ಆಷಾಢ ಮಾಸದಲ್ಲಿ ಮಾರಿ ಓಡಿಸಲು ತುಳುನಾಡಿನ ಮನೆ ಮನೆಗೆ ಬರುವ ಆಟಿ ಕಳೆಂಜ
Posted On July 23, 2018
ಮಂಗಳೂರು: ಜಾನಪದ ವೈಶಿಷ್ಟ್ಯಗಳಿಗೆ ಗುರುತಿಸಿಕೊಂಡಿರುವ ತುಳುನಾಡಿನಲ್ಲಿ ಅಷಾಢಮಾಸ ಆರಂಭವಾಗಿದೆ. ಈ ಆಟಿ ತಿಂಗಳು ಆರಂಭವಾಗುತ್ತಿದ್ದಂತೆ ಆಟಿ ಕಳೆಂಜ ಮನೆ ಮನೆ ಬಾಗಿಲಲ್ಲಿ ಪ್ರತ್ಯಕ್ಷನಾಗುತ್ತಾನೆ. ಆಟಿ ಕಳೆಂಜ ಮನೆಮನೆಗೆ ಬಂದು ಮಾರಿಯನ್ನು ನಿವಾರಿಸುತ್ತಾನೆ. ಮೂಡಣದ ಮಾರಿಯನ್ನು ಮೂಡಣದೂರಿಗೆ ಸಾಗಿಸುತ್ತಾನೆ. ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲೀ ಬರುವ ಕಾಯಿಲೆಯನ್ನು ನಿವಾರಣೆ ಮಾಡುವ ಮಾಂತ್ರಿಕನಂತೆ ಕಳೆಂಜ ಎನ್ನುವುದು ತುಳು ಜನರ ನಂಬಿಕೆ.
ಮಾರಿಯನ್ನು ನಿವಾರಣೆ ಮಾಡುವ ಆಟಿ ಕಳೆಂಜ ಭೂತಾರಾಧನೆಯಲ್ಲಿ ವೀರರ ಆರಾಧನೆ ಬಹಳ ಮುಖ್ಯವಾದ ಒಂದು ಅಂಗ. ಯೋಧರು ಅಥವಾ ಅರಸರು ತಮ್ಮ ಮರಣದ ಬಳಿಕ ದೈವಗಳಾಗಿ ಆರಾಧನೆಗೊಂಡ ನಿದರ್ಶನಗಳು ಭೂತಾರಾಧನೆಯಲ್ಲಿ ಸಾಕಷ್ಟಿವೆ. ಆಟಿ ಕಳಂಜ ಸಂಪ್ರದಾಯದಲ್ಲಿ ಮಾನುಷ ಮತ್ತು ಅತಿಮಾನುಷ ನಡುವಿನ ರೂಪವಾದ ಮಂತ್ರವಾದಿಯು ದಾರ್ಶನಿಕನಾಗಿ ಕಾಣುತ್ತಾನೆ. ತುಳುನಾಡಿನ ಆಟಿ ಮಾಸದಲ್ಲಿ ಮನೆಮನೆಯಲ್ಲಿ ಪ್ರತ್ಯಕ್ಷನಾಗುವ ಆಟಿ ಕಳೆಂಜ, ಮನುಷ್ಯರಿಗಾಗಲೀ , ಪ್ರಾಣಿಗಳಿಗಾಗಲೀ ಬರುವ ಮಾರಿಯನ್ನು ನಿವಾರಣೆ ಮಾಡುವನು ಹಾಗೂ ಅದಕ್ಕೆ ಪರಿಹಾರ ನೀಗುವವನು ಎನ್ನುವುದು ತುಳು ಜನರ ನಂಬಿಕೆ.
