• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಿರ್ಭಯಾ ಫಂಡ್ ಬಳಸದ ರಾಜ್ಯಗಳಲ್ಲಿ ಅತ್ಯಾಚಾರಗಳು ಕಡಿಮೆಯಾಗುತ್ತವೆ ಎನ್ನುವ ನಿರೀಕ್ಷೆ ಬೇಡಾ!!

Hanumantha Kamath Posted On December 13, 2019
0


0
Shares
  • Share On Facebook
  • Tweet It

2019 ರ ಜನವರಿಯಿಂದ ಜೂನ್ ತನಕ ಆರು ತಿಂಗಳಲ್ಲಿ 25190 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ದಾಖಲೆಯಾಗದೇ ಇರುವ ಪ್ರಕರಣಗಳಿಗೆ ಲೆಕ್ಕವೇ ಇರಲಿಕ್ಕಿಲ್ಲ. ಯಾಕೆಂದರೆ ಎಷ್ಟೋ ಸಂದರ್ಭದಲ್ಲಿ ಹೆತ್ತವರು ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಹೆದರಿಯೋ ಅಥವಾ ಅಕ್ಕಪಕ್ಕದವರು ತಮ್ಮ ಮೇಲೆ ಏನು ಅಂದುಕೊಳ್ಳುತ್ತಾರೋ ಎನ್ನುವ ಆತಂಕದಿಂದ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರುವುದಿಲ್ಲ. ಒಂದು ಕಾಲದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿ ತನ್ನ ಮನೆಯವರೊಂದಿಗೆ ದೂರು ದಾಖಲಿಸಲು ಹೋದಾಗ ಅಲ್ಲಿ ಪುರುಷ ಸಿಬ್ಬಂದಿಗಳು ಮಾತ್ರ ಇದ್ದು ಅವರು ಅತ್ಯಾಚಾರಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಎಲ್ಲರ ಎದುರು ಕೇಳಿ ಸಂತ್ರಸ್ತೆಯನ್ನು ಮುಜುಗರಕ್ಕೆ ಒಳಪಡಿಸುತ್ತಿದ್ದರು ಎನ್ನುವ ಕಾರಣಕ್ಕೆ ಅನೇಕ ಯುವತಿಯರು ದೂರು ದಾಖಲಿಸಲು ಹೋಗದೇನೆ ತಮ್ಮ ನೋವನ್ನು, ಅವಮಾನವನ್ನು ತಾವೇ ನುಂಗಿ ಅತ್ಯಾಚಾರಿಗೆ ಮನಸ್ಸಿನಲ್ಲಿಯೇ ಶಾಪ ಹಾಕಿ ಕುಳಿತುಬಿಡುತ್ತಿದ್ದರು. ಆದ್ದರಿಂದ ಮೊದಲು ಅತ್ಯಾಚಾರಕ್ಕೆ ಒಳಗಾದ ಯುವತಿ ದೂರು ಕೊಡಲು ಪೊಲೀಸ್ ಠಾಣೆಗೆ ಬಂದರೆ ಅವಳನ್ನು ಸೂಕ್ತ ಗೌರವದಿಂದ ಮಾತನಾಡಿಸಿ ಅವಳ ಕೇಸು ದಾಖಲಿಸಲು ಮಹಿಳಾ ಪೊಲೀಸರನ್ನು ಆಕೆಗೆ ಒದಗಿಸುವ ಅಗತ್ಯ ಇರುತ್ತದೆ. ಅದರ ನಂತರ ಆಕೆಯ ಹೆಸರು, ವಿಳಾಸ, ಫೋಟೋ ಹೊರಗೆ ಎಲ್ಲಿಯೂ ಪ್ರಚಾರ ಆಗದಂತೆ ನೋಡಿಕೊಳ್ಳುವ ಅಗತ್ಯ ಕೂಡ ಪೊಲೀಸರ ಮುಂದೆ ಇದೆ. ಅನೇಕ ಬಾರಿ ಸಂತ್ರಸ್ತೆಯ ಮೇಲೆ ದೂರು ದಾಖಲಿಸದಿರುವಂತೆ ಒತ್ತಡ ಕೂಡ ಆರೋಪಿಗಳ ಪರವಾಗಿ ಕೆಲವರು ಹಾಕುತ್ತಾರೆ. ಆಗ ಆಕೆಗೆ ಧೈರ್ಯ ತುಂಬುವ ಕೆಲಸವನ್ನು ಕೂಡ ಪೊಲೀಸರು ಮಾಡಬೇಕಾಗುತ್ತದೆ. ಇನ್ನು ಕೆಲವು ಪ್ರಕರಣಗಳು ಮಾಧ್ಯಮಗಳ ಕಣ್ಣಿಗೆ ಬಿದ್ದು ವೈಭವಿಕರಿಸಲ್ಪಡುತ್ತದೆ. ಆಗ ಕೂಡ ಆಕೆಯ ಐಡೆಂಟಿಟಿ ಹೊರಗೆ ಬೀಳದಂತೆ ಎಚ್ಚರಿಕೆ ವಹಿಸಬೇಕಾಗಿರುವುದು ಪೊಲೀಸ್ ಇಲಾಖೆಯ ಕರ್ತವ್ಯ. ಉದಾಹರಣೆಗೆ ಏಳು ವರ್ಷದ ಹಿಂದಿನ ಪ್ರಕರಣವನ್ನೇ ತೆಗೆದುಕೊಳ್ಳಿ. ದೆಹಲಿಯಲ್ಲಿ ಚಲಿಸುವ ಬಸ್ಸಿನ ಒಳಗೆ ಆರು ಜನರಿಂದ ಅತ್ಯಾಚಾರಕ್ಕೆ ಒಳಗಾಗಿ ನಂತರ ನರಳಿ ನಿಧನಳಾದ ಆ ಹೆಣ್ಣುಮಗಳ ಸಾವಿಗೆ ಡಿಸೆಂಬರ್ 16 ರಂದು ಭರ್ತಿ ಏಳು ವರ್ಷ ತುಂಬುತ್ತದೆ. ಆಕೆಯ ನಿಜ ನಾಮಧೇಯವನ್ನು ಆವತ್ತಿನಿಂದ ಇವತ್ತಿನ ತನಕ ಹಾಗೆ ರಹಸ್ಯವಾಗಿ ಉಳಿಸಿಕೊಳ್ಳಲಾಗಿದೆ. ಅವಳು ಮರಣ ಹೊಂದಿರಬಹುದು. ಆದರೆ ಇವತ್ತಿಗೂ ಆಕೆಯ ನಿಜ ಹೆಸರು ಕೆಲವರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ. ಆಕೆಯನ್ನು ಮಾಧ್ಯಮಗಳು “ನಿರ್ಭಯಾ” ಎಂದು ಕರೆದವು. ಅದೇ ಹೆಸರು ಶಾಶ್ವತವಾಯಿತು. ಕೇಂದ್ರದ ಮೋದಿ ಸರಕಾರ ಆಕೆಯ ಹೆಸರಲ್ಲಿ ನಿರ್ಭಯಾ ಫಂಡ್ ಎಂದು ಮಾಡಿತು. ಅದಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿತು. ಪ್ರತಿ ವರ್ಷ ಅದಕ್ಕೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಕೇಂದ್ರ ಘೋಷಣೆ ಮಾಡುತ್ತಾ ಬರುತ್ತಿದೆ. ಆದರೆ ಬೇಸರದ ಸಂಗತಿ ಎಂದರೆ ನಮ್ಮ ದೇಶದ ಎಷ್ಟೋ ರಾಜ್ಯಗಳು ತಮಗೆ ಸಿಕ್ಕಿರುವ ನಿರ್ಭಯಾ ಫಂಡಿನ ಭಾಗದಲ್ಲಿ 20 ಶೇಕಡಾವನ್ನು ಕೂಡ ಇನ್ನೂ ಬಳಸಿಲ್ಲ. ಈ ಫಂಡಿನಿಂದ ಮಹಿಳೆಯರ ಸುರಕ್ಷತೆಯ ಬಗ್ಗೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬಹುದೋ ಅದನ್ನು ತೆಗೆದುಕೊಳ್ಳಲು ರಾಜ್ಯ ಸರಕಾರಗಳಿಗೆ ಅವಕಾಶವಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಮಹಿಳೆಯರು ಸಂಚರಿಸುವ, ಅಪಾಯಕಾರಿಯಾಗಬಹುದಾದ ಜಾಗಗಳಲ್ಲಿ ಅಳವಡಿಸುವುದರಿಂದ ಹಿಡಿದು ಹೆಚ್ಚುವರಿ ಪೊಲೀಸ್ ಸುರಕ್ಷೆಯ ತನಕ ಅವಕಾಶ ಇದೆ. ಅದನ್ನು ರಾಜ್ಯ ಸರಕಾರಗಳು ಬಳಸಬಹುದು.

