ಶಾಸಕರ ಮೇಲೆ ಸುಳ್ಳು ಆರೋಪ ಮಾಡುವ ಮೊದಲು ಯೋಚಿಸಬೇಕು!!
ಮಂಗಳೂರು ನಗರ ದಕ್ಷಿಣದ ಜನಪ್ರಿಯ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಮೇಲೆ ಸುನೀಲ್ ಬಜಿಲಕೇರಿ ಎನ್ನುವ ವ್ಯಕ್ತಿ ಪದೇ ಪದೇ ಮಾಡುತ್ತಿದ್ದ ಸುಳ್ಳು ಆರೋಪಗಳಿಂದ ಬೇಸರಗೊಂಡು ಕೊನೆಗೆ ಕಾನೂನಿನ ಮೊರೆ ಹೋಗಿದ್ದಾರೆ. ಅವರು ಸುನೀಲ್ ಬಜಿಲಕೇರಿ ಎನ್ನುವ ವ್ಯಕ್ತಿಯ ಮೇಲೆ ಐದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಶಾಸಕರ ವಿರುದ್ಧ ಏನೂ ಬರೆಯಬಾರದು ಎಂದು ಕೋರ್ಟಿನಿಂದ ಸ್ಟೇ ಸಿಕ್ಕಿದೆ.
ನಾವು ಒಬ್ಬ ವ್ಯಕ್ತಿಯನ್ನು ಭ್ರಷ್ಟ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಭಾಷೆಯಲ್ಲಿ ನಿಂದಿಸುವುದರಿಂದ ಆ ವ್ಯಕ್ತಿಯ ಬಗ್ಗೆ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಉಂಟು ಮಾಡುವ ಮೊದಲು ಸಾಕಷ್ಟು ಯೋಚಿಸಬೇಕು. ಯಾಕೆಂದರೆ ಸೋಶಿಯಲ್ ಮೀಡಿಯಾ ಇರುವುದು ದುರುಪಯೋಗಪಡಿಸಲು ಅಲ್ಲವೇ ಅಲ್ಲ. ಸುನೀಲ್ ಬಜಿಲಕೇರಿ ಶಾಸಕ ವೇದವ್ಯಾಸ ಕಾಮತ್ ಅವರ ಬಗ್ಗೆ ನಿರಂತರ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ. ಪದೇ ಪದೇ ಭ್ರಷ್ಟಾಚಾರಿ ಎಂದು ಹೀಗಳೆಯುವ ಮೊದಲು ಭ್ರಷ್ಟ ಎನ್ನುವ ಪದದ ಅರ್ಥವನ್ನು ಸರಿಯಾಗಿ ಅರಿತುಕೊಳ್ಳಬೇಕು. ಅದಕ್ಕಾಗಿ ಸುನೀಲ್ ಬಜಿಲಕೇರಿ ಅಥವಾ ಯಾರೇ ಆಗಲಿ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಗುವ ಭ್ರಷ್ಟಾಚಾರಕ್ಕೂ ಶಾಸಕರಿಗೂ ಏನೂ ಸಂಬಂಧವಿಲ್ಲ. ಅದೇ ರೀತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಗುವ ಭ್ರಷ್ಟಾಚಾರಕ್ಕೂ ಶಾಸಕರಿಗೂ ಏನು ಸಂಬಂಧವಿರುವುದಿಲ್ಲ. ಪಾಲಿಕೆಯಲ್ಲಿ ಪಾಲಿಕೆ ಕಮೀಷನರ್ ಮತ್ತು ಮೇಯರ್ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಹಾಗೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅದಕ್ಕಾಗಿ ಆಡಳಿತ ಮಂಡಳಿ ಇದೆ. ಅದರಲ್ಲಿ ಶಾಸಕರಿಗೆ ಯಾವ ಪಾತ್ರವೂ ಇಲ್ಲ. ಒಂದು ವೇಳೆ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಅದನ್ನು ಯಾರು ಬೇಕಾದರೂ ಶಾಸಕರ ಗಮನಕ್ಕೆ ತರಬಹುದು. ಆಗ ಶಾಸಕರು ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಸರಪಡಿಸುವ ಕೆಲಸ ಮಾಡುತ್ತಾರೆ.
