ಮಂಗಳೂರಿಗೆ ಹೆಮ್ಮೆ ತರಲಿದೆ ಹೊಸ ಬಸ್ ನಿಲ್ದಾಣ, ಏನೇನಿದೆ ಅದರಲ್ಲಿ!!
ಮಂಗಳೂರಿನ ತಾರೆತೋಟದಲ್ಲಿ ನಿರ್ಮಾಣವಾಗಲು ಸಿದ್ಧವಾಗಿರುವ ಹೊಸ ಬಸ್ ನಿಲ್ದಾಣ ಇದು ಕೇವಲ ಬಸ್ ನಿಲ್ದಾಣ ಅಲ್ಲ. ಅದು ವಾಣಿಜ್ಯ ವ್ಯವಹಾರಗಳ ಮಳಿಗೆಗಳನ್ನು ಒಳಗೊಂಡಿರುವ ಮಾಲ್ ತರಹದ್ದೇ ಆಗಿರುತ್ತದೆ. ಈ ಕಲ್ಪನೆ ಮೊದಲು ಪ್ರಾರಂಭವಾದದ್ದು ಗುಜರಾತಿನಲ್ಲಿ. ಅಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಬಸ್ ನಿಲ್ದಾಣವನ್ನು ಆಕರ್ಷಕ ಮಾಡುವ ಯೋಜನೆಗೆ ಕೈ ಹಾಕಿದ್ದರು. ಆಕರ್ಷಣೀಯ ಮಾಡುವುದು ಹೇಗೆ ಎಂದಾಗ ಅವರಿಗೆ ಅನಿಸಿದ್ದು ಮಾಲ್. ಮಾಲ್ ಎಂದ ಕೂಡಲೇ ಅಲ್ಲಿ ಜನ ಬರುತ್ತಾರೆ. ಜನ ಬಂದಾಗ ಅಲ್ಲಿ ಸಹಜವಾಗಿ ವ್ಯಾಪಾರ ಆಗುತ್ತದೆ. ಆಗ ನೂರಾರು ಕೋಟಿಗಳನ್ನು ಬಸ್ ನಿಲ್ದಾಣದ ನಿರ್ಮಾಣಕ್ಕೆ ಖರ್ಚು ಮಾಡಿದರೂ ಅದರಿಂದ ನಷ್ಟವಿಲ್ಲ. ಯಾಕೆಂದರೆ ಮೇಲೆ ಮಾಲ್ ಇದ್ದರೆ ಅದರ ಒಂದೊಂದು ಮಳಿಗೆಗಳಿಂದ ಬಾಡಿಗೆ ಬರುತ್ತದೆ. ಅದರೊಂದಿಗೆ ಪಾರ್ಕಿಂಗ್ ಜಾಗ ಸಾಕಷ್ಟು ಇರುವುದರಿಂದ ಪಾರ್ಕಿಂಗ್ ಫೀಸ್ ವಸೂಲಿ ಮಾಡಬಹುದು. ಇನ್ನು ಬಸ್ಸುಗಳ ಪ್ರವೇಶ ಮತ್ತು ತಂಗುದಾಣ ಶುಲ್ಕ ಸೇರಿಸಿದರೆ ಬಸ್ ನಿಲ್ದಾಣಕ್ಕೆ ಹಾಕಿದ ಹಣ ಹಿಂತಿರುಗಿಬರುತ್ತದೆ. ಕೆಳಗೆ ಬಸ್ ನಿಲ್ದಾಣ, ಮೇಲೆ ಮಾಲ್. ಹೆಸರಿಗೆ ಹೆಸರು, ಹಣಕ್ಕೆ ಹಣ. ಯಾರಾದರೂ ನೋಡಿದರೆ ಅದ್ಭುತ ಬಸ್ ನಿಲ್ದಾಣ ಎನ್ನುತ್ತಾರೆ. ಆದರೆ ಬಸ್ ನಿಲ್ದಾಣಕ್ಕೆ ಹಾಕಿದ ಒಂದೊಂದು ರೂಪಾಯಿ ಕೂಡ ಪ್ರತಿ ವರ್ಷ ವಸೂಲಿಯಾಗುತ್ತಾ ಹೋಗುತ್ತದೆ. ಒಂದು ಲಾಡ್ಜ್, ವೆಜ್, ನಾನ್ ವೆಜ್ ಹೋಟೇಲುಗಳು ಮತ್ತು ನಾಲ್ಕು ಸ್ಕ್ರೀನ್ ನ ಮಲ್ಟಿಫ್ಲೆಕ್ಸ್ ಇದ್ದರೆ ಬಂದವರಿಗೆ ಶಾಪಿಂಗ್ ಜೊತೆ ಇನ್ನೇನೂ ಬೇಕು. ಹೀಗೆ ವಡೋದರದಲ್ಲಿ ಪ್ರಾರಂಭವಾದ ಯೋಜನೆಯಿಂದ ಮೋದಿಯವರ ದೂರದೃಷ್ಟಿ ಇಡೀ ದೇಶಕ್ಕೆ ಗೊತ್ತಾಗಿತ್ತು. ಪಕ್ಕಾ ಗುಜರಾತಿಯೊಬ್ಬರ ಕನಸಿನ ಯೋಜನೆ ಈಗ ಮಂಗಳೂರಿನಲ್ಲಿ ಅನಾವರಣಗೊಳ್ಳಲು ಪ್ರಾರಂಭವಾಗಿದೆ.
