ಡಿವೈಡರ್ ಮೇಲೆ ನಿಂತು ರಸ್ತೆ ಕ್ರಾಸ್ ಮಾಡಲು ಹೊರಟರಾ? ಕಾಲ ಬಳಿ ಒಮ್ಮೆ ನೋಡಿಕೊಳ್ಳಿ!

3188

ನಮ್ಮಲ್ಲಿ ಅನೇಕರು ರಸ್ತೆಗಳನ್ನು ಎಲ್ಲೆಂದರಲ್ಲಿ ಕ್ರಾಸ್ ಮಾಡುತ್ತೇವೆ. ಅನೇಕ ಬಾರಿ ಇದು ಅನಿವಾರ್ಯ ಕೂಡ. ಎಲ್ಲಾ ಕಡೆಗಳಲ್ಲಿ ಜೀಬ್ರಾ ಕ್ರಾಸಿಂಗ್ ಅನ್ನು ಕಾದು ಕುಳಿತುಕೊಳ್ಳಲು ಆಗುವುದಿಲ್ಲ. ಇನ್ನು ಹಲವೆಡೆ ರಾಜ್ಯ ಹೆದ್ದಾರಿಗಳಲ್ಲಿ ಡಿವೈಡರ್ ಗಳು ಮೈಲುದ್ದ ಇರುವಾಗ ರಸ್ತೆಯನ್ನು ಕ್ರಾಸ್ ಮಾಡಲು ಡಿವೈಡರ್ ಮೇಲೆ ಹತ್ತಿ ಅಗತ್ಯವಾಗಿರುತ್ತದೆ. ಈ ಮಳೆಗಾಲದ ಸಂದರ್ಭದಲ್ಲಿ ಯಾವುದೇ ರಸ್ತೆಯನ್ನು ಕ್ರಾಸ್ ಮಾಡುವಾಗ ನೀವು ಡಿವೈಡರ್ ಮೇಲೆ ಹತ್ತಿ ನಿಂತು ಅತ್ತಲಿಂದ ವಾಹನಗಳು ಹಾದು ಹೋಗುವ ತನಕ ಕಾಯುತ್ತಿರಲ್ಲ, ಆಗ ಒಮ್ಮೆ ನಿಮ್ಮ ಕಾಲ ಬಳಿಯೂ ಗಮನವಿರಲಿ. ಯಾಕೆಂದರೆ ಡಿವೈಡರ್ ಮೇಲೆ ಬೆಳೆದಿರುವ ದಟ್ಟ ಹುಲ್ಲಿನ ರಾಶಿಗಳ ನಡುವೆ ಹಾವುಗಳು ತಮ್ಮ ನಿದ್ರಾವಸ್ಥೆಯಲ್ಲಿ ತಣ್ಣಗೆ ಮಲಗಿರುತ್ತವೆ. ಅದರಲ್ಲಿ ಹಲವು ಹಸಿರು ಬಣ್ಣದೇ ಹಾವುಗಳು ಆಗಿರುವುದರಿಂದ ಅವುಗಳನ್ನು ನೀವು ಗುರುತಿಸುವುದು ಕೂಡ ಕಷ್ಟ. ಹಸಿರು ಹಾವುಗಳು ಹುಲ್ಲಿನ ಜೊತೆಗೆ ಅಪ್ಪಿಕೊಂಡು ಮಲಗಿದ್ದರೆ ಅದು ಹುಲ್ಲಾ ಅಥವಾ ಹಾವಾ ಎಂದು ಹೇಳುವುದು ಕೂಡ ಸುಲಭದ ಮಾತಲ್ಲ. ಮಂಗಳೂರಿನಿಂದ ಸುರತ್ಕಲ್ ಕಡೆ ಹೋಗುವ ರಸ್ತೆಯಲ್ಲಿ ಚಿತ್ರಾಪುರದ ಬಳಿ ರಸ್ತೆ ದಾಟಲು ಹೋದ ಕ್ಯಾಮೆರಾಮೆನ್ ಒಬ್ಬರಿಗೆ ಡಿವೈಡರ್ ಮೇಲೆ ನಿಂತಾಗ ಹಾವು ಕಚ್ಚಿ ಅವರ ಪ್ರಾಣಕ್ಕೆ ಸಂಚಕಾರ ಬಂದಿತ್ತು. ಆದರೆ ಹಾವು ಕಚ್ಚಿದ ತಕ್ಷಣ ಅದು ಅವರ ಅರಿವಿಗೆ ಬಂದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಿ ಅವರು ಸಾವನ್ನು ಗೆದ್ದು ಬರುವಂತಾಗಿದೆ. ಆದ್ದರಿಂದ ಇನ್ನು ಮುಂದೆ ನೀವು ಡಿವೈಡರ್ ಮೇಲೆ ನಿಂತಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು. ಎಲ್ಲಾ ಕಡೆ ಹಾವಿರುತ್ತೆ ಎಂದಲ್ಲ, ಆದರೆ ನೀವು ನಿಂತ ಕಡೆ ಹಾವಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ಗ್ಯಾರಂಟಿ ಕೊಡುವುದಿಲ್ಲ.
ಇದನ್ನು ತಪ್ಪಿಸುವುದು ಹೇಗೆ. ಮೊದಲಾಗಿ ಈ ಡಿವೈಡರ್ ಗಳ ಮೇಲೆ ಹುಲ್ಲು, ಮಳೆಗಾಲದಲ್ಲಿ ಬೆಳೆಯುವ ಕುರುಚಲು ಗಿಡಗಳು ದೊಡ್ಡ ರೀತಿಯಲ್ಲಿ ಬೆಳೆಯದ ಹಾಗೆ ನೋಡಿಕೊಳ್ಳಬೇಕು. ಪಾಲಿಕೆಯ ವ್ಯಾಪ್ತಿಯಾದರೆ ಪಾಲಿಕೆಯ ಆರೋಗ್ಯ ವಿಭಾಗದಿಂದ ಸ್ವಚ್ಚತೆಯ ಗುತ್ತಿಗೆಯನ್ನು ಪಡೆದುಕೊಂಡವರು ಗಮನಿಸಬೇಕು. ಇನ್ನು ಮಳೆಗಾಲದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಅದನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಸಬೇಕು. ಆಗ ಡಿವೈಡರ್ ಗಳಲ್ಲಿ ಕುರುಚಲು ಗಿಡಗಳು ಬೆಳೆಯುವುದನ್ನು ತಡೆಯಬಹುದು. ಇನ್ನು ಅದೇ ರೀತಿಯಲ್ಲಿ ರಸ್ತೆಗಳ ಬದಿಯಲ್ಲಿ ಕೂಡ ದೊಡ್ಡ ದೊಡ್ಡ ಪೊದೆಯಾಕಾರದ ಹುಲ್ಲುಗಳು ಬೆಳೆದು ಅವು ಕೂಡ ಅಪಾಯಕ್ಕೆ ಆಹ್ವಾನ ನೀಡುತ್ತವೆ. ಮಂಗಳೂರಿನ ಸರಕಾರಿ ಗೋದಾಮುಗಳ ಹೊರಗೆ ಕೂಡ ಇಂತಹ ಮಳೆಗಾಲದ ಅಪಾಯವನ್ನು ನಾವು ಕಾಣಬಹುದು. ಸಾಮಾನ್ಯವಾಗಿ ಪಾದಾಚಾರಿಗಳು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಪೊದೆಯಲ್ಲಿ ಇರುವ ವಿಷಕಾರಕ ಜಂತುಗಳ ಸಂಪರ್ಕಕ್ಕೆ ಬಂದು ಅದರಿಂದ ತೊಂದರೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಪೊದೆಗಳು ಬೆಳೆದಿರುವ ಜಾಗದ ಸನಿಹದಲ್ಲಿ ನಡೆದುಕೊಂಡು ಹೋಗುವಾಗ ಎಚ್ಚರವಿರಲಿ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ. ಯಾಕೆಂದರೆ ಪಾಲಿಕ ಮಲಗಿಕೊಂಡಿದೆ

LEAVE A REPLY