ಕುದ್ರೋಳಿ ರಸ್ತೆಯಲ್ಲಿ ಸೈಕಲ್ ಲೇನ್ ಕಳೆದುಹೋಗಿದ್ದು ಸಿಕ್ಕಿತಾ!!
ಸೈಕಲ್ ಸವಾರರಿಗಾಗಿ ಪ್ರತ್ಯೇಕ ಲೇನ್ ಪ್ರಾರಂಭಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಿದೆ. ಇದು ಮಂಗಳೂರಿಗೆ ಏನೂ ಹೊಸತಲ್ಲ. ಯೋಗೀಶ್ ಭಟ್ ಅವರು ಮಂಗಳೂರು ನಗರ ದಕ್ಷಿಣದ ಶಾಸಕರಾಗಿದ್ದ ಕಾಲದಲ್ಲಿ ಮಂಗಳೂರು ಸೈಕಲ್ ಲೇನ್ ಎನ್ನುವ ಹೊಸ ಹೆಸರನ್ನು ಕೇಳಿತ್ತು. ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಸೈಕಲ್ ಲೇನ್ ಇದೆ. ಇಲ್ಲಿಯೂ ಅಂತದ್ದನ್ನು ಆರಂಭಿಸುವ ಪ್ರಕ್ರಿಯೆ ಹಿಂದಿನ ಅಲ್ಲ ಅವರ ಹಿಂದಿನ ಶಾಸಕರು ಆರಂಭಿಸಿದ್ದರು. ಅದು ಅನುಷ್ಟಾನಗೊಳ್ಳಲು ಗುದ್ದಲಿಪೂಜೆ ನಡೆಸಿದ್ದ ರಸ್ತೆ ಅಳಕೆ. ಕಾಳಿಕಾಂಬಾ ಜಂಕ್ಷನ್ ನಿಂದ ದುರ್ಗಾ ಮಹಾಲ್ ಹೋಟೇಲ್ ವರೆಗಿನ ರಸ್ತೆಯನ್ನು ಅಗಲ ಮಾಡಿ ಕಾಂಕ್ರೀಟಿಕರಣ ಮಾಡುವಾಗ ಒಂದು ಬದಿಯಲ್ಲಿ ಸೈಕಲ್ ಲೇನ್ ಎಂದು ಪ್ರಾಜೆಕ್ಟ್ ವರದಿ ಸಿದ್ಧವಾಗಿತ್ತು. ಆದರೆ ಯೋಗೀಶ್ ಭಟ್ ಅವಧಿಯಲ್ಲಿ ಯೋಜನೆ ಮುಗಿಯಲೇ ಇಲ್ಲ. ಅವರ ನಂತರ ಕಳೆದ ಬಾರಿ ಇನ್ನೊಬ್ಬರು ಶಾಸಕರು ಬಂದು ತಮ್ಮದೇ ಯೋಜನೆ ಎನ್ನುವಂತೆ ಉದ್ಘಾಟನೆ ಕೂಡ ಮಾಡಿದರು. ಅಲ್ಲಿ ಹಾಕಿದ್ದ ಫ್ಲೆಕ್ಸ್ ನಲ್ಲಿ ಸೈಕಲ್ ಲೇನ್ ಇರುವ ರಸ್ತೆ ಎಂದೇ ಹೊಗಳಿಸಿಕೊಂಡು ಹಿಂದಿನ ಶಾಸಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಸೈಕಲ್ ಲೇನ್ ಮಾತ್ರ ಯಾರಿಗೂ ಕಾಣಿಸಲಿಲ್ಲ. ಆದರೆ ಅಲ್ಲಿ ಸೈಕಲ್ ಲೇನ್ ಎಲ್ಲಿದೆ ಎಂದು ದುರ್ಬೀನ್ ಹಾಕಿ ಹುಡುಕಬೇಕಿದೆ. ಇನ್ನು ಮಂಗಳೂರು ನಗರದವರು ಹೇಗೆ ಎಂದರೆ ಸೈಕಲ್ ಲೇನ್ ಇರಲಿ, ಬಿಡಲಿ, ಅದರ ಹೆಸರಿನಲ್ಲಿ ಜನಪ್ರತಿನಿಧಿಗಳು ನಾಟಕ ಮಾಡಲಿ, ಬಿಡಲಿ, ಅಧಿಕಾರಿಗಳು ಹಣ ಹೊಡೆಯಲಿ, ಬಿಡಲಿ ತುಂಬಾ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಸೈಕಲ್ ಲೇನ್ ದಾಖಲೆಗಳಲ್ಲಿ ಮಾತ್ರ ಎಂದಾದರೂ ಪ್ರತಿಭಟನೆ ಕೂಡ ಮಾಡುವುದಿಲ್ಲ.
