ಮಂಗಳೂರಿನ ಬ್ರಾಂಡಿಗೆ ಆದ ಡ್ಯಾಮೇಜನ್ನು ಸರಿಮಾಡಲು ಮೊದಲು ಆಗಬೇಕಾದದ್ದೇ ಇದು!!
ಒಂದು ವಸ್ತು, ಹೆಸರನ್ನು ಬ್ರಾಂಡ್ ಮಾಡುವುದೆಂದರೆ ಅದು ಸುಲಭದ ಕೆಲಸವಲ್ಲ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಬೇಕು. ಅದೇ ಒಮ್ಮೆ ಬ್ರಾಂಡ್ ಕ್ರಿಯೇಟ್ ಆದರೆ ನಂತರ ಅದು ಪಾಸಿಟಿವ್ ಆಗಲಿ, ನೆಗೆಟಿವ್ ಆಗಲಿ ಬ್ರಾಂಡ್ ಹೋಗುವುದು ಕಷ್ಟ. ನೀವು ಹೊರ ಜಿಲ್ಲೆಗಳಿಗೆ, ಹೊರ ರಾಜ್ಯಗಳಿಗೆ ಹೋದರೆ ಮಂಗಳೂರು ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿ. ಮಂಗಳೂರಿನಲ್ಲಿ ವ್ಯವಹಾರ ಹೊಂದಿರುವವರು, ಮಂಗಳೂರಿನಲ್ಲಿ ಗೆಳೆಯ, ಸಂಬಂಧಿಗಳನ್ನು ಹೊಂದಿರುವವರು, ಮಂಗಳೂರಿನಲ್ಲಿ ಕಲಿಯಲು ಮಕ್ಕಳನ್ನು ಕಳುಹಿಸಿಕೊಟ್ಟವರು ಸ್ವಲ್ಪ ಆತಂಕದಿಂದಲೇ ಮಂಗಳೂರಿನಲ್ಲಿ ಯಾವಾಗ ಗಲಾಟೆ ಶುರುವಾಗುತ್ತದೆ ಎಂದು ಹೇಳಲು ಆಗುವುದಿಲ್ಲ ಎನ್ನುವ ಮಾತನ್ನು ಹೇಳುತ್ತಾರೆ. ಗಲಾಟೆ ಎಂದರೆ ಕೋಮು ಸಂಘರ್ಷ ಎಂದು ಅವರ ಮಾತಿನ ಅರ್ಥ. ಹೌದು. ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾಗಿ ಮಾರ್ಪಟ್ಟಿದೆ. ಹಾಗೆಲ್ಲ ಏನೂ ಇಲ್ಲ ಎಂದು ಮೇಲ್ನೋಟಕ್ಕೆ ನಾವು ಹೇಳಬಹುದು. ಆದರೆ ಒಳಮನಸ್ಸಿನಲ್ಲಿ ನಮಗೆ ಅವರು ಹೇಳುವುದರಲ್ಲಿ ಒಂದಿಷ್ಟು ನಿಜವಿದೆ ಎಂದು ಅನಿಸುತ್ತದೆ. ಇದನ್ನು ಹೋಗಲಾಡಿಸುವುದು ಹೇಗೆ?
