ಮಠಕ್ಕೆ ಅನುದಾನ, ಅನುದಾನದಿಂದ ಮತ, ಮತದಿಂದ ಮೀಸಲಾತಿ……!!
ಪಂಚಮಸಾಲಿ, ಕುರುಬ, ವಾಲ್ಮೀಕಿ, ಗಾಣಿಗ, ಗಂಗಾಮತಸ್ಥರು, 2 ಎ ಮರಾಠ ಬೇಡಿಕೆ, ಒಕ್ಕಲಿಗ, ಸವಿತಾ ಸಮಾಜ, ಈಡಿಗ, ಮಡಿವಾಳ ಸಹಿತ ಇನ್ನು ಕೆಲವು ಜಾತಿಗಳು ಮೀಸಲಾತಿ ಮತ್ತು ಮೀಸಲಾತಿಯಲ್ಲಿ ಹೆಚ್ಚುವರಿ ಪಾಲು ಪಡೆಯಲು ಹೋರಾಟ ಮಾಡುತ್ತಿವೆ. ಇದರಲ್ಲಿ ಕೆಲವು ಜಾತಿಗಳ ಸ್ವಾಮೀಜಿಗಳು ಅಕ್ಷರಶ: ಬೀದಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದಾರೆ. ಮೀಸಲಾತಿ ಪತ್ರ ಸಿಗದೇ ಮಠಕ್ಕೆ ಹಿಂತಿರುಗುವುದಿಲ್ಲ ಎನ್ನುತ್ತಿದ್ದಾರೆ. ಉಪವಾಸ ಸತ್ಯಾಗ್ರಹ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸ್ವಾಮೀಜಿಗಳು ನಿತ್ಯ ಮಾಧ್ಯಮಗಳಲ್ಲಿ ಹೋರಾಟ, ಪ್ರತಿಭಟನೆಯ ಹೆಸರಿನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಇಲ್ಲಿ ಎರಡು ವಿಷಯಗಳಿವೆ. ಮೊದಲನೇಯದಾಗಿ ಸ್ವಾಮೀಜಿ ಎನ್ನುವವರ ಜವಾಬ್ದಾರಿ ಏನು? ಅವರು ಮೀಸಲಾತಿಯ ಹೆಸರಿನಲ್ಲಿ ಹೀಗೆ ಹೋರಾಡುವುದರಿಂದ ಉಳಿದ ಸಮಾಜಕ್ಕೆ ಹೋಗುವ ಸಂದೇಶ ಏನು? ಇನ್ನೊಂದು ಅಂಶ ಇವರು ಯಾವ ವಿಷಯದ ಮೇಲೆ ನಿಜವಾದ ಜಾಗೃತಿ ಮೂಡಿಸಬೇಕಿತ್ತೋ ಆ ವಿಷಯದ ಮೇಲೆ ಎಷ್ಟು ಬಾರಿ ಬೀದಿಗೆ ಬರಲು, ಧ್ವನಿ ಮೊಳಗಿಸಲು ತಯಾರಿದ್ದಾರೆ? ಸ್ವಾಮೀಜಿಯವರು ಒಂದು ಸಮಾಜದ ಧಾರ್ಮಿಕ ಮುಖವೇ ವಿನ: ರಾಜಕೀಯ ಮುಖ ಅಲ್ಲ. ಅವರು ತಮ್ಮ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಕೆಲಸ ಮಾಡಬೇಕೆ ವಿನ: ಲೌಕಿಕ ಬದುಕಿನ ಹಟ ಸಾಧಿಸಲು ಮುಂದಾಗುವುದು ಎಷ್ಟು ಸರಿ? ತಮ್ಮ ಸಮುದಾಯದಲ್ಲಿರುವ ಶ್ರೀಮಂತರು ಎಷ್ಟು ಬಡಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಎಷ್ಟು