ಯಾರ ಸಾವನ್ನು ಸಂಭ್ರಮಿಸಬಾರದು ನಿಜ. ಆದರೆ ಅಪ್ಪಟ ರಾಕ್ಷಸರು ಸತ್ತಾಗ ಸಂಭ್ರಮಿಸದೇ ಇರಲು ಸಾಧ್ಯವೇ ಎಂದು ಎಲ್ಲರೂ ಕೇಳುತ್ತಿದ್ದಾರೆ. ಇದರೊಂದಿಗೆ ತೆಲಂಗಾಣದ ಎನ್ ಕೌಂಟರ್ ನ ಸಾರರ್ಥ್ಯ ವಹಿಸಿದ್ದ ಸೈಬರಾಬಾದ್ ಪೊಲೀಸ್ ಕಮೀಷನರ್ ವಿಶ್ವನಾಥ್ ಸಜ್ಜನ್ನರ್ ಅವರ ಫೋಟೋಗಳಿಗೆ ಹೂವಿನ ಸುರಿಮಳೆ, ಹಾಲಿನ ಅಭಿಷೇಕ ಮಾಡುವ ಜನರು ತಮ್ಮ ಮನಸ್ಸಿನಲ್ಲಿ ಇದ್ದದ್ದನ್ನು ಈಡೇರಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಹಾಗಾದರೆ ಈಗ ಭಾರತೀಯರ ಮನಸ್ಸು ಏನನ್ನು ಬಯಸುತ್ತದೆ ಎನ್ನುವುದು ಸ್ಪಷ್ಟವಾಗಿ ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳುತ್ತದೆ. ಪ್ರತಿಯೊಬ್ಬ ಭಾರತೀಯ ಪ್ರಜೆ ಬಯಸುವುದು ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಆಗಲಿ ಮತ್ತು ಆ ಮೂಲಕ ಅತ್ಯಾಚಾರಕ್ಕೆ ತೊಡಗುವವರಿಗೆ ಈ ಘಟನೆ ಸೂಕ್ತ ಸಂದೇಶ ಕೊಡಲಿ ಎನ್ನುವುದು. ಯಾಕೆಂದರೆ ತೆಲಂಗಾಣದಲ್ಲಿ ದುರುಳರಿಂದ ಅತ್ಯಾಚಾರಕ್ಕೆ ಒಳಗಾಗಿ ನಂತರ ಆ ಪಾಪಿಗಳಿಂದಲೇ ಸುಟ್ಟು ಹೋದ ಪ್ರಿಯಾಂಕ ರೆಡ್ಡಿ ನಮ್ಮ 130 ಕೋಟಿ ಭಾರತೀಯರಲ್ಲಿ ಆಕೆಯ ಸ್ವಂತ ತಂಗಿಗೆ ಬಿಟ್ಟರೆ ಬೇರೆ ಯಾರಿಗೂ ಸಹೋದರಿಯಲ್ಲ. ಅವಳ ಅಪ್ಪ, ಅಮ್ಮನಿಗೆ ಬಿಟ್ಟರೆ ಬೇರೆ ಯಾರಿಗೂ ಮಗಳಲ್ಲ. ಆದರೆ ಕರ್ನಾಟಕದ ಯಾವುದೋ ಜಿಲ್ಲೆಯ ಯಾವುದೋ ಹಳ್ಳಿಯಲ್ಲಿ ಕುಳಿತ ಯಾವುದೋ ಒಬ್ಬ ಯುವತಿ ಪ್ರಿಯಾಂಕ ರೆಡ್ಡಿಯಲ್ಲಿ ತನ್ನ ಅಕ್ಕನನ್ನು ಕಾಣುತ್ತಾಳೆ. ಗುಜರಾತಿನ ಯಾವುದೋ ಕಾಲೇಜಿನ ಯುವಕ ಪ್ರಿಯಾಂಕ ರೆಡ್ಡಿಯಲ್ಲಿ ತನ್ನ ಸಹೋದರಿಯನ್ನು ಕಾಣುತ್ತಾನೆ. ಕಲ್ಕತ್ತಾದ ಕುಟುಂಬವೊಂದು ಆಕೆಯಲ್ಲಿ ಮಗಳನ್ನು ಕಾಣುತ್ತಾರೆ. ಹೀಗೆ ಸಂಬಂಧವೇ ಇಲ್ಲದ ಮನೆಗಳಲ್ಲಿ ಪ್ರಿಯಾಂಕಾ ರೆಡ್ಡಿ ಮನೆಮಗಳಾಗಿ ಹೋಗಿದ್ದಳು. ಇದರಿಂದ ಏನಾಯಿತು ಎಂದರೆ ಆಕೆಯ ಅತ್ಯಾಚಾರ ಮತ್ತು ಕೊಲೆಯಾದಾಗ ಮನಸ್ಸಿನ ಒಳಗಿನಿಂದ ಅತ್ತವರೇ ಎಷ್ಟೋ ಜನ.
ಆ ಅತ್ಯಾಚಾರಿ ಕೊಲೆಗಡುಕ ರಾಕ್ಷಸರನ್ನು ನಮ್ಮ ಕೈಗೆ ಒಪ್ಪಿಸಿ, ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದವರೆಷ್ಟು ಮಂದಿ. ಬಹುಶ; ವಿಕಲಚೇತನ ವ್ಯಕ್ತಿಯೊಬ್ಬನ ಕೈಯಲ್ಲಿಯೇ ಆ ಹಂತಕರನ್ನು ಕೊಟ್ಟರೂ ಆತ ತನ್ನ ದೇಹದ ಅಷ್ಟೂ ಶಕ್ತಿಯನ್ನು ಒಗ್ಗೂಡಿಸಿ ಪಾಪಿಗಳಿಗೆ ಒಂದು ಗತಿ ಕಾಣಿಸುತ್ತಿದ್ದನೋ ಏನೋ. ಅಷ್ಟು ಆಕ್ರೋಶ ಎಲ್ಲರಲ್ಲಿ ಇತ್ತು. ಅತ್ಯಾಚಾರಿ ಹಂತಕರು ಯಾವಾಗ ಪೊಲೀಸರ ಬಲೆಗೆ ಬಿದ್ದರೋ ಆವಾಗ ಆ ನಾಲ್ಕು ಜನ ಪೊಲೀಸ್ ಅಧಿಕಾರಿಗಳ ಮುಂದೆ ನಿಂತ ಫೋಟೋ ಮಾಧ್ಯಮಗಳಲ್ಲಿ ಬಂದಿತ್ತು. ಅದು ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ಪ್ರಚಾರ ಆಗಿತ್ತು. ಆಗ ಅದನ್ನು ನೋಡಿ ಶಾಪ ಹಾಕಿದ್ದವರೆಷ್ಟೋ ಜನ. ಆ ಕೀಚಕರ ಬಗ್ಗೆ ವೈಯಕ್ತಿಕವಾಗಿ ಯಾರಿಗೂ ದ್ವೇಷ ಇರಲಿಲ್ಲ. ಆದರೆ ಅವರು ಆದಷ್ಟು ಬೇಗ ಸತ್ತೇ ಹೋಗಲಿ ಎಂದು ಬಯಸಿದವರೆಷ್ಟೋ ಜನ. ಆ ನೀಚರಿಗೆ ಗಲ್ಲು ಶಿಕ್ಷೆ ಬೇಗ ಆಗಲಿ ಎಂದು ಪ್ರಾರ್ಥಿಸಿದವರೆಷ್ಟೋ ಜನ. ತೆಲಂಗಾಣದ ಆ ಹೆಣ್ಣುಜೀವದ ಆತ್ಮಕ್ಕೆ ಚಿರಶಾಂತಿ ಸಿಗಬೇಕಾದರೆ ಆ ಕ್ರಿಮಿಗಳನ್ನು ಹೊಸಕಿ ಹಾಕುವುದೇ ಉತ್ತಮ ಎಂದು ಎಲ್ಲರೂ ಬಯಸಿದ್ದರು. ಅಂತಿಮವಾಗಿ ಶುಕ್ರವಾರದ ಸೂರ್ಯ ಉದಯಿಸುವ ಮೊದಲೇ ಅಸಂಖ್ಯಾತ ಭಾರತೀಯರ ಪ್ರಾರ್ಥನೆ ಫಲಗೂಡಿದೆ.

