ಗುಜರಾತಿ ಶಾಲೆಯ ಬಳಿ ದೋಣಿ ರೆಡಿ ಮಾಡಿಟ್ಟುಕೊಳ್ಳಿ!!
ಇನ್ನು ಹೆಚ್ಚೆಂದರೆ ಒಂದೆರಡು ದಿನ. ಕಳೆದ ವಾರಿ ಇದೇ ಸಮಯಕ್ಕೆ ಮೇ 30 ರಿಂದ ಜೂನ್ 2 ರ ನಡುವಿನ ಅವಧಿಯಲ್ಲಿ ಮಂಗಳೂರು ನಗರದ ಅನೇಕ ಮನೆಗಳಲ್ಲಿ ಇತಿಹಾಸದಲ್ಲಿ ಬರದಷ್ಟು ನೀರು ನುಗ್ಗಿತ್ತು. ಬೇಕಾದರೆ ಆವತ್ತಿನ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಇದ್ರೆ ಹುಡುಕಿ. ಕೃತಕ ನೆರೆ ಹೇಗಿತ್ತು ಎಂದರೆ ಅಳಕೆಯ ಗುಜರಾತಿ ಶಾಲೆಯಿಂದ ಮಕ್ಕಳನ್ನು ಅಕ್ಷರಶ: ದೋಣಿಯಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಿ ಮನೆಗೆ ಬಿಡಲಾಗಿತ್ತು. ಅದರಿಂದ ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಬುದ್ಧಿವಂತ ಇಂಜಿನಿಯರ್ಸ್ ಅಥವಾ ಅಧಿಕಾರಿಗಳು ಬುದ್ಧಿ ಕಲಿಯುತ್ತಾರೆ ಎಂದು ಅಂದುಕೊಂಡಿದ್ದೇವು. ಇಲ್ಲ, ಅವರಿಗೆ ಬುದ್ಧಿ ಬಂದಿಲ್ಲ. ಬುದ್ಧಿಯನ್ನು ಅವರು ಕಾಲೇಜು ಶಿಕ್ಷಣ ಮುಗಿಸಿ ಹೊರಗೆ ಬರುವಾಗಲೇ ಪ್ರಿನ್ಸಿಪಾಲರ ಕೈಯಲ್ಲಿ ಕೊಟ್ಟು ಬಂದಿದ್ದಾರೆ. ಮಕ್ಕಳು, ಪೋಷಕರು ಆವತ್ತು ಪಟ್ಟ ಕಷ್ಟದ ಬಗ್ಗೆ ಅರಿಯುವ ಹೃದಯವಾದರೂ ಇವರಿಗೆ ಇದೆಯಾ ಎಂದು ನೋಡಿದರೆ ಅದು ಕೂಡ ಇಲ್ಲ. ಅದನ್ನು ಅವರು ಬಂದರಿನಲ್ಲಿ ತೂಕಕ್ಕೆ ಮಾರಿಬಿಟ್ಟಿದ್ದಾರೆ. ಆದ್ದರಿಂದ ಈ ಬಾರಿಯೂ ಕಳೆದ ವರ್ಷದಷ್ಟೆ ಮಳೆ ಬಂದರೆ ಗುಜರಾತಿ ಶಾಲೆಯ ಮಕ್ಕಳು ಅನುಭವಿಸಲಿರುವ ಫೋಟೋ ತೆಗೆಯಲು ಪತ್ರಿಕೆಯವರು ಹೋಗಬೇಕೆಂದಿಲ್ಲ. ಹಿಂದಿನ ವರ್ಷದ್ದೇ ಹಾಕಿದರೂ ಸಾಕು. ಯಾಕೆಂದರೆ ಅದೇ ಪರಿಸ್ಥಿತಿ ಮತ್ತೆ ಬರಲಿದೆ.
ಒಂದೂವರೆ ಅಡಿ ಕೆಳಗೆ ಹೋಗಿ..
