ಹೈನುಗಾರಿಕೆಗೆ ಪ್ರಹಾರ ಮಾಡಲು ಹೊರಟವರಿಗೆ ಸೆಗಣಿ ತಿನ್ನಿಸಿ!!
ಒಂದು ವೇಳೆ ರಾಜ್ಯ ಸರಕಾರ ಇಂತಹ ನಿಯಮವೇನಾದರೂ ಜಾರಿಗೆ ತಂದರೆ ಅದು ಹೈನುಗಾರರ ಭವಿಷ್ಯಕ್ಕೆ ಕೊಡಲಿಪೆಟ್ಟು ಹಾಕಿದ ಹಾಗೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಷ್ಟಕ್ಕೂ ಮಾಲಿನ್ಯ ನಿಯಂತ್ರಣ ಮಂಡಳಿ ಬರುವುದು ರಾಜ್ಯ ಸರಕಾರದ ಅಧೀನದಲ್ಲಿ. ಅವರು ಯಾವುದೇ ನಿಯಮ ಜಾರಿಗೆ ತರುವಾಗ ಆ ಬಗ್ಗೆ ಕನಿಷ್ಟ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಒಂದು ವೇಳೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಏನಾಗುತ್ತಿತ್ತು? ಕಾಂಗ್ರೆಸ್ಸಿಗರು ಗೋ ವಿರೋಧಿಗಳು ಎನ್ನುವ ಹಣೆಪಟ್ಟಿಯನ್ನು ಭಾರತೀಯ ಜನತಾ ಪಾರ್ಟಿಯ ಮುಖಂಡರು ಕಟ್ಟಿ ಬಿಡುತ್ತಿದ್ದರು. ಆದರೆ ಈಗ ಬಿಜೆಪಿ ಸರಕಾರವೇ ರಾಜ್ಯವನ್ನು ಆಳುತ್ತಿದೆ. ಹಾಗಿರುವಾಗ ಗೋಶಾಲೆ ಮತ್ತು ಡೇರಿ ಫಾರಂಗಳಿಗೆ ಅನ್ವಯವಾಗುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ನಿಯಮಗಳನ್ನು ತರಲು ಯೋಚಿಸುವುದೇ ತಪ್ಪು. ಇವರ ಮಾರ್ಗಸೂಚಿಗಳನ್ನು ನೋಡಿದರೆ ರೈತರ ಮೇಲೆ, ಗೋವುಗಳ ಮೇಲೆ ನಿಜವಾದ ಪ್ರೀತಿ, ಕಳಕಳಿ ಇದ್ದವರಿಗೆ ಮನಸ್ಸಿಗೆ ನೋವು ಮಾತ್ರವಲ್ಲ, ಈ ಸರಕಾರದ ಮೇಲೆ ಕೋಪ ಬರುತ್ತದೆ. ಡೇರಿ ಫಾರಂ ಕಾರ್ಯ ನಿರ್ವಹಣೆ ರೀತಿಯಲ್ಲಿ ಗೋಶಾಲೆಗಳನ್ನು ನಡೆಸಲು ಕಠಿಣ ಷರತ್ತುಗಳನ್ನು ಹೊಸ ನಿಯಮಾವಳಿಯಲ್ಲಿ ವಿಧಿಸಿದೆ. ಗೋಶಾಲೆಗಳು ಮತ್ತು ಡೇರಿ ಫಾರಂಗಳು ಸೆಗಣಿ, ಗಂಜಲ ಸಹಿತ ಘನತ್ಯಾಜ್ಯ ನಿರ್ವಹಣೆಗೆ ಜಲ ಕಾಯಿದೆ-1974 ಹಾಗೂ ವಾಯು ಸಂರಕ್ಷಣೆ ಮಾಲಿನ್ಯ ನಿಯಂತ್ರಣ-1981 ಕಾಯಿದೆ ಅನ್ವಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದೆ. ತಪ್ಪಿದ್ದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಡೇರಿ ಫಾರಂ ಮತ್ತು ಗೋಶಾಲೆಗಳಿಂದ ನಷ್ಟ ಪರಿಹಾರ ಭರಿಸುವ ಕ್ರಮ ಅನುಸರಿಸಲು ಮಂಡಳಿ ಮುಂದಾಗಿದೆ.
