ಮಳೆಗಾಲದಲ್ಲಿ ಮೀನಿಗೆ ರೇಟ್ ಜಾಸ್ತಿ ಯಾಕೆ ಗೊತ್ತಾ?

4111

ಮಂಗಳೂರು, ಉಡುಪಿ ಸೇರಿದಂತೆ ಈ ಕರಾವಳಿಯಲ್ಲಿ ವಾಸಿಸುತ್ತೇವಲ್ಲ, ನಮಗೆ ಬುದ್ಧಿವಂತರ ಊರಿನವರು ಎಂದು ಕರೆಯುತ್ತಾರೆ, ಯಾಕೆ ಗೊತ್ತಾ, ನಾವು ಮೀನು ತಿನ್ನುತ್ತೇವೆ ಅದಕ್ಕೆ. ಮೀನಿನ ತಲೆಯಲ್ಲಿ ತುಂಬಾ ಪೌಷ್ಟಿಕಾಂಶ ಇರುವುದರಿಂದ ಈ ಕಡೆ ಅದನ್ನು ಕೂಡ ಪದಾರ್ಥದಲ್ಲಿ ಮತ್ತು ಪ್ರೈ ಮಾಡುವಾಗ ಬಳಸುವುದರಿಂದ ನಮಗೆ ತಲೆ ಚುರುಕಾಗಿ ಓಡುತ್ತದೆ ಎಂದು ಬೇರೆ ಜಿಲ್ಲೆಯವರು ಅಂದುಕೊಂಡಿರುತ್ತಾರೆ. ಅದು ಎಷ್ಟರಮಟ್ಟಿಗೆ ವೈಜ್ಞಾನಿಕವಾಗಿ ನಿಜವೋ ಅಲ್ವೋ ಗೊತ್ತಿಲ್ಲ. ಆದರೆ ನಾವು ಪೌಷ್ಟಿಕಾಂಶಕ್ಕಾಗಿ ಎನ್ನುವುದಕ್ಕಿಂತ ರುಚಿಗಾಗಿ ಮೀನನ್ನು ತಿನ್ನುತ್ತೇವೆ.

ಮೀನನ್ನು ನೋಡಿದರೆ ಆಗಲ್ಲ ಎಂದು ಇತ್ತೀಚೆಗೆ ಗೆಳೆಯರೊಬ್ಬರು ಹೇಳಿದ್ರು. ಅದಕ್ಕೆ ಅವರು ಸಸ್ಯಹಾರಿ ಇರಬೇಕು ಎಂದುಕೊಂಡು ಪರವಾಗಿಲ್ಲ, ವೆಜ್ ಊಟದ ಹೋಟೆಲಿಗೆ ಹೋಗೋಣ ಎಂದೆ. ಅದಕ್ಕೆ ಅವರು ಹೇಳಿದ್ರು “ಮೀನನ್ನು ನೋಡಿದ್ರೆ ಆಗಲ್ಲ ಎಂದರೆ ಅದನ್ನು ನೋಡಿದ ಕೂಡಲೇ ತಿಂದು ಬಿಡೋಣ ಎಂದು ಅನಿಸುತ್ತದೆ”.
ಆದ್ದರಿಂದ ವರ್ಷವೀಡಿ ಕರಾವಳಿಯಲ್ಲಿ ಮೀನಿಗೆ ಬೇಡಿಕೆ ಇದ್ದೇ ಇದೆ. ಅದಕ್ಕೆ ಕಾರಣ ಬೇರೆ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರಾಗಿ, ಅತಿಥಿಗಳಾಗಿ ನಮ್ಮ ಊರಿಗೆ ಬರುವವರು ಮೊದಲು ಕೇಳುವುದು ಇಲ್ಲಿ ಒಳ್ಳೆಯ ಮೀನಿನ ಊಟದ ಹೋಟೆಲ್ ಎಲ್ಲಿದೆ. ಹೆಚ್ಚಿನ ಬಾರಿ ನಾವು ತುಂಬಾ ಜನ ಗೆಳೆಯರು, ನೆಂಟರು ಬಂದರೆ ವೈವಿಧ್ಯಮಯ ಅಡುಗೆ ಮಾಡಲು ಸಾಧ್ಯವಾಗದಿದ್ದರೆ ಹೋಟೆಲಿಗೆ ಕರೆದುಕೊಂಡು ಹೋಗುತ್ತೇವೆ ಅಥವಾ ಮಾರ್ಕೆಟ್ ಗೆ ಹೋಗಿ ಮೀನು ತಂದು ಮನೆಯಲ್ಲಿ ಮಾಡುತ್ತೇವೆ. ಆದರೆ ಬೇಸಿಗೆಯಲ್ಲಿ ಮೀನು ಖರೀದಿಸಲು ಹೋದರೆ ಪರ್ಸ ಚಿಕ್ಕದು, ಚೀಲ ದೊಡ್ಡದು ಇದ್ದರೂ ನಡೆಯುತ್ತೆ. ಅದೇ ಈ ಮಳೆಗಾಲದಲ್ಲಿ ಹೋದರೆ ಪರ್ಸ ದೊಡ್ಡದು, ಚೀಲ ಚಿಕ್ಕದು ಬೇಕು ಮತ್ತು ಸಾಕು. ಯಾಕೆ ಗೊತ್ತಾ? ಈಗ ಮೀನಿಗೆ ರೇಟ್ ಜಾಸ್ತಿ.

