ಮಂಗಳೂರಿನ ಮಾದರಿ ರಸ್ತೆಯೊಂದರ ಕಥೆ ಬಲ್ಲಿರಾ!!
ನಾನು ತೆಗೆದ ಫೋಟೋ. ಅದನ್ನು ಯಥಾವತ್ತಾಗಿ ಹಾಗೆ ಪೋಸ್ಟ್ ಮಾಡುತ್ತಿದ್ದೇನೆ. ಇದು ನೀವು ನೋಡುತ್ತಿರುವ ದೃಶ್ಯ ಮಂಗಳೂರಿನ ದುರ್ಗಾಮಹಾಲ್ ನಿಂದ ಕಾಳಿಕಾಂಬ ದೇವಸ್ಥಾನದವರೆಗಿನ ರಸ್ತೆ. ಬರೊಬ್ಬರಿ ಎಂಟು ವರ್ಷಗಳಾದವು. ಈ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಮಾಡುತ್ತೇವೆ ಎಂದು ಮಂಗಳೂರು ಮಹಾನಗರ ಪಾಲಿಕೆ ಹೊರಟು ಎಂಟು ವರ್ಷಗಳಾಗಿ ಹೋಗಿವೆ. ಆದರೆ ಇವತ್ತಿಗೂ ಈ ರಸ್ತೆಯನ್ನು ಮಾದರಿ ರಸ್ತೆ ಎಂದು ಹೇಳಿಕೊಳ್ಳಲಾಗದೇ ಪಾಲಿಕೆ ಒದ್ದಾಡುತ್ತಿದೆ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ನೀಡಿದ್ದ ನೂರು ಕೋಟಿ ಅನುದಾನದಲ್ಲಿ ಈ ರಸ್ತೆಯನ್ನು ಮಾದರಿ ಮಾಡಲು ಹನ್ನೊಂದು ಕೋಟಿ ಮೀಸಲಿಡಲಾಗಿತ್ತು. ಆದರೆ ಇದನ್ನೇ ಮಾದರಿ ಎಂದವರ ಕಣ್ಣುಗಳನ್ನು ಈಗ ಮೊದಲು ಪರೀಕ್ಷಿಸಬೇಕು. ಮೊದಲನೇಯದಾಗಿ ಇದು ಮಾದರಿ ಯಾಕೆ ಅಲ್ಲ ಎನ್ನುವುದನ್ನು ವಿವರಿಸುತ್ತೇನೆ.
ಸೈಕಲ್ ವೇ ಇಲ್ಲ…
ಈ ರಸ್ತೆಯಲ್ಲಿ ಸೈಕಲ್ ವೇ ಇಡಲಾಗುತ್ತದೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಆದರೆ ಈ ರಸ್ತೆಯಲ್ಲಿ ಯಾವುದೇ ಸೈಕಲ್ ವೇ ಮಾಡಲಾಗಿಲ್ಲ. ಸೈಕಲ್ ವೇ ಎಂದರೆ ನೀವು ಕೆಲವು ಮಹಾನಗರಗಳಲ್ಲಿ, ಹೆಚ್ಚಾಗಿ ವಿದೇಶಗಳಲ್ಲಿ ನೋಡಿರಬಹುದು. ಸೈಕಲ್ ಗಳು ಹೋಗುವುದಕ್ಕಾಗಿಯೇ ರಸ್ತೆಯಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆ ನಿಗದಿಗೊಳಿಸಿದ ಸ್ಥಳದಲ್ಲಿ ಸೈಕಲ್ ಗಳು ಮಾತ್ರ ಸಂಚರಿಸುವುದೇ ವಿನ: ಬೇರೆ ವಾಹನಗಳಿಗೆ ಅವಕಾಶವಿಲ್ಲ. ಅಂತಹ ಒಂದು ಸೌಲಭ್ಯ ಈ ದುರ್ಗಾಮಹಾಲ್-ಕಾಳಿಕಾಂಬ ರಸ್ತೆಯಲ್ಲಿಯೂ ಇರಲಿದೆ ಎನ್ನುವ ಮಾಹಿತಿ ಇತ್ತು. ಆದರೆ ಆಗಿಲ್ಲ. ಅದರೊಂದಿಗೆ ಈ ರಸ್ತೆಯಲ್ಲಿ ಮಳೆಯ ನೀರು ಬಿದ್ದರೆ ಹೋಗಲು ಸರಿಯಾದ ದಾರಿಯೇ ಇಲ್ಲ. ನೀರು ರಸ್ತೆಯಲ್ಲಿಯೇ ಹೋಗುತ್ತದೆ. ರಸ್ತೆಯ ಮೇಲೆ ಮಳೆಯ ನೀರು ಬಿದ್ದರೆ ಚರಂಡಿಯಲ್ಲಿ ಇಳಿದು ಹೋಗಲು ಏನು ಮಾಡಬೇಕು ಎಂದು ಗೊತ್ತಿಲ್ಲದ ಇಂಜಿನಿಯರ್ಸ್ ಪಾಲಿಕೆಯಲ್ಲಿ ಇದ್ದಾರೆ. ನನಗೆ ಅವರು ನಿಜಕ್ಕೂ ಇಂಜಿನಿಯರಿಂಗ್ ಪಾಸಾಗಿದ್ದಾರಾ ಅಥವಾ ಮೂರನೇ ಕ್ಲಾಸ್ ಕಲಿತು ಫೇಕ್ ಪ್ರಮಾಣಪತ್ರ ಪಡೆದು ತಂದಿದ್ದಾರಾ ಎನ್ನುವುದು ಡೌಟು. ಹಾಗಂತ ಮೂರನೇ ತರಗತಿ ಮಾತ್ರ ಕಲಿತವರನ್ನು ಅವಮಾನಿಸಲು ಹೋಗುವುದಿಲ್ಲ. ಯಾಕೆಂದರೆ ಅಷ್ಟು ಮಾತ್ರ ಕಲಿತವರಿಗಾದರೂ ಒಂದಿಷ್ಟು ಕಾಮನ್ ಸೆನ್ಸ್ ಇರುತ್ತದೆ. ಆದರೆ ನಮ್ಮ ಪಾಲಿಕೆಯ ಇಂಜಿನಿಯರ್ ಗಳಿಗೆ ಅದು ಕೂಡ ಇಲ್ಲ. ನೀವು ಹೀಗೆ ಯಾಕೆ ಎಂದು ಕೇಳಿದರೆ ಓ ಹೌದಲ್ಲ, ಮಾಡೋಣ ಎಂದು ರಸ್ತೆಯನ್ನು ಮತ್ತೆ ಆಪರೇಶನ್ ಮಾಡಲು ಹೊರಡುತ್ತಾರೆ. ಅದರ ಬದಲಿಗೆ ಮೊದಲಿಗೆನೆ ಅದಕ್ಕೊಂದು ವ್ಯವಸ್ಥೆ ಮಾಡಲು ಆಗುವುದಿಲ್ಲವೇ? ಅದಕ್ಕಾಗಿಯೇ ಎಂಟು ವರ್ಷಗಳ ಕಾಮಗಾರಿಯ ಇವತ್ತಿನ ಸ್ಥಿತಿಯ ಫೋಟೋ ಹಾಕಿದ್ದೇನೆ.
ದಾರಿದೀಪ ಸಂಖ್ಯೆಗಳ ಕೊರತೆ..
ಇನ್ನು ಈ ರಸ್ತೆಯಲ್ಲಿ ಒಟ್ಟು 24 ದಾರಿದೀಪಗಳನ್ನು ಹಾಕುವ ಪ್ಲ್ಯಾನ್ ಇತ್ತು. ಆದರೆ ಈಗ ಅಷ್ಟು ಹಾಕಲು ಆಗುವುದಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಹೇಳುತ್ತಾರೆ. ಯಾಕೆಂದರೆ ಮೆಸ್ಕಾಂ ವೈಯರ್ ಇಶ್ಯೂ. ಆದ್ದರಿಂದ 24 ದಾರಿದೀಪ ಕಂಬಗಳನ್ನು ಹಾಕಲಾಗುತ್ತಿಲ್ಲ. ಇದೆಲ್ಲ ಹೇಗೆ ಆಗುತ್ತದೆ ಎಂದರೆ ಪಾಲಿಕೆಯ ಕಟ್ಟಡದ ಒಳಗೆನೆ ಕುಳಿತು ಅಲ್ಲಿಂದಲೇ ಕೆಲಸ ಕಾಮಗಾರಿಯನ್ನು ತಮ್ಮ ಒಳಕಣ್ಣಿನಿಂದ ನೋಡುವ ಅಧಿಕಾರಿಗಳಿಗೆ ವಾಸ್ತವದಲ್ಲಿ ಏನು ಆಗುತ್ತದೆ ಎಂದು ಗೊತ್ತಿರುವುದಿಲ್ಲ. ಕೊನೆಗೆ ಸಮಸ್ಯೆ ಶುರುವಾದಾಗ ಕೈಚೆಲ್ಲಿ ಬಿಡುತ್ತಾರೆ. ಅದರ ಬದಲಿಗೆ ಮೊದಲೇ ಮೆಸ್ಕಾಂ ವೈಯರ್ ಗಳನ್ನು ಮೇಲೆ ಹಾಕಿದರೆ ಅಥವಾ ಕಂಬಗಳ ಎತ್ತರ ಕಡಿಮೆ ಮಾಡಿದ್ದರೆ ಸಮಸ್ಯೆನೆ ಬರುತ್ತಿರಲಿಲ್ಲ. ಆದರೆ ಇವರು ಎಲ್ಲವೂ ಆದ ನಂತರ ಯೋಚಿಸುವುದರಿಂದ ಈ ಬಾರಿಯೂ ಮಾದರಿ ರಸ್ತೆ ಇದಾಗಲೇ ಇಲ್ಲ. ಸೈಕಲ್ ವೇ ಇಲ್ಲದ, ನೀರು ಹೋಗಲು ರಂಧ್ರಗಳನ್ನು ಇಡದ, ನಿರ್ದಿಷ್ಟ ಸಂಖ್ಯೆಯ ದಾರಿದೀಪಗಳನ್ನು ಅಳವಡಿಸದಿದ್ದರೂ ಯಾರಿಗೂ ಗೊತ್ತಾಗದಿದ್ದರೆ ಇದನ್ನೇ ಮಾದರಿ ರಸ್ತೆ ಎನ್ನುತ್ತಿದ್ದರೋ ಏನೋ. ಆದರೆ ಈಗ ಸಿಕ್ಕಿಬಿದ್ದಿದ್ದಾರೆ!
Leave A Reply