ಇಲ್ಲಿ ಮೊದಲನೇಯದಾಗಿ ನಾವು ಯೋಚಿಸಬೇಕಾಗಿರುವುದು ಗೋವಿನ ಮೂತ್ರ ಹಾಗೂ ಸೆಗಣೆಯನ್ನು ತ್ಯಾಜ್ಯದ ಪಟ್ಟಿಯಲ್ಲಿ ಸೇರಿಸಿದ್ದೇ ಇದರ ಮೊದಲ ತಪ್ಪು. ಯಾವುದಾದರೂ ಶುದ್ಧ ಎಡಪಂಥಿಯ ಮನಸ್ಥಿತಿಯುಳ್ಳ ಒಬ್ಬ ವ್ಯಕ್ತಿ ಮಾತ್ರ ಗೋಮೂತ್ರ ಹಾಗೂ ಸೆಗಣಿಯನ್ನು ಗಲೀಜು ಎನ್ನುವ ದೃಷ್ಟಿಯಲ್ಲಿ ನೋಡಬಹುದೇ ವಿನ: ಗೋವಿನ ಬಗ್ಗೆ ಕಿಂಚಿತ್ ಜ್ಞಾನವಿರುವ ವ್ಯಕ್ತಿಗಳು ಅವೆರಡನ್ನೂ ಅಮೃತಕ್ಕೆ ಹೋಲಿಸಿಯಾರು. ಆದರೆ ಕೆಲವು ಅಧಿಕಾರಿಗಳಿಗೆ ಅದು ತ್ಯಾಜ್ಯ. ಅದರಲ್ಲಿಯೂ ಭ್ರಷ್ಟಾಚಾರ ಮಾಡುವ ಎನ್ನುವ ಧೋರಣೆ. ಇವರ ಇಂತಹ ನಡೆಗೆ ಕಾರಣ ಹಣ. ಯಾಕೆಂದರೆ ಈ ಮಾಲಿನ್ಯ ನಿಯಂತ್ರಣ ಮಂಡಳಿ ಎನ್ನುವುದು ಒಂದು ಫಲವತ್ತಾದ ಹುಲ್ಲುಗಾವಲು. ಇದರಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಮೇಯಲು ಮೃಷ್ಟಾನ್ಯ ಭೋಜನ ಇದ್ದೆ ಇರುತ್ತದೆ. ಇದು ಕೈಗಾರಿಕೆಗಳ ಮಾಲಿನ್ಯ ತಡೆಯಲು ಇರುವ ಇಲಾಖೆಯಾದರೂ ಕೈಗಾರಿಕೆಗಳಿಂದ ಪ್ರತಿ ತಿಂಗಳು ಮಾಮೂಲಿ ಪಡೆಯದೆ ತನ್ನ ಅಧಿಕಾರಾವಧಿಯನ್ನು ಮುಗಿಸುವ ಅಧಿಕಾರಿಗಳು ನಮ್ಮಲ್ಲಿ ದುರ್ಬಿನ್ ಹಾಕಿ ಹುಡುಕಿದರೂ ಸಿಗುವುದಿಲ್ಲ. ಅದರ ಸಚಿವರಿಗೆ ಸಾಕಷ್ಟು ಕಪ್ಪ ಕೊಟ್ಟೇ ಆ ಮಂಡಳಿಗೆ ಬರುವ ಅಧಿಕಾರಿಗಳಿದ್ದಾರೆ. ಅವರಿಗೆ ಹೇಗೆ ಹಣ ಮಾಡಬೇಕೆನ್ನುವ ಹಪಾಹಪಿ ಇರುತ್ತದೆ ವಿನ: ಮಾನವತ್ವ ಹಣದ ವಿಷಯದಲ್ಲಿ ಇರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಅವರು ಹುಡುಕುವುದು ಎಲ್ಲಿಂದ ಹಣವನ್ನು ಗಬರಿಕೊಳ್ಳುವ ಅವಕಾಶ ಸಿಗುತ್ತದೆ ಎನ್ನುವುದನ್ನು ಮಾತ್ರ. ಇಲ್ಲಿಯ ತನಕ ಕೈಗಾರಿಕೆಗಳನ್ನು ನಿಯಂತ್ರಣ ಮಾಡಲು ಹೊರಡುತ್ತಿದ್ದ ಈ ಮಂಡಳಿ ಈಗ ಹೈನುಗಾರಿಕೆಯಲ್ಲಿ ಮೂಗು ತೂರಿಸುತ್ತಿದೆ. ಇಲ್ಲಿಯೂ ಸಿಕ್ಕಿದಷ್ಟು ಬಾಚಿಕೊಳ್ಳುವ ಎನ್ನುವ ಧೋರಣೆ ಹೊರತು ಬೇರೆ ಏನೂ ಇಲ್ಲ.