ಬಡ ಹೆಣ್ಣುಮಕ್ಕಳ ಮದುವೆ ಮಾಡಿಸಿದ್ದಾರೆ ಎನ್ನುವುದರಿಂದ ತಮ್ಮ ಸಮಾಜ ಬೇರೆ ಸಮಾಜದೊಂದಿಗೆ ಆರೋಗ್ಯಕರ ರೀತಿಯಲ್ಲಿ ಸಮಾನತೆ ಸಾಧಿಸಿ ಮಾದರಿ ಆಗಬೇಕು ಎಂದು ಯೋಚಿಸಬೇಕಾಗಿರುವುದು ಆಯಾ ಜಾತಿಗಳ ಸ್ವಾಮೀಜಿಗಳ ಕರ್ತವ್ಯ. ಇನ್ನು ನಮ್ಮ ಸಮಾಜಗಳ ಹೆಣ್ಣುಮಕ್ಕಳು ಲವ್ ಜಿಹಾದ್ ನಲ್ಲಿ ಬೀಳದೆ, ಮತಾಂತರದಂತಹ ಆಮಿಷಗಳಿಗೆ ಒಳಗಾಗದೆ, ಹೊಸ ಉದ್ಯಮಗಳಿಗೆ ಪ್ರೇರಣೆ ನೀಡಿ, ಉದ್ಯೋಗಗಳನ್ನು ನೀಡಿ ತಮ್ಮ ಜನರು ಸ್ವಾವಲಂಬಿ ಜೀವನ ನಡೆಸಲು ಏನು ಮಾಡಬೇಕು ಎನ್ನುವುದರ ಕುರಿತು ಚಿಂತನೆ ಮಾಡಿ ಆ ಬಗ್ಗೆ ಕಾರ್ಯತತ್ಪರತೆಯನ್ನು ಸಾಧಿಸಬೇಕಾಗಿರುವುದು ಸ್ವಾಮೀಜಿಗಳು. ತಮ್ಮ ಸಮಾಜ ಸ್ವಾವಲಂಬಿ ಸಮಾಜ, ಸರಕಾರದ ಮುಂದೆ ಕೈಒಡ್ಡುವುದಿಲ್ಲ ಎಂದು ಹೇಳಿ ಆ ಕುರಿತು ಏನು ಮಾಡಬಹುದು ಎಂದು ಯೋಚಿಸುವ ಜವಾಬ್ದಾರಿ ಸ್ವಾಮೀಜಿಗಳ ಮುಂದೆ ಇರಬೇಕೆ ವಿನ: ನಾವು ಅರವತ್ತು ಲಕ್ಷ ಜನ ಇದ್ದೇವೆ. ಮೀಸಲಾತಿ ಕೊಟ್ಟರೆ ನಿಮ್ಮ ಜೊತೆ ಬರುತ್ತೇವೆ. ಕೊಡದಿದ್ದರೆ ನೋಡಿಕೊಳ್ಳುತ್ತೇವೆ ಎಂದು ಹೇಳುವುದು ಅಕ್ಷರಶ: ಒಂದು ವಿರೋಧ ಪಕ್ಷದ ರಾಜಕಾರಣಿಯ ಹೇಳಿಕೆ ತರಹ ಕಾಣಿಸುತ್ತದೆ ವಿನ: ಅರಿಷಡ್ವರ್ಗಗಳನ್ನು ಗೆದ್ದಂತಹ ಸಂತನ ಹೇಳಿಕೆ ತರಹ ಕಾಣಿಸುವುದಿಲ್ಲ. ಹಿಂದೆ ಕೆಲವು ಮಠದ ಸ್ವಾಮೀಜಿಗಳು ಇದ್ದರು. ಅವರನ್ನು ಅನ್ನದಾಸೋಹ, ಅಕ್ಷರ ದಾಸೋಹದಂತಹ ಶ್ರೇಷ್ಟ ಕಾರ್ಯಗಳಿಗೆ ಸ್ಮರಿಸಲಾಗುತ್ತಿತ್ತು. ಈಗಲೂ ಅವರನ್ನು ನೆನೆದರೆ ಪುಣ್ಯ ಬರುತ್ತದೆ. ಈಗಲೂ ಕೆಲವು ಮಠದ ಸ್ವಾಮೀಜಿಗಳು ಪ್ರವಚನ, ಬೋಧನೆ, ಆಧ್ಯಾತ್ಮದಂತಹ ಕಾರ್ಯದಲ್ಲಿ ಇರುತ್ತಾರೆಯೇ ವಿನ: ಸರಕಾರವನ್ನು ಅಲುಗಾಡಿಸುತ್ತೇನೆ ಎಂದು ಜಾತಿಯನ್ನು ಬೆನ್ನಿಗೆ ಕಟ್ಟಿ ಹೊರಡುವುದಿಲ್ಲ.
ಇನ್ನು ಸ್ವಾಮೀಜಿಗಳ ಇಂತಹ ಹೆಜ್ಜೆಗಳಿಂದ ಮಠಗಳ ನಡುವೆ ಅನಾರೋಗ್ಯಕರ ಸ್ಪರ್ದೇ ಏರ್ಪಾಡಾಗುತ್ತದೆ. ಆ ಸ್ವಾಮೀಜಿ ನೋಡಿ, ಹೇಗೆ ತಮ್ಮ ಜಾತಿಯವರಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಸ್ವಾಮೀಜಿಯವರು ಕೂಡ ಹಾಗೆ ಮಾಡಬೇಕು ಎಂದು ಸಮಾಜದ ಮುಖಂಡರು ಒತ್ತಡ ಹಾಕಲು ಶುರು ಮಾಡುತ್ತಾರೆ. ಮುಖಂಡರಿಗೆ ಕಾರ್ಯಕರ್ತರು ಒತ್ತಡ ಹಾಕುತ್ತಾರೆ. ಇದು ಮುಂದುವರೆದು ಆತ್ಮಸಾಕ್ಷಿ ಒಪ್ಪದಿದ್ದರೂ ಬೇರೆ ಸಮಾಜದ ಸ್ವಾಮೀಜಿಗಳು ಮಾಡಿದರು ಎನ್ನುವ ಕಾರಣಕ್ಕೆ ಉಳಿದ ಸ್ವಾಮೀಜಿಗಳು ಕೂಡ ಹಾಗೆ ಮಾಡಬೇಕಾಗುತ್ತದೆ. ಇದು ಅಗತ್ಯ ಇದೆಯಾ ಎಂದು ಯಾರೂ ನೋಡಲು ಹೋಗುವುದಿಲ್ಲ. ಅವರು ಮಾಡಿದ್ದಾರೆ, ನಾವು ಮಾಡದೇ ಇದ್ದರೆ ಬಲಹೀನರಾಗಿದ್ದೇವೆ ಎಂದು ಅವರು ಅಂದುಕೊಳ್ಳುತ್ತಾರೆ ಎನ್ನುವ ಮನಸ್ಥಿತಿ ಇವರಲ್ಲಿ ಇರುತ್ತದೆ. ಇದಕ್ಕೆಲ್ಲಾ ಅಂತ್ಯ ಇಲ್ಲವೇ? ಇದೆ. ಯಾವಾಗ ಸ್ವಾಮೀಜಿಗಳು ಸರಕಾರದ ಎದುರು ಅನುದಾನಕ್ಕಾಗಿ ಬೇಡಿಕೆ ಇಡುವುದನ್ನು ನಿಲ್ಲಿಸುತ್ತಾರೋ ಆವಾಗ ಇದಕ್ಕೆ ಅಂತ್ಯ ಇದೆ. ನೀವು ಬೇಡಿಕೆ ಇಡಬೇಡಿ. ಆಗ ಸರಕಾರ ಮಠಗಳಿಗೆ ಹಣ ಕೊಟ್ಟು ಸರಕಾರದ ಋಣದಲ್ಲಿ ಬೀಳಿಸುವುದಿಲ್ಲ.
ಅನುದಾನ ಕೋಟಿ ಕೊಟ್ಟಿದ್ದೇವೆ ಎನ್ನುವ ಕಾರಣಕ್ಕೆ ಸ್ವಾಮೀಜಿಗಳೇ ನೀವು ನಮಗೆ ಮತ ಹಾಕಲು ಕರೆ ನೀಡಬೇಕು ಎಂದು ಯಾವ ರಾಜಕಾರಣಿ ಕೂಡ ಹೇಳಲು ಧೈರ್ಯ ಮಾಡುವುದಿಲ್ಲ. ಯಾವಾಗ ಸ್ವಾಮಿಗಳು ಚುನಾವಣಾ ಸಂದರ್ಭದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾಗುವುದಿಲ್ಲವೋ ಆಗ ಅವರಿಗೆ ಇಂತಿಂತಹ ರಾಜಕಾರಣಿಯನ್ನು ಗೆಲ್ಲಿಸಿದ್ದು ನಾವೇ, ಅಧಿಕಾರಕ್ಕೆ ತಂದದ್ದು ನಾವೇ ಎನ್ನುವ ಭ್ರಮೆ ಇರುವುದಿಲ್ಲ. ಯಾವಾಗ ಭ್ರಮೆ ಇರುವುದಿಲ್ಲವೋ ಆಗ ನಿಮ್ಮನ್ನು ಬೀಳಿಸ್ತೇವೆ, ಇಲ್ಲದಿದ್ದರೆ ಮೀಸಲಾತಿ ಕೊಡಿ ಎಂದು ಪರೋಕ್ಷವಾಗಿ ಬ್ಲ್ಯಾಕ್ ಮೇಲ್ ಮಾಡುವ ಸಂದರ್ಭ ಬರುವುದಿಲ್ಲ. ಇದೆಲ್ಲವೂ ಸರಿಯಾಗಬೇಕಾದರೆ ಸ್ವಾಮೀಜಿಗಳು ರಾಜಕಾರಣದಿಂದ ದೂರ ನಿಲ್ಲಬೇಕು. ಆಗುತ್ತಾ??
Leave A Reply