ಈಗ ನಮ್ಮಲ್ಲಿರುವುದು ಹೊಸ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರು ಕೂಡ ಹೊಸಬ್ಬರೇ ಆಗಿದ್ದಾರೆ. ಅವರಿಗೆ ಈ ಕುದ್ರೋಳಿ ರಸ್ತೆಯಲ್ಲಿ ಸೈಕಲ್ ಲೇನ್ ಮಾಡಿರುವುದು ಕೂಡ ಗೊತ್ತಿರಲಿಕ್ಕಿಲ್ಲ. ಅದನ್ನು ಅವರಿಗೆ ಯಾರಾದರೂ ಜನಪ್ರತಿನಿಧಿಗಳು ಹೇಳಬೇಕು. ಅದರ ಬಳಿಕ ಮೊತ್ತ ಮೊದಲಿಗೆ ಈ ಕುದ್ರೋಳಿ ರಸ್ತೆಯ ಸೈಕಲ್ ಲೇನ್ ಎಲ್ಲಿದೆ ಎಂದು ಈ ಅಧಿಕಾರಿಗಳು ಹುಡುಕಬೇಕು. ಆ ನಂತರ ಈಗ ಏನೂ ಸೈಕಲ್ ರೇಡ್ ಮಾಡಿ ಅಧಿಕಾರಿಗಳು ಸೈಕಲ್ ಲೇನ್ ಅಧ್ಯಯನ ಮಾಡುತ್ತಿದ್ದಾರಲ್ಲ, ಇದೇ ಅಧಿಕಾರಿಗಳು ಈ ಕುದ್ರೋಳಿ ರಸ್ತೆಯ ಸೈಕಲ್ ಲೇನ್ ನಲ್ಲಿ ನಿತ್ಯ ಬೆಳಿಗ್ಗೆ ಒಮ್ಮೆ ಹೋಗಿ ಬರಬೇಕು. ಜಿಲ್ಲಾಧಿಕಾರಿಯವರ ಅಥವಾ ಆಯುಕ್ತರ ಬಂಗ್ಲೆ ಈ ಕುದ್ರೋಳಿ ರಸ್ತೆಯಿಂದ ತುಂಬಾ ದೂರ ಏನಿಲ್ಲ. ಅವರಿಬ್ಬರು ಈ ರಸ್ತೆಯಲ್ಲಿ ನಿತ್ಯ ಬರುತ್ತಾರೆ ಎಂದರೆ ಅಲ್ಲಿ ಅನಧಿಕೃತ ಪಾರ್ಕಿಂಗ್ ಕೂಡ ಕಡಿಮೆ ಆಗುತ್ತದೆ. ಜನರಿಗೂ ಸೈಕಲ್ ಲೇನ್ ಮೇಲೆ ವಿಶ್ವಾಸ ಬರುತ್ತದೆ. ಅದರ ನಂತರ ಯಾವ ರಸ್ತೆಗಳಲ್ಲಿ ಸೈಕಲ್ ಟ್ರ್ಯಾಕ್ ಮಾಡಬಹುದು ಎಂದು ಯೋಜನೆ ಹಾಕಿಕೊಳ್ಳಲು ಅನುಕೂಲವಾಗುತ್ತದೆ.
ನಮ್ಮಲ್ಲಿ ಅನೇಕ ರಸ್ತೆಗಳು ಟೂ ಲೇನ್ ನಿಂದ ಫೋರ್ ಲೇನ್ ಆಗಿವೆ. ಆದರೆ ಅಗಲ ಮಾಡಿದ ಜಾಗದಲ್ಲಿ ವಾಹನಗಳನ್ನು ಮನಸ್ಸಿಗೆ ಬಂದಂತೆ ಪಾರ್ಕ್ ಮಾಡಿದ ಪರಿಣಾಮ ಹಿಂದೆ ಎಷ್ಟು ಅಗಲದ ರಸ್ತೆ ಇತ್ತೋ ಫೋರ್ ಲೇನ್ ಆದ ನಂತರ ಅದಕ್ಕಿಂತ ರಸ್ತೆ ಕಿರಿದಾಗಿದೆ. ಪೊಲೀಸರು ದ್ವಿಚಕ್ರ ಸವಾರರು ಹೆಲ್ಮೆಟ್ ಹಾಕದೇ ಬೈಕ್ ಬಿಡುತ್ತಿದ್ದರೆ ನಿಲ್ಲಿಸಿ ದಂಡ ಹಾಕುತ್ತಾರೆ. ದಾಖಲೆಗಳು ಇಲ್ಲದಿದ್ದರೆ, ತ್ರಿಬಲ್ ರೈಡ್ ಹೋದರೆ ದಂಡ ಹಾಕುತ್ತಾರೆ. ಆದರೆ ಸೈಕಲ್ ಲೇನ್ ನಲ್ಲಿ ಪಾರ್ಕ್ ಮಾಡಿದರೆ ಯಾಕೆ ದಂಡ ಹಾಕಲ್ಲ. ಪೊಲೀಸ್ ಕಮೀಷನರ್ ಮಂಗಳೂರು ನಗರದಲ್ಲಿ ಈಗಾಗಲೇ 61 ಕಡೆ ನೋಪಾರ್ಕಿಂಗ್ ಜಾಗಗಳನ್ನು ಗುರುತಿಸಿದ್ದಾರೆ. ಅಲ್ಲಿ ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಿದರೆ ಅದನ್ನು ಎತ್ತಾಕಿಕೊಂಡು ಹೋಗಲು ಪೊಲೀಸ್ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಹೆಚ್ಚಿನ ಕಡೆ ನೋ ಪಾರ್ಕಿಂಗ್ ಮಾಡಿದ ಕಡೆ ಬೋರ್ಡ್ ಹಾಕಿಲ್ಲ. ಆದರೂ ಜನ ದಂಡದ ಕಾರಣಕ್ಕೆ ಅಥವಾ ವಾಹನ ಲಿಫ್ಟ್ ಮಾಡುವಾಗ ಡ್ಯಾಮೇಜ್ ಆಗುತ್ತೆ ಎನ್ನುವ ಕಾರಣಕ್ಕೆ ಒಂದಿಷ್ಟು ಎಚ್ಚರಿಕೆ ವಹಿಸಬಹುದು. ಆದರೆ ಸೈಕಲ್ ಲೇನ್ ಹಾಗಲ್ಲ. ಸೈಕಲ್ ಲೇನ್ ಬಗ್ಗೆ ನಮ್ಮ ಜನರಿಗೆ ಇನ್ನೂ ಗಂಭೀರತೆ ಬಂದಿಲ್ಲ. ಈ ನಿಟ್ಟಿನಲ್ಲಿ ಸೈಕಲ್ ಲೈನ್ ಕಲ್ಪನೆ ಯಶಸ್ವಿಯಾಗಬೇಕಾದರೆ ಜನ ಈ ಬಗ್ಗೆ ಧ್ವನಿ ಎತ್ತಬೇಕು. ಸೈಕಲ್ ಸವಾರಿಯನ್ನು ಉತ್ತೇಜಿಸುವ ಪ್ರಯತ್ನಕ್ಕೆ ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್ ಸಿಟಿ ತಯಾರಾಗಿದೆ. ಆದರೆ ಇದಕ್ಕೆ ಪೂರಕವಾಗಿ ನಾಗರಿಕರ ಸ್ಪಂದನೆ ತೀರ ಅಗತ್ಯವಾಗಿದ್ದು, ಆನ್ ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಚ್ಚಿನ ಸ್ಪಂದನೆ ನೀಡಬೇಕಿದೆ. ನಗರದ ಯಾವ ಪ್ರದೇಶದಲ್ಲಿ ಸೈಕಲ್ ಟ್ರ್ಯಾಕ್ ಮಾಡಬಹುದು, ಯಾವ ಪ್ರದೇಶ ಟ್ರ್ಯಾಕ್ ನಿರ್ಮಾಣಕ್ಕೆ ಯೋಗ್ಯ ಎಂದು ಪರಾಮರ್ಶಿಸಿ ಕೇಂದ್ರ ಸರಕಾರಕ್ಕೆ ನೀಡಬೇಕು. ಆದರೆ ಪಾರ್ಕಿಂಗ್ ಅಶಿಸ್ತು ಹೆಚ್ಚೆಚ್ಚಾಗಿ ಇರುವಾಗ ಮಂಗಳೂರು ನಗರದಲ್ಲಿ ಸೈಕಲ್ ಲೇನ್ ಮಾಡುವುದಾದರೂ ಎಲ್ಲಿಂದ? ಹಾಗಂತ ಮಾಡಲು ಸಾಧ್ಯವೇ ಅಲ್ಲ ಎಂದಲ್ಲ. ಏರುತ್ತಿರುವ ಪೆಟ್ರೋಲ್, ಡಿಸೀಲ್ ಬೆಲೆ, ಆರೋಗ್ಯಕ್ಕಾಗಿ ಸೈಕಲ್ ಸವಾರಿ, ಹಲವು ಸೈಕಲ್ ಕ್ಲಬ್ ಗಳ ಸ್ಥಾಪನೆಯಿಂದ ಜನ ಮುಂದಿನ ದಿನಗಳಲ್ಲಿ ಸೈಕಲ್ ಚಲಾಯಿಸಲು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ಗ್ಯಾರಂಟಿ.
Leave A Reply