ಗೋಮೂತ್ರವನ್ನು ಹಣ ಕೊಟ್ಟು ಖರೀದಿಸುವ ಅಸಂಖ್ಯಾತ ಜನ ನಮ್ಮಲ್ಲಿದ್ದಾರೆ. ಅದನ್ನು ಮಾರುವ ವ್ಯವಸ್ಥೆಯೇ ಆರಂಭವಾಗಿದೆ. ಗೋಮೂತ್ರದ ಪ್ರಯೋಜನ ನಮ್ಮವರಿಗಿಂತ ವಿದೇಶಿಗರೇ ಹೆಚ್ಚು ಅರ್ಥ ಮಾಡಿಕೊಂಡಿದ್ದಾರೆ. ಮೈಗ್ರೇನ್ ನಂತಹ ಕಾಯಿಲೆಗಳ ಸಹಿತ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವುದೇ ಗೋಮೂತ್ರ. ಆಯುರ್ವೇದ ಔಷಧಗಳಲ್ಲಿ ಗೋಮೂತ್ರಕ್ಕೆ ಪ್ರಮುಖ ಸ್ಥಾನವಿದೆ. ಇನ್ನು ಸೆಗಣೆಯ ವಿಷಯಕ್ಕೆ ಬರೋಣ. ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಸೆಗಣಿಯನ್ನು ಮನೆಯ ಅಂಗಳದಲ್ಲಿ ಸಾರಿಸುತ್ತಿದ್ದರು. ಇದರಿಂದ ಯಾವುದೇ ಕ್ರಿಮಿಕೀಟ ಮನೆಯೊಳಗೆ ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮನೆಯ ಒಳಗಿರುವ ಪುಟ್ಟ ಮಕ್ಕಳಿಗೆ, ವೃದ್ಧ ಜೀವಗಳಿಗೆ ಒಂದು ರಕ್ಷಣಾ ಕವಚದಂತೆ ಈ ಸೆಗಣಿ ಸಾರಣೆ ಕೆಲಸ ಮಾಡುತ್ತಿತ್ತು. ಈಗ ಟೈಲ್, ಮಾರ್ಬಲ್, ಕಾಂಕ್ರೀಟ್ ಈ ಸ್ಥಾನವನ್ನು ಆಕ್ರಮಿಸಿಕೊಂಡಿರಬಹುದು. ಆದರೆ ಇದು ನೋಡಲು ಚೆಂದ ಬಿಟ್ಟರೆ ಆರೋಗ್ಯಕ್ಕೆ ಸೆಗಣಿಯೇ ಮೂಲ. ಇವತ್ತಿಗೂ 18 ಪೇಟೆಯ ದೇವರೆಂದೇ ಕರೆಯಲ್ಪಡುವ ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ಹೊರ, ಒಳ ಆವರಣಕ್ಕೆ ಸೆಗಣಿಯ ಸಾರಣೆಯನ್ನೇ ಮಾಡಲಾಗಿದೆ. ಅಂಗಳಕ್ಕೆ ಮಾತ್ರವಲ್ಲ, ನಮ್ಮ ಪೂರ್ವಜರು ಇತ್ತೀಚೆಗೆ ಎರಡ್ಮೂರು ದಶಕಗಳ ಹಿಂದಿನ ತನಕ ಅಡುಗೆ ತಯಾರಿಸುವ ಒಲೆಯನ್ನು ನಿರ್ಮಿಸುತ್ತಿದ್ದದ್ದೇ ಸೆಗಣಿಯಲ್ಲಿ. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಅದು ಹೋಮ ಹವನಗಳಿಂದ ಹಿಡಿದು ತಿಥಿಯ ಆಚರಣೆಗಳ ತನಕ ಸೆಗಣಿಗೆ ಪ್ರಮುಖ ಸ್ಥಾನವಿದೆ. ಹಿಂದಿನ ಕಾಲದಲ್ಲಿ ಸೆಗಣಿ ಹಾಗೂ ಗೋಮೂತ್ರ ಬಳಕೆ ಜಾಸ್ತಿ ಇತ್ತು. ನಮ್ಮಲ್ಲಿ ಆರೋಗ್ಯ ಇತ್ತು. ಈಗ ಸಿಮೆಂಟು ಮತ್ತು ಆ ಮನಸ್ಥಿನ ಅಧಿಕಾರಿಗಳು ಜಾಸ್ತಿ ಇದ್ದಾರೆ ಮತ್ತು ರೋಗಗಳು ಮನೆಯ ಒಳಗೆ ಸೇರಿಕೊಂಡಿದೆ!
Leave A Reply