ನಿರ್ಭಯಾ ಅತ್ಯಾಚಾರಿಗಳನ್ನು ಉಳಿಸಲು ನಡೆದ ಪ್ರಯತ್ನ ಚಿಕ್ಕದಲ್ಲ!!
ಕೊನೆಗೂ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುವುದು ಗ್ಯಾರಂಟಿ ಎನ್ನುವ ಸುದ್ದಿ ಎಲ್ಲರಿಗೂ ಒಂದಷ್ಟರ ಮಟ್ಟಿಗೆ ನೆಮ್ಮದಿಯನ್ನು ತರಬಹುದು. ಆದರೆ ಮೊನ್ನೆ ಡಿಸೆಂಬರ್ 16 ಕ್ಕೆ ಆ ಹೆಣ್ಣುಮಗಳು ಅತ್ಯಾಚಾರಕ್ಕೆ ಒಳಗಾಗಿ ಏಳು ವರ್ಷ ಕಳೆದಿದೆ. ಸದ್ಯ ಈ ತೀರ್ಪು ಆ ಹೆಣ್ಣುಜೀವದ ಆತ್ಮಕ್ಕೆ ಚಿರಶಾಂತಿ ಕೊಟ್ಟಿರಬಹುದು.
ಆದರೆ ಅಂತಿಮವಾಗಿ ಪಾಪಿಗಳು ನೇಣುಗಂಬ ಏರಿ ಕೊನೆಯ ಉಸಿರು ತೆಗೆದುಕೊಳ್ಳುವ ತನಕ ಆ ಹೆಣ್ಣುಮಗಳ ಕುಟುಂಬ ಅನಿಶ್ಚಿತತೆಯಲ್ಲಿ ಇರಲಿದೆ. ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು ಅಕ್ಷಯ್ ಸಿಂಗ್ ಮರು ಮೇಲ್ಮನವಿ ತಿರಸ್ಕರಿಸುವ ಮೂಲಕ ಆ ಕುಟುಂಬಕ್ಕೆ ಸಾಂತ್ವನ ಸಿಗುವಂತೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಕೊನೆಯದಾಗಿ ಈ ಪ್ರಕರಣಕ್ಕೆ ಅಂತ್ಯ ಹಾಡುವ ದಿನ ನಿರ್ಭಯಾ ತಾಯಿ ನ್ಯಾಯಮೂರ್ತಿಗಳ ಎದುರು ಕಣ್ಣೀರು ಹಾಕಿದ್ದಾರೆ. ತಾವು ಇಷ್ಟು ವರ್ಷ ತಮ್ಮ ಮಗಳಿಗೆ ನ್ಯಾಯ ಕೊಡಿಸಲು ಸರಕಾರಿ ವ್ಯವಸ್ಥೆಯಲ್ಲಿ ಹೋರಾಡಬೇಕಾದ ಕಥೆಯನ್ನು ನೆನಪಿಸುವಾಗ ಕಣ್ಣೀರು ಬರುತ್ತದೆ ಎಂದು ಆ ತಾಯಿ ಹೇಳಿದ್ದಾರೆ. ಅವರಿಗೆ ಸಮಾಧಾನಪಡಿಸಿದ ನ್ಯಾಯಮೂರ್ತಿಗಳು ತಾವು ಈ ದೇಶದ ನ್ಯಾಯವ್ಯವಸ್ಥೆಯಡಿಯಲ್ಲಿಯೇ ಎಲ್ಲವನ್ನು ನಡೆಸಬೇಕಾಗಿದ್ದರಿಂದ ಇಷ್ಟು ವರ್ಷ ತಡವಾಗಿದೆ ಎನ್ನುವ ಉತ್ತರವನ್ನು ಕೊಟ್ಟಿದ್ದಾರೆ.
ಈಗ ಇಲ್ಲಿ ಉದ್ಭವವಾಗಿರುವ ಪ್ರಶ್ನೆ ಏನೆಂದರೆ ಒಂದು ಅತ್ಯಾಚಾರ ಮತ್ತು ಕೊಲೆ ನಡೆದು ಆರೋಪಿಗಳು ಬಂಧನಕ್ಕೆ ಒಳಪಟ್ಟ ನಂತರ ಅಂತಿಮ ತೀರ್ಪು ಬಂದು ಅವರಿಗೆ ಶಿಕ್ಷೆ ನೀಡಲು ಏಳು ವರ್ಷ ಕಳೆಯುತ್ತದೆ ಎಂದರೆ ಯಾವುದೇ ಪ್ರಚಾರವಿಲ್ಲದ, ಮಾಧ್ಯಮಗಳಲ್ಲಿ ಚರ್ಚೆಗೆ ಒಳಪಡದ ಅತ್ಯಾಚಾರಿಗಳಿಗೆ ಶಿಕ್ಷೆ ಎನ್ನುವುದು ಮರೀಚಿಕೆ ಆಗುವುದಿಲ್ಲವಾ. ನಮ್ಮ ದೇಶದಲ್ಲಿ ದಾಖಲಾಗುವ ಅಂದರೆ ಪ್ರಥಮ ಮಾಹಿತಿ ವರದಿ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ 25.5% ಮಂದಿಗೆ ಮಾತ್ರ ಶಿಕ್ಷೆ ಆಗುತ್ತದೆ. ಇನ್ನು ಅತ್ಯಾಚಾರ ಪ್ರಕರಣಗಳನ್ನು ಫಾಸ್ಟ್ ಟ್ರಾಕ್ ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡಬೇಕು ಎಂದು ಸರಕಾರಗಳು ಫಾಸ್ಟ್ ಟ್ರಾಕ್ ಕೋರ್ಟ್ ಗಳನ್ನು ರಚಿಸಿದೆ. ಆದರೆ ಇಲ್ಲಿಯ ತನಕ ಎಷ್ಟು ಪ್ರಕರಣಗಳು ತ್ವರಿತ ನ್ಯಾಯಾಲಯಗಳಲ್ಲಿ ಪರಿಹಾರ ಕಂಡಿದೆ ಎನ್ನುವುದನ್ನು ನೋಡಬೇಕು. ನಾನು ಹೇಳುವುದೇನೆಂದರೆ ಅತ್ಯಾಚಾರ ಪ್ರಕರಣಗಳನ್ನು ವಿಚಾರಣೆ ಮಾಡುವ ನ್ಯಾಯಾಲಯಗಳು ಅದಕ್ಕೆ ನಿರ್ದಿಷ್ಟ ಸಮಯಾವಧಿಯನ್ನು ನಿಗದಿಗೊಳಿಸಬೇಕು. ಅದಕ್ಕಿಂತ ಒಂದು ದಿನ ಕೂಡ ಹೆಚ್ಚಾಗದ ರೀತಿಯಲ್ಲಿ ನೋಡಬೇಕು. ಆಗ ಪ್ರಕರಣ ಸಾಬೀತಾಗಿ ಗಲ್ಲು ಶಿಕ್ಷೆಯೇ ಆಯಿತು ಎಂದುಕೊಳ್ಳೋಣ, ಆಗ ಹೆಚ್ಚುವರಿ ಇಷ್ಟೇ ದಿನ ಎಂದು ನಿಗದಿಪಡಿಸಿ ಅದನ್ನು ಮುಗಿಸಿಬಿಡಬೇಕು. ಈ ಮೂಲಕ ಅತ್ಯಾಚಾರಕ್ಕೆ ಒಳಪಟ್ಟ ಹೆಣ್ಣುಮಗಳ ಕುಟುಂಬಗಳು ನಿತ್ಯ ನ್ಯಾಯಕ್ಕಾಗಿ ಅಲೆದಾಡುವುದನ್ನು ತಪ್ಪಿಸುತ್ತದೆ.
ಇನ್ನು ರಾಷ್ಟ್ರಪತಿಗಳಿಂದ ಕ್ಷಮಾದಾನ, ಮರುಮೇಲ್ಮನವಿ ಸಹಿತ ನಿಯಮಗಳು ಸರಳಿಕರಿಸಿ ಒಂದು ಅತ್ಯಾಚಾರ ಮತ್ತು ಶಿಕ್ಷೆಯ ನಡುವೆ ಹೆಚ್ಚೆಂದರೆ ಆರು ತಿಂಗಳು ಮತ್ತು ಗಲ್ಲು ಶಿಕ್ಷೆ ಆದರೆ ಎಂಟು ತಿಂಗಳೊಳಗೆ ಮುಗಿಸಬೇಕು. ಒಂದು ವೇಳೆ ಸಾಮೂಹಿಕ ಅತ್ಯಾಚಾರವಾಗಿ ಶಿಕ್ಷೆ ನಿಗದಿಪಡಿಸಿದ ನಂತರ ಅಪರಾಧಿಗಳು ಒಬ್ಬೊಬ್ಬರೇ ಮೇಲ್ಮನವಿ, ಮರು ಮೇಲ್ಮನವಿ ಸಲ್ಲಿಸಲು ವಿಳಂಬ ಮಾಡಿದರೆ ಅದಕ್ಕೆ ಅವಕಾಶ ಕೊಡಬಾರದು. ನೀವೆಲ್ಲರೂ ಒಂದೇ ಪ್ರಕರಣದಲ್ಲಿ ಅಪರಾಧ ಮಾಡಿರುವುದರಿಂದ ಏನಿದ್ದರೂ ಒಟ್ಟಿಗೆ ಮಾಡಬೇಕು ಇಲ್ಲದಿದ್ದರೆ ಮಾಡಬಾರದು ಎಂದು ನಿಯಮ ತರಬೇಕು.
ಇನ್ನು ನಿರ್ಭಯಾ ಪ್ರಕರಣದಲ್ಲಿ ಒಬ್ಬ ಬಾಲಾಪರಾಧಿ ಇದ್ದು ಅವನಿಗೆ ಮೂರು ವರ್ಷ ಬಾಲಾಪರಾಧ ಗೃಹದಲ್ಲಿ ಇಟ್ಟು ನಂತರ ಬಿಡುಗಡೆ ಮಾಡಲಾಗಿದೆ. ಅವನಿಗೆ ಗಲ್ಲು ಶಿಕ್ಷೆ ಕೊಡಬೇಕಿತ್ತು ಎನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕವಾಗಿ ಕೇಳಿಬಂದಿತ್ತು. ಅದು ನಿಜ ಕೂಡ. ಒಬ್ಬ ಬಾಲಾಪರಾಧಿ ತಾನು ಅತ್ಯಾಚಾರ ಮಾಡಬಲ್ಲವನಾದರೆ ಶಿಕ್ಷೆ ಕೂಡ ಪಡೆದುಕೊಳ್ಳಲು ಅರ್ಹನಾಗಿದ್ದಾನೆ. ಅವನಿಗೆ ಶಿಕ್ಷೆ ಕೊಡದೇ ಹಾಗೆ ಮೂರು ವರ್ಷ ಇಟ್ಟುಕೊಂಡು ಊಟ, ತಿಂಡಿ ಮಾಡಿಸಿ ಕಳುಹಿಸಿಕೊಟ್ಟರೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಜೀವ ನ್ಯಾಯ ಪಡೆದುಕೊಂಡಿತ್ತಾ? ಅಷ್ಟೇ ಅಲ್ಲ, ಉಳಿದ ವಯಸ್ಕ ಅಪರಾಧಿಗಳಿಗಿಂತ ಈ ಬಾಲಾಪರಾಧಿಯೇ ಹೆಚ್ಚು ಕೆಟ್ಟ ರೀತಿಯಲ್ಲಿ ವರ್ತಿಸಿದ್ದ ಎಂದು ಹೇಳಲಾಗುತ್ತದೆ. ಇನ್ನು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಬ್ಬ ಆರೋಪಿಯ ಸಾವಿನ ಬಗ್ಗೆ ತನಿಖೆ ಮಾಡಬೇಕು ಎಂದು ಅಪರಾಧಿಗಳಲ್ಲಿ ಒಬ್ಬನಾಗಿರುವ ಅಕ್ಷಯ ಸಿಂಗ್ ವಕೀಲರು ಕೇಳಿಕೊಂಡಿದ್ದಾರೆ. ಯಾಕೆಂದರೆ ಆ ಸಮಯದಲ್ಲಿ ಜೈಲರ್ ಆಗಿದ್ದವರು ನಂತರ ನಿವೃತ್ತಿ ಆದ ನಂತರ ಆ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪುಸ್ತಕ ಬರೆದಿದ್ದಾರೆ ಎನ್ನುವುದು ವಕೀಲರ ವಾದ. ಆದರೆ ವಕೀಲರು ಹೇಳಿದ್ದನ್ನು ಸುಪ್ರೀಂಕೋರ್ಟ್ ಒಪ್ಪಲಿಲ್ಲ. ಹೀಗೆ ಪ್ರತಿಯೊಬ್ಬರೂ ಇಂತಹ ಪ್ರಕರಣಗಳಲ್ಲಿ ಪುಸ್ತಕ ಬರೆಯಲು ಆರಂಭಿಸಿದರೆ ಅದು ಬಹಳ ಅಪಾಯಕಾರಿ ಹಂತ. ಆ ವಾದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದೆ. ಇನ್ನು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡದೇ ಅಪಚಾರ ಮಾಡಲಾಗಿದೆ ಎಂದು ವಕೀಲರು ಹೇಳಿದ್ದಾರೆ. ಆದರೆ ವಿಷಯ ಇರುವುದು ಪ್ರತಿಯೊಂದನ್ನು ಕೂಡ ಸಿಬಿಐಗೆ ಕೊಡುತ್ತಾ ಹೋದರೆ ನಂತರ ಪೊಲೀಸ್ ಇಲಾಖೆ ಯಾಕೆ? ಇನ್ನು ಕಣ್ಣಿಗೆ ಸ್ಪಷ್ಟವಾಗಿ ಕಾಣುವ ಕೇಸುಗಳನ್ನು ಸಿಬಿಐಗೆ ಕೊಡುವ ಅಗತ್ಯ ಏನಿದೆ? ಸುಮ್ಮನೆ ಸಮಯ ದೂಡುವ ತಂತ್ರವೇ? ಒಟ್ಟಿನಲ್ಲಿ ಅಪರಾಧಿಗಳ ವಕೀಲರು ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಪ್ರಕರಣ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಯಶಸ್ವಿಯಾಗಲಿಲ್ಲ. ಆದರೆ ಇದೇ ಪ್ರಕರಣ ಆರು ತಿಂಗಳೊಳಗೆ ಮುಗಿದಿದ್ದರೆ ಅದರ ಮಹತ್ವವೇ ಬೇರೆ ಇತ್ತು. ಆ ಬಗ್ಗೆ ಸರಕಾರ ಯೋಚಿಸಲಿ!
Leave A Reply