ಗಲಾಟೆಯ ಗುತ್ತಿಗೆ ಒಬ್ಬರದ್ದು, ಆರೆಸ್ಟ್ ಬೇರೆಯವರು…
1983 ರ ತನಕ ನಾನು ವಾಸವಾಗಿ ಇದ್ದದ್ದೇ ಅಪ್ಪಟ ಮುಸಲ್ಮಾನ ಮನೆಗಳನ್ನೇ ಹೊದ್ದು ಮಲಗಿದ್ದ ಬದ್ರಿಯಾ ಅಂದರೆ ನಿರೇಶ್ವಾಲ್ಯ ಏರಿಯಾದಲ್ಲಿ. ನಮಗೆ ಆಗ ಹಿಂದೂ ಮುಸ್ಲಿಂ ಎನ್ನುವ ಭೇದಬಾವ ಇರಲೇ ಇಲ್ಲ. ಅಲ್ಲಿನ ನಿತ್ಯಾನಂದ ಆಶ್ರಮದ ಶಿವರಾತ್ರಿ ಉತ್ಸವಕ್ಕೆ ಮುಸ್ಲಿಮರು ಬರುತ್ತಿದ್ದರು. ಅವರ ಹಬ್ಬಗಳಿಗೆ ನಮ್ಮವರು ಹೋಗುತ್ತಿದ್ದರು. ಅದರ ಬಳಿಕ ನಾನು ಹತ್ತು ಹನ್ನೆರಡು ವರ್ಷ ಮುಂಬೈನಲ್ಲಿದ್ದೆ. ನಂತರ ನಾನು ಮಂಗಳೂರಿಗೆ ಬಂದಾಗ ಇಲ್ಲಿ ಹಿಂದಿನ ವಾತಾವರಣ ಇರಲೇ ಇಲ್ಲ. ಹಿಂದೂ ಮುಸ್ಲಿಮರ ನಡುವೆ ಸ್ಪಷ್ಟ ಕಂದಕ ಏರ್ಪಟ್ಟಿತ್ತು. ಅವರು ಬೇರೆ ನಾವು ಬೇರೆ ಎನ್ನುವ ಮಟ್ಟಿಗೆ ಬಿರುಕು ಮೂಡಿತ್ತು. ಆವತ್ತಿನಿಂದ ಇವತ್ತಿನ ತನಕ ಮಂಗಳೂರಿನಲ್ಲಿ ಅನೇಕ ಕೋಮು ಗಲಭೆಗಳು ಸಂಭವಿಸಿವೆ. ನೂರಾರು ಜನರ ಬಂಧನವಾಗಿದೆ. ಆದರೂ ಮತ್ತೆ ಮತ್ತೆ ಗಲಭೆಗಳು ಆಗುತ್ತಿವೆ. ಯಾಕೆ ಹೇಳಿ. ಪೊಲೀಸ್ ಇಲಾಖೆಯ ಬಳಿ ಉತ್ತರ ಇದೆ. ಆದರೆ ಅವರು ಮೌನವಾಗಿದ್ದಾರೆ.
ಮೈದಾನದಲ್ಲಿ ಕ್ರಿಕೆಟ್ ಆಡುವಾಗ ಆದ ಗಲಾಟೆಯಿಂದ ಹಿಡಿದು ಗೋಸಾಗಾಣಿಕೆಯ ತನಕ ಹಿಂದೂ-ಮುಸ್ಲಿಂ ಯುವಕರ ನಡುವೆ ವಿವಿಧ ಕಾರಣಗಳಿಗೆ ಗಲಾಟೆಯಾಗಿದೆ. ಅಂತಹ ಸಂದರ್ಭದಲ್ಲಿ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸಿದ್ದಾರಾ ಎನ್ನುವ ಪ್ರಶ್ನೆಯನ್ನು ಪೊಲೀಸ್ ಅಧಿಕಾರಿಗಳಿಗೆ ಕೇಳಿ. ಅವರು ಆತ್ಮಸಾಕ್ಷಿಯಿಂದ ಉತ್ತರಿಸಲಿ. ಹೌದು, ನಾವು ಗಲಾಟೆಗೆ ಕಾರಣವಾಗುವ ನೈಜ ಆರೋಪಿಗಳನ್ನು ಹಿಡಿದಿದ್ದೇವೆ ಎಂದು ಎದೆತಟ್ಟಿ ಹೇಳುತ್ತಾರಾ? ಇಲ್ಲ, ಹಾಗೆ ಹೇಳುವುದಿಲ್ಲ. ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿಯ ತನಕ ಅದು ಹಿಂದೂವೇ ಆಗಿರಲಿ, ಮುಸ್ಲಿಮೇ ಆಗಿರಲಿ. ಗಲಾಟೆಯನ್ನು ಮಾಡಿದವರು, ಮಾಡಿಸಿದವರ ಬಂಧನವಾಗಿಯೇ ಇಲ್ಲ. ಒಂದು ಗಲಾಟೆ ಆದ ಕೂಡಲೇ ಪೊಲೀಸ್ ಠಾಣೆಯಿಂದ ಸ್ಥಳೀಯ ಮುಖಂಡರಿಗೆ ಫೋನ್ ಹೋಗುತ್ತದೆ. “ನಿಮ್ಮ ಕಡೆಯಿಂದ ಮೂರ್ನಾಕು ಜನರನ್ನು ಕೊಡಿ” ನಾಯಕರು ಯಾರನ್ನೋ ಕರೆದು ಸರೆಂಡರ್ ಆಗು ಎಂದು ಹೇಳುತ್ತಾರೆ. ನಂತರ ಮರುದಿನ ಪೊಲೀಸರು ಅಬ್ದುಲ್ಲಾ, ರೆಹಮಾನ್, ಶಬ್ಬೀರ್ ನನ್ನು ಕೊಣಾಜೆಯಲ್ಲಿ ಹಿಡಿದೆವು. ಶಂಕರ, ಕೃಷ್ಣ, ಸುರೇಶ್ ನನ್ನು ಪಂಪ್ ವೆಲ್ ನಲ್ಲಿ ಹಿಡಿದೆವು ಎಂದು ಸುದ್ದಿಗೋಷ್ಟಿ ಮಾಡಿ ಕೈ ತೊಳೆದುಕೊಂಡು ಬಿಡುತ್ತಾರೆ. ಓದಿದ ಜನ “ಆಗಬಹುದು, ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ” ಎಂದುಕೊಂಡು ಆ ಘಟನೆಯನ್ನು ಅಲ್ಲಿಗೆ ಮರೆತು ಬಿಡುತ್ತಾರೆ. ಕೆಲವು ದಿನಗಳ ಬಳಿಕ ಬಂಧಿತರಾದವರಿಗೆ ಜಾಮೀನಾಗುತ್ತದೆ. ಅವರು ತಮ್ಮ ತಮ್ಮ ನಾಯಕರ ಬಳಿ ಹೋಗುತ್ತಾರೆ. ಕೊಟ್ಟಿದ್ದು ತೆಗೆದುಕೊಂಡು ಮನೆಗೆ ಹೋಗುತ್ತಾರೆ. ಕೆಲವರಿಗೆ ಜೈಲಿಗೆ ಹೋಗಿ ಬಂದವ ಎಂದು ಹೆಗಲ ಮೇಲೆ ಸ್ಟಾರ್, ತಲೆಯ ಮೇಲೆ ಕೊಂಬು ಮೂಡುತ್ತದೆ. ಆತ ಫುಲ್ ಟೈಮ್ ಇಂತಹ ಕೆಲಸಕ್ಕೆ ತಯಾರಾಗುತ್ತಾನೆ. ಪೂರ್ಣ ಪ್ರಮಾಣದಲ್ಲಿ ರೌಡಿಸಂ ಮಾಡಲು ಫೀಲ್ಡ್ ಹುಡುಕುತ್ತಾನೆ. ಇದರಿಂದ ಮತ್ತೊಬ್ಬ ಅಂಡರ್ ವಲ್ಡ್ ಎಲಿಮೆಂಟ್ ಹುಟ್ಟುತ್ತಾನೆ ವಿನ: ಕೋಮು ಸಂಗರ್ಷ ಮುಕ್ತಾಯವಾಗುವುದಿಲ್ಲ. ಇದು ಮೊದಲ ತಪ್ಪು.
