದು ಆದರೆ ಎಲ್ಲವೂ ಆದಂತೆ. ಸಿಡಿಪಿ ಎಂದರೆ ಸಿಟಿ ಡೆವಲಪ್ ಮೆಂಟ್ ಪ್ಲಾನ್. 2011 ರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದವರು ಕುಳಿತು ಮಂಗಳೂರು ನಗರ ಭವಿಷ್ಯದಲ್ಲಿ ಹೀಗೆ ಆದರೆ ಒಳ್ಳೆಯದು ಎಂದು ಪ್ಲಾನ್ ಹಾಕಿ ಅದರಂತೆ ನಗರದಲ್ಲಿ ಅಭಿವೃದ್ಧಿ ಮಾಡುತ್ತಾ ಇದ್ದಾರಲ್ಲ, ಮೊದಲು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಿಡಿಪಿಯಲ್ಲಿ “ಎಸ್” ರಸ್ತೆ 9 ಮೀಟರ್ ಅಗಲವಾಗಬೇಕು ಎಂದರೆ ಆಗಬೇಕು. ಅದರಲ್ಲಿ ರಾಜಿಯ ಪ್ರಶ್ನೆ ಇಲ್ಲ. ಸಿಡಿಪಿಯಲ್ಲಿ “ಸಿ” ರಸ್ತೆ 12 ಮೀಟರ್ ಅಗಲವಾಗಬೇಕು ಎಂದರೆ ಆಗಲೇಬೇಕು. ಯಾರೂ ಕೂಡ ಪಾಲಿಕೆಯಲ್ಲಿ ಯಾರ ಪರವಾಗಿಯೂ ಕತ್ತಿ ಬೀಸಬಾರದು. ಯಾವ ರಸ್ತೆಗೆ ಅಗಲವಾಗುವ, ಯಾವ ರಸ್ತೆಗೆ ಸಪೂರವಾಗಿಯೇ ಇರುವ ಭಾಗ್ಯ ಇದೆ ಎಂದು ಆವತ್ತೆ ನಿರ್ಧಾರವಾಗಿರುವಾಗ ಅದನ್ನು ತಡೆಯುವ ಕೆಲಸವನ್ನು ಪಾಲಿಕೆಯ ಸದಸ್ಯರು ಯಾವಾಗ ಮಾಡುತ್ತಾರೋ ಆವಾಗ ಸಿಡಿಪಿ ಕೇವಲ ಪುಸ್ತಕದಲ್ಲಿ ಉಳಿಯುವ ನಕ್ಷೆಯಾಗಿಯೇ ಉಳಿಯುತ್ತದೆ.
ಒಂದು ಎಸ್ ಎನ್ ರಸ್ತೆ ಸಿಡಿಪಿಯಲ್ಲಿ 12 ಎಂದು ಇದ್ದಾಗ ಅದನ್ನು ಅಷ್ಟು ಅಗಲ ಮಾಡದೇ ಇದ್ದಾಗ ಆ ರಸ್ತೆಯಲ್ಲಿ ಹೋಗುವ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಾ ಹೋದರೆ ಏನು ಮಾಡೋಕೆ ಆಗುತ್ತದೆ? ಅಲ್ಲಿನ ಕಾರ್ಪೋರೇಟರ್ ಆ ರಸ್ತೆಯಲ್ಲಿ ವಾಸ ಮಾಡದೇ ಇದ್ದರೆ ಅವನಿಗೆ ಅದು ಬಿದ್ದು ಹೋಗಿರುವುದಿಲ್ಲ. ಹಾಗೆ ಸಿಡಿಪಿಯಲ್ಲಿ ಇಲ್ಲದ ಒಂದು ರಸ್ತೆಯನ್ನು ಅಗಲ ಮಾಡಲು ಹೋಗುವಾಗ ಮೊದಲು ಪಾಲಿಕೆಗೆ ಅಲ್ಲಿನ ಸದಸ್ಯ/ಸ್ಯೆ ಲಿಖಿತ ಮನವಿ ಕೊಡಬೇಕು. ನಂತರ ಅದು ಸ್ಥಾಯಿ ಸಮಿತಿಯಲ್ಲಿ ಪಾಸ್ ಆಗಿ, ಕೌನ್ಸಿಲ್ ಮೂಲಕ ಮೂಡಾಕ್ಕೆ ಹೋಗುತ್ತದೆ. ಅಲ್ಲಿ ಅದು ಓಕೆ ಆದ ನಂತರ ಮತ್ತೆ ಪಾಲಿಕೆಗೆ ಬರುತ್ತದೆ. ಬಳಿಕ ಆ ರಸ್ತೆ ಅಗಲವಾಗಬೇಕು. ಶಾರದಾ ನಿಕೇತನ ರಸ್ತೆಯ ವಿಷಯದಲ್ಲಿ ಅಂತಹ ಯಾವ ನಿಯಮಗಳನ್ನು ಪಾಲಿಸಲಾಗಿದೆ ಎಂದು ಕೇಳೋಣ ಎಂದರೆ ಆ ವಿಷಯದ ಬಗ್ಗೆ ನವೆಂಬರ್ 13 ರ ತನಕ ಬರೆಯಬಾರದು ಎಂದು ಮಾನ್ಯ ನ್ಯಾಯಾಲಯ ಸೂಚನೆ ನೀಡಿದೆ. ಆದ್ದರಿಂದ ಈ ರಸ್ತೆ ಅಗಲದ ವಿಷಯ, ಅದರಿಂದ ಬಿಲ್ಡರ್ ಗಳು ಕಾರ್ಪೋರೇಟರ್ ಗಳೊಂದಿಗೆ ಮಾಡಿಕೊಳ್ಳುವ ಮೈತ್ರಿ, ಅದರ ನಡುವೆ ಬೆರಳು ಚೀಪುವ ಬ್ಯಾಂಕ್ ಮ್ಯಾನೇಜರ್ ಗಳು, ಮಂಗಳೂರು ಅವೈಜ್ಞಾನಿಕವಾಗಿ ಬೆಳೆಯುತ್ತಿದೆ ಎಂದು ಗೊಣಗುವ ಮಧ್ಯಮ ವರ್ಗದವರು ಮತ್ತು ಕೊನೆಗೆ ಸ್ಮಾರ್ಟ್ ಸಿಟಿಯಾಗಲು ಹೊರಡುವ ನಮ್ಮ ವ್ಯವಸ್ಥೆ ಎಲ್ಲವೂ ನಡೆಯುತ್ತಲೇ ಇದೆ. ಸದ್ಯಕ್ಕೆ ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ.
ಒಂದಿಷ್ಟು ಸಕರಾತ್ಮಕವಾಗಿ ವಾರವನ್ನು ಮುಗಿಸಲು ಮನಸ್ಸು ಹಾತೊರೆಯುತ್ತಿದೆ. ಒಂದು ಯುವಕರ ತಂಡ ಹುಲಿವೇಷ ಹಾಕಿ ಅದರಿಂದ ಸಂಗ್ರಹವಾದ ಹಣವನ್ನು ದೇವರ ಉತ್ಸವಕ್ಕೆ ನೀಡುವ ಸಂಪ್ರದಾಯ ನನ್ನನ್ನು ಚಕಿತನನ್ನಾಗಿಸಿದೆ. ಅದನ್ನು ಕೂಡ ಬರೆಯಬೇಕು. ನಾಲ್ಕು ರೂಪಾಯಿ ಕೈಯಲ್ಲಿದ್ದರೆ ಎರಡು ರೂಪಾಯಿ ಸಾಲ ಮಾಡಿ ಕಂಟ್ರಿ ಸಾರಾಯಿ ಕುಡಿದು, ರಸ್ತೆಯಲ್ಲಿ ತೂರಾಡುತ್ತಾ, ಕೊನೆಗೆ ಅಲ್ಲಿಯೇ ಎದ್ದು ಬಿದ್ದು ಮನೆ ಸೇರುವ ಯುವಕರೇ ಬೇರೆ, ಮೈಮುರಿದು ಹುಲಿವೇಷ ಕುಣಿದು ನಾಲ್ಕು ಕಾಸು ಒಟ್ಟು ಮಾಡಿ ದೇವರಿಗೆ ಸಮರ್ಪಿಸುವ ಯುವಕರೇ ಬೇರೆ. ಯಾಕೋ, ಹೊಗಳಿದಷ್ಟು ಕಡಿಮೆಯೇ. ಅದೇರಡನ್ನು ಸಾಧ್ಯವಾದರೆ ನಾಳೆಯೇ ಬರೆದು ವಾರವನ್ನು ಮುಗಿಸುತ್ತೇನೆ. ಅಂದ ಹಾಗೆ ವಿಟಿ ರಸ್ತೆಯ ಶ್ರೀ ವಿಠೋಭ ದೇವಸ್ಥಾನದ ವಾರ್ಷಿಕ ಸಪ್ತಾಹ ಭಜನಾ ಮಹೋತ್ಸವ ಆರಂಭವಾಗಿದೆ. ಅಲ್ಲಿಯೇ ಪಕ್ಕದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಾವಯವ ಉತ್ಪನ್ನಗಳ ಸಪ್ತಾಚೆ ಸಾಂತ್ ಶುರುವಾಗಿದೆ. ಊರಿನ,ಕೇರಿಯ ತಿಂಡಿ ತಿನಿಸು ಸವಿಯಬೇಕಾದರೆ, ಬೇರೆ ಜಿಲ್ಲೆ,ರಾಜ್ಯದ ನಿಮ್ಮ ಸಂಬಂಧಿಗಳಿಗೆ ಕಳುಹಿಸಿಕೊಡಬಹುದಾದ ತಿಂಡಿಯ ಪ್ಯಾಕೇಟು ಖರೀದಿಸಲು ಒಮ್ಮೆ ಬಂದು ಹೋಗಿ!
Leave A Reply