ಕಲ್ಲು ಹೊಡೆಯುವವರಿಗೂ ಹತ್ತು ಲಕ್ಷ ಕೊಟ್ಟರೆ ಅದೇ ಒಂದು ಉದ್ಯೋಗವಾದೀತು!
ಜಮ್ಮು-ಕಾಶ್ಮೀರದ ಮಾನವ ಹಕ್ಕು ಆಯೋಗದ ಆದೇಶದಿಂದ ಯೋಧರ ಮೇಲೆ ಕಲ್ಲು ಬಿಸಾಡುತ್ತಿದ್ದವರಿಗೆ ಮತ್ತಷ್ಟು ಪ್ರೇರಣೆ ಕೊಟ್ಟಂತೆ ಆಗಿದೆ. ನೀವು ಕಲ್ಲು ಹೊಡೆಯುವುದನ್ನು ಮುಂದುವರೆಸಿ. ಸೈನಿಕರು ಹಿಡಿದರೆ ನಮ್ಮ ರಾಜಕಾರಣಿಗಳು ಬಿಡಿಸುತ್ತಿದ್ದಾರೆ. ಯೋಧರು ನಿಮ್ಮೊಂದಿಗೆ ಕಠಿಣ ಕ್ರಮಗಳನ್ನು ಕೈಗೊಂಡರೆ ನಾವು ಇನಾಮು ಕೊಡುತ್ತೇವೆ ಎಂದು ಹೇಳಿದಂತೆ ಆಗಿದೆ. ಬಹುಶ: ಪಾಕಿಸ್ತಾನದ ರಾಜಕಾರಣಿಗಳು ಕೂಡ ಈ ಮಾನವ ಹಕ್ಕು ಆಯೋಗದ ಆದೇಶವನ್ನು ನೋಡಿ ಮನಸ್ಸಿನಲ್ಲಿ ನಗಬಹುದು. ನಾನು ಮೊದಲು ಏನು ಹೇಳುತ್ತೇನೆ ಎಂದರೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯ ಪ್ರವೇಶಿಸಿ ರಾಜ್ಯ ಮಾನವ ಹಕ್ಕು ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಈ ಒಂದು ಆದೇಶ ಇಡೀ ಸೈನಿಕ ಪಡೆಯ ನೈತಿಕ ಶಕ್ತಿಗೆ ಹಿನ್ನಡೆ ಉಂಟು ಮಾಡಿದಂತೆ ಆಗುತ್ತದೆ. ಒಂದು ರಾಷ್ಟ್ರದಲ್ಲಿ ಯೋಧರ ಬೆಲೆ ಏನು ಎಂದು ಗೊತ್ತಿಲ್ಲದವರು ರಾಜ್ಯ, ರಾಷ್ಟ್ರದ ಆಯಕಟ್ಟಿನ ಜಾಗದಲ್ಲಿ ಇದ್ದರೆ ಮತ್ತು ಅವರ ಒಂದೊಂದು ನಡೆ ಮತ್ತು ನುಡಿಯಿಂದ ಆಗುವ ತೊಂದರೆ ದೇಶದ ಸಮಗ್ರತೆ ಮತ್ತು ಐಕ್ಯತೆ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರ್ಧರಿಸಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಏನಾದರೂ ಮಾಡಬೇಕು.
“ಫಾರೂಕ್ ಅಹ್ಮದ್ ದಾರ್ ನನ್ನು ನೀವು ಜೀಪಿಗೆ ಕಟ್ಟಿ ಅಮಾನವೀಯವಾಗಿ ನಡೆದುಕೊಂಡಿದ್ದಿರಿ, ಆದ್ದರಿಂದ ಜಮ್ಮು-ಕಾಶ್ಮೀರ ಸರಕಾರ ಹತ್ತು ಲಕ್ಷ ಪರಿಹಾರ ನೀಡಬೇಕು” ಎಂದು ಬಿಲಾಲ್ ನಜ್ಕಿ ಎನ್ನುವ ಮಾಜಿ ನ್ಯಾಯಾಧೀಶ ಮತ್ತು ಹಾಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಆದೇಶ ನೀಡಿದ್ದಾರೆ. ಮೊದಲನೇಯದಾಗಿ ಯೋಧ ಮೇಜರ್ ನಿತಿನ್ ಗೋಗಯಿ ಮಾಡಿದ್ದು ಅಪರಾಧ ಎಂದು ಹೇಳುವುದೇ ದೊಡ್ಡ ಹಾಸ್ಯಾಸ್ಪದ ವಿಷಯ. ಏಕೆಂದರೆ ಆ ಪರಿಸ್ಥಿತಿಯಲ್ಲಿ ಯಾರಿದ್ದರೂ ಅವರಿಗಿಂತ ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು ಎನ್ನುವುದು ದಿಟ. ಮೇಜರ್ ನಿತಿನ್ ಕನಿಷ್ಟ ಫಾರೂಕ್ ಎನ್ನುವ ಕಲ್ಲು ಎಸೆತಗಾರನನ್ನು ಜೀಪಿಗೆ ಕಟ್ಟಿ ನಂತರ ಗೌರವಪೂರ್ವಕವಾಗಿ ಬಿಟ್ಟುಕಳುಹಿಸಿದ್ದಾರೆ. ಅವರು ಸಿಟ್ಟಿನ ಭರದಲ್ಲಿ ಫಾರೂಕ್ ನಿಗೆ ಹೊಡೆದು ಅವನ ಅಂಗ ಊನ ಮಾಡಿಲ್ಲ. ಇನ್ನು ಫಾರೂಕ್ ಜೀವನವೀಡಿ ನೋವು ಅನುಭವಿಸುವಂತೆ ಚಿತ್ರಹಿಂಸೆ ನೀಡಿಲ್ಲ. ಮೇಜರ್ ಒಬ್ಬರು ತನ್ನ ಸೇನಾ ತುಕಡಿಯನ್ನು ಉಳಿಸಲು ಮತ್ತು ಪರಿಸ್ಥಿತಿ ಕೈ ಮೀರಿ ಸೈನಿಕರು ಫೈರಿಂಗ್ ಮಾಡಬೇಕಾದ ಪರಿಸ್ಥಿತಿ ಬಂದರೆ ಅದರಿಂದ ಇನ್ನಷ್ಟು ನಾಗರಿಕರ ಸಾವು ನೋವುಗಳನ್ನು ತಪ್ಪಿಸಲು ಏನು ಮಾಡಬೇಕೋ ಅದನ್ನೇ ಮಾಡಿದ್ದಾರೆ. ಅದಕ್ಕಾಗಿ ಆರ್ಮಿ ಚೀಫ್ ಬಿಪಿನ್ ರಾವತ್ ಅವರು ಮೇಜರ್ ನಿತಿನ್ ಅವರಿಗೆ ಪದಕ ನೀಡಿ ಗೌರವಿಸಿದ್ದಾರೆ. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಮಾನವ ಹಕ್ಕು ಕಾರ್ಯಕರ್ತ ಅಹಸಾನ್ ಉನ್ಟು ಎನ್ನುವವ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಕೊಟ್ಟಿದ್ದಾನೆ.
ಈಗ ಉದ್ಭವಿಸುವ ಪ್ರಶ್ನೆ ಹಾಗಾದರೆ ಕಲ್ಲು ಹೊಡೆಯುವುದು ಸರಿನಾ? ಪಾಕಿಸ್ತಾನದ ತುಂಡು ಬ್ರೆಡ್ಡಿಗೆ ಇಲ್ಲಿನ ನೆಲ, ಜಲ, ಗಾಳಿ ಸೇವಿಸುವ ಮನುಷ್ಯರು ಇಲ್ಲಿಯದ್ದೇ ಜನರ ಮೇಲೆ ಕಲ್ಲು ಹೊಡೆಯುವುದು ಒಪ್ಪಿಕೊಳ್ಳಲು ಆಗುತ್ತದಾ? ಎರಡನೇಯದಾಗಿ ಆವತ್ತು ಶ್ರೀನಗರದಲ್ಲಿ ಲೋಕಸಭೆಗೆ ಉಪಚುನಾವಣೆ ನಡೆಯುತ್ತಿತ್ತು. ಅದಕ್ಕೆ ಬಂದೋಬಸ್ತ್ ನಲ್ಲಿದ್ದ ಯೋಧರ ಮೇಲೆ ಕಲ್ಲು ಬಿಸಾಡುವ ಮೂಲಕ ಚುನಾವಣಾ ನೀತಿ ಸಂಹಿತೆಗೆ ಅಡ್ಡಿ ಮಾಡಲು ಯತ್ನಿಸುತ್ತಿದ್ದ ಫಾರೂಕ್ ಅಹ್ಮದ್ ನನ್ನು ಕುಳ್ಳಿರಿಸಿ, ನೀನು