ಆಟಿ ಕಳೆಂಜ ವೇಷ ಹಾಕುವುದು ಹೇಗೆ? : ತುಳುನಾಡಿನಲ್ಲಿ ಸಾಮಾನ್ಯವಾಗಿ ನಲಿಕೆ ಜನಾಂಗದವರು ಆಟಿ ಕಳೆಂಜ ವೇಷ ಹಾಕುವ ವಾಡಿಕೆ. ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಮನೆಗೆ ಕಳೆಂಜ ಬರುತ್ತಾನೆ. ಸಣ್ಣ ಬಾಲಕನೊಬ್ಬನಿಗೆ ತಲೆಗೆ ಕಂಗಿನ ಹಾಳೆಯ ಟೊಪ್ಪಿಗೆ ಇಟ್ಟು, ಮುಖಕ್ಕೆ ಬಿಳಿಯ ಬಣ್ಣ ಬಳಿದು, ದಡ್ಡಿಯ ನಾರಿನ ಗಡ್ಡ ಮೀಸೆ ಬಿಡಿಸಿ, ಕೆಂಪು ಬಣ್ಣದ ಅರಿವೆಯ ತೊಡಿಸಲಾಗುತ್ತದೆ. ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲೊಂದು ಓಲೆಗರಿಯ ತತ್ರ ಕೊಟ್ಟು ಆಟಿ ಕಳೆಂಜನ ವೇಷ ಹಾಕಿಸುತ್ತಾರೆ. ವೇಷಧಾರಿಯ ಜೊತೆಗಿರುವ ಮತ್ತೊಬ್ಬ ತೆಂಬರೆ ಎಂಬ ಚರ್ಮವಾದ್ಯ ಒಂದನ್ನು ಬಾರಿಸಿ, ಆಟಿ ಕಳೆಂಜನಿಗೆ ಸಂಬಂಧಪಟ್ಟ ಪಾಡ್ದನ ಹಾಡುತ್ತಿರುವಂತೆಯೇ ವೇಷಧಾರಿ ಮೆಲ್ಲನೆ ಕಾಲನ್ನಾಡಿಸುತ್ತ ಕೈಯಲ್ಲಿ ಹಿಡಿದಿರುವ ತಂತ್ರವನ್ನು ತಿರುಗಿಸುತ್ತ ಹಿಂದೆ- ಮುಂದೆ ಹೋಗುತ್ತಿರುತ್ತಾನೆ.
ತುಳುನಾಡ ಜನರ ನಂಬಿಕೆ ಆಟಿ ತಿಂಗಳಲ್ಲಿ ಮನೆಯ ಅಂಗಳಕ್ಕೆ ಬಂದು ಕುಣಿದ ಆಟಿ ಕಳೆಂಜನಿಗೆ ತಡ್ಪೆ ಎಂಬ ಮರದ ಸಾಧನದಲ್ಲಿ ಸ್ವಲ್ಪ ಭತ್ತ, ಅಕ್ಕಿ, ಹುಳಿ, ಮೆಣಸು, ಉಪ್ಪು, ಒಂದು ತುಂಡು ಇದ್ದಲು, ಸ್ವಲ್ಪ ಅಟ್ಟದ ಮಸಿ ಇಟ್ಟುಕೊಡುತ್ತಾರೆ. ಅಲ್ಲದೆ ಆತ ಅಂಗಳ ಇಳಿದು ಹೋಗುವಾಗ ಕುರಿನೀರನ್ನು ಅಥವಾ ಅರಿಸಿನ ಹಾಕಿದ ಬಣ್ಣದ ನೀರನ್ನು ಆತನ ಮೇಲೆ ಸಿಂಪಡಿಸುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ ಕಳೆಯುತ್ತದೆ ಎಂದು ತುಳುನಾಡ ಜನರ ನಂಬಿಕೆ.
ನಗರ ಪ್ರದೇಶಗಳಲ್ಲಿ ವಿರಳ ಈ ಸಂಪ್ರದಾಯ ಹಿಂದಿನಿಂದಲೂ ನಡೆದು ಕೊಂಡುಬಂದಿದೆ. ಆಧುನಿಕತೆಗೆ ತೆರೆದುಕೊಂಡಿರುವ ನಗರ ಪ್ರದೇಶಗಳಲ್ಲಿ ಆಟಿಕಳೆಂಜ ಅತ್ಯಂತ ವಿರಳ. ಅದರೆ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಆಟಿ ಕಳೆಂಜ ಮನೆ ಮನೆಗೆ ಬರುತ್ತಾನೆ. ಆಧುನಿಕತೆ ಎಷ್ಟೇ ಬೆಳೆದರೂ ಕರಾವಳಿಯ ಗ್ರಾಮಾಂತರ ಪ್ರದೇಶಗಳಲ್ಲಿ ಈ ಸಂಪ್ರದಾಯಗಳೂ ಇನ್ನೂ ಅಳಿಯದೆ ಉಳಿದಿದೆ. ಇಂತಹ ಸಂಪ್ರದಾಯ ಕಟ್ಟು ಪಾಡುಗಳಿಂದಲೇ ಸಮಾಜ ಇನ್ನೂ ಸ್ವಸ್ಥವಾಗಿದೆ
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply