ನಿಮಗೆ ಬೇಕಾದ ಚಾನೆಲ್ ಗಳ ಪಟ್ಟಿ ಮಾಡಿದ್ರಾ? ಮಾಡದಿದ್ದರೆ ಬೇಗ ಮಾಡಿ!!
ನಾವು ಕಷ್ಟಪಟ್ಟು ಕೈಯಿಂದ ಹಣ ಹಾಕಿ ಜನರ ಸೇವೆ ಮಾಡುತ್ತಾ ಇದ್ವಿ. ಅದನ್ನು ಟ್ರಾಯ್ ಅವರು ಕಿತ್ತೊಂಡ್ರು ಎಂದು ಕೇಬಲ್ ವ್ಯವಹಾರದ ಆಪರೇಟರ್ ಗಳು ತಮ್ಮ ವಾದ ಮಂಡಿಸುತ್ತಿದ್ದಾರೆ. ಫೆಬ್ರವರಿ ಒಂದರಿಂದ ಜನರಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಗುರುವಾರ ಒಂದು ದಿನದ ಪ್ರಸಾರವನ್ನು ನಿಲ್ಲಿಸಿದ್ದರು. ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಎಂಟು ಗಂಟೆಯ ತನಕ ಸಿಗ್ನಲ್ ಆಫ್ ಮಾಡಿ ನಂತರ ಆನ್ ಮಾಡಿ ತಮ್ಮ ಪ್ರತಿಭಟನೆಯನ್ನು ಮಾಡಿ ತೋರಿಸಿದ್ದಾರೆ. ಇವರು ಏನೇ ತಲೆ ಕೆಳಗೆ ಕಾಲು ಮೇಲೆ ಮಾಡಿದ್ರು ಫೆಬ್ರವರಿಯ ನಂತರ ಟ್ರಾಯ್ ತಂದಿರುವ ಹೊಸ ನಿಯಮವೇ ಜಾರಿಗೆ ಬರುತ್ತದೆ. ಯಾಕೆಂದರೆ ಇದು ಟ್ರಾಯ್ ಗೆ ಸುಪ್ರೀಂಕೋರ್ಟ್ ಕೊಟ್ಟಿರುವ ಸೂಚನೆ. ಮಾನ್ಯ ನ್ಯಾಯಾಧೀಶರೇ, ನನ್ನ ಮನೆಯಲ್ಲಿ ನಾಲ್ಕು ನೂರು ಚಾನೆಲ್ ಗಳು ಬರುತ್ತವೆ. ಅದಕ್ಕೆ ನನಗೆ ತಿಂಗಳಿಗೆ ಮುನ್ನೂರು ರೂಪಾಯಿ ಕೊಡಬೇಕಾಗುತ್ತಿದೆ. ನನಗೆ ಅಷ್ಟು ಚಾನೆಲ್ ನೋಡುವಂತಹ ಪುರುಸೊತ್ತು ಇಲ್ಲ. ವ್ಯವಧಾನವೂ ಇಲ್ಲ. ನನಗೆ ನನ್ನ ಆಯ್ಕೆಯ ಬೆರಳೆಣಿಕೆಯ ಚಾನೆಲ್ ಗಳು ಇದ್ದರೆ ಸಾಕು. ಅದಕ್ಕೆ ಎಷ್ಟು ಹಣ ಕೊಡಬೇಕಾಗಬಹುದೋ ಅಷ್ಟು ಕೊಡುತ್ತೇನೆ ಎಂದು ವಾದಿಯೊಬ್ಬರು ಮಾಡಿದ ಮನವಿಯನ್ನು ಪುರಸ್ಕರಿಸಿದ ಮಾನ್ಯ ಸುಪ್ರಿಂಕೋರ್ಟ್ ಕೊಟ್ಟಿರುವ ತೀರ್ಪು ಟ್ರಾಯ್ ಮೂಲಕ ಜಾರಿಗೆ ಬರುತ್ತಿದೆ. ಹಾಗಾದರೆ ಇದರಿಂದ ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟ. ಇಲ್ಲಿ ಉದ್ಭವಿಸಿರುವ ಪ್ರಶ್ನೆ ಏನೆಂದರೆ ಗ್ರಾಹಕರಿಗೆ ಹೇಗೆ ಲಾಭ ಮತ್ತು ಕೇಬಲ್ ನವರಿಗೆ ಹೇಗೆ ನಷ್ಟ.
ಹೇಗೆ ನೋಡಿದ್ರೂ ಗ್ರಾಹಕನಿಗೆ ಲಾಭ..
ಮೊದಲನೇಯದಾಗಿ ಗ್ರಾಹಕರಿಗೆ ಹೇಗೆ ಲಾಭ ಎಂದು ನೋಡೋಣ. ಫೆಬ್ರವರಿಯಿಂದ ನೀವು ತಿಂಗಳಿಗೆ ಕನಿಷ್ಟ ಶುಲ್ಕ ಎಂದು 130 ರೂಪಾಯಿ ಕೇಬಲ್ ಆಪರೇಟರ್ ಗಳಿಗೆ ಕಟ್ಟಬೇಕಾಗುತ್ತದೆ. ಇನ್ನು ಜಿಎಸ್ ಟಿ 22 ರೂಪಾಯಿ ಬರುವುದರಿಂದ ಅದು ಒಟ್ಟು 152 ರೂಪಾಯಿ ಆಗುತ್ತದೆ. ಅದರಲ್ಲಿ ನೂರು ಚಾನೆಲ್ ಗಳು ಉಚಿತವಾಗಿ ಸಿಗುತ್ತವೆ. ಸ್ಥಳೀಯ ವಾಹಿನಿಗಳು ಕೂಡ ಉಚಿತವಾಗಿ ಅದರಲ್ಲಿ ಬರುತ್ತವೆ. ಇನ್ನು ಸ್ಟಾರ್ ಪ್ಲಸ್, ಝೀ, ಸೋನಿಯಂತಹ ಚಾನೆಲ್ ಗಳು ಬೇಕಾದರೆ ಅದಕ್ಕೆ ಒಂದಿಷ್ಟು ಹಣ ಹೆಚ್ಚುವರಿ ಕೊಡಬೇಕು. ನಿಮ್ಮ ಆಯ್ಕೆಯ ಚಾನೆಲ್ ಗಳಿಗೆ ಮಾಸಿಕ ದರ ಎಷ್ಟು ಎನ್ನುವುದು ನೀವು ಚಾನೆಲ್ ಇಡುವಾಗ ಕೆಳಗೆ ಬಂದು ಹೋಗುತ್ತದೆ. ನಮ್ಮ ಕನ್ನಡದ ನ್ಯೂಸ್ ಚಾನೆಲ್ ಗಳೇ ಬೇರೆ ಧಾರಾವಾಹಿ ಚಾನೆಲ್ ಗಳಿಗಿಂತ ಹೆಚ್ಚಿನ ರಸವತ್ತಾದ ಸ್ಟೋರಿಗಳನ್ನು ತೋರಿಸುತ್ತಿರುವುದರಿಂದ ಅವುಗಳನ್ನು ಮಾತ್ರ ನೋಡುವವರಿಗೆ ನಯಾಪೈಸೆಯ ಖರ್ಚು ಇಲ್ಲ. ಇನ್ನು ಮಹಿಳೆಯರ ಸೀರೆಯ ಸೆರಗನ್ನು ಒದ್ದೆ ಮಾಡಿ, ಮನೆಯ ಒಳಗೆ ಫಿಟ್ಟಿಂಗ್ ಇಡುವಂತಹ ಧಾರಾವಾಹಿಗಳನ್ನು ತೋರಿಸುವ ಉದಯ ಟಿವಿಗೆ ಒಂದಿಷ್ಟು ಮಾಸಿಕ ದರ ಇದೆ. ಸ್ಟಾರ್ ಪ್ಲಸ್, ಝೀ, ಸೋನಿ ಚಾನೆಲ್ ಗಳಿಗೆ ಪ್ರತ್ಯೇಕವಾಗಿ 19 ರೂಪಾಯಿ ಹಾಗೆ ಸ್ಟಾರ್ ಸಮೂಹದ, ಝೀ ಸಮೂಹದ, ಸೋನಿ ಸಮೂಹದ ಇಡೀ ಗೊಂಚಲನ್ನು ಖರೀದಿಸಿದರೆ 30 ರಿಂದ 40 ರೂಪಾಯಿ ಆಗಬಹುದು. ಹೇಗೆ ನೋಡಿದರೂ ಒಬ್ಬ ಗ್ರಾಹಕನಿಗೆ ತನ್ನ ಮಾಸಿಕ ಕೇಬಲ್ ದರ ಇನ್ನೂರರಿಂದ ಇನ್ನೂರೈವತ್ತು ರೂಪಾಯಿ ತನಕ ಮಾತ್ರ ಹೋಗಲಿದೆ. ಅನೇಕ ಹಿಂದಿ, ಇಂಗ್ಲೀಷ್ ನ್ಯೂಸ್ ಚಾನೆಲ್ ಗಳು ಉಚಿತ ಅಥವಾ ಎರಡ್ಮೂರು ರೂಪಾಯಿಗಳಿಗೆ ತಿಂಗಳಿಗೆ ಸಿಗುತ್ತವೆ. ಹೇಗೆ ನೋಡಿದ್ರೂ ಗ್ರಾಹಕನಿಗೆ ಲಾಭ.