ಮೊನ್ನೆ ಎಪ್ರಿಲ್ ನಲ್ಲಿ ಬಂಗುಂಡೆಗೆ ಕಿಲೋಗೆ 80 ರೂಪಾಯಿ ಇದ್ದರೆ ಈಗ ಅಷ್ಟೇ ಮೀನಿಗೆ 160 ರೂಪಾಯಿಗಿಂತ ಒಂದು ರೂಪಾಯಿ ಕಡಿಮೆ ಇಲ್ಲ. ಎಲ್ಲವೂ ಡಬ್ಬಲ್. ಅದೇ ಮತ್ತೆ ಬೇಸಿಗೆ ಬರಲಿ ಆಗ ಮತ್ತೆ ಅದೇ ಮೀನು ನೂರು ರೂಪಾಯಿಗೆ ಸಿಗಬಹುದು. ಇದೇನೂ, ಏಕಾಏಕಿ ಇಷ್ಟು ಏರಿಕೆ ಮತ್ತು ಇಳಿಕೆ ಎಂದು ಅನಿಸಬಹುದು.

ವಿಷಯ ಏನೆಂದರೆ ಮಲ್ಪೆಯಿಂದ ಮಂಗಳೂರಿನ ತನಕ ಇರುವ ಸುಮಾರು 4 ಸಾವಿರ ಬೋಟುಗಳು ಜೂನ್ ಮೊದಲ ವಾರದಿಂದ ನೀರಿಗೆ ಇಳಿಯಲ್ಲ. ಸಮುದ್ರಕ್ಕೆ ಹೋಗಬಾರದು ಎನ್ನುವ ಸೂಚನೆ ಮೀನುಗಾರಿಕಾ ಇಲಾಖೆಯಿಂದ ಹೋಗುತ್ತದೆ. ಇಷ್ಟು ಬೋಟುಗಳು ನೀರಿಗೆ ಇಳಿಯದೇ ಮತ್ಸ್ಯಬೇಟೆಗೆ ಹೋಗದಿದ್ದರೆ ಏನಾಗುತ್ತದೆ, ಮಾರುಕಟ್ಟೆಯಲ್ಲಿ ಮೀನು ಕಡಿಮೆಯಾಗುತ್ತದೆ. ಆದರೆ ಬೇಡಿಕೆ ಕಡಿಮೆಯಾಗುತ್ತಾ? ಇಲ್ವಲ್ಲಾ? ಈಗ ಮಳೆಗಾಲ ನಾನು ತಿನ್ನಲ್ಲ ಎಂದು ಯಾರೂ ಹೇಳಲ್ಲ. ಅದರ ಪರಿಣಾಮವಾಗಿ ಮಾರಾಟಗಾರರು ಅನಿವಾರ್ಯವಾಗಿ ಬೇರೆ ರಾಜ್ಯದ ಕರಾವಳಿಯಿಂದ ಮೀನು ತರಿಸಬೇಕಾಗುತ್ತದೆ. ಅಲ್ಲಿಂದ ತರಿಸುವಾಗ ಇಷ್ಟು ಜನರಿಗೆ ಪೂರೈಸಲು ಬೇಕಾಗುವಷ್ಟು ಮೀನನ್ನು ತರಿಸಲು ಆಗುವುದಿಲ್ಲ. ಅದರ ಪರಿಣಾಮವಾಗಿ ರೇಟ್ ಡಬ್ಬಲ್. ಪೂರೈಕೆ ಕಡಿಮೆ ಇದ್ದಾಗ ರೇಟ್ ಸಹಜವಾಗಿ ಹೆಚ್ಚಾಗುತ್ತದೆ. ಅದಲ್ಲದೆ ಮಳೆಗಾಲದಲ್ಲಿ ಮೀನು ಇಲ್ಲಿಂದ ರಫ್ತಾಗುವುದಿಲ್ಲ ಬದಲಿಗೆ ಆಮದಾಗುತ್ತದೆ. ಚೆನೈಯಿಂದ ಇಲ್ಲಿಗೆ ಬರುವಾಗ ಅದೇ ರೇಟಿಗೆ ಕೊಡಲು ಆಗುತ್ತಾ, ನೀವೆ ಹೇಳಿ ಎಂದು ಹೇಳುತ್ತಾ ಮುಗುಳ್ನಕ್ಕ ಮೀನಿನ ವ್ಯಾಪಾರಿ.

“ನಾ”ಕಂಡಂತೆ

LEAVE A REPLY