ಕಲ್ಲು ಹೊಡೆದದ್ದಕ್ಕೆ ಧನ್ಯವಾದ ಎಂದು ಹೇಳಿ ಶಾಲು ಹೊದ್ದು, ಹೂಮಾಲೆ ಹಾಕಿ, ಹಣ್ಣುಹಂಪಲು ಕೊಡಬೇಕಿತ್ತಾ? ಮೂರನೇಯದಾಗಿ ಇವರಿಗೆ ಅಷ್ಟು ಧಮ್ ಇದ್ದರೆ ಪಾಕಿಸ್ತಾನದ ಸೈನಿಕರ ಮೇಲೆ ಕಲ್ಲು ಬಿಸಾಡಲು ಗಡಿಗೆ ಹೋಗಲಿ, ರಕ್ಷಣೆಗೆ ನಿಂತವರ ಮೇಲೆ ಕಲ್ಲು ಹೊಡೆದು ಅವರ ತಾಳ್ಮೆ ಕೆಣಕುವಂತಹ ಪ್ರಯತ್ನ ಏಕೆ ಮಾಡುತ್ತಾರೋ? ತುಂಬಾ ಜನರಿಗೆ ಈ ಮಿಲಿಟರಿಗೆ ಹೇಗೆ ನೇಮಕಾತಿ ಆಗುತ್ತದೆ ಎಂದು ಗೊತ್ತಿಲ್ಲ. ಅವರ ಅಂತಿಮ ಪರೀಕ್ಷೆಯಲ್ಲಿ ಅವರಿಗೆ ಏನೇನೋ ಕೆಣಕಿ, ಹೀಯಾಳಿಸಿ, ತಮಾಷೆ ಮಾಡಿ, ನಿಂದಿಸಿ, ಟೀಕಿಸಿ ತಾಳ್ಮೆ ಕೆಣಕುವ ಪ್ರಯತ್ನವನ್ನು ಪರೀಕ್ಷಾಧಿಕಾರಿಗಳು ಮಾಡುತ್ತಾರೆ. ಎಲ್ಲದಕ್ಕೂ ಸಮಾಧಾನದಿಂದ ಉತ್ತರ ಕೊಟ್ಟವನು ಮಾತ್ರ ಆಯ್ಕೆ ಆಗುತ್ತಾರೆ.
ಒಂದು ಬಾರಿ ಮಿಲಿಟರಿಗೆ ಸೇರಲು ಬಂದ ನಗರ ಪ್ರದೇಶದ ಯುವಕನೊಬ್ಬ ಎಲ್ಲಾ ಪರೀಕ್ಷೆ ಬರೆದು ಕೊನೆಯ ಘಟ್ಟಕ್ಕೆ ಬಂದಿದ್ದ. ಕೊನೆಯ ಹಂತ ಮುಗಿದರೆ ಅವನು ನೇರವಾಗಿ ಉನ್ನತ ಹುದ್ದೆಗೆ ನೇಮಕ ಆಗುತ್ತಿದ್ದ. ಎಲ್ಲದರಲ್ಲೂ ಪ್ರವೀಣನಾಗಿದ್ದ ಆ ಯುವಕನಿಗೆ ಕೊನೆಯ ಘಟ್ಟದಲ್ಲಿ ಸಂದರ್ಯನ ಮಾಡುವ ಅಧಿಕಾರಿ ಕೇಳಿಬಿಟ್ಟರು ” ನಿನ್ನ ತಾಯಿ ಸೂಳೆಯಂತೆ ಹೌದಾ?” ಯಾವುದೋ ಹೆಸರು, ಊರು ಗೊತ್ತಿಲ್ಲದ ವ್ಯಕ್ತಿ ನಿನ್ನ ತಾಯಿ ಸೂಳೆಯಂತೆ ಎಂದರೆ ನೀವು ಏನು ಮಾಡುತ್ತಿರಿ? ಆದರೆ ಆ ಯುವಕ ಶಾಂತಚಿತ್ತನಾಗಿ ಮುಖದಲ್ಲಿ ಒಂದೇ ಒಂದು ಭಾವನೆ ತೋರಿಸದೆ ಹೇಳಿದ ” ಹೌದು, ನನ್ನ ತಾಯಿ ಸೂಳೆ…. ಆದರೆ ಅವಳಿಗೆ ಜೀವನದಲ್ಲಿ ಇದ್ದ ಏಕೈಕ ಗ್ರಾಹಕ ಎಂದರೆ ನನ್ನ ತಂದೆ”. ಆ ಉತ್ತರಕ್ಕೆ ಆ ಇಡೀ ಸಭಾಂಗಣ ಸ್ತಬ್ಧವಾಯಿತು.
ಯಾಕೆ ಈ ಮಾತು ಹೇಳಿದೆನೆಂದರೆ ಶಾಂತಿ, ತಾಳ್ಮೆಯ ಸಾಕಾರ ಮೂರ್ಥಿಯಂತಿರುವ ನಮ್ಮ ಯೋಧರನ್ನು ಕೆಣಕುವುದೇ ಮಹಾಅಪರಾಧ. ಅದರ ಮೇಲೆ ಹತ್ತು ಲಕ್ಷ ಇನಾಮಾ? ಹೇಳುವವರಿಗಾದರೂ ಒಂದಿಷ್ಟು …………..? ಬೇಡ್ವಾ
Leave A Reply