ಮದ್ಯದಂಗಡಿ ಒಪನ್ ಆಗುತ್ತೆ ಎಂದಾದರೆ ಬಟ್ಟೆ, ಜ್ಯುವೆಲ್ಲರ್ಸ್ ಏನು ತಪ್ಪು ಮಾಡಿವೆ!!
ದಕ್ಷಿಣ ಕನ್ನಡದ ಅಷ್ಟೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಭ್ಯ ನಾಗರಿಕರು ಒಪ್ಪಲು ಸಾಧ್ಯವೇ ಇಲ್ಲದ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ಪ್ರಾರಂಭದಲ್ಲಿಯೇ ಹೇಳಲು ಇಚ್ಚಿಸುತ್ತೇನೆ. ನೀವು ಮದ್ಯದಂಗಡಿಗಳನ್ನು ತೆರೆಯಲು ಬಿಡುತ್ತೀರಿ ಎಂದಾದರೆ ಉಳಿದ ಅಂಗಡಿಗಳನ್ನು ಕೂಡ ಒಪನ್ ಮಾಡಿಸಿ. ಬಟ್ಟೆ ಅಂಗಡಿಗಳನ್ನು, ಬಂಗಾರದ ಜ್ಯುವೆಲ್ಲರ್ಸ್ ಗಳನ್ನು ಕೂಡ ಒಪನ್ ಮಾಡಿಸಿ. ಅದೇಕೆ ಆಗುವುದಿಲ್ಲ. ಉಡುಪಿಯಲ್ಲಿ ಜ್ಯುವೆಲ್ಲರ್ಸ್, ಕ್ಲಾತ್ ಸ್ಟೋರ್ಸ್ ಒಪನ್ ಆಗಿವೆ. ಇಲ್ಯಾಕೆ ಆಗುವುದಿಲ್ಲ. ಕೇಳಿದರೆ ಅದು ಗ್ರೀನ್ ಝೋನ್ ಎನ್ನುತ್ತಿರಾದರೆ ನಮ್ಮದು ಒರೆಂಜ್ ಝೋನ್. ಅದಕ್ಕಿಂತಲೂ ಒಂದು ಹಂತ ಹೆಚ್ಚು ಡೇಂಜರ್. ಅದಲ್ಲದೇ ನಮ್ಮದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯ ತನಕ ಒಪನ್ ಅಂತೆ. ಅವರು ಗ್ರೀನ್ ಝೋನ್ ಆಗಿಯೂ ಬೆಳಿಗ್ಗೆ 7 ಗಂಟೆಗೆ ತೆರೆದು ಮಧ್ಯಾಹ್ನ ಒಂದು ಗಂಟೆಗೆ ಮುಚ್ಚಿಸುತ್ತಿದ್ದಾರೆ. ಆದರೆ ನಾವು ಒರೆಂಜ್ ಝೋನ್ ಆಗಿಯೂ ರಾತ್ರಿ 7 ರ ತನಕ ಮದ್ಯ ಸಹಿತ ಕೆಲವು ವ್ಯವಹಾರಗಳನ್ನು ತೆರೆದು ಕುತ್ಕೊಂಡಿದ್ದೇವೆ. ನಮ್ಮ ಜನಪ್ರತಿನಿಧಿಗಳು ಕೆಲವು ಅಧಿಕಾರಿಗಳನ್ನು ಮತ್ತು ಸಲಹೆಗಾರರನ್ನು ಹೆಚ್ಚಾಗಿ ನಂಬಿರುವುದರಿಂದ ಅವರು ಹೇಳಿದ್ದು ವೇದವಾಕ್ಯ ಎಂದು ಅಂದುಕೊಂಡಿದ್ದಾರೆ. ಉಡುಪಿ ಜಿಲ್ಲೆ ಗ್ರೀನ್ ಝೋನ್ ಆಗಿಯೂ ಯಾಕೆ ಮಧ್ಯಾಹ್ನ 1 ಗಂಟೆಗೆ ಅಂಗಡಿಗಳನ್ನು ಮುಚ್ಚಲು ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶ ಕೊಟ್ಟಿದ್ದಾರೆ ಎನ್ನುವುದಕ್ಕೆ ವೈಜ್ಞಾನಿಕ ಕಾರಣಗಳಿವೆ.
ಕೋವಿಡ್ 19 ವೈರಸ್ ಒಂದು ವಸ್ತುವಿಗೆ ಅಂಟಿದರೆ ಅದು ಅದೇ ಜಾಗದಲ್ಲಿ 18 ಗಂಟೆಗಳ ತನಕ ಯಾವುದೇ ಮನುಷ್ಯನ ಸಂಪರ್ಕಕ್ಕೆ ಬರದೇ ಇದ್ದರೆ ನಂತರ ನಾಶವಾಗುತ್ತದೆ. ಆದ್ದರಿಂದ ಮಧ್ಯಾಹ್ನ 1 ಗಂಟೆಯಿಂದ ಮರುದಿನ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿ 18 ಗಂಟೆ ಆಗಿರುವುದರಿಂದ ಅಲ್ಲಿ ಜಾಣನಡೆ ಅನುಸರಿಸಲಾಗಿದೆ. ನಾವು ವಿಪರೀತ ಬುದ್ಧಿವಂತರಲ್ವಾ? ಅದಕ್ಕೆ ಕೊರೊನಾ ವೈರಸ್ ನ ಅನುಮತಿ ಪಡೆದು ಸಂಜೆ 7 ಗಂಟೆಯ ತನಕ ಎಲ್ಲವನ್ನು ತೆರೆದಿಟ್ಟಿದ್ದೇವೆ. ಒಂದು ವೇಳೆ ಕೊರೊನಾ ಪಾಸಿಟಿವ್ ರೋಗಿಗಳ ಸಂಖ್ಯೆ ಇದರಿಂದ ಹೆಚ್ಚಾದರೆ ಅದರ ಹೊಣೆಯನ್ನು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳೇ ವಹಿಸಿಕೊಳ್ಳಬೇಕು.
ಮುಸ್ಲಿಂ ಸಂಘಟನೆಗಳು ಬಟ್ಟೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬೇಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ ಎನ್ನುವ ಸುದ್ದಿ ಇದೆ. ಅದಕ್ಕೆ ಕಾರಣ ಈಗ ರಮ್ಜಾನ್ ತಿಂಗಳು. ನಮ್ಮವರು ಬಟ್ಟೆ ಖರೀದಿಸಲು ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರಬಹುದು. ಅದರಿಂದ ಸಾಮಾಜಿಕ ಅಂತರಕ್ಕೆ ದಕ್ಕೆ ಆಗುತ್ತದೆ. ಆದ್ದರಿಂದ ಸದ್ಯ ಬಟ್ಟೆ ಅಂಗಡಿಗಳಿಗೆ ಅನುಮತಿ ಕೊಡಬೇಡಿ ಎಂದು ಮನವಿ ಮಾಡಲಾಗಿದೆಯಂತೆ. ನಾನು ಹೇಳುವುದು ಮದ್ಯ ಅಂಗಡಿಗಳಿಗಿಂತ ಬಟ್ಟೆ ಅಂಗಡಿಗಳು ಏನೂ ಹೆಚ್ಚು ಡೇಂಜರ್ ಅಲ್ಲ. ಒಂದು ವೇಳೆ ಅಂಗಡಿಯ ಒಳಗೆ ಬರುವವರು ಒಂದು ಸೀರೆ ಖರೀದಿಸುವಾಗ ಹತ್ತಿಪ್ಪತ್ತು ಸೀರೆಗಳನ್ನು ಮುಟ್ಟುತ್ತಾರೆ ಎನ್ನುವುದೇ ಕೆಲವರ ವಾದ ಇದ್ದರೆ ಪ್ರತಿಯೊಬ್ಬ ಗ್ರಾಹಕ ಅಂಗಡಿ ಪ್ರವೇಶಿಸುವಾಗ ಬಾಗಿಲಿನಲ್ಲಿಯೇ ಕಟ್ಟುನಿಟ್ಟಾಗಿ ಸ್ಯಾನಿಟೈಸರ್ ನಿಂದ ಕೈ ಸ್ವಚ್ಚ ಮಾಡಿಕೊಂಡರೆ ಮುಗಿಯಿತು. ಅಷ್ಟಕ್ಕೂ ನೀವು ತರಕಾರಿ ಖರೀದಿಸಲು ಮೋರ್, ರಿಲಾಯನ್ಸ್, ಬಿರ್ಲಾ ಮಳಿಗೆಗಳಿಗೆ ಹೋಗುವಾಗ ಅಲ್ಲಿ ಅರ್ಧ ಕಿಲೋ ನೀರುಳ್ಳಿ ಖರೀದಿಸುವಾಗ ಒಂದು ಕಿಲೋ ನೀರುಳ್ಳಿ ಮುಟ್ಟಿರುತ್ತೀರಿ. ನಾಲ್ಕು ಬಗೆ ತರಕಾರಿ ಖರೀದಿಸುವಾಗ ಎಂಟು ಬಗೆ ತರಕಾರಿಗಳನ್ನು ಕೈಯಿಂದ ಎತ್ತಿ ಮೂಗಿನ ತನಕ ತಂದು ವಾಸನೆ ನೋಡಿ ಕೆಳಗೆ ಇಟ್ಟಿರುತ್ತೀರಿ. ಅದು ಬಟ್ಟೆಗಿಂತಲೂ ಡೇಂಜರ್ ಅಲ್ವಾ? ಆದ್ದರಿಂದ ಯಾರೋ ಬೇಡಾ ಎಂದರು ಎನ್ನುವ ಕಾರಣಕ್ಕೆ ಸಾರಾಸಗಟಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಾ? ಇನ್ನು ಬಂಗಾರದ ಅಂಗಡಿಯವರು ಏನು ತಪ್ಪು ಮಾಡಿದ್ದಾರೆ? ಅಲ್ಲಿ ಏನೂ ರಶ್ ಇರುತ್ತಾ? ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಪಾಲಿಸಿದರೆ ಅಲ್ಲಿಯೂ ವ್ಯಾಪಾರ ಮಾಡಬಹುದಲ್ಲ?
ಇನ್ನು ರಿಕ್ಷಾ, ಕ್ಯಾಬ್ ಗಳಲ್ಲಿ ಚಾಲಕ ಎದುರಿಗೆ ಇದ್ದರೆ ಹಿಂದೆ ಇಬ್ಬರು ಕೂರಬಹುದು ಎಂದು ಅನುಮತಿ ಕೊಡಲಾಗಿದೆ. ಹಾಗಾದರೆ ಅದನ್ನು ಸಿಟಿ ಬಸ್ಸುಗಳಿಗೆ ಕೂಡ ಅಪ್ಲೈ ಮಾಡಬಹುದಲ್ಲ. ಒಂದು ಸೀಟ್ ನಲ್ಲಿ ಒಬ್ಬರೇ ಎಂದು ಬೇಕಾದರೆ ನಿಯಮ ಅಳವಡಿಸಿ. ಬೇಕಾದರೆ ಪೀಕ್ ಅವರ್ ನಲ್ಲಿ ಮಾತ್ರ ಬಸ್ಸು ಚಲಾಯಿಸುವಂತಾದರೂ ಪರವಾಗಿಲ್ಲ. ಟಿಕೆಟ್ ದರ ಸ್ವಲ್ಪ ಹೆಚ್ಚಾಗಬಹುದು. ಆದರೆ ಅನಿವಾರ್ಯ ಇದ್ದವರಿಗೆ ಉಪಯೋಗವಾಗುತ್ತದೆ. ಕೆಲವು ಕಡೆ ಬಸ್ಸಿಲ್ಲದೇ ಕೆಲಸಕ್ಕೆ ಹೋಗಲಾಗದವರಿಗೆ ಇದು ಅನುಕೂಲವಾಗುತ್ತದೆ. ಆದರೆ ಕೇವಲ ಕುಡುಕರ ಒತ್ತಾಯದಿಂದಾಗಿ ಅದೇ ಸಾರ್ವಜನಿಕ ಅಭಿಪ್ರಾಯ ಎಂದು ಅಂದುಕೊಂಡು ಜಿಲ್ಲಾಡಳಿತ ನಿರ್ಧಾರಕ್ಕೆ ಬರುವುದಾದರೆ ನಮ್ಮ ಜನಪ್ರತಿನಿಧಿಗಳು ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದೇ ಅರ್ಥ. ಉಡುಪಿಯ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಾಗಿ ಕ್ರಮ ಮತ್ತು ಯಾವುದೇ ಜನಪ್ರತಿನಿಧಿಯ ಒತ್ತಡಕ್ಕೆ ಬಗ್ಗದೆ ಮತ್ತು ಯಾವುದೇ ಕೆಲಸವಿಲ್ಲದೆ ಅಡ್ಡಾಡುವ ಸಲಹೆಗಾರರ ಸಲಹೆಗೆ ಬೆಲೆ ಕೊಡದೇ ಇದ್ದ ಕಾರಣ ಉಡುಪಿ ಸೇಫ್ ಆಗಿದೆ. ನಮ್ಮಲ್ಲಿ ಬುದ್ಧಿವಂತರೇ ತುಂಬಿದ್ದಾರೆ
Leave A Reply