ನನಗೆ ಮುಸ್ಲಿಂ, ಕ್ರೈಸ್ತರ ಭೋಧನೆ ಯಾಕೆ?
ಇನ್ನು ಕೇಬಲ್ ಆಪರೇಟರ್ ಗಳು ಹೇಳುವ ಹಾಗೆ ನಾವು ನಾನ್ನೂರು ಚಾನೆಲ್ ನೀಡುತ್ತೇವೆ, ಅದಕ್ಕೆ ಮುನ್ನೂರು ರೂಪಾಯಿ ಪಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಇವರು ಮೊದಲನೇಯದಾಗಿ ಕೊಡುವ ಹೆಚ್ಚಿನ ಚಾನೆಲ್ ಗಳು ಫ್ರೀಯಲ್ಲಿ ಬರುತ್ತವೆ. ಇನ್ನು ಅನೇಕ ಬಾರಿ ಇವರು ಹಣ ಕಟ್ಟದ ತಪ್ಪಿಗೆ ನಮಗೆ ವಾರಗಟ್ಟಲೆ ಪೇಯ್ಡ್ ಚಾನೆಲ್ ಗಳು ಸಿಗುವುದಿಲ್ಲ. ಆಗ ಇವರು ಬಂದು ಮುಂದಿನ ತಿಂಗಳು ಹಣ ಕಡಿಮೆ ತೆಗೆದುಕೊಳ್ಳುತ್ತಾರಾ? ಇನ್ನು ಇವರು ಕೊಡುವ ಎಫ್ ಚಾನೆಲ್ ಗಳಂತವು ಮನೆ ಮಂದಿ ಕುಳಿತು ನೋಡುವಂತದ್ದಲ್ಲ. ಅದು ನಮಗೆ ಬೇಕಾಗಿಯೂ ಇಲ್ಲ. ಅದರೊಂದಿಗೆ ಹತ್ತರಿಂದ ಇಪ್ಪತ್ತು ಧಾರ್ಮಿಕ ಚಾನೆಲ್ ಗಳು. ನಾನು ಮೂರು ಉರ್ದು ಭಕ್ತಿ ಚಾನೆಲ್, ಕ್ರೈಸ್ತರ ಧರ್ಮ ಭೋದಿಸುವ ಮೂರ್ನಾಕು ಚಾನೆಲ್ ತೆಗೆದುಕೊಂಡು ಎಂತದ್ದು ಮಾಡಲಿ. ಮತಾಂತರ ಆಗ್ಬೇಕಾ? ಅಡುಗೆಯದ್ದೇ ನಾಲ್ಕು ಚಾನೆಲ್ ಗಳಿರುತ್ತವೆ. ದೊಡ್ಡವರೇ ಇರುವ ಮನೆಗಳಲ್ಲಿ ನಾಲ್ಕು ಕಾರ್ಟೂನ್ ಚಾನೆಲ್ ಗಳು ಉಪ್ಪು ಹಾಕಿ ನೆಕ್ಕಲಿಕ್ಕೆ ಆಗುತ್ತಾ? ಸಿನೆಮಾಗಳನ್ನೇ ತೋರಿಸುವ ಎಂಟು ಚಾನೆಲ್ ಗಳಿವೆ. ಸೋನಿಯೋ, ಝೀ ತೆಗೆದುಕೊಂಡ ಮೇಲೆ ಬೇರೆ ಸಿನೆಮಾ ಚಾನೆಲ್ ಯಾಕೆ? ಕ್ರೀಡೆಗಳದ್ದೇ ಆರೇಳು ಚಾನೆಲ್ ಗಳಿವೆ. ಮ್ಯಾಚ್ ಇದ್ದರೆ ನೋಡುವುದು ಒಂದರಲ್ಲಿ ಮಾತ್ರವಲ್ಲವೇ? ಜನೌಷಧ ಮಳಿಗೆಗಳು ಇನ್ನೊಂದಿಷ್ಟು ಹೆಚ್ಚು ಪ್ರಚಾರಕ್ಕೆ ಬಂದರೆ ಮೂವತ್ತು ಪೈಸೆಯಲ್ಲಿ ಸಿಗುವ ಮಾತ್ರೆಗಳನ್ನು ಮೂರು ರೂಪಾಯಿಯಲ್ಲಿ ಮಾರಿ ಬಿಲ್ಡಿಂಗ್ ಕಟ್ಟಿದವರ ಕಥೆ ಮುಗಿಯಲಿದೆ. ಇದು ಕೂಡ ಹಾಗೆ ಆಗುತ್ತಾ?
Leave A Reply