ಇಲ್ಲಿ ಉನ್ನಾವೋ ಪ್ರಕರಣವನ್ನು ನೋಡಬಹುದು. 2017 ಜೂನ್ 4 ರಂದು ಅತ್ಯಾಚಾರವಾಯಿತು. ಜುಲೈ 28, 2019 ರಂದು ಸಂತ್ರಸ್ತೆ, ಆಕೆಯ ಸಂಬಂಧಿಗಳು ಮತ್ತು ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ಕಾರಿನಲ್ಲಿ ಬರುವಾಗ ಅಪಘಾತ ಮಾಡಿಸಲಾಯಿತು. ಸಂಬಂಧಿಗಳಿಬ್ಬರು ಮೃತರಾದರು. ಸಂತ್ರಸ್ತೆ ಮತ್ತು ವಕೀಲರು ಗಾಯಗೊಂಡರು. ನಂತರ ಆರೋಪಿಗಳು ಒಂದಿಷ್ಟು ಕಾಲ ಜೈಲಿನೊಳಗೆ ಇದ್ದು ಹೊರಗೆ ಬಂದ ಬಳಿಕ ಸಂತ್ರಸ್ತೆ ನ್ಯಾಯಾಲಯಕ್ಕೆ ಬರುವ ದಾರಿಯಲ್ಲಿ ಆಕೆಯ ಮೇಲೆ ಸೀಮೆಎಣ್ಣೆ ಹಾಕಿ ಬೆಂಕಿ ಕೊಟ್ಟರು. ಆಕೆ ಎಷ್ಟೋ ದೂರ ಓಡಿ ಹೋದರೂ ಆಕೆಯನ್ನು ಉಳಿಸಲು ಯಾರೂ ಬರಲಿಲ್ಲ. ಕೊನೆಗೆ 90% ಗಾಯದೊಂದಿಗೆ ಆಕೆ ಆಸ್ಪತ್ರೆಗೆ ಸೇರಬೇಕಾಯಿತು. ಎರಡು ದಿನಗಳ ಆಕೆ ಇಹಲೋಕ ತ್ಯಜಿಸಿದಳು. ಇಲ್ಲಿ ಆರೋಪಿಗಳ ಕಾರ್ಯ ಮತ್ತು ಅವರಿಗೆ ಬಂದಿರುವ ಧೈರ್ಯ ಏನನ್ನು ಸೂಚಿಸುತ್ತದೆ. ಕಾನೂನಿನ ಬಗ್ಗೆ ಹೆದರಿಕೆ ಇಲ್ಲ ಎಂದು ತಾನೇ. ಇದೇ ಘಟನೆ ಅರಬ್ ರಾಷ್ಟ್ರಗಳಲ್ಲಿ ನಡೆದಿದ್ದರೆ ಅಂತಹ ಆರೋಪಿಗಳನ್ನು ಪಟ್ಟಣದ ನಡುವೆ ತೆಗೆದುಕೊಂಡು ಹೋಗಿ ತಲೆಗೆ ಗುಂಡಿಕ್ಕಿ ಕ್ರೇನ್ ಮೂಲಕ ನೇತಾಡಿಸಿ ಎಲ್ಲರಿಗೂ ಆತನ ಮುಖ ಕಾಣುವಂತೆ ಮಾಡಲಾಗುತ್ತಿತ್ತು. ಆದರೆ ನಮ್ಮಲ್ಲಿ ತನಿಖೆ ಮಾಡಿ ನಂತರ ಆರೋಪಿ ಮಾಡಿದ್ದು ತಪ್ಪು ಎಂದು ಸಾಬೀತಾದರೆ ಮುಂದೆ ಶಿಕ್ಷೆ ವಿಧಿಸಲಾಗುತ್ತದೆ. ತನ್ನ ವಿರುದ್ಧ ತೀರ್ಪು ಬಂದರೆ ಆರೋಪಿ ಮೇಲಿನ ನ್ಯಾಯಾಲಕ್ಕೆ ಅಪೀಲು ಹೋಗುತ್ತಾನೆ. ಅಲ್ಲಿ ಮತ್ತೆ ಕೆಲವು ವರ್ಷ ಹೋಗುತ್ತದೆ. ಕೊನೆಗೆ ಆತ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಅಲ್ಲಿ ಪ್ರಕ್ರಿಯೆಗಳೆಲ್ಲ ಮುಗಿದು ಗಲ್ಲುಶಿಕ್ಷೆ ಘೋಷಣೆಯಾದರೂ ಆತನಿಗೆ ದೇಶದ ರಾಷ್ಟ್ರಪತಿಯವರಿಂದ ಕ್ಷಮಾದಾನ ಪಡೆದುಕೊಳ್ಳುವ ಅವಕಾಶ ಇದೆ. ಈಗಾಗಲೇ ಹಲವು ಕ್ಷಮಾದಾನದ ಅರ್ಜಿಗಳು ರಾಷ್ಟ್ರಪತಿಗಳ ಮುಂದೆ ಇರುವುದರಿಂದ ಅವರು ಅದನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯ ಹೇಳುವ ಮೊದಲು ಒಮ್ಮೆ ಆತನ ರಾಜ್ಯಕ್ಕೆ ಒಮ್ಮೆ ಪರಾಮರ್ಶಿಸಲು ಕಳುಹಿಸಿಕೊಡುವ ಕ್ರಮ ಇದೆ. ಅಲ್ಲಿನ ಸರಕಾರ ತಮ್ಮ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ ನಂತರ ರಾಷ್ಟ್ರಪತಿಯವರು ತಮ್ಮ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ತನಕ ದಾಖಲಾದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಆದದ್ದು 25.5% ಮಾತ್ರ ಎನ್ನುವುದು ಅಂಕಿಅಂಶಗಳಿಂದ ಸಾಬೀತಾಗಿದೆ. ಇಷ್ಟೆಲ್ಲಾ ಆದ ಮೇಲೆ ನಿಮಗೆ ಅನಿಸಬಹುದು. ಹಾಗಾದರೆ ಅತ್ಯಾಚಾರಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದು ಹೇಗೆ? ಮೂರು ಆಯಾಮಗಳೊಂದಿಗೆ ಅದಕ್ಕೆ ಅಂತ್ಯ ಹಾಡಲು ಪ್ರಯತ್ನಿಸಬಹುದು. ಹೇಗೆ? ನಾಳೆ ಸಿಗೋಣ!

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumantha Kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search