ನಾನು ಗುಜರಾತಿ ಶಾಲೆಯ ಉದಾಹರಣೆಯನ್ನು ಯಾಕೆ ಕೊಟ್ಟೆ ಎಂದು ನೀವು ಊಹಿಸಿರಬಹುದು. ಇದು ಈ ಬಾರಿಯೂ ಆಗಲಿರುವ ವಾಸ್ತವದ ಮುನ್ನುಡಿಯಷ್ಟೇ ನಾನು ಹೇಳುತ್ತಿರುವುದು. ಯಾಕೆಂದರೆ ಆ ಶಾಲೆಯ ಹಿಂದೆ ಒಂದು ರಾಜಕಾಲುವೆ ಇದೆ. ಕಳೆದ ಬಾರಿ ಅದು ಉಕ್ಕಿ ಹರಿದ ಪರಿಣಾಮವಾಗಿ ಕೃತಕ ನೆರೆ ಸೃಷ್ಟಿಯಾಗಿತ್ತು. ಈ ಬಾರಿ ಆ ರಾಜಕಾಲುವೆಯ ಹೂಳನ್ನು ಅರ್ಧಂಬದ್ಧ ತೆಗೆದಿದ್ದಾರೆ. ತೆಗೆದಿರುವ ಹೂಳು ಪ್ಲಸ್ ಮಣ್ಣನ್ನು ಅಲ್ಲಿಯೇ ಮೇಲೆ ಹಾಕಿದ್ದಾರೆ. ಇಲ್ಲಿ ಎರಡ್ಮೂರು ವಿಷಯಗಳು ಬರುತ್ತವೆ. ಒಂದನೇಯದಾಗಿ ಪೂರ್ಣ ಪ್ರಮಾಣದಲ್ಲಿ ಹೂಳನ್ನು ಯಾಕೆ ತೆಗೆದಿಲ್ಲ. ನಿಮಗೆ ಇಲ್ಲಿ ಇನ್ನೊಂದು ಸೂಕ್ಷ್ಮ ವಿಷಯವನ್ನು ಹೇಳುತ್ತೇನೆ. ಏನೆಂದರೆ ನಿಯಮಪ್ರಕಾರ ರಾಜಕಾಲುವೆಯ ಹೂಳು ತೆಗೆಯಲು ಇಳಿಯುವ ಜೆಸಿಬಿಗಳು ಕನಿಷ್ಟ ಒಂದೂವರೆ ಅಡಿಯಷ್ಟಾದರೂ ಹೂಳು ತೆಗೆಯಬೇಕು. ಆದರೆ ಪಾಲಿಕೆಯ ಅಧಿಕಾರಿಗಳು ಇದನ್ನು ಗಮನಿಸಿದ್ದಾರಾ? ಇಲ್ಲವೇ ಇಲ್ಲ. ಗುತ್ತಿಗೆದಾರರು ಅರ್ಧ ಫೀಟ್ ಹೂಳು ತೆಗೆದು ಮನೆಗೆ ಹೋಗಿ ಮಲಗಿ ಅಲ್ಲಿಂದಲೇ ಅಧಿಕಾರಿಗಳಿಗೆ ಪಾರ್ಸೆಲ್ ಕಳುಹಿಸಿದರೆ ಮುಗಿಯಿತು. ಯಾವ ಅಧಿಕಾರಿಯೂ ಎಷ್ಟು ಹೂಳು ಎತ್ತಲಾಗಿದೆ ಎಂದು ನೋಡಲ್ಲ.
ಟಿಪ್ಪರ್ ವ್ಯವಸ್ಥೆ ಯಾಕೆ ಮಾಡಲ್ಲ..
ಇನ್ನೊಂದು ಹೂಳನ್ನು ರಾಜಕಾಲುವೆಯ ಮೇಲೆ ಎತ್ತಿ ಹಾಕುತ್ತಾರಲ್ಲ. ಅದನ್ನು ಅಲ್ಲಿ ಚೆಂದಕ್ಕೆ ಇಡುವುದಲ್ಲ. ಹೂಳು ತೆಗೆದ ಬಳಿಕ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗುವ ಜವಾಬ್ದಾರಿ ಕೂಡ ಗುತ್ತಿಗೆದಾರರದ್ದು. ಆದಕ್ಕಾಗಿ ಆತ ಟಿಪ್ಪರ್ ವ್ಯವಸ್ಥೆ ಮಾಡಬೇಕು. ಆದರೆ ಗುತ್ತಿಗೆದಾರರು ಅದನ್ನು ನೂರಕ್ಕೆ ತೊಂಭತ್ತು ಸಾರಿ ತೆಗೆದುಕೊಂಡು ಹೋಗುವುದೇ ಇಲ್ಲ. ಇದರಿಂದ ಏನಾಗುತ್ತದೆ. ಮಳೆ ಬರುತ್ತಿದ್ದಂತೆ ಅದೇ ದಂಡೆಯ ಮೇಲಿರುವ ಹೂಳು ಮತ್ತೆ ಚರಂಡಿಯನ್ನು ಸೇರುತ್ತದೆ.
ಇದು ಕೇವಲ ಅಳಕೆಯ ಪರಿಸ್ಥಿತಿ ಅಲ್ಲ. ಕೊಟ್ಟಾರದಿಂದ ಹಿಡಿದು ಜೆಪ್ಪು, ಕಂದ್ರಿಕಂಬ್ಳ, ಬಳ್ಳಾಲ್ ಭಾಗ್, ಮಣ್ಣಗುಡ್ಡೆಯ ಭೋಜರಾವ್ ಲೇನ್ ಸಹಿತ ಅನೇಕ ಪ್ರದೇಶಗಳಲ್ಲಿ ಈ ಪರಿಸ್ಥಿತಿ ಬರುತ್ತದೆ. ಅಧಿಕಾರಿಗಳು ಚುನಾವಣೆಯ ನೀತಿ ಸಂಹಿತೆ ಎನ್ನುತ್ತಾರೆ. ರೂಟೀನ್ ಆಗಿ ನಡೆಯುವ ಕೆಲಸಗಳಿಗೆ ನೀತಿ ಸಂಹಿತೆ ಅಡ್ಡಿಬರುವುದಿಲ್ಲ. ಕೋಟಿಗಳ ಲೆಕ್ಕದಲ್ಲಿ ರಾಜಕಾಲುವೆ ಕ್ಲೀನ್ ಮಾಡಲು ಹಣ ಬಿಡುಗಡೆಯಾಗುತ್ತದೆ. ಅಧಿಕಾರಿಗಳು, ಗುತ್ತಿಗೆದಾರರು ಹೂಳು ತಿಂದು ತೇಗುತ್ತಾರೆ!
Leave A Reply