ಇನ್ನು ಕೇವಲ ಕಳಪೆ ಕಾಮಗಾರಿ ಆಗಿದೆ ಎಂದ ಕೂಡಲೇ ಅದನ್ನು ಶಾಸಕರೇ ಕಳಪೆ ಮಾಡಲು ಹೇಳಿದ್ದಾರೆ, ಅವರ ಸೂಚನೆ ಮೇರೆಗೆ ಕಳಪೆ ಆಗುತ್ತಿದೆ ಎಂದು ಹೇಳುವುದು ಸರಿಯಲ್ಲ. ಯಾವುದೇ ಒಂದು ಅಭಿವೃದ್ಧಿ ಕಾಮಗಾರಿ ಆಗುವಾಗ ಅದನ್ನು ಸರಕಾರದ ಲೋಕೊಪಯೋಗಿ ಇಲಾಖೆ ಅಥವಾ ಟೆಂಡರ್ ಮೂಲಕ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರ ಮೂಲಕವೇ ಮಾಡಿಸಲಾಗುತ್ತದೆ. ಒಂದು ರಸ್ತೆ ಕಾಂಕ್ರೀಟಿಕರಣ ಎಂದಾದರೆ ಅದಕ್ಕೆ ಲೋಕೋಪಯೋಗಿ ಇಲಾಖೆಯ ಬಳಿ ಮಾನದಂಡಗಳಿವೆ. ಇಷ್ಟು ಉದ್ದದ ರಸ್ತೆ ಎಂದಾದರೆ ಅದಕ್ಕೆ ಇಂತಿಷ್ಟೇ ಜಲ್ಲಿ, ಸಿಮೆಂಟ್, ಮರಳು ಎಲ್ಲವನ್ನು ಹಾಕಿ ಕಾಮಗಾರಿ ನಡೆಸಬೇಕು ಎನ್ನುವ ನಿಯಮಗಳಿವೆ. ಕಾಂಕ್ರೀಟಿಕರಣ ಆದರೆ ಇಂತಿಷ್ಟೇ ಸೆಂಟಿ ಮೀಟರ್ ಕಾಂಕ್ರೀಟ್ ಮಾಡಬೇಕು ಎನ್ನುವುದು ಕೂಡ ಲಿಖಿತವಾಗಿ ನಮೂದಿಸಲಾಗಿದೆ. ಅದನ್ನೆಲ್ಲಾ ಅಧಿಕಾರಿಗಳು ಗಮನಿಸಬೇಕಾಗುತ್ತದೆ. ಒಂದು ವಾರ್ಡಿನಲ್ಲಿ ಕೆಲಸ ನಡೆಯುವಾಗ ಆ ಭಾಗದ ಯಾವುದೇ ನಾಗರಿಕನಿಗೆ ತನ್ನ ಏರಿಯಾದಲ್ಲಿ ಆಗುವ ಕಾಮಗಾರಿಯಲ್ಲಿ ಕಳಪೆ ಆಗಿದೆ ಎಂದು ಅನಿಸಿದರೆ ಅವರು ಆ ಕ್ಷೇತ್ರದ ಶಾಸಕರಿಗೆ ದೂರುಕೊಡಬಹುದು. ದೂರು ಕೊಟ್ಟ ಬಳಿಕವೂ ಶಾಸಕರು ಆ ಕಾಮಗಾರಿ ನಡೆಯುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸದೇ ಇದ್ದರೆ ಆಗ ಆ ಭಾಗದ ನಾಗರಿಕರು ಆ ಶಾಸಕ ಭ್ರಷ್ಟನೋ ಅಲ್ಲವೋ ಎಂದು ನಿರ್ಧರಿಸಬಹುದು. ಅದು ಬಿಟ್ಟು ತಮ್ಮದೇ ಊಹೆಯಲ್ಲಿ ಅಥವಾ ಅಧಿಕಾರಿಗಳು ನಡೆಸಿದ ಕಾಮಗಾರಿಯಲ್ಲಿ ಭ್ರಷ್ಟಾಚಾರ ಕಂಡು ಬಂದರೆ ಅದಕ್ಕೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡು ಶಾಸಕರು ಭ್ರಷ್ಟ ಎಂದು ಗಂಟೆಗೊಂದು ಸಲ ಬರೆಯುವುದು, ಲೈವ್ ಬರುವುದು ಮಾಡಿದ್ರೆ ಅದರ ಉದ್ದೇಶ ಏನು? ಕಾಮಗಾರಿ ಒಳ್ಳೆಯದು ಆಗಬೇಕು ಎಂದೋ ಅಥವಾ ಶಾಸಕರನ್ನು ಜನರ ದೃಷ್ಟಿಯಲ್ಲಿ ಕೆಟ್ಟವ ಎಂದು ಬಿಂಬಿಸಬೇಕು ಎನ್ನುವುದನ್ನು ಜನ ಅರ್ಥ ಮಾಡುತ್ತಾರೆ.
ಸಾಮಾಜಿಕ ಜಾಲತಾಣಗಳಿರುವುದು ಜನರಿಗೆ ಏನಾದರೂ ಉಪಯೋಗವಾಗುವ ಕೆಲಸ ಮಾಡುವುದಕ್ಕೆ. ಯಾವುದೇ ವೈಯಕ್ತಿಕ ಆರೋಪ ಮಾಡಿ ಇನ್ನೊಬ್ಬ ವ್ಯಕ್ತಿಯನ್ನು ಕೀಳಾಗಿ ತೋರಿಸಲು ಅಲ್ಲ. ಫೇಸ್ ಬುಕ್ ಉತ್ತಮ ಕಾರ್ಯಕ್ಕೆ ಬಳಸಿದರೆ ಬಳಸಿದ ಮನುಷ್ಯನಿಗೂ ಗೌರವ ಸಿಗುತ್ತದೆ. ಇಲ್ಲದಿದ್ದರೆ ನಮ್ಮ ದೇಶದಲ್ಲಿ ಕಾನೂನುಗಳು ಇನ್ನು ದೃಢವಾಗಿಯೇ ಇವೆ!
Leave A Reply