ಗಲಾಟೆ ಆದ ಕೂಡಲೇ ಫೋನ್ ಸ್ಟೇಶನ್ನಿಗೆ ಹೋಗಬಾರದು…
ಎರಡನೇಯದಾಗಿ ಗಲಭೆ ಆಗುವಾಗ ಪೊಲೀಸರು ಲಾಠಿಚಾರ್ಜ್ ಮಾಡಿ ನಿಜವಾದ ಆರೋಪಿಗಳನ್ನು ಬಂಧಿಸಿಬಿಟ್ಟರು ಎಂದೇ ಇಟ್ಟುಕೊಳ್ಳೋಣ. ಮರುಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಅಥವಾ ಸಚಿವರಿಂದ ಫೋನ್ ಹೋಗುತ್ತದೆ. ಕೈ ಪಾಳಯದವರು ಫೋನ್ ಮಾಡಿ ಅವರ ಪಕ್ಷದವರನ್ನು ಬಿಡಿಸಿಕೊಂಡು ಹೋದರೆ, ಕಮಲದವರು ಅವರಿಗೆ ಬೇಕಾದವರನ್ನು, ಜೆಡಿಎಸ್ ನವರು ಅವರ ತೆನೆ ಹೊರುವವರನ್ನು ಬಿಡಿಸಿಕೊಂಡು ಹೋಗಿ ಬಿಡುತ್ತಾರೆ. ಕಷ್ಟಪಟ್ಟು ಹಿಡಿದ ಪೊಲೀಸರು ನೋಡಿ ನಿಂತದ್ದೇ ಬಂತು. ಆದ್ದರಿಂದ ನಾನು ಮೊದಲಿಗೆ ಹೇಳುವುದು ಹೀಗೆ ಫೋನ್ ಬಂದಾಗ ಪೊಲೀಸರು ಜನಪ್ರತಿನಿಧಿಗಳು ಹೇಳಿದ್ದು ಕೇಳುವುದನ್ನು ನಿಲ್ಲಿಸಬೇಕು. ಹೆಚ್ಚೆಂದರೆ ಎತ್ತಂಗಡಿ ಆಗುತ್ತದೆ. ಆದರೆ ಮನಸ್ಸಿಗೆ ತೃಪ್ತಿ ಇರುತ್ತದೆ. ಹೀಗೆ ಮಾಡಲು ಆಗುತ್ತಾ ಎಂದು ಪೊಲೀಸ್ ಅಧಿಕಾರಿಗಳಿಗೆ ಕೇಳಿದೆ. ಎದುರಿಗೆ ಮಂಗಳೂರು ಪೊಲೀಸ್ ಕಮೀಷನರ್ ಟಿ ಆರ್ ಸುರೇಶ್ ಇದ್ದರು. ಡಿಸಿಪಿಗಳು, ಎಸಿಪಿಗಳು ಇದ್ದರು. ಸಭೆಯಲ್ಲಿ ಮಂಗಳೂರಿನ ಅನೇಕ ಗಣ್ಯರು ಇದ್ದರು. ನಮ್ಮ ಊರನ್ನು ಬ್ರಾಂಡ್ ಮಂಗಳೂರು ಮಾಡಬೇಕೆನ್ನುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಮತ್ತು ಸಹೃದಯಿ ಪತ್ರಕರ್ತರು ಏರ್ಪಡಿಸಿದ್ದ ಕಾರ್ಯಕ್ರಮ ಅದು. ಮೊದಲಿಗೆ ಮಾತನಾಡಿದ್ದೇ ನಾನು. ಮೊದಲಿಗೆ ಹೇಳಿದ್ದೇ ಪೊಲೀಸ್ ಇಲಾಖೆಯ ಬಗ್ಗೆ. ಏನೂ ಉತ್ತರ ಬರಲಿಲ್ಲ. ನಂತರ ನಾನು ಪತ್ರಕರ್ತರು ಹೇಗೆ ಬ್ರಾಂಡ್ ಮಂಗಳೂರು ಮಾಡಲು ಅಡ್ಡಿ ಇದ್ದಾರೆ ಎಂದು ವಿವರಿಸಲು ಶುರು ಮಾಡಿದೆ. ಅದನ್ನು ನಾಳೆ ಹೇಳುತ್ತೇನೆ!
Leave A Reply