ಖಾತಾ ಬದಲಾವಣೆಯನ್ನು ಕಠಿಣಗೊಳಿಸಿ ಅತಿ ಬುದ್ಧಿವಂತಿಕೆ ತೋರಿಸಿದ ಪಾಲಿಕೆ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾತಾ ಬದಲಾವಣೆ ಮಾಡಿಸಲು ಇತ್ತೀಚೆಗೆ ಯಾವತ್ತಾದರೂ ಹೋಗಿದ್ದೀರಾ? ಹೋಗಿದ್ದರೆ ನಿಮಗೆ ಅವರ ಕಿರಿಕಿರಿಯ ಅರಿವಾಗುತ್ತಿತ್ತು. ಹಿಂದೆ ಪಾಲಿಕೆಯಲ್ಲಿ ಒಂದು ವಾರದಲ್ಲಿ ಖಾತಾ ಬದಲಾವಣೆ ಆಗುತ್ತಿತ್ತು. ಈಗ ಒಂದು ತಿಂಗಳು ಕನಿಷ್ಟ ಹಿಡಿಯುತ್ತದೆ. ಯಾಕೆಂದರೆ ಪಾಲಿಕೆ ಕಂಪ್ಯೂಟರಿಕೃತ ಆಗಿರುವುದರಿಂದ ಈಗ ಹಿಂದಿಗಿಂತ ಕೆಲಸ ನಿಧಾನವಾಗುತ್ತಿದೆ. ಅದರ ಬಗ್ಗೆ ನಿನ್ನೆ ಕೂಡ ಬರೆದಿದ್ದೇನೆ. ಹಿಂದೆನೂ ಬರೆದಿದ್ದೆ. ಕೆಲಸ ವೇಗ ಪಡೆಯುವುದು ಬಿಟ್ಟು ಇನ್ನಷ್ಟು ತಡವಾಗುತ್ತಿದೆ. ಅದರೊಂದಿಗೆ ಪಾಲಿಕೆಯವರದ್ದು ಇನ್ನೊಂದು ಕಂಡಿಷನ್ ಕೂಡ ಸೇರಿರುವುದರಿಂದ ಒಂದು ತಿಂಗಳ ಮೇಲೆ ಇನ್ನೊಂದಿಷ್ಟು ದಿನ ಖಾತಾ ಬದಲಾವಣೆಗೆ ಸಮಯ ತಗಲುತ್ತಿದೆ. ಅಷ್ಟಕ್ಕೂ ಆ ಹೊಸ ಕಿರಿಕಿರಿ ಏನು ಅನ್ನೊಂದನ್ನು ಈಗ ನೋಡೊಣ.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೇಗೆ..
ಒಬ್ಬ ವ್ಯಕ್ತಿಯ ಮಾಲೀಕತ್ವದ ಮನೆ ಮತ್ತೊಬ್ಬ ವ್ಯಕ್ತಿಗೆ ಮಾರುವಾಗ ಖಾತಾ ಬದಲಾವಣೆ ಮಾಡಲಾಗುತ್ತದೆ. ಖಾತಾ ಬದಲಾವಣೆ ಆಗುವುದು ಪಾಲಿಕೆಯಲ್ಲಿ. ಹಿಂದೆ ಹೇಗೆ ಅಂದರೆ ಪಾಲಿಕೆಗೆ ನೀವು ಸೇಲ್ ಡೀಡ್ ಜೊತೆಯಲ್ಲಿ ಡೋರ್ ನಂಬರ್ ಇರುವಂತಹ ದಾಖಲೆಯನ್ನು ಅರ್ಜಿಯೊಂದಿಗೆ ಸೇರಿಸಿ ಕೊಟ್ಟರೆ ಖಾತಾ ಬದಲಾವಣೆ ಆಗುತ್ತಿತ್ತು. ಈಗ ನೀವು ಸೇಲ್ ಡೀಡ್ ಜೊತೆಗೆ ಡೋರ್ ನಂಬ್ರದ ದಾಖಲೆ ಸೇರಿಸಿ ಅರ್ಜಿ ಕೊಟ್ಟರೆ ಪಾಲಿಕೆ ನಿಮಗೆ ನೋಟಿಸ್ ಕೊಡುತ್ತದೆ. ಆಶ್ಚರ್ಯವಾಯಿತಾ? ಹೆದರಬೇಡಿ. ಇದು ಅವರ ಹೊಸ ವರಸೆ. ಈಗ ಪಾಲಿಕೆ ಏನು ಮಾಡುತ್ತದೆ ಎಂದರೆ ಮನೆ ಅಥವಾ ಜಾಗ ಮಾರುವ ವ್ಯಕ್ತಿ ಮತ್ತು ಖರೀದಿಸುವ ವ್ಯಕ್ತಿ ಇಬ್ಬರಿಗೂ ನೋಟಿಸ್ ಕಳುಹಿಸಿ ಪಾಲಿಕೆಗೆ ಬರಲು ಹೇಳುತ್ತದೆ. ಒಂದು ವೇಳೆ ಆಸ್ತಿ ಮಾರುವ ವ್ಯಕ್ತಿ ಒಂದು ವಾರದ ನಂತರ ಇವರು ಕೊಟ್ಟ ದಿನದಂದು ಬರದಿದ್ದಲ್ಲಿ ಅಥವಾ ಯಾವತ್ತೋ ಬಂದರೆ ಈ ಖಾತಾ ಮಾಡುವಂತಹ ಪ್ರಕ್ರಿಯೆ ತಡವಾಗುತ್ತಾ ಹೋಗುತ್ತದೆ. ನಮಗೆಲ್ಲ ಗೊತ್ತಿರುವ ಹಾಗೆ ಸೇಲ್ ಡೀಡ್ ಆಗುವುದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ. ಅಲ್ಲಿ ರಾಮನ ಜಾಗವನ್ನು ಸೋಮ ಎಂಬುವನು ಭೀಮನಿಗೆ ಫೋರ್ಜರಿ ಮಾಡಿ ಮಾರಿದರೆ ಮುಂದೆ ಇದು ರಾಮನಿಗೆ ಗೊತ್ತಾದರೆ ಅವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ಗಲಾಟೆ ಮಾಡಲು ಆಗುವುದಿಲ್ಲ. ನೀವ್ಯಾಕೆ ಹಾಗೆ ಮಾಡಿದ್ದಿರಿ ಎಂದು ಜೋರು ಮಾಡಲು ಆಗುವುದಿಲ್ಲ. ಅವರೇನಿದ್ದರೂ ಅದನ್ನು ನ್ಯಾಯಾಲಯದಲ್ಲಿ ದಾವೆ ಹೂಡಬೇಕು. ಒಮ್ಮೆ ಸೇಲ್ ಡೀಡ್ ಅನ್ನು ಬೇರೆಯವರ ಹೆಸರಿಗೆ ನೋಟರಿ ಮಾಡಿದ ಮೇಲೆ ಅಲ್ಲಿಗೆ ಒಂದು ಆಸ್ತಿಯ ಪರಭಾರೆ ವಿದ್ಯುಕ್ತವಾಗಿ ಆಯಿತು ಎಂದು ಅರ್ಥ. ನಂತರ ಅದಕ್ಕೆ ತೆರಿಗೆ ಪಾವತಿಸಿದ ರಸೀದಿಯನ್ನು ಇಟ್ಟು ಅರ್ಜಿ ಬರೆದುಕೊಟ್ಟರೆ ಪಾಲಿಕೆ ಖಾತಾ ಮಾಡಲೇಬೇಕು. ಆದರೆ ಪಾಲಿಕೆಯವರು ತಮ್ಮನ್ನು ಮಹಾನ್ ಬುದ್ಧಿವಂತರು ಎಂದು ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿಯೇ ಅವರು ಇಂತಹ ಟ್ರಿಕ್ಸ್ ಮಾಡಲು ಹೋಗುವುದಿಲ್ಲ. ಹಾಗಿರುವಾಗ ಮಾರುವವನು, ಖರೀದಿಸುವವನು ಇಬ್ಬರೂ ಪಾಲಿಕೆಯ ಕಂದಾಯ ವಿಭಾಗಕ್ಕೆ ಬರಬೇಕು ಎಂದು ಪಾಲಿಕೆ ನೋಟಿಸ್ ಕೊಡುವುದರಿಂದ ಸಾಧಿಸುವಂತದ್ದಾದರೂ ಏನು?
ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ…
ಒಂದು ವೇಳೆ ಆರ್ ಟಿಸಿಯಲ್ಲಿ ಎಲ್ ಆರ್ ಟಿ/ಸಿ ಎಂದು ಬರೆದಿದ್ದರೆ ಅಂದರೆ ಕೆಲವು ಜಾಗಗಳಲ್ಲಿರುವ ಮನೆಗಳಲ್ಲಿ ವಾಸಿಸುವವರು ಧಣಿವಕ್ಕಲು ಎಂದು ಇರುತ್ತದೆ. ಇನ್ನು ಭೂನ್ಯಾಯ ಮಂಡಳಿಯವರ ಅಧೀನದಲ್ಲಿ ಬರುವ ಜಮೀನು ಇದ್ದರೆ ತಹಶೀಲ್ದಾರ್ ಮತ್ತು ಅಸಿಸ್ಟೆಂಟ್ ಕಮೀಷನರ್ ಅವರಿಂದ ತಾಲೂಕು ಕಚೇರಿಯಲ್ಲಿ ಒಂದು ಪ್ರಕ್ರಿಯೆಗಳು ಇರುತ್ತದೆ. ಅದು ಬಿಟ್ಟು ಉಳಿದ ಎಲ್ಲಾ ಸಂದರ್ಭಗಳಲ್ಲಿ ಯಾವುದೇ ರಗಳೆ ಇರುವುದಿಲ್ಲ. ಹಾಗಿರುವಾಗ ಪಾಲಿಕೆಯವರು ಎರಡೂ ಕಡೆಯವರನ್ನು ಕರೆಸಿ ಸಾಧಿಸುವುದಾದರೂ ಏನು? ಯಾಕೋ ಇತ್ತೀಚೆಗೆ ಅತೀ ಬುದ್ಧಿವಂತಿಕೆಯಿಂದ ಪಾಲಿಕೆ ಏನೇನೋ ಮಾಡುತ್ತಾ ಇದೆ. ಅದೇನೋ ಗಾದೆ ಇದೆಯಲ್ಲ. ಬೆಂಕಿ ನಂದುವ ಮೊದಲು ಒಮ್ಮೆ ಜೋರಾಗಿ ಉರಿಯುತ್ತದೆಯಂತೆ. ಹಾಗೆ ಫೆಬ್ರವರಿ ಅಂತ್ಯದೊಳಗೆ ಚುನಾವಣೆಯನ್ನು ಎದುರಿಸಬೇಕಾಗಿರುವ ಮಂಗಳೂರು ಮಹಾನಗರ ಪಾಲಿಕೆ ಈಗೀಗ ಯಾವುದ್ಯಾವುದಕ್ಕೋ ಕೈ ಹಾಕುತ್ತದೆ.
Leave A Reply