ಅಷ್ಟಕ್ಕೂ ಒಂದು ನಗರದ ಬಸ್ ನಿಲ್ದಾಣಕ್ಕೆ ಏಕಾಏಕಿ 445 ಕೋಟಿ ಸುರಿಯುವಷ್ಟು ಆರ್ಥಿಕ ಸಂಪನ್ಮೂಲ ಈಗ ಸರಕಾರದ ಬಳಿ ಕೂಡ ಇಲ್ಲ. ಅದಕ್ಕೆ ಇದನ್ನು ಪಿಪಿಪಿ ಮಾದರಿಯಲ್ಲಿ ನಡೆಸಲಾಗುತ್ತದೆ. ಪಿಪಿಪಿ ಎಂದರೆ ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಫೇಶನ್. ಸಾರ್ವಜನಿಕರು ಮತ್ತು ಸರಕಾರದ ಭಾಗಿದಾರಿಕೆಯಲ್ಲಿ ಇದರ ನಿರ್ಮಾಣವಾಗಲಿದೆ. ಸಾರ್ವಜನಿಕರ ಭಾಗಿದಾರಿಕೆ ಎಂದರೆ ಈಗ ಇರುವ 7.36 ಎಕರೆ ಜಾಗದಲ್ಲಿ 445 ಕೋಟಿ ವೆಚ್ಚದಲ್ಲಿ ಇದನ್ನು ಕಟ್ಟುವ ಸಾರ್ವಜನಿಕ ಸಂಸ್ಥೆಯೊಂದು ನಂತರ 40 ವರ್ಷದ ತನಕ ಇದನ್ನು ನಿರ್ವಹಿಸುವ ಅವಕಾಶ ಪಡೆದುಕೊಳ್ಳುತ್ತದೆ. ಆ ಸಮಯದಲ್ಲಿ ಕಟ್ಟಡದ ಮಳಿಗೆಗಳ ಬಾಡಿಗೆ, ಲಾಡ್ಜಿಂಗ್, ಪಾರ್ಕಿಂಗ್ ಶುಲ್ಕ, ಕ್ಯಾಂಟೀನ್, ಕ್ಲಾರ್ಕ್ ರೂಂ ಸಹಿತ ಬಸ್ಸು ಪ್ರವೇಶ ಶುಲ್ಕವನ್ನು ಸೇರಿ ಎಲ್ಲೆಂಲ್ಲಿಂದ ಹಣ ಬರುತ್ತೋ ಅದೆಲ್ಲವನ್ನು ಆ ಖಾಸಗಿ ಸಂಸ್ಥೆಯೇ ವಸೂಲಿ ಮಾಡಬಹುದು. ಹಾಗೆ ಮಾಡಿ 40 ವರ್ಷಗಳ ನಂತರ ಅದನ್ನು ಆ ಖಾಸಗಿ ಸಂಸ್ಥೆಯು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು. ಆ ಬಳಿಕ ಎಲ್ಲಾ ಲಾಭ, ನಷ್ಟ ಪಾಲಿಕೆಗೆ. ಆಗ ಪಾಲಿಕೆ ಬೇರೆ ಗುತ್ತಿಗೆದಾರರಿಗೆ ಏಲಂ ಮಾಡಿ ಕೆಲಸವನ್ನು ವಿಂಗಡಿಸಿಕೊಡಬಹುದು.
ಹೊಸ ಬಸ್ ನಿಲ್ದಾಣದಲ್ಲಿ ಸರ್ವಿಸ್ ಬಸ್, ಸರಕಾರಿ ಬಸ್ಸು ಮತ್ತು ಸಿಟಿಬಸ್ಸುಗಳು ಕೂಡ ತಂಗುವ ವಿಶಾಲ ಅವಕಾಶವಿದೆ. ಏಕಕಾಲಕ್ಕೆ 300 ಬಸ್ಸುಗಳು ಯಾವುದೇ ಸ್ಥಳಾವಕಾಶದ ಕೊರತೆ ಆಗದಂತೆ ಇಲ್ಲಿ ತಂಗಬಹುದು. ನಾನು ನಿನ್ನೆ ಹೇಳಿದಂತೆ ಪ್ರಯಾಣಿಕರು ವಿವಿಧ ಜಿಲ್ಲೆ ಮತ್ತು ನಮ್ಮದೇ ಜಿಲ್ಲೆಯ ವಿವಿಧ ಭಾಗಗಳಿಂದ ಇಲ್ಲಿಗೆ ಬಂದ ಮೇಲೆ ಇಲ್ಲಿಂದ ಈಗಿರುವ ಪ್ರಮುಖ ಪ್ರದೇಶಗಳಾದ ಸ್ಟೇಟ್ ಬ್ಯಾಂಕ್, ಮಂಗಳಾದೇವಿ ಪ್ರದೇಶಕ್ಕೆ ಹೋಗಲು ಸಿಟಿಬಸ್ಸುಗಳನ್ನು ಬಳಸಬಹುದಾಗಿದೆ. ಈ ಎಲ್ಲ ವ್ಯವಸ್ಥೆಗಳ ರೂಪುರೇಶೆಗಳು ನಿಲ್ದಾಣದ ಕಾಮಗಾರಿಗಳು ಮುಕ್ತಾಯವಾಗುತ್ತಿದ್ದಂತೆ ಜಿಲ್ಲಾಡಳಿತ ನಿರ್ಧಾರ ಮಾಡಬಹುದು. ಅದಕ್ಕೆ ಇನ್ನು ಸಮಯವಿದೆ.
ಆದರೆ ಸದ್ಯ ಈ ಯೋಜನೆಯ ಬಗ್ಗೆ ವಿಪಕ್ಷಗಳು ಮತ್ತು ಬಸ್ಸು ಮಾಲೀಕರು ಯಾವ ರೀತಿಯ ಅಪಸ್ವರ ಎತ್ತಬಹುದು ಎನ್ನುವುದರ ಬಗ್ಗೆ ನಿಮಗೆ ಸಣ್ಣ ಐಡಿಯಾ ನೀಡುತ್ತೇನೆ. ಮೊದಲನೇಯಾಗಿ ಸರ್ವಿಸ್, ಸಿಟಿ ಬಸ್ಸು ಮಾಲೀಕರು ನಗರದ ಸೆರಗಿನಲ್ಲಿರುವ ಈ ಬಸ್ ನಿಲ್ದಾಣದಿಂದ ಜನರಿಗೆ ತೊಂದರೆಯಾಗುತ್ತದೆ ಎನ್ನುವ ನೆಪ ಒಡ್ಡಿ ಜನರ ಹೆಗಲ ಮೇಲೆ ಕೋವಿ ಇಟ್ಟು ಜನಪ್ರತಿನಿಧಿಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಆದರೆ ಈ ಯಾವ ಬೆದರಿಕೆಗೂ ಜನಪ್ರತಿನಿಧಿಗಳು ಸೊಪ್ಪು ಹಾಕಲೇಬಾರದು. ಯಾಕೆಂದರೆ ಹೊಸದು ಬಂದಾಗ ಹೀಗೆ ಅಪಸ್ವರ ಬರುವುದು ಸಹಜ. ಇನ್ನು ವಿಪಕ್ಷ ಕಾಂಗ್ರೆಸ್ ಮತ್ತು ಎಡಪಕ್ಷಗಳು ಇದು ಪಿಪಿಪಿ ಮಾದರಿ ಎಂದು ಹೀಯಾಳಿಸಬಹುದು. ಆದರೆ ಇಷ್ಟು ದೊಡ್ಡ ಯೋಜನೆ ಬರುವಾಗ ಇದೆಲ್ಲ ಸಹಜ ಎನ್ನುವುದು ಅವರಿಗೂ ಒಳಗೊಳಗೆ ಗೊತ್ತಿರುತ್ತದೆ. ಅದೇನೆ ಇರಲಿ ಎಲ್ಲಾ ಸೇರಿ ಸುಮಾರು 825 ಬಸ್ಸುಗಳಿಗೆ ಒಂದು ಶಾಶ್ವತ ಮನೆ ಸಿಕ್ಕಿರುವುದು ಮಾತ್ರ ನಿಜ. ಯಾವಾಗ ಆಗುತ್ತದೆ ಆ ಪ್ರಶ್ನೆ ಈಗ ಕೇಳಬೇಡಿ ಅಷ್ಟೇ!
Leave A Reply