ಸ್ಮಾರ್ಟ್ ಸಿಟಿ ಹಣದಿಂದ ರಸ್ತೆ ಅಗೆದದ್ದೇ ಇಲ್ಲಿಯ ತನಕದ ಸಾಧನೆ!!
ಮೊದಲ ಪಟ್ಟಿಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಆಯ್ಕೆಯಾಗದಿದ್ದಾಗ ಆಗ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ರಾಜಕಾರಣಿಗಳು ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಟಾರ್ಗೆಟ್ ಮಾಡಿದ್ದರು. ನಂತರ ಸ್ಮಾರ್ಟ್ ಸಿಟಿಗೆ ಮಂಗಳೂರು ಮೊದಲ ಹಂತದಲ್ಲಿ ಯಾಕೆ ಆಯ್ಕೆಯಾಗಲಿಲ್ಲ ಎಂದು ಪರಿಶೀಲಿಸಿ ಅದಕ್ಕೆ ಬೇಕಾದ ವರದಿ, ಪ್ರಾಜೆಕ್ಟ್ ರಿಪೋರ್ಟ್ ಎಲ್ಲಾ ತಯಾರಿಸಿದ ನಂತರ ಅದನ್ನು ಸ್ಮಾರ್ಟ್ ಸಿಟಿ ಆಯ್ಕೆ ಮಂಡಳಿ ಓಕೆ ಮಾಡಿದ ಬಳಿಕ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಮಂಗಳೂರಿನ ಹೆಸರು ಬಂತು. ಆಗ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಯ ಮುಖಂಡರ ನಡುವೆ ಫ್ಲೆಕ್ಸ್ ವಾರ್ ಗಳು ನಡೆದವು. ಪೈಪೋಟಿಯಲ್ಲಿ ಮೈಲೇಜ್ ಪಡೆದುಕೊಳ್ಳಲು ಪ್ರಯತ್ನ ನಡೆಯಿತು. ಅದಾಗಿ ಈಗ ಬಹುತೇಕ ಆರು ವರ್ಷಗಳಾಗುತ್ತಾ ಬಂದಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಬಂದರು ಪ್ರದೇಶದ ಹೊಂಡಗಳಲ್ಲಿ ಬಿದ್ದು ಹೊರಳಾಡುತ್ತಿವೆ. ಈಗ ಯಾರಿಗೂ ಇದು ಬಿದ್ದು ಹೋಗಿಲ್ಲ.
ಸ್ಮಾರ್ಟ್ ಸಿಟಿ ಕೆಲಸಗಳು ಹೇಗೆ ನಡೆಯುತ್ತವೆ ಎನ್ನುವುದರ ಸಣ್ಣ ವಿವರ ನಿಮಗೆ ಕೊಡುತ್ತೇನೆ. ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಎರಡೂ ಅನುದಾನಗಳನ್ನು ನೀಡುತ್ತವೆ. ಉದಾಹರಣೆಗೆ ಒಮ್ಮೆ ನೂರು ಕೋಟಿ ರೂಪಾಯಿ ಹಣ ಬಿಡುಗಡೆಯಾಯಿತು ಎಂದು ಇಟ್ಟುಕೊಳ್ಳಿ. ಆ ಹಣವನ್ನು ಸಮರ್ಪಕವಾಗಿ ಬಳಸಿಕೊಂಡ ಬಳಿಕ ನಂತರದ ಕಂತು ಬಿಡುಗಡೆಯಾಗುತ್ತದೆ. ಆದರೆ ನಮ್ಮದು ಅತೀ ಬುದ್ಧಿವಂತರ ಜಿಲ್ಲೆ ಅಲ್ವಾ? ನಾವು ಪ್ರಾರಂಭದಿಂದಲೇ ಸ್ಮಾರ್ಟ್ ಸಿಟಿಯ ಉಲ್ಟಾ ಕೆಲಸ ಶುರು ಮಾಡಿದ್ದೆವು. ನಾವು ಸ್ಮಾರ್ಟ್ ಸಿಟಿಯ ಹಣ ಬಂದ ಕೂಡಲೇ ಮೊದಲು ಮಾಡಿದ್ದು ಕ್ಲಾರ್ಕ್ ಟವರ್ ನಿರ್ಮಾಣ. ಅದು ಸ್ಮಾರ್ಟ್ ಸಿಟಿಯಾಗಿ ನಾವು ಕಳುಹಿಸಿಕೊಟ್ಟ ಪ್ರಾಜೆಕ್ಟ್ ರಿಪೋರ್ಟ್ ನಲ್ಲಿ ಇರಲೇ ಇಲ್ಲ. ಅದಕ್ಕೆ 76 ಲಕ್ಷದಷ್ಟು ವ್ಯಯ ಮಾಡಿಬಿಟ್ಟಿದ್ದೆವು. ನಂತರ ಮಂಗಳೂರಿನಲ್ಲಿ ಉತ್ತಮ ರಸ್ತೆಯಾಗಿಯೇ ಇರುವ ಗಡಿಯಾರ ವೃತ್ತದಿಂದ ಆರ್ ಟಿಒ ವರೆಗಿನ ರಸ್ತೆಯನ್ನು ಸ್ಮಾರ್ಟ್ ಮಾಡುತ್ತೇವೆ ಎಂದು ಹೊರಟರು. ಅದಕ್ಕೆ ಇವರು ವ್ಯಯ ಮಾಡಿದ್ದು 6.75 ಕೋಟಿ ರೂಪಾಯಿ. ಇವರು ಏನು ಮಾಡಿದ್ರು ಮೊದಲ ಕಂತಿನಲ್ಲಿ ಬಂದ ಹಣ ಖರ್ಚಾಗುತ್ತಿಲ್ಲ. ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಆಮೆಗತಿಯಲ್ಲಿ ಹೋಗಲು ಶುರು ಮಾಡಿದವು. ಇನ್ನೇನೂ ಮುಂದಿನ ಮಾರ್ಚ್ ಒಳಗೆ ಈಗ ಬಂದಿರುವ ಅನುದಾನದ ಕಾಮಗಾರಿಗಳನ್ನು ಮುಗಿಸಬೇಕು ಎಂದು ಹಟಕ್ಕೆ ಬಿದ್ದ ಸ್ಮಾರ್ಟ್ ಸಿಟಿ ಮಂಡಳಿಯವರು ಮಂಗಳೂರಿನ ಬಂದರು ಪ್ರದೇಶದ ರಸ್ತೆಗಳನ್ನು ಅಗೆಯುವ ಕೆಲಸ ಶುರು ಮಾಡಿದರು. ಮಂಗಳೂರಿನ ಬಂದರು ಪ್ರದೇಶ ಇಡೀ ಜಿಲ್ಲೆಯ ಅತ್ಯಂತ ಹೆಚ್ಚು ಜನನಿಬಿಡ ಪ್ರದೇಶ. ಅತೀ ಹೆಚ್ಚು ವಾಹನಗಳು ಸೂರ್ಯ ಉದಯಿಸುವ ಮೊದಲಿನಿಂದ ಹಿಡಿದು ಸೂರ್ಯ ಮುಳುಗಿದ ನಂತರವೂ ಓಡಾಡುವ ಪ್ರದೇಶ. ಒಂದು ರೀತಿಯಲ್ಲಿ ಮಂಗಳೂರಿನ ಹೃದಯ ಇದ್ದ ಹಾಗೆ. ಎಲ್ಲಾ ವ್ಯಾಪಾರಿ ಚಟುವಟಿಕೆಗಳು ಅಲ್ಲಿಂದಲೇ ಶುರುವಾಗಿ ಮತ್ತೆ ಅಲ್ಲಿಗೆ ಬಂದು ಮುಗಿಯುತ್ತವೆ. ಅಂತಹ ಪ್ರದೇಶವನ್ನು ಸ್ಮಾರ್ಟ್ ಮಾಡುವ ಮೊದಲು ಬಹಳ ಲೆಕ್ಕಾಚಾರದಿಂದ ಕೆಲಸ ಎತ್ತಿಕೊಳ್ಳಬೇಕು. ಆದರೆ ಇವರಿಗೆ ನಾವು ಕೆಲಸ ಕೈಗೆತ್ತಿಕೊಂಡಿದ್ದೇವೆ ಎಂದು ತೋರಿಸುವ ಧಾವಂತ ಇತ್ತಲ್ಲ. ಅದಕ್ಕಾಗಿ ಬಂದರು ಪ್ರದೇಶದ ಪ್ರತಿ ಒಂದು ರಸ್ತೆಯನ್ನು ಕೂಡ, ಯಾವ ರಸ್ತೆಯನ್ನು ಬಿಡದೆ ಅಗೆಯಲು ಶುರು ಮಾಡಿದರು. ಕೇಳಿದರೆ ಒಳಚರಂಡಿ ಕೆಲಸ ಎನ್ನಲಾಗುತ್ತದೆ. ಎಲ್ಲಾ ಕಡೆ ಗುತ್ತಿಗೆದಾರ ಹೆಚ್ಚು ಕಡಿಮೆ ಒಬ್ಬರೇ ಇರುವುದರಿಂದ ಅವರು ಒಂದು ರಸ್ತೆಯ ಕೆಲಸ ಮುಗಿದ ಬಳಿಕ ಮತ್ತೊಂದು ರಸ್ತೆಗೆ ಕೈ ಹಾಕಬಹುದಿತ್ತು. ಆಗ ಯಾವ ತೊಂದರೆಯೂ ಯಾವ ವ್ಯಾಪಾರಿಗೂ ಆಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಇವರು ಬೀದಿ ನಾಯಿಗಳು ಮನೆಯ ಹೊರಗೆ ಇಟ್ಟ ತ್ಯಾಜ್ಯವನ್ನು ಹೇಗೆ ಕಚ್ಚಿ ಅಲ್ಲಲ್ಲಿ ತಿಂದು ದಾರಿಯುದ್ದಕ್ಕೂ ಬಿಸಾಡುತ್ತವಲ್ಲ, ಹಾಗೆ ಎಲ್ಲಾ ರಸ್ತೆಗಳ ಓಪನ್ ಸರ್ಜರಿ ಮಾಡಿಬಿಟ್ಟಿದ್ದಾರೆ. ಯಾವ ಕಾಮಗಾರಿ ಕೂಡ ಸದ್ಯ ಪೂರ್ಣ ಆಗುವಂತೆ ಕಾಣುತ್ತಿಲ್ಲ. ಇದರಿಂದ ಏನಾಗಿದೆ ಎಂದರೆ ಮೊದಲೇ ಲಾಕ್ ಡೌನ್ ನಿಂದ ಆರು ತಿಂಗಳು ವ್ಯಾಪಾರ ಇಲ್ಲದೇ ಎಲ್ಲರ ಜೀವನವೂ ಬಂದ್ ಆದಂತೆ ಇತ್ತು. ಇನ್ನು ಮುಂದಿನ ಆರು ತಿಂಗಳು ಈ ಅರೆಬೆಂದ ಕೆಲಸಗಳಿಂದಾಗಿ ವ್ಯಾಪಾರಿಗಳು, ಕೂಲಿಕಾರರು ಎಲ್ಲರೂ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ದಸರಾ, ದೀಪಾವಳಿಯ ಹೊತ್ತಿನಲ್ಲಿ ನಾಲ್ಕು ಕಾಸು ದುಡಿಯೋಣ ಎಂದುಕೊಂಡವರಿಗೆ ಇಲ್ಲಿ ಈಗ ರಸ್ತೆಗಳ ಹೊಂಡಗಳೇ ರಕ್ಕಸರಂತೆ ಕಾಣುತ್ತಿವೆ. ಈ ಬಾರಿಯ ದೀಪಾವಳಿಗೆ ನೆಲಚಕ್ರ ಕೂಡ ಬಿಡಲು ಸಾಧ್ಯವಿಲ್ಲದ ಪರಿಸ್ಥಿತಿ ಇಲ್ಲಿನ ರಸ್ತೆಗಳದ್ದು. ಇಲ್ಲಿಯ ತನಕ ಬಂದಿರುವ 280 ಕೋಟಿ ರೂಪಾಯಿಗಳಲ್ಲಿ ಸರಿಯಾಗಿ ಎರಡು ಅಂಕೆಗಳಷ್ಟು ಕೂಡ ಖರ್ಚಾಗಿಲ್ಲ. ಈ ನಡುವೆ ರಥಬೀದಿ ಕೂಡ ಸ್ಮಾರ್ಟ್ ಆಗಲು ಅಗೆಯಲಾಗಿದೆ. ಒಟ್ಟಿನಲ್ಲಿ ಹಣ ಖರ್ಚು ಮಾಡಲು ಕೊನೆಯ ಕ್ಷಣದಲ್ಲಿ ಯಾರಿಗೆ ತೊಂದರೆಯಾದರೂ ಪರವಾಗಿಲ್ಲ ಎಂದು ಅಂದುಕೊಂಡಿರುವುದು ನಮ್ಮ ಬುದ್ಧಿವಂತರ ಸ್ಮಾರ್ಟ್ ಸಿಟಿ ಮಂಡಳಿ.
ನಮ್ಮ ರಾಜ್ಯದಲ್ಲಿ ಬೆಂಗಳೂರು, ಮೈಸೂರು ಬಿಟ್ಟರೆ ಮೂರನೇ ಅಭಿವೃದ್ಧಿ ಹೊಂದುತ್ತಿರುವ ದೊಡ್ಡ ನಗರ ಮಂಗಳೂರು. ನಮಗೆ ಸರಿಯಾದ ಬಸ್ ನಿಲ್ದಾಣ ಆಗದೇ 25 ವರ್ಷಗಳಾಗಿವೆ. ಸೆಂಟ್ರಲ್ ಮಾರುಕಟ್ಟೆ ಜೀರ್ಣಾವಸ್ಥೆಯಲ್ಲಿದೆ. ಇವರು ಮಾತ್ರ ರಸ್ತೆ ಅಗೆಯುತ್ತಿದ್ದಾರೆ. ಅರ್ಧ ಗಂಟೆ ಮಳೆ ಬಂದರೆ ಕೃತಕ ಕೆರೆ ಆಗುವ ನಮ್ಮ ನಗರದಲ್ಲಿ ಅಂಡರ್ ಪಾಸ್ ನಿರ್ಮಾಣವೇ ದೊಡ್ಡ ಹಾಸ್